ಸಾವರ್ಕರ್​​ ಭಾವಚಿತ್ರ ವಿವಾದ: ಶಿವಮೊಗ್ಗ-ಭದ್ರಾವತಿಯಲ್ಲಿ ಮುಂದುವರೆದ ನಿಷೇಧಾಜ್ಞೆ

ಶಿವಮೊಗ್ಗ: ವಿ ಡಿ ಸಾವರ್ಕರ್​​ ಭಾವಚಿತ್ರ ಅಳವಡಿಸಿದ ವಿಚಾರದಲ್ಲಿ ಎದ್ದ ಗಲಾಟೆ ಹಾಗೂ ಪ್ರೇಮ್ ​ಸಿಂಗ್ ಅವರಿಗೆ ಚಾಕು ಇರಿತ ಪ್ರಕರಣ ಸಂಬಂಧ ಗಲಭೆಯನ್ನು ನಿಯಂತ್ರಣಗೊಳಿಸಿಲು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಜಾರಿ ಮಾಡಲಾದ ನಿಷೇಧಾಜ್ಞೆಯನ್ನು ಮುಂದುವರಿಕೆ ಮಾಡಲಾಗಿದೆ.

ಸ್ಥಳೀಯ ಪರಿಸ್ಥಿತಿಯ ಅನುಗುಣವಾಗಿ ಇಂದು (ಆಗಸ್ಟ್‌ 18) ರಾತ್ರಿ 10 ಗಂಟೆವರೆಗೂ ನಿಷೇಧಾಜ್ಞೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಪೊಲೀಸ್ ಸಿಬ್ಬಂದಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.

ಅಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ದಿನದಂದು ನಡೆದ ಗಲಾಟೆ ಬಳಿಕ ನಗರದಲ್ಲಿ ಉದ್ವಿಗ್ನ ವಾತಾವರಣ ಏರ್ಪಟ್ಟಿತು. ಪರಿಸ್ಥಿತಿ ನಿಯಂತ್ರಣದ ನಂತರ ಶಾಲಾ ಕಾಲೇಜುಗಳು ಬುಧವಾರದಿಂದ ಆರಂಭವಾಗಿದ್ದು, ಅದಾಗ್ಯೂ ನಗರದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಈ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟು ನಿಟ್ಟಿನ ಕ್ರಮಗೊಳ್ಳಲಾಗುತ್ತಿದೆ. ಬೈಕ್ ಮತ್ತು ಕಾರುಗಳು ಸೇರಿದಂತೆ ಇನ್ನಿತರ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ನಿಷೇಧಾಜ್ಞೆಗೆ ವ್ಯಾಪಾರ ತತ್ತರ

ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಮುಂದುವರೆದದಿದ್ದು, ಇದರಿಂದ ವ್ಯಾಪಾರ ವಹಿವಾಟುಗಳು ನಡೆಯದೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಶಿವಮೊಗ್ಗ ಗಾಂಧಿ ಬಜಾರ್​ನಲ್ಲಿ ಮೂರು ದಿನಗಳಿಂದ ವ್ಯಾಪಾರ ವಹಿವಾಟು ಇಲ್ಲದೇ ವ್ಯಾಪಾರಸ್ಥರು ನಷ್ಟ ಅನುಭವಿಸುತ್ತಿದ್ದಾರೆ. ಹಬ್ಬ ಹರಿದಿನಗಳ ದಿನದಲ್ಲಿ ಮಾರುಕಟ್ಟೆ ಬಂದ್ ಮಾಡಿದರೆ ಏನು ಮಾಡಬೇಕು, ತಪ್ಪು ಮಾಡಿದವರ ಮೇಲೆ ಗುಂಡು ಹಾರಿಸಿ. ಅವರನ್ನು ಗಲ್ಲಿಗೇರಿಸಿ. ಯಾರೋ ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ಆಗುತ್ತಿದೆ. ವ್ಯಾಪಾರವಿಲ್ಲದೆ ದೊಡ್ಡ ನಷ್ಟಕ್ಕೆ ಒಳಗಾಗಿದ್ದೇವೆ ಎಂದು ವ್ಯಾಪಾರಸ್ಥರು ಮಾಧ್ಯಮಗಳ ಮುಂದೆ ಆಕ್ರೋಶ ಹೊರಹಾಕಿದ್ದಾರೆ.

ಗಾಂಧಿ ಬಜಾರ್​ನಲ್ಲೂ ಬಿಗುವಿನ ವಾತಾವರಣದ ನಡುವೆ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಐಜಿಪಿ ಪೂರ್ಣ ವಲಯ ತ್ಯಾಗರಾಜನ್ ಅವರು ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ. ಶಿವಪ್ಪ ನಾಯಕ ವೃತ್ತದಲ್ಲಿಯೂ ಬಿಗಿ ಬಂದೋಬಸ್ತ್ ವಹಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *