ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಮಾಡಲಾಗುವುದು ಎಂದು ಪ್ರಕಟಿಸಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ(ಎಐಡಿಡಬ್ಲ್ಯೂಎ), ಕರ್ನಾಟಕ ರಾಜ್ಯ ಸಮಿತಿ ಕರ್ನಾಟಕ ಶಿಕ್ಷಣ ರಂಗ ಕೋಮುವಾದಿಗಳ ಅಂಗಳವಲ್ಲ ಎಂದು ಎಚ್ಚರಿಸಿದೆ.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಅಧ್ಯಕ್ಷೆ ಮೀನಾಕ್ಷಿ ಬಾಳಿ ಅವರು, ಕರ್ನಾಟಕದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ರಾಜ್ಯ ಸರ್ಕಾರದ ಪ್ರಸ್ತಾಪಕ್ಕೆ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇದು ಸಂವಿಧಾನದ ಆಶಯಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು ಈ ಪ್ರಸ್ತಾಪವನ್ನ ರಾಜ್ಯ ಬಿ.ಜೆ.ಪಿ. ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದ್ದಾರೆ.
ಸಂವಿಧಾನದ ಪರಿಚ್ಛೇದ 28ರ ಪ್ರಕಾರ ಸಾರ್ವಜನಿಕ ಶಿಕ್ಷಣದಲ್ಲಿ ಯಾವುದೇ ಧರ್ಮದ ವಿಚಾರಗಳನ್ನ ಒಳಗೊಳ್ಳಬಾರದೆಂದು ಸ್ಪಷ್ಟವಾಗಿ ಹೇಳಿದ್ದು, ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಭಾರತೀಯ ಜನತಾ ಪಕ್ಷ(ಬಿಜೆಪಿ) ಸರ್ಕಾರ ಈ ದೇಶದ ಸಂವಿಧಾನದ ಆಶಯಗಳ ವಿರುದ್ಧ ಭಗವದ್ಗೀತೆಯನ್ನು ಬೋಧನೆ ಮಾಡಿಸಲು ಹೊರಟಿರುವುದನ್ನು ಸಂಘಟನೆಯು ಪ್ರತಿರೋಧಿಸುತ್ತದೆ ಎಂದಿದ್ದಾರೆ.
ಜಾರಿಗೊಳಿಸಲು ಹೊರಟಿರುವ ಇಂತಹ ಕ್ರಮವು ದೇಶದ ಜಾತ್ಯಾತೀತ ವ್ಯವಸ್ಥೆಯನ್ನು ನಿರ್ನಾಮ ಮಾಡಿ ಹಿಂದು ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಿರುವ ಸೂಚಕವಾಗಿದೆ. ಹಿಜಾಬ್ ಅನ್ನು ಧರ್ಮದ ಐಡೆಂಟಿಟಿ(ಗುರುತು) ಎಂದು ನಿಷೇಧಿಸಿರುವ ಬಿಜೆಪಿ ಸರ್ಕಾರ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಹೊರಟಿರುವುದು ಧರ್ಮದ ಐಡೆಂಟಿಟಿಯಲ್ಲವೇ ಎಂದು ಜನವಾದಿ ಮಹಿಳಾ ಸಂಘಟನೆ ಪ್ರಶ್ನಿಸಿದೆ.
ಜನವಾದಿ ಮಹಿಳಾ ಸಂಘಟನೆ ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ಅವರು, ದೇಶದ ಜನತೆಯ ಎಲ್ಲ ಸಂಕಷ್ಟಗಳಿಗೆ ಕರ್ಮವೇ ಕಾರಣವೆಂದು ಹೇಳುವ ಕರ್ಮ ಸಿದ್ಧಾಂತವನ್ನು ಪ್ರತಿಪಾದಿಸುವ ಭಗವದ್ಗೀತೆಯ ಅಳವಡಿಕೆ ಆಳುವ ಕೇಂದ್ರ-ರಾಜ್ಯ ಸರ್ಕಾರಗಳ ವೈಫಲ್ಯವನ್ನು ಮುಚ್ಚಿಕೊಳ್ಳುವ ಹುನ್ನಾರವಾಗಿದೆ ಎಂದು ಆರೋಪಿಸಿದ್ದಾರೆ.
ಚಾತುರ್ವರ್ಣ್ಯವನ್ನು ಪ್ರತಿಪಾದಿಸುವ ಭಗವದ್ಗೀತೆ ಜಾತಿ ವ್ಯವಸ್ಥೆಯನ್ನು ಜೀವಂತವಿಡುವ ಕೀಳು ರಾಜಕಾರಣವಾಗಿದೆ. ಈ ಹಿನ್ನಲೆಯಲ್ಲಿ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನ ಕೈ ಬಿಡಬೇಕು ಎಂದಿದ್ದಾರೆ.
ಮಕ್ಕಳಲ್ಲಿ ಸಮಾನತೆಯ ಭಾವವನ್ನು ತುಂಬುವ ಮತ್ತು ದೇಶದಲ್ಲಿ ಸೌಹಾರ್ದತೆಯನ್ನು ಪ್ರತಿಪಾದಿಸುವ ಸಂವಿಧಾನವನ್ನು ಪಠ್ಯವಾಗಿ ಅಳವಡಿಸಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿಯು ಒತ್ತಾಯಿಸಿದೆ.