ಮಧ್ಯಪ್ರದೇಶದ ಮಾಜಿ ಮುಖ್ಯ ಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರನ್ನು ಹೊಸ ಎನ್‍ಡಿಎ ಸಂಪುಟದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವರನ್ನಾಗಿ ಎನ್ ಡಿಎ ಆಯ್ಕೆ ಮಾಡಿರುವುದನ್ನು ಸಂಯುಕ್ತ ಕಿಸಾನ್ ಮೋರ್ಚಾ ಬಲವಾಗಿ ಖಂಡಿಸಿದೆ. 2017 ರ ಜೂನ್ 6 ರಂದು ಮಧ್ಯಪ್ರದೇಶದ ಮಂದಸೌರ್‌ನಲ್ಲಿ , ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಖಾತ್ರಿಪಡಿಸಿದ ಖರೀದಿ , ಸಾಲ ಮನ್ನಾ ಮತ್ತು ರೈತರ ಆತ್ಮಹತ್ಯೆಗಳು ಅಂತ್ಯಗೊಳ್ಳಬೇಕು ಎಂಬ ನೈಜ ಬೇಡಿಕೆಗಳಿಗೆ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ಶಿವರಾಜ್‍ಸಿಂಗ್ ಚೌಹಾಣ್ ಮುಖ್ಯಮಂತ್ರಿಯಾಗಿದ್ದ ಬಿಜೆಪಿ ಸರಕಾರದ ಅಡಿಯಲ್ಲಿ ಗೋಲೀಬಾರ್ ನಡೆದು 6 ರೈತರ ಕಗ್ಗೊಲೆಯಾಯಿತು. ಈಗ ಇದಕ್ಕೆ ಹೊಣೆಗಾರರಾಗಿರುವವರನ್ನೇ ಕೃಷಿ ಮಂತ್ರಿಯಾಗಿ ನೇಮಿಸಿರುವ ನಿರ್ಧಾರ 2014 ಮತ್ತು 2019ರಲ್ಲಿ ಬಿಜೆಪಿ ಬಹುಮತದ ಸರಕಾರಗಳು ಪ್ರದರ್ಶಿಸಿದ ಭಂಡತನದ ಸಂಕೇತ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಹೇಳಿದೆ. ಈ ಘಟನೆ ದೇಶಾದ್ಯಂತ ರೈತರು ಮತ್ತು ಇತರ ಗ್ರಾಮೀಣ ಜನತೆಯಲ್ಲಿ ಆಕ್ರೋಶ ಉಂಟು ಮಾಢಿತ್ತು ಎಂದು ಅದು ನೆನಪಿಸಿದೆ.
ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಕೂಡ ರೈತರ ರಕ್ತದಿಂದ ತೊಯ್ದ ಕೈಗಳ ರಾಜಕಾರಣಿಗೆ ಕೃಷಿ ಸಚಿವ ಸ್ಥಾನ ನೀಡಿರುವುದು ನೈತಿಕವಾಗಿ ಖಂಡನೀಯ ಎಂದು ಹೇಳಿದೆ. ಈ ನಿರ್ಧಾರವು ಭಾರತದಾದ್ಯಂತ ರೈತರು ಮತ್ತು ಕೃಷಿ ಸಂಕಷ್ಟದ ಬಗ್ಗೆ ಬಿಜೆಪಿ-ಎನ್‌ಡಿಎಯ ಮನಸ್ಥಿತಿ, ಧೋರಣೆ ಮತ್ತು ದಿಕ್ಕಿನ ಸಂಕೇತವಾಗಿದೆ ಎಂದು ಅದು ಹೇಳಿದೆ.
ಗಮನಾರ್ಹವಾಗಿ ದುರ್ಬಲವಾಕೊಂಡಿರುವ ಬಿಜೆಪಿಯ ನೇತೃತ್ವದ ಹೊಸ ಎನ್‌ಡಿಎ ಸರ್ಕಾರವು ತನ್ನ ಮೊದಲ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಇದು ರೈತ ವಿರೋಧಿ ಸರಕಾರ ಎಂದು ಈಗಾಗಲೇ ಸಾಬೀತು ಮಾಡಿದೆ. ಪಿಎಂ-ಕಿಸಾನ್ ಅಡಿಯಲ್ಲಿ 2,000 ರೂ.ಗಳ ನೇರ ನಗದು ವರ್ಗಾವಣೆಯ ಕಂತು ಬಿಡುಗಡೆಗೆ ನಿರ್ಧರಿಸಿರುವುದು ಒಂದು ‘ದೊಡ್ಡ ನಿರ್ಧಾರ’ ಎಂದು ಮಾಧ್ಯಮಗಳಲ್ಲಿ ಡಂಗುರ ಬಾರಿಸಲಾಗುತ್ತಿದೆ.ಆದರೆ ಇದು ಸಂಪೂರ್ಣವಾಗಿ ಅಸಮರ್ಪಕವಾದ ಹಳೆಯ ಯೋಜನೆಯ ಮುಂದುವರಿಕೆಯಷ್ಟೇ , C2+50% ನ ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ ಕಾನೂನುಬದ್ಧವಾಗಿ ಖಾತರಿಪಡಿಸಿದ ಸಂಗ್ರಹಣೆಯೊಂದಿಗೆ ಫಲದಾಯಕ ಬೆಲೆಯನ್ನು ಪಡೆಯುವ ಹಕ್ಕಿನಿಂದ ರೈತರ ಗಮನವನ್ನು ಬೇರೆಡೆಗೆ ತಿರುಗಿಸುವ ಕಣ್ಕಟ್ಟಿನ ಕ್ರಮ ಎಂದು ಎಐಕೆಎಸ್ ಹೇಳಿದೆ. ಪಿಎಂ-ಕಿಸಾನ್ ಯೋಜನೆಯನ್ನು 2019 ರಲ್ಲಿ ಪ್ರಾರಂಭವಾಯಿತು, ಆಗ 14.5 ಕೋಟಿ ರೈತರನ್ನು ಒಳಗೊಂಡಿದ್ದ ಈ ಯೋಜನೆಯ ವ್ಯಾಪ್ತಿ ಈಗ , ಸರ್ಕಾರವೇ ಒಪ್ಪಿಕೊಂಡಿರುವಂತೆ, 9.3 ಕೋಟಿಗೆ ಇಳಿದಿದೆ ಎಂಬ ಸಂಗತಿಯತ್ತವೂ ಎಐಕೆಎಸ್ ಗಮನ ಸೆಳೆದಿದೆ..
ಎನ್‍ಡಿಎ ಯ ಮೊದಲ ಸಂಪುಟ ಸಭೆಯು ಸಿ2+ 50% ದ ಸ್ವಾಮಿನಾಥನ್ ಸೂತ್ರದ ಆಧಾರದ ಮೇಲೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ)ಯನ್ನು ಖಾತರಿಪಡಿಸುವ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ, ಅಥವಾ ಎಲ್ಲಾ ರೈತರ ಸಮಗ್ರ ಸಾಲ ಮನ್ನಾ ಅಥವಾ ವಿದ್ಯುತ್ ಖಾಸಗೀಕರಣವನ್ನು ರದ್ದುಗೊಳಿಸಿಸುವ ಬೇಡಿಕೆಗಳ ಬಗ್ಗೆ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಈ ಮೂಲಕ 9ನೇ ಡಿಸೆಂಬರ್ 2021 ರಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‍ಕೆಎಂ) ಜೊತೆಗಿನ ಒಪ್ಪಂದವನ್ನು ಹೊಸ ಬಿಜೆಪಿ-ಎನ್‌ಡಿಎ ಸರ್ಕಾರ ಹೇಗೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸುತ್ತದೆ. ಇವು ದೆಹಲಿಯ ಗಡಿಗಳಲ್ಲಿ ಐತಿಹಾಸಿಕ ರೈತ ಆಂದೋಲನದ ಸಮಯದಲ್ಲಿ ರೂಪುಗೊಂಡ ಮತ್ತು ನಂತರದ ರೈತ ಹೋರಾಟಗಳ ಅಲೆಗಳ ಮೂರು ಪ್ರಾಥಮಿಕ ಬೇಡಿಕೆಗಳು.
ಈ ನೀತಿ ಕ್ರಮಗಳಿಲ್ಲದಿದ್ದರೆ, ಕೃಷಿ ಬಿಕ್ಕಟ್ಟು ಮತ್ತಷ್ಟು ಆಳವಾಗುತ್ತದೆ. ಪಿಎಂ ಕಿಸಾನ್‌ನಂತಹ ನೇರ ವರ್ಗಾವಣೆ ಯೋಜನೆಗಳು ಭಾರತದ ರೈತ ಸಮುದಾಯದ ಹದಗೆಡುತ್ತಿರುವ ಸ್ಥಿತಿಯನ್ನು ಸುಧಾರಿಸಲು ಸಾಕಾಗುವುದಿಲ್ಲ, ಸ್ಥಿರ ಮತ್ತು ಫಲದಾಯಕ ಬೆಲೆಗಳು, ಋಣಭಾರದಿಂದ ಮುಕ್ತಿ ಮತ್ತು ಉತ್ಪಾದನಾ ವೆಚ್ಚದಲ್ಲಿನ ಕಡಿತದ ಧೋರಣೆಗಳು ಇಲ್ಲದ ಯಾವುದೇ ನಿರ್ಧಾರ ಆಕ್ರೋಶಕಾರಿ ಎಂದು ಎಐಕೆಎಸ್ ಹೇಳಿದೆ.
159 ಗ್ರಾಮೀಣ ಕ್ಷೇತ್ರಗಳಲ್ಲಿನ ಸೋಲಿನಿಂದಲೂ ಬಿಜೆಪಿ ಎನ್‌ಡಿಎ ಪಾಠ ಕಲಿಯುತ್ತಿಲ್ಲ. ಬಿಜೆಪಿ ಕಳೆದುಕೊಂಡಿರುವ 63 ಸ್ಥಾನಗಳ ಪೈಕಿ 60 ಸ್ಥಾನಗಳು ಗ್ರಾಮೀಣ ಪ್ರಾಬಲ್ಯದ ಪ್ರದೇಶಗಳಿಗೆ ಸೇರಿವೆ. ರಾಜಸ್ಥಾನದ ಸಿಕರ್‌ನಿಂದ ಆಮ್ರಾ ರಾಮ್, ಬಿಹಾರದಲ್ಲಿ ರಾಜಾ ರಾಮ್ ಸಿಂಗ್ ಮತ್ತು ಸುದಾಮ ಪ್ರಸಾದ್ ಮತ್ತು ತಮಿಳುನಾಡಿನ ದಿಂಡಿಗಲ್‌ನಿಂದ ಆರ್ ಸಚಿಂತಾನಂತಂ ಸೇರಿದಂತೆ ಎಸ್‌ಕೆಎಂ ನಾಯಕರ ಗೆಲುವು ಎನ್‍ಡಿಎ ಯ ಕಾರ್ಪೊರೇಟ್- ಪರ ಧೋರಣೆಗಳ ವಿರುದ್ಧ ರೈತರು ಮತ್ತು ಗ್ರಾಮೀಣ ಜನರಲ್ಲಿ ಹರಡಿರುವ ವ್ಯಾಪಕ ಸಿಟ್ಟನ್ನು ಬಿಂಬಿಸುತ್ತದೆ ಎಂದು ಅಖಿಲ ಭಾರತ ಕಿಸಾನ್ ಸಭಾ ಹೇಳಿದೆ.