ಬೆಂಗಳೂರು: ರಾಜ್ಯದಲ್ಲಿ ಇನ್ನು ಶಾಲೆಗಳು ಪ್ರಾರಂಭವಾಗದೆ ಇದ್ದರೂ ಕೂಡ ಬೆಂಗಳೂರಿನಂತಹ ಮಹಾನಗರದಲ್ಲಿ ಈಗಾಗಲೇ ಪ್ರತಿಷ್ಠಿತ ಖಾಸಗಿ ಶಾಲೆಗಳು ತಮ್ಮ ಹಗಲು ದರೋಡೆಯ ದಂಧೆಯನ್ನು ಶುರು ಮಾಡಿಕೊಂಡಿರುವುದು ಕಾಣುತ್ತಿದೆ. ಶಿಕ್ಷಣ ಸಂಸ್ಥೆಗಳನ್ನು ಬಡ್ಡಿ ವ್ಯವಹಾರದ ಫೈನಾನ್ಸ್ ಅಂಗಡಿಯಾಗಿ ಮಾರ್ಪಡಿಸಿರುವುದು ಬೆಳಕಿಗೆ ಬಂದಿದೆ ಇಂತಹ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಎಸ್ಎಫ್ಐ ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಪೋಷಕರಿಗೆ ಫೋನ್ ಮಾಡಿ ತಮ್ಮ ಶಿಕ್ಷಣ ಸಂಸ್ಥೆಗಳಿಗೆ ಕರೆಸಿಕೊಂಡು ಶುಲ್ಕ ಕಟ್ಟಲಾಗದಂತಹ ಪೋಷಕರಿಗೆ ತಾವೇ ಸಾಲವನ್ನು ಕೊಡಿಸುವುದರ ಮೂಲಕ ಮತ್ತು ಶುಲ್ಕಕ್ಕಾಗಿ ಪಾಲಕರನ್ನು ಹಿಂಸಿಸುವುದು, ಬಡ್ಡಿಗಾಗಿ ಹಣ ಕೊಡಿಸಲು ಮುಂದಾಗಿರುವುದು ಬೆಳಕಿಗೆ ಬಂದಿದೆ. ಇಂತಹ ಶಿಕ್ಷಣ ಸಂಸ್ಥೆ ಮಾಲಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಸ್ಎಫ್ಐ ಕರ್ನಾಟಕ ರಾಜ್ಯ ಅಧ್ಯಕ್ಷ ಅಮರೇಶ ಕಡಗದ ರಾಜ್ಯದ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಲ್ಲಿ ಆಗ್ರಹಿಸಿದ್ದಾರೆ.
ಇದನ್ನು ಓದಿ: ಶುಲ್ಕ ಪಾವತಿಸಿಲ್ಲವೆಂದು ತರಗತಿ ನಡೆಸದಿದ್ದರೆ ಕಾನೂನು ಕ್ರಮ: ಸುರೇಶ್ ಕುಮಾರ್
ಕೊರೊನಾ ರೋಗದಿಂದ ಲಾಕ್‌ಡೌನ್ ಆಗಿರವ ಈ ಸಂದರ್ಭದಲ್ಲಿ ಎಷ್ಟೋ ಜನರು ಕೆಲಸಗಳನ್ನು ಕಳೆದುಕೊಂಡ ನಿರುದ್ಯೋಗಿಗಳಾಗಿದ್ದಾರೆ. ಅಲ್ಲದೆ, ಪಾಲಕರಲ್ಲಿ ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿ ಪರದಾಡುವಂತ ಪರಿಸ್ಥಿತಿಯಲ್ಲಿ, ಶಿಕ್ಷಣ ಸಂಸ್ಥೆಗಳ ಮಾಲೀಕರು ಫೈನಾನ್ಸ್ ಗಳಲ್ಲಿ ಸಾಲ ವಸೂಲಿ ಮಾಡುವ ರೀತಿಯಲ್ಲಿ ಶುಲ್ಕವನ್ನು ಕಟ್ಟಿಸಿಕೊಂಡು 6 ತಿಂಗಳು, 9 ತಿಂಗಳು, 11 ತಿಂಗಳಿಗೆ ಇಷ್ಟು ಬಡ್ಡಿ ಅಂತ ತಾವೇ ನಿಗದಿಪಡಿಸಿ ಶುಲ್ಕ ಕಟ್ಟಿಸಿಕೊಳ್ಳುತ್ತಿರುವುದು ಸರಿಯಾದ ಕ್ರಮವಲ್ಲ. ಎಲ್ಲ ವಿಷಯಗಳು ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ಇದ್ದರು ಕೇವಲ ನೋಟಿಸ್ ಕೊಡಲಾಗುವುದು ಎಂದು ಹೇಳಿರುವುದು ಸಹ ಸರಿಯಲ್ಲ.
ಕೂಡಲೇ ಅಂತಹ ಶಾಲೆಗಳನ್ನು ಮಾನ್ಯತೆ ರದ್ದು ಮಾಡಲು ಶಿಕ್ಷಣ ಸಚಿವರು ಮುಂದಾಗಬೇಕು ಮತ್ತು “1983 ಶಿಕ್ಷಣ ಕಾಯ್ದೆ” ಪ್ರಕಾರ ಶಿಕ್ಷಣ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ಉಲ್ಲಂಘಿಸಿ ಅಕ್ರಮವಾಗಿ ವಾಣಿಜ್ಯ ಚಟುವಟಿಕೆಗಳಿಗೆ ಮುಂದಾಗಿರುವ ಈ ಖಾಸಗಿ ಶಾಲೆಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಕೆ. ವಾಸುದೇವರೆಡ್ಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಇರುವ ಖಾಸಗಿ ಶಾಲೆಗಳ ಶುಲ್ಕ ನಿಯಂತ್ರಣ ಡೇರಾ ಸಮಿತಿ ಸಭೆ ಸೇರಿ 1983 ಶಿಕ್ಷಣ ಕಾಯ್ದೆ ಪ್ರಕಾರ ಪ್ರತಿಯೊಂದು ಖಾಸಗಿ ಶಾಲೆಗಳು ಅನುಸರಿಸಬೇಕಾದ ಸರ್ಕಾರಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಆದೇಶ ಮಾಡಬೇಕು ಹಾಗೂ ಪೋಷಕರ ಮತ್ತು ಪಾಲಕರನ್ನು ಕರೆದು ಸಭೆ ಮಾಡಿ ಹೆಚ್ಚುವರಿ ಶುಲ್ಕ ಕೇಳಿದರೆ ದೂರ ಸಲ್ಲಿಸಲು ಜಿಲ್ಲಾಧಿಕಾರಿಗಳು ಅವಕಾಶ ಮಾಡಿಕೊಡಬೇಕು, 1983 ರ ಶಿಕ್ಷಣ ಕಾಯ್ದೆ ಮತ್ತು ಆರ್‌ಟಿಇ 2009 ಸಮರ್ಪಕವಾಗಿ ಜಾರಿಯಾಗಲು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಿಷ್ಕ್ರಿಯ ಆಗಿರುವ ಸಮಿತಿಯ ಸಭೆಯನ್ನು ಈ ಕೂಡಲೇ ಕರೆದು ಶಿಕ್ಷಣ ಸಚಿವರು ಸೂಚನೆ ಕೊಡಬೇಕೆಂದು ಎಸ್ಎಫ್ಐ ಬೆಂಗಳೂರು ಜಿಲ್ಲಾಧ್ಯಕ್ಷರಾದ ದಿಲೀಪ್ ಶೆಟ್ಟಿ ಅವರು ಆಗ್ರಹಿಸಿದ್ದಾರೆ.