ರಾಜೀನಾಮೆ ಬುಟ್ಟಿಯೊಳಗಿನ ಹಾವೆ? ಭೂಮಾಫಿ ಚದುರಂಗದಾಟಕ್ಕೆ ಬೀದಿಗೆ ಬಂತೆ ಅಧಿಕಾರಿಗಳ ಜಗಳ?
ಮೈಸೂರು : ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಮಾಡಿರುವ ಆರೋಪಗಳ ಕುರಿತು ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ದಾಖಲೆ ನೀಡುವಂತೆ ಕೇಳಿದ್ದಾರೆ.
ನಗರದ ಎಟಿಐನಲ್ಲಿ ಕೊರೋನ ನಿಯಂತ್ರಣ ಸಂಬಂಧ ಮಾಹಿತಿ ಪಡೆಯಲು ಆಗಮಿಸಿರುವ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಗುರುವಾರದ ಸುದ್ದಿಗೋಷ್ಠಿ ಬಗ್ಗೆ ದಾಖಲೆಗಳನ್ನು ಕೇಳಿದರು ಎನ್ನಲಾಗಿದೆ. ನಿನ್ನೆ ಸುದ್ಧಿಗೋಷ್ಠಿ ನಡೆಸಿ ಡಿಸಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಶಿಲ್ಪಾನಾಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇದೇ ವಿಚಾರವಾಗಿ ಶಿಲ್ಪಾನಾಗ್ ಅವರನ್ನ ತರಾಟೆ ತೆಗೆದುಕೊಂಡು ಸುದ್ದಿಗೋಷ್ಠಿ ಬಗ್ಗೆ ದಾಖಲೆಗಳನ್ನು ಕೇಳಿದ್ದಾರೆ.
ನೀವು ನಿನ್ನೆ ಏಕಾಏಕಿ ಹೇಗೆ ಸುದ್ದಿಗೋಷ್ಠಿ ನಡೆಸಿದಿರಿ. ಸುದ್ದಿಗೋಷ್ಠಿ ನಡೆಸುವ ಅಗತ್ಯತೆ ಏನಿತ್ತು? ಯಾವ ಆಧಾರದಲ್ಲಿ ನೀವು ಸುದ್ದಿಗೋಷ್ಠಿ ನಡೆಸಿದ್ದೀರಿ. ಸುದ್ದಿಗೋಷ್ಠಿ ನಡೆಸಿದ್ದರ ಉದ್ದೇಶ ಏನು ? ನನಗೆ ಈ ವಿಚಾರದಲ್ಲಿ ದೂರು ನೀಡಬಹುದಿತ್ತು. ಏಕಾಏಕಿ ಸುದ್ದಿಗೋಷ್ಠಿ ನಡೆಸಿದ್ದು ಆಡಳಿತಾತ್ಮಕ ಉಲ್ಲಂಘನೆ ಅಲ್ಲವೆ? ಈಗ ಡಿಸಿ ವಿರುದ್ಧ ಮಾಡಿರುವ ಆರೋಪಗಳಿಗೆ ದಾಖಲೆ ಇದೆಯಾ ಎಂದು ಶಿಲ್ಪಾನಾಗ್ ಅವರಿಗೆ ರವಿಕುಮಾರ್ ಪ್ರಶ್ನಿಸಿದರು ಎನ್ನಲಾಗಿದೆ.
ಇದನ್ನೂ ಓದಿ : ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ರಾಜಿನಾಮೆ?!
“ರಾಜೀನಾಮೆ” ಬುಟ್ಟಿಯಲ್ಲಿನ ಹಾವೆ? : ರಾಜೀನಾಮೆ ವಿದ್ಯಮಾನವೇ ಹೈಡ್ರಾಮ, ಬೆದರಿಕೆ ತಂತ್ರಕ್ಕೆ ಶಿಲ್ಪಾನಾಗ್ ಮುಂದಾಗಿದ್ದಾರಾ? ಎಂಬ ಅನುಮಾನ ಮೂಡಿದೆ. ಇಬ್ಬರು ಐಎಎಸ್ ಅಧಿಕಾರಿಗಳ ಸಮರ ಬಹಿರಂಗಗೊಂಡ ಬೆನ್ನಲ್ಲೇ ಶುಕ್ರವಾರ ಮೈಸೂರಿಗೆ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಭೇಟಿ ನೀಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರವಿಕುಮಾರ್, ಶಿಲ್ಪಾನಾಗ್ ಅವರ ರಾಜೀನಾಮೆ ಪತ್ರ ಬಂದಿಲ್ಲ. ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರು ರಾಜೀನಾಮೆಯನ್ನೇ ಕೊಟ್ಟಿಲ್ವ? ನಿನ್ನೆ ನಡೆದ ಸುದ್ದಿಗೋಷ್ಠಿ ‘ಬುಟ್ಟಿಯಲ್ಲಿ ಹಾವಿದೆ’ ಅನ್ನುವ ಸಂದೇಶ ರವಾನೆಗೆ ಮಾತ್ರ ಸೀಮಿತನಾ? ರಾಜೀನಾಮೆ ಪತ್ರ ತಲುಪಿಲ್ಲ ಅಂದಿದ್ದೀಕೆ ಸಿಎಸ್? ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ತಲುಪಿಲ್ಲ ಅಂದ್ರೆ ರಾಜೀನಾಮೆ ಕೊಟ್ಟಿರೋದೇ ಸುಳ್ಳಾ? ಹೀಗೆ ಹಲವು ಪ್ರಶ್ನೆಯನ್ನು ಹುಟ್ಟುಹಾಕಿದೆ ಸಿಎಸ್ ರವಿಕುಮಾರ್ರ ಹೇಳಿಕೆ.
ರಾಜೀನಾಮೆ ಹಿಂದೆ ಭೂಮಾಫಿಯಾ? : ಶಿಲ್ಪಾನಾಗ್ ರಾಜೀನಾಮೆ ವಿಚಾರ ಇದೀಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಪಾಲಿಕೆ ಆಯುಕ್ತರ ಈ ನಿರ್ಧಾರದ ಹಿಂದಿರುವ ಅಸಲಿ ಕಾರಣವೇನು? ಎಂಬ ಬಗ್ಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ.
ಮೇಲ್ನೋಟಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಮಾನಸಿಕ ಕಿರುಕುಳದಿಂದ ತಾವು ರಾಜೀನಾಮೆ ನೀಡುತ್ತಿರುವುದಾಗಿ ಶಿಲ್ಪಾನಾಗ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಮೈಸೂರಿನಲ್ಲಿ ನಡೆದಿದೆ ಎನ್ನಲಾಗಿರುವ ಭೂ ಒತ್ತುವರಿ ಕುರಿತು ತನಿಖೆ ಆರಂಭವಾಗುತ್ತಿರುವ ಬೆನ್ನಲ್ಲೇ ಶಿಲ್ಪಾನಾಗ್ ರಾಜೀನಾಮೆ ನೀಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಹೇಳಿ ಕೇಳಿ ಮೈಸೂರು ವೇಗವಾಗಿ ಬೆಳೆಯುತ್ತಿರುವ ನಗರ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೈಸೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಕೂಡ ಜೋರಾಗಿದೆ. ಈ ನಡುವೆ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಭೂ ಒತ್ತುವರಿ ಆರೋಪ ಕೇಳಿಬಂದಿದ್ದು, ತಾಲೂಕಿನ ಕೇರ್ಗಳ್ಳಿ, ಯಡಹಳ್ಳಿ ವ್ಯಾಪ್ತಿಯಲ್ಲಿ ಭೂ ಕಬಳಿಕೆ ಮಾಡಿರುವುದು ಆರ್ಟಿಐ ಕಾರ್ಯಕರ್ತರೊಬ್ಬರ ಮೂಲಕ ಬೆಳಕಿಗೆ ಬಂದಿತ್ತು. ಜೊತೆಗೆ ಇದಕ್ಕೆ ಸಂಬಂಧಿಸಿದ ಕಡತಗಳನ್ನು ಮುಡಾ ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು.ಡಿಸಿ ರೋಹಿಣಿ ಸಿಂಧೂರಿ ತನಿಖೆ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸುವ ಕಾರ್ಯಕ್ಕೆ ಮುಂದಾಗಿದ್ದರು. ಇದು ಕೆಲ ಜನಪ್ರತಿನಿಧಿಗಳ ನಿದ್ದೆಗೆಡಿಸಿತ್ತು. ಹೀಗಾಗಿ ಪಾಲಿಕೆ ಆಯುಕ್ತೆ ರಾಜೀನಾಮೆ ಹಿಂದೆ ಭೂ ಮಾಫಿಯಾ ಕೈವಾಡವಿದೆಯೇ? ಎಂಬ ಅನುಮಾನ ಮೂಡಿದೆ.
ಜಿಲ್ಲಾಧಿಕಾರಿಗಳು ಭೂ ಒತ್ತುವರಿ ಕುರಿತು ತನಿಖೆ ಮಾಡದಂತೆ ತಡೆಯುವ ಸಲುವಾಗಿ ಹಾಗೂ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿಸುವ ಹುನ್ನಾರ ನಡೆದಿದೆ. ಇದಕ್ಕಾಗಿ ಬಲವಾದ ಕಾರಣ ಹುಡುಕುತ್ತಿದ್ದ ಭೂ ಮಾಫಿಯಾದಾರರು, ಜನಪ್ರತಿನಿಧಿಗಳು ತಮ್ಮ ಚದುರಂಗದ ಆಟಕ್ಕೆ ಪಾಲಿಕೆ ಆಯುಕ್ತರನ್ನು ಬಳಸಿಕೊಂಡಿದ್ದಾರೆ. ಅವರ ಮೂಲಕ ಡಿಸಿ ವಿರುದ್ಧ ಗಂಭೀರ ಆರೋಪ ಮಾಡಿಸಿ, ರೋಹಿಣಿ ಸಿಂಧೂರಿ ಅವರ ಕಾರ್ಯಕ್ಷಮತೆಯನ್ನು ಹಾಳು ಮಾಡುವ ಹಾಗೂ ವರ್ಗಾವಣೆ ಮಾಡಿಸುವ ಸಂಚು ನಡೆದಿದೆ ಎಂಬ ಗುಮಾನಿ ಹರಿದಾಡುತ್ತಿದೆ.