ನಾರಾ : ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆಗೆ ಗುಂಡೇಟು ಹೊಡೆದಿದ್ದು, ಅಬೆ ಸ್ಥಿತಿ ಚಿಂತಾಜನಕವಾಗಿದೆ. ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆಯಿದೆ. ಶಿಂಜೋ ಎದೆಗೆ ಎರಡು ಗುಂಡು ಬಿದ್ದಿದೆ. ಆಸ್ಪತ್ರೆಗೆ ದಾಖಲು ಮಾಡಿದ್ಧಾರೆ. ಗುಂಡಿನ ಏಟಿನ ಮಧ್ಯೆ ಶಿಂಜೋಗೆ ಹೃದಯಾಘಾತವಾಗಿದೆ. ಪರಿಸ್ಥಿತಿ ಕ್ಷಣ-ಕ್ಷಣಕ್ಕೂ ಕೈ ಮೀರುತ್ತಿದೆಂದು ಆಸ್ಪತ್ರೆ ಮಾಹಿತಿ ನೀಡುತ್ತಿದೆ.
ಶಿಂಜೋ ಭಾಷಣ ಮಾಡುತ್ತಿದ್ದ ವೇಳೆ ದುಷ್ಕರ್ಮಿ ಗುಂಡು ಹಾರಿಸಿದ್ದನು. ನೇರವಾಗಿ ಎರಡು ಬಾರಿ ಎದೆಗೆ ಗುಂಡು ಹಾರಿಸಿದ್ದಾನೆ. 40 ವರ್ಷದ ತುತ್ಸಿಯಾ ಯಮಾಗಮಿಯಿಂದ ಅಟ್ಯಾಕ್ ಮಾಡಲಾಗಿದೆ. ಪೊಲೀಸರು ಕೆಲವೇ ಕ್ಷಣಗಳಲ್ಲಿ ಆರೋಪಿ ಬಂಧಿಸಿದ್ದಾರೆ.
ಭಾನುವಾರದ ಮೇಲ್ಮನೆ ಚುನಾವಣೆಗೆ ಮುನ್ನ ನಡೆದ ಕಾರ್ಯಕ್ರಮವೊಂದರಲ್ಲಿ ಮಾಜಿ ನಾಯಕ ಸಾರ್ವಜನಿಕವಾಗಿ ಭಾಷಣ ಮಾಡುತ್ತಿದ್ದಾಗ ಗುಂಡೇಟಿನ ಸದ್ದು ಕೇಳಿಬಂದಿದೆ ಎಂದು ರಾಷ್ಟ್ರೀಯ ಪ್ರಸಾರಕ ಎನ್‌ಎಚ್‌ಕೆ ಮತ್ತು ಕ್ಯೋಡೋ ಸುದ್ದಿ ಸಂಸ್ಥೆ ತಿಳಿಸಿದೆ. ಗುಂಡೇಟಿನ ಶಬ್ದ ಕೇಳಿದ ಬೆನ್ನಲ್ಲಿಯೇ ಶಿಂಜೋ ಅಬೆ ಕುಸಿದು ಬಿದ್ದಿದ್ದಾರೆ. ಈ ವೇಳೆ ಅವರ ಎದೆಯ ಭಾಗದ ಕಡೆಯಲ್ಲಿ ರಕ್ತ ಕಂಡುಬಂದಿದೆ ಎಂದು ವರದಿಯಾಗಿದೆ.
67 ವರ್ಷದ ಶಿಂಜೊ ಅಬೆ ಅವರ ಕುತ್ತಿಗೆ ಭಾಗಕ್ಕೂ ಗುಂಡೇಟು ಬಿದ್ದಿದೆ ಎಂದು ಜಪಾನ್‌ನ ಆಡಳಿತ ಪಕ್ಷವಾದ ಲಿಬರಲ್ ಡೆಮಾಕ್ರಟಿಕ್ ಪಕ್ಷ ಹೇಳಿದೆ. ಎಲ್‌ಡಿಪಿಯಾಗಲಿ ಅಥವಾ ಸ್ಥಳೀಯ ಪೊಲೀಸರಾಗಲಿ ಈವರೆಗೂ ಶಿಂಜೋ ಅಬೆ ಪರಿಸ್ಥಿತಿಯ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿಲ್ಲ. ಗುಂಡೇಟು ಬಿದ್ದು ಕುಸಿದ ತಕ್ಷಣವೇ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತಾದರೂ, ಅವರ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ ಎಂದು ವರದಿಯಾಗಿದೆ.
ಶಿಂಜೋ ಅಬೆ ಎರಡು ಬಾರಿ ಜಪಾನ್ ಪ್ರಧಾನಿಯಾಗಿದ್ದರು. ಈ ಹಿಂದೆ ಭಾರತಕ್ಕೂ ಕೂಡ ಶಿಂಜೋ ಅಬೆ ಭೇಟಿ ನೀಡಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಅತ್ಯಾಪ್ತರಾಗಿದ್ದರು.