ಶುಲ್ಕ ಕಟ್ಟುವಂತೆ ಖಾಸಗಿ ಶಾಲೆಗಳ ಒತ್ತಡ

ರಾಜ್ಯದಲ್ಲಿ 10, 12 ನೇ ತರಗತಿಗಳು ಪ್ರಾರಂಬಗೊಂಡ ನಂತರ ಅನೇಕ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಪಾವತಿ ಮಾಡುವಂತೆ ಪೋಷಕರನ್ನು ಒತ್ತಾಯಿಸುತ್ತವೆ.   ಕೆಲವೆಡೆ ಹಣಕಟ್ಟುವಂತೆ ಪೋಷಕರಿಗೆ ದಮಕಿ ಹಾಕಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. . ಬೆಂಗಳೂರು  ಕೊಪ್ಪಳ, ದಾವಣಗೆರೆ, ಧಾರವಾಡ, ಮೈಸೂರು ಜಿಲ್ಲೆಯಲ್ಲಿ  ಖಾಸಗಿ ಶಾಲೆಗಳು ಪೋಷಕರಿಂದ ಮನಸೋ ಇಚ್ಛೇ ಹಣ ಪಡೆಯುತ್ತಿದ್ದಾರೆ  ಎನ್ನುವ ದೂರುಗಳು ಬರುತ್ತಿವೆ.

ಖಾಸಗಿ ಶಾಲೆಗಳು ಹೆಚ್ಚುವರಿ ಶುಲ್ಕ ಮತ್ತು ಶುಲ್ಕ ಕಟ್ಟುವಂತೆ ಒತ್ತಡ ಹೇರಬಾರದು ಎಂದು ಸರಕಾರ ಬಾಯಿ ಮಾತಲ್ಲಿ ಹೇಳುತ್ತಿದೆ. ಖಾಸಗಿ ಶಾಲೆಗಳು ಹೆಚ್ಚುವರಿ ಹಣ ಪಡೆಯುತ್ತಿವೆ ಎಂದು ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಗೆ ಗೊತ್ತಿರುವ ವಿಚಾರವಾಗಿದೆ. ಆದರೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ  ಮುಂದೆ ಇಲಾಖೆ ಮತ್ತು ಶಿಕ್ಷಣ ಸಚಿವರ ಆಟ ನಡೆಯೋದಿಲ್ಲ ಎಂದು ಪೋಷಕರು ದೂರಿದ್ದಾರೆ.  ಇನ್ನು ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ರೆಗ್ಯೂಲೆಟಿಂಗ್ ಪ್ರಾಧಿಕಾರ (ಡೇರಾ) ವನ್ನು ರಚಿಸಲಾಗಿದೆ. ಈ ಸಮಿತಿ ನಿಷ್ಕ್ರೀಯವಾಗಿದ್ದು, ಖಾಸಗಿ ಶಾಲೆಗಳ ಸುಲುಗೆಗೆ ನಿಲ್ಲಲು ಕಾರಣವಾಗಿದೆ ಎಂದು ಶಿಕ್ಷಣ ತಜ್ಞರು ಆರೋಪವನ್ನು ಮಾಡುತ್ತಿದ್ದಾರೆ.

ಕೊಪ್ಪಳದ ‘ಶಾರದಾ ಇಂಟರ್ನ್ಯಾಷನಲ್ ಸ್ಕೂಲ್’.  ಸಂಪೂರ್ಣ ಹಣ ಕಟ್ಟಿದರೆ ಮಾತ್ರ  ವಿದ್ಯಾರ್ಥಿಗಳ ತರಗತಿಗೆ ಅವಕಾಶ ನೀಡಲಾಗುತ್ತದೆ ಎಂದು ಪೋಷಕರಿಗೆ ಒತ್ತಡವನ್ನು ಹೇರುತ್ತಿದ್ದಾರೆ.  ಈ ಖಾಸಗಿ ಶಿಕ್ಷಣ ಸಂಸ್ಥೆಯ ಮೇಲೆ ಕ್ರಮ ಜರುಗಿಸಬೇಕು ಎಂದು ಎಸ್.ಎಫ್.ಐ ರಾಜ್ಯಾಧ್ಯಕ್ಷ  ಅಮರೇಶ ಕಡಗದ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈ ಕುರಿತಾಗಿ ಹಲವು ಬಾರಿ ದೂರುಗಳನ್ನು ಸಲ್ಲಿಸಿದ್ದೇವೆ ಆದರೆ ಅವರು ಕ್ರಮವನ್ನು ಜರುಗಿಸಿಲ್ಲ. ಡೇರಾ ಸಮಿತಿ ಸಭೆಯನ್ನು ಸೇರಿಸುವಂತೆ ಹೇಳಿದ್ದೆವೂ ಅದು ಕೂಡಾ ಮಾಡಿಲ್ಲ, ಹಾಗಾಗಿ ಡೇರಾ ಸಮಿತಿ ಹಲ್ಲುಕಿತ್ತ ಹಾವಿನಂತಾಗಿದೆ ಎಂದು ಕಡಗದ ಆರೋಪಿಸಿದ್ದಾರೆ.

ಖಾಸಗಿ ಶಾಲೆಗಳನ್ನು ನಿಯಂತ್ರಿಸಲು ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮ ಅನುಸರಿಸಬೇಕಿದೆ.  ಡೇರಾ ಸಮಿತಿಯು  ಪೋಷಕರು ದೂರು ಕೊಟ್ಟರೆ ಮಾತ್ರ ಕ್ರಮ ಜರುಗಿಸುವುದಾಗಿ ಹೇಳುತ್ತಿರುವುದು ತಪ್ಪಿಸಿಕೊಳ್ಳುವ ಕೆಲಸವಾಗುತ್ತದೆ. ಅಧಿಕಾರಿಗಳ ತಂಡವನ್ನು ರಚಿಸಿ ಖಾಸಗಿ ಶಾಲೆಗಳ ಮೇಲೆ ತನಿಖೆಯನ್ನು ನಡೆಸಿದರೆ ಸತ್ಯಾಸತ್ಯತೆ ಹೊರಬೀಳಲಿದೆ. ಆ ನಿಟ್ಟಿನಲ್ಲಿ ಇಲಾಖೆ ಮತ್ತು ಸರಕಾರ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗಬೇಕಿದೆ.

 

 

Donate Janashakthi Media

2 thoughts on “ಶುಲ್ಕ ಕಟ್ಟುವಂತೆ ಖಾಸಗಿ ಶಾಲೆಗಳ ಒತ್ತಡ

Leave a Reply

Your email address will not be published. Required fields are marked *