ಬೆಂಗಳೂರು: ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಶುಲ್ಕ ಕಟ್ಟಲಿಲ್ಲವೆಂದು ಆನ್‌ಲೈನ್ ತರಗತಿಗಳು ನಿಲ್ಲಿಸುವಂತಿಲ್ಲ, ಹಾಗೇನಾದರೂ ಮಾಡಿದ್ದಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಠಿಣವಾದ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ವಿದ್ಯಾರ್ಥಿಗಳು ಶುಲ್ಕ ಕಟ್ಟಿಲ್ಲ ಎಂದು ಅದನ್ನೇ ನೆವಾಗಿಟ್ಟುಕುಂಡು ತರಗತಿ ಬಂದ್ ಮಾಡುವಂತಿಲ್ಲ. ಅಂತಹ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸೂಚನೆ ನೀಡಿದ್ದಾರೆ.
ಉಲ್ಲಂಘನೆ ಮಾಡಿದ ಶಿಕ್ಷಣ ಸಂಸ್ಥೆಗಳು ಒತ್ತಡ ಹಾಕುತ್ತಿರುವ ಬಗ್ಗೆ ಶಾಲೆಗಳ ವಿರುದ್ಧ ಪೋಷಕರು ದೂರು ನೀಡುವಂತೆಯೂ ಸರಕಾರ ಮನವಿ ಮಾಡಿದೆ.
ಪೋಷಕರುಗಳು ಖುದ್ದಾಗಿ ತಮಗೆ ಇಲ್ಲವೇ ಆಯಾ ಶಾಲಾ ವ್ಯಾಪ್ತಿಯ ಬಿಇಓ ಗಳಿಗೆ ದೂರು ನೀಡಿದರೆ ಅಂತಹ ಶಾಲೆಗಳ ವಿರುದ್ಧ ಕಾನೂನು ಕ್ರಮ ಜರುಗಿಸುತ್ತೇವೆ ಎಂದು ಅವರು ಹೇಳಿದರು.
ಖಾಸಗಿ ಶಾಲೆಗಳೊಂದಿಗೆ ಫೈನಾನ್ಸರ್‌ಗಳು ಶಾಮೀಲು
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಕೆಲವು ಖಾಸಗಿ ಶಾಲೆಗಳು ಫೈನಾನ್ಸರ್‌ಗಳೊಂದಿಗೆ ಶಾಮೀಲಾಗಿರುವ ಬಗ್ಗೆ ಮಾಹಿತಿ ನೀಡಿದ ಸಚಿವರು ಕೊರೊನಾ ಸಂಕಷ್ಟ ಹಿನ್ನೆಲೆಯಲ್ಲಿ ಪೋಷಕರ ಆರ್ಥಿಕ ಪರಿಸ್ಥಿತಿ ತೊಂದರೆಯಲ್ಲಿದೆ. ತೀವ್ರವಾಗಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರನ್ನು ಶಾಲೆಗಳೇ ಮನವೊಲಿಸಿ ತಮಗೆ ತಿಳಿದವರಿಂದ ಖಾಸಗಿ ಫೈನಾನ್ಸ್‌ನಿಂದ ಸಾಲ ಮಾಡಿ ಶುಲ್ಕವನ್ನು ಕಟ್ಟಬೇಕೆಂಬ ಒತ್ತಡ ಕೇಳಿ ಬರುತ್ತಿದೆ ಎಂದು ಹೇಳಿದರು.
ಕಳೆದ ವರ್ಷ ಸರ್ಕಾರ ಶೇ.30ರಷ್ಟು ಶುಲ್ಕ ಪಡೆಯಲು ಆದೇಶ ಹೊರಡಿಸಿತ್ತು. ಆಗ ಸರಕಾರದ ಆದೇಶದ ವಿರುದ್ಧ ಖಾಸಗಿ ಶಾಲೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ವರ್ಷವೂ ಕೂಡ ಅದೇ ಪರಿಸ್ಥಿತಿ ಇದೆ. ಹೀಗಾಗಿ ಶಾಲೆ ಆಡಳಿತ ಮಂಡಳಿ, ಪೋಷಕರೇ ಬಗೆಹರಿಸಿಕೊಳ್ಳಲಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಚ್ಯವಾಗಿ ವಿವರಿಸಿದರು.