ಕಾರಟಗಿ: ಶುಕ್ರವಾರ, 16 ಆಗಸ್ಟ್, ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ಘಟನೆಗೆ ಕಾರಣರಾಗಿರುವ ಐಸಿಸಿ ಸಮಿತಿ ಅಧ್ಯಕ್ಷರೂ ಆದ ಸಚಿವ ಶಿವರಾಜ ತಂಗಡಗಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಸತ್ಯಾಗ್ರಹದ ಮಾಡಿದರು.
ಪಟ್ಟಣದ ಪುರಸಭೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಕನಕದಾಸ ವೃತ್ತಕ್ಕೆ ಆಗಮಿಸುತ್ತಿದ್ದಂತೆಯೇ ಪ್ರತಿಭಟನಾ ನಿರತರು ರಸ್ತೆಯಲ್ಲೇ ಕುಳಿತು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು. ಸಚಿವ ತಂಗಡಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಸಂಘದ ರಾಜ್ಯಾಧ್ಯಕ್ಷ ಬಿಲ್ಗಾರ್ ಬಸವರಾಜ ಮಾತನಾಡಿ, ಉತ್ತಮ ಮಳೆಯಿಂದ ಜಲಾಶಯ ಭರ್ತಿಯಾಗಿ 2 ಬೆಳೆ ಖಚಿತ ಎಂಬ ಆಸೆಯಲ್ಲಿದ್ದ ರೈತ ಸಮುದಾಯಕ್ಕೆ ಅಧಿಕಾರಿಗಳು, ಸಚಿವರು ತಣ್ಣೀರು ಎರೆಚಿದ್ದಾರೆ.
ಒಂದು ಬೆಳೆ ಬಂದೀತೆ ಎಂಬ ನಿರಾಶೆಯಲ್ಲಿ ರೈತರಿದ್ದಾರೆ. ಸುರಕ್ಷತೆ, ನಿರ್ವಹಣೆಯ ನಿರ್ಲಕ್ಷ್ಯವೇ ಅವಘಡಕ್ಕೆ, ರೈತರ ನಿರಾಶೆಗೆ ಕಾರಣವಾಗಿದೆ ಎಂದರು. ಸಂಘದ ಕಲ್ಯಾಣ ಕರ್ನಾಟಕ ಘಟಕದ ಅಧ್ಯಕ್ಷ ಹನುಮಂತಪ್ಪ ಭೋವಿ ಹಂಚಿನಾಳಕ್ಯಾಂಪ್ ಮಾತನಾಡಿ, ಜಿಲ್ಲೆ ಹಾಗೂ ಕನಕಗಿರಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ತಂಗಡಗಿ ಬೆಂಬಲಿಗರು ರಾಜಾರೋಷವಾಗಿ ಅಕ್ರಮಗಳಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲ ಗೆಹ್ಲೋಟ್!
ಮರಳು ಅಕ್ರಮ ಸಾಗಣೆ, ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಅಕ್ರಮಗಳು, ಕೆಆರ್‌ಐಡಿಎಲ್ ಸಂಸ್ಥೆ ಮತ್ತು ಸಣ್ಣ ನೀರಾವರಿ ಇಲಾಖೆಯ ಕಾಮಗಾರಿಗಳಲ್ಲಿ ಹಣ ಲೂಟಿ, ಪಡಿತರ ಅಕ್ಕಿಯ ಅಕ್ರಮ ಸಾಗಣೆ ಜೊತೆಗೆ ಇಸ್ಪೀಟ್, ಮಟ್ಕಾ ರಾಜಾರೋಷವಾಗಿ ನಡೆಯುತ್ತಿವೆ. ಇವೆಲ್ಲವುಗಳ ಅಕ್ರಮಗಳ ನೈತಿಕತೆ ಹೊತ್ತು ಸಚಿವ ಶಿವರಾಜ ತಂಗಡಗಿ ರಾಜೀನಾಮೆ ನೀಡಬೇಕು. ಅಕ್ರಮಗಳಿಗೆಲ್ಲಾ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠರು ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಕಾರಟಗಿಯಲ್ಲಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಗೋವಿಂದಪ್ಪ ಮಾತನಾಡಿದರು. ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮೋಹನ್ ಕುರಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ, ಕಲ್ಯಾಣ ಕರ್ನಾಟಕ ಅಧ್ಯಕ್ಷ ಹನುಮಂತ, ಪ್ರಧಾನ ಕಾರ್ಯದರ್ಶಿ ರಮೇಶ ಕಂಪ್ಲಿ, ಕೊಪ್ಪಳ ಜಿಲ್ಲಾ ಗೌರವಾಧ್ಯಕ್ಷ ಹನುಮನಗೌಡ, ರಾಜ್ಯ ಉಪಾಧ್ಯಕ್ಷ ಪಂಪನಗೌಡ ಆಕಳಕುಂಪಿ, ಕಾರಟಗಿ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಹುಲಿಗೆಮ್ಮ ನಾಯಕ, ಜಿಲ್ಲಾ ಉಪಾಧ್ಯಕ್ಷೆ ರಾಜೇಶ್ವರಿ, ತಾಲ್ಲೂಕು ಉಪಾಧ್ಯಕ್ಷ ವೀರೇಶ ಮುಕ್ಕುಂದಾ, ಮಲ್ಲಪ್ಪ ವಜ್ರಬಂಡಿ, ಮಾರುತಿ ಸಹಿತ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದನ್ನೂ ನೋಡಿ: ಒಳ ಮೀಸಲಾತಿ; ಒಡಲಾಳದ ಕೂಗಿಗೆ ಸಿಕ್ಕಿತೇ ನ್ಯಾಯ..? Janashakthi Media