- ಶಿರಾದಲ್ಲಿ ಶೇ 84.54 ಮತದಾನ, ಆರ್.ಆರ್.ನಗರದಲ್ಲಿ ಶೇ. 45.24 ಮತದಾನ
ಬೆಂಗಳೂರು: ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿದ್ದ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರ ಮತ್ತು ಆಪರೇಷನ್ ಕಮಲಕ್ಕೆ ಬಲಿಯಾಗಿ ಕಾಂಗ್ರೆಸ್ ಶಾಸಕ ಮುನಿರತ್ನ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆರ್.ಆರ್. ನಗರ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ ಉಪಚುನಾವಣೆ ನಡೆಯಿತು.
ಶಿರಾದಲ್ಲಿ ಕಾಂಗ್ರೆಸ್ನಿಂದ ಟಿ.ಬಿ.ಜಯಚಂದ್ರ, ಬಿಜೆಪಿಯಿಂದ ರಾಜೇಶ್ ಗೌಡ ಹಾಗೂ ಜೆಡಿಎಸ್ ನಿಂದ ಅಮ್ಮಾಜಮ್ಮ ಅಭ್ಯರ್ಥಿಗಳಾಗಿದ್ದಾರೆ.
ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒಟ್ಟು ಶೇ 84.54ರಷ್ಟು ಮತದಾನವಾಗಿದೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇ 84.31 ಮತದಾನವಾಗಿತ್ತು. 91,959 ಪುರುಷರು ಮತ್ತು 85,594 ಮಹಿಳೆಯರು ಮತದಾನ ಮಾಡಿದ್ದಾರೆ. 4821 ಮಂದಿ ಅಂಚೆ ಮತ ಚಲಾಯಿಸಿದ್ದಾರೆ. ಕೊರೊನಾ ಸೋಂಕಿತ 71 ಮಂದಿ ಮತದಾನಕ್ಕೆ ಹೆಸರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ 38 ಮಂದಿ ಹಕ್ಕು ಚಲಾಯಿಸಿದರು.
ಆರ್.ಆರ್.ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಕುಸುಮಾ, ಬಿಜೆಪಿಯಿಂದ ಮುನಿರತ್ನ ಹಾಗೂ ಜೆಡಿಎಸ್ನಿಂದ ಕೃಷ್ಣಮೂರ್ತಿ ಸ್ಪರ್ಧೆಗೆ ಇಳಿದಿದ್ದಾರೆ. ಆರ್ ಆರ್ ನಗರ ಶೇ. 45.24 ರಷ್ಟು ಮತದಾನವಾಗಿದೆ.