– ನವೀನ್ ಸೂರಿಂಜೆ
ಮಸೀದಿಯೊಳಗೆ ಶಿವ ಲಿಂಗವಿದೆ, ತಾಜ್ ಮಹಲ್ ತೇಜೋಮಹಲ್ ಆಗಿತ್ತು ಎಂಬ ಶೋಧನೆಗೂ ಮೊದಲು, ಹಿಂದುಗಳಲ್ಲಿನ ಶೂದ್ರರು, ಹವ್ಯಕ / ಸ್ಥಾನಿಕ ಬ್ರಾಹ್ಮಣರು ತನ್ನೂರಿನ ದೇವಸ್ಥಾನಗಳ ಶೋಧನೆ ಮಾಡಬೇಕು. ಯಾವ್ಯಾವ ದೇವಸ್ಥಾನಗಳಲ್ಲಿ ಶಿವಲಿಂಗವನ್ನು ಮುಚ್ಚಿಟ್ಟು ಯಾವ್ಯಾವ ದೇವರನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಬಯಲಾಗಬೇಕಿದೆ.
ಉದಾಹರಣೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನೇ ನೋಡಿ. ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಶೈವಾಂಶ (ಶಿವಪರಂಪರೆ) ದೇಗುಲವಾಗಿದ್ದರೂ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನ ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ 2021 ಮಾರ್ಚ್ 21 ರಂದು ಆರೋಪಿಸಿತ್ತು. ಈ ವಿವಾದ ಈಗಲೂ ಚಾಲ್ತಿಯಲ್ಲಿದೆ.

ಉಡುಪಿಯ ಶ್ರೀಕೃಷ್ಣಮಠದ ಅನಂತೇಶ್ವರ ದೇಗುಲದ ಹೊರಗೆ ಅನಂತೇಶ್ವರ ದೇಗುಲ ಎಂದು ಬೋರ್ಡ್ ಇದ್ದರೆ, ಒಳಗೆ ಅನಂತಾಸನ ದೇಗುಲ ಎಂಬ ಬೋರ್ಡ್ ಇದೆ. ಅನಂತೇಶ್ವರ ಅಂದರೆ ಶಿವ. ಅನಂತಾಸನ ಅಂದರೆ ವಿಷ್ಣು. ಹೀಗಾಗಿ ಗರ್ಭಗುಡಿಯಲ್ಲಿರೋದು ಶಿವನ ವಿಗ್ರಹ ಅಂತಾ ಶೈವರು ವಾದಿಸಿದರೆ, ವೈಷ್ಣವರು ವಿಷ್ಣು ವಿಗ್ರಹ ಎಂದು ಹೇಳುತ್ತಿದ್ದಾರೆ. ಸಧ್ಯ ಈ ದೇವಸ್ಥಾನ ವಿಷ್ಣು ಆರಾಧಕ ಮಾಧ್ವರ ಕೈಯ್ಯಲ್ಲಿದೆ. 1969 ರಲ್ಲಿ ಸಂಶೋಧಕ ಡಾ ಮ ಸು ಅಚ್ಯುತ ಶರ್ಮರು ಬರೆದಿರುವ ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನಲೆ ಪುಸ್ತಕದ ಮದನಂತೇಶ್ವರ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ “ಉಡುಪಿಗೆ ಮಾಧ್ವಬ್ರಾಹ್ಮಣರು ಪ್ರವೇಶಿಸುವ ಮುಂಚೆ ಅನಂತೇಶ್ವರ ದೇಗುಲವು ಸ್ಥಾನಿಕ ಶಿವಬ್ರಾಹ್ಮಣರ ವಶದಲ್ಲಿತ್ತು. ಮಾಧ್ವ ಬ್ರಾಹ್ಮಣರು ಸ್ಥಳೀಯ ಬಂಟರ ಸಹಾಯ ಪಡೆದು ಸ್ಥಾನಿಕ ಶಿವಬ್ರಾಹ್ಮಣರನ್ನು ಓಡಿಸಿ ಅನಂತೇಶ್ವರ ದೇಗುಲವನ್ನು ವಶಪಡಿಸಿಕೊಂಡು ಅನಂತಾಸನ ದೇಗುಲ ಎಂದು ಕರೆದರು. ಆ ಬಳಿಕ ಬೇಕೆಂದೇ ಅನಂತೇಶ್ವರ ಶಿವಲಿಂಗಕ್ಕೆ ಹಾನಿ ಮಾಡಿ ಅದು ಕಾಣದಂತೆ ತಾಮ್ರದ ತಗಡೊಂದನ್ನು ಸುತ್ತವರೆಸಿ ಮುಚ್ಚಿಟ್ಟಿದ್ದಾರೆ. ಈ ಶಿವನ ಆಲಯದಲ್ಲಿ ಈಗ ಈಶ್ವರನಿಗೆ ಪ್ರೀಯವಾದ ಬಿಲ್ವಪತ್ರೆ ಮತ್ತು ವಿಭೂತಿಯ ಉಪಯೋಗವೂ ಮಾಡದೇ ವಿಷ್ಣು ಆರಾಧನಾ ಕ್ರಮವಾದ ತುಳಸೀ ಗಂಧವನ್ನು ಕೊಡುತ್ತಿದ್ದಾರೆ” ಎಂದು ಬರೆದಿದ್ದಾರೆ.
ಹಾಗೆ ನೋಡಿದರೆ ಇಡೀ ಕರ್ನಾಟಕದಲ್ಲಿರುವುದು ಮಾರಮ್ಮ, ಅಣ್ಣಮ್ಮ, ಭೂತಾರಾಧನೆ, ಮುನಿ ಪೂಜೆಯಂತಹ ದೇವರ ಆರಾಧನೆಗಳು ಮಾತ್ರ. ಇವನ್ನು ಹೊರತುಪಡಿಸಿದರೆ ಕಿರುಸಂಸ್ಕೃತಿಗೆ ಹತ್ತಿರವಾಗಿರುವ ಶಿವನ ಆರಾಧನೆ ನಮ್ಮಲ್ಲಿದೆ. ಆದರೆ ಶಿವಾಲಯಗಳಲ್ಲಿ ಶಿವನ ಹೆಸರಿದ್ದರೂ ನಮಗೆ ಸಂಬಂಧವೇ ಇಲ್ಲದ ವಿಷ್ಣುವಿನ ಆರಾಧನೆ, ಪೂಜಾದಿಗಳು ನಡೆಯುತ್ತದೆ. ಹಾಗಾಗಿ ನಾವುಗಳು ಮಸೀದಿಯಲ್ಲಿ ಶಿವಲಿಂಗ ಹುಡುಕುವುದಕ್ಕೂ ಮೊದಲು ನಮ್ಮೂರಿನ ದೇವಸ್ಥಾನದಲ್ಲಿ ಶಿವಲಿಂಗವಿದೆಯೇ ? ಶೈವ ಪರಂಪರೆಯಂತೆಯೇ ಬಿಲ್ವಪತ್ರೆ, ವಿಭೂತಿಯ ಪೂಜಾದಿಗಳು ನಡೆಯುತ್ತಿದೆಯೇ ನೋಡಬೇಕಿದೆ.
ಸ್ಥಾನಿಕರ ಚರಿತ್ರೆ ಬಗ್ಗೆ ಡಾ ಕೆ ಜಿ ವಸಂತ ಮಾಧವರು ಅಧ್ಯಯನ ಮಾಡಿರುವುದನ್ನು ನಾನು ಅನುವಾದಿಸಿದ್ದೇನೆ.ಅದರಲ್ಲಿನ ಒಂದು ವಿಷಯ: ಉಡುಪಿ ಸಮೀಪದ ಸೋಮನಾಥ ದೇವಾಲಯ ಶೈವರ ಆಳ್ವಕೆಯಲ್ಲಿತ್ತು.ಸಗಥಾನಿಕರ ಆಳ್ವಿಕೆ.ಮಾಧ್ವರು ಅದನ್ನು ವಶಪಡಿಸಿಕೊಂಡು ಅದೀಗ ವೈಷ್ಣವ ದೇವಾಲಯವಾಗಿದೆ.ನೋಡಿ; ಕರ್ನಾಡಕದ ಇತಿಹಾಸದಲ್ಲಿ ಸ್ಥಾನಿಕರ ಸಾಂಸ್ಕೃತಿಕ ಚರಿತ್ರ.ಮೂಲ ಕೆಜಿ ವಸಂತ ಮಾಧವ; ಅನುವಾದ ಮಹಾಬಲೇಶ್ವರ ರಾವ್