ಶಿವಮೊಗ್ಗ: ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಸಮಯದಲ್ಲಿ ಶಾಲೆ ಕಾಲೇಜುಗಳನ್ನೂ ಮುಚ್ಚುವಂತೆ ಸರ್ಕಾರ ಸೂಚಿಸಿದೆ. ಆದರೆ ಶಿವಮೊಗ್ಗ ಜಿಲ್ಲೆಯ ಅಕ್ಷರ ಸ್ಕೂಲ್ ಮತ್ತು ಕಾಲೇಜು ಎಂದಿನಂತೆ ಕಾರ್ಯ ನಿರ್ವಹಿಸಿದ್ದು ಸಾರ್ವಜನಿಕರ ಕಣ್ಣನ್ನು ಕೆಂಪಾಗಿಸಿದೆ. ಜನಸಾಮಾನ್ಯರಿಗೊಂದು ನ್ಯಾಯ, ರಾಜಕಾರಣಿಗಳಿಗೆ ಒಂದು ನ್ಯಾಯವಾ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೌದು, ಶಿವಮೊಗ್ಗ ಜಿಲ್ಲೆಯಲ್ಲಿ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಲಾಗಿದ್ದು, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್ ಒಡೆತನದ ಅಕ್ಷರ ಕಾಲೇಜು ತೆರೆಯಲಾಗಿದ್ದು, ಕಾಲೇಜು ಬಸ್ನಲ್ಲಿ ವಿದ್ಯಾರ್ಥಿಗಳು ತೆರಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ : ಮುಸ್ಲಿಂ ಯುವಕನನ್ನು ಮನಬಂದಂತೆ ಥಳಿಸಿ, ಎಂಜಲು ನೆಕ್ಕುವಂತೆ ಬಲವಂತ ಮಾಡಿದ ಬಿಜೆಪಿ ಕಾರ್ಯಕರ್ತರು
ಈ ಬಗ್ಗೆ ವಿಚಾರಣೆ ನಡೆಸಿದಾಗ ವಿದ್ಯಾರ್ಥಿಗಳಿಗೆ ಇಂದು ಲಸಿಕೆ ನೀಡುವ ಉದ್ದೇಶದಿಂದ ಕಾಲೇಜ್ ತೆರೆಯಲಾಗಿದೆ ಎಂದು ಆಡಳಿತ ಮಂಡಳಿ ಪ್ರತಿಕ್ರಿಯಿಸಿದೆ. ಆದರೆ ವಿದ್ಯಾರ್ಥಿಗಳನ್ನು ಸಂಪರ್ಕಿಸಿದಾಗ ” ಕೊಠಡಿಯಲ್ಲಿ ವಿಶೇಷ ತರಗತಿಗಳು ನಡೆದಿವೆ”, ಬರಲು ಹೇಳಿದ್ದರು ಹಾಗಾಗಿ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯೆ ನೀಡಿದ್ದಾರೆ.
ಪಾಠಗಳು ನಡೆದಿವೆ. ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು ಸರಿಯೇ? ಸಾರ್ವಜನಿಕರು ಓಡಾಡಿದರೆ ದಂಡ ಹಾಕುವ, ಹೊಡೆಯುವ ಕೆಲಸ ಮಾಡುವ ಪೊಲೀಸರ ಕಣ್ಣಿಗೆ ಈ ಕಾಲೇಜ್ ಕಾಣಲಿಲ್ಲವೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರದ ಆದೇಶಕ್ಕೆ ಆಡಳಿತ ಪಕ್ಷದ ಶಾಸಕರ ಶಾಲೆಯಲ್ಲೇ ಕಿಮ್ಮತ್ತಿಲ್ಲ. ಕಾನೂನು ಇರುವುದು ಕೇವಲ ಸಾರ್ವಜನಿಕರಿಗೆ ಅಷ್ಟೇನಾ ಎಂಬ ಪ್ರಶ್ನೆ ಈಗ ಎದ್ದಿದೆ.