ಶಿಕ್ಷಣ ಇಲಾಖೆಯಿಂದ ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯ ಆರಂಭ

ಬೆಂಗಳೂರು: ಕರ್ನಾಟಕ ಶಿಕ್ಷಣ ಕಾಯ್ದೆ 1983ರಡಿ ನೋಂದಣಿ ಪಡೆಯದೇ ನಡೆಸುತ್ತಿರುವ ಶಾಲೆಗಳು, ತಾವು ಪಡೆದಿದ್ದ ಮಾನ್ಯತೆಯನ್ನು ನಿಯಮಾನುಸಾರ ನವೀಕರಿಸಿಕೊಳ್ಳದೆ ಇರುವ ಖಾಸಗಿ ಶಾಲೆಗಳ ಪತ್ತೆ ಕಾರ್ಯ ರಾಜ್ಯದಲ್ಲಿ ನಡೆಸಲಾಗುತ್ತಿದ್ದು, ಈ ಸಂಬಂಧ ಮಾಹಿತಿಯನ್ನು ತುರ್ತಾಗಿ ಕಳುಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಆಗಸ್ಟ್‌ 24 ಮತ್ತು 25ರಂದು ಎರಡು ದಿನಗಳ ಸಭೆಯಲ್ಲಿಯೇ ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆಗಳನ್ನು ನೀಡಲಾಗಿತ್ತು. ಆದರೂ, ಹಲವು ಜಿಲ್ಲೆಯಲ್ಲಿ ಈ ಪ್ರಕ್ರಿಯೆ ಆರಂಭಗೊಳ್ಳದಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸೂಚನೆಯನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಇದುವರೆಗೆ ಬೆಂಗಳೂರು ನಗರ ಸೇರಿದಂತೆ ಕೇವಲ ನಾಲ್ಕು ಜಿಲ್ಲೆಯ ಅಧಿಕಾರಿಗಳು ಮಾತ್ರ ಅನಧಿಕೃತ ಶಾಲೆಗಳ ಪಟ್ಟಿಯನ್ನು ಮಾಡಿ ಕಳುಹಿಸಿದ್ದು, ಉಳಿದ ಜಿಲ್ಲೆಗಳು ಇದುವರೆಗೆ ಮಾಹಿತಿಯನ್ನು ಕಳುಹಿಸಿಲ್ಲ. ಹಾಗಾಗಿ ಇಲಾಖಾ ಆಯುಕ್ತ ಆರ್‌.ವಿಶಾಲ್‌ ಅವರು ಮತ್ತೊಮ್ಮೆ ಅಧಿಕಾರಿಗಳಿಗೆ ಜ್ಞಾಪನ ಪತ್ರ ಕಳುಹಿಸಿದ್ದಾರೆ. ಮಾಹಿತಿ ಕಳುಹಿಸಲು ಮತ್ತಷ್ಟು ವಿಳಂಬವಾದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಖಾಸಗಿ ಶಾಲೆಗಳು ಇಲಾಖೆ ಪೂರ್ವಾನುಮತಿ ಪಡೆಯದೆ ಸ್ಥಳಾಂತರ ಹಾಗೂ ಬೇರೆಯವರಿಗೆ ಹಸ್ತಾಂತರ ಮಾಡಿರುವ ಉದಾಹರಣೆಗಳು ಸಾಕಷ್ಟು ಇವೆ. ಕೆಲವೇ ಕೆಲವೊಂದು ಅನುಮತಿಗಾಗಿ ಪ್ರಸ್ತಾವನೆ ಸಲ್ಲಿಸಿರುವ ಶಾಲೆಗಳನ್ನು ನಿಯಮಗಳನ್ನು ಪಾಲಿಸಿರುವುದಿದೆ. ಆದರೆ, ಅನುಮತಿ ಇಲ್ಲದೆ ಉಪಶಾಲೆ ನಡೆಸುತ್ತಿರುವ, ಪ್ರತಿ ತರಗತಿಗೆ ಅನುಮತಿಗಿಂತ ಹೆಚ್ಚು ವಿಭಾಗಗಳನ್ನು ನಡೆಸುತ್ತಿರುವ, ಅನುಮತಿ ಪಡೆದ ಮಾಧ್ಯಮ, ಪಠ್ಯಕ್ರಮದ ಬದಲು ಬೇರೆ ಮಾಧ್ಯಮ, ಪಠ್ಯಕ್ರಮ ಬೋಧಿಸುತ್ತಿರುವುದು ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಇರುವುದು ಕಂಡುಬಂದಿದೆ. ಇಂತಹ ಅನಧಿಕೃತ ಶಾಲೆಗಳನ್ನು ಗುರುತಿಸಲು ಅನೇಕ ಮಾನದಂಡಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ರೂಪಿಸಿ ಪ್ರಕಟಿಸಿದೆ. ಅದರ ಆಧಾರದಲ್ಲಿ ಶಾಲೆಗಳ ಪಟ್ಟಿಮಾಡಿ ಮಾಹಿತಿ ಕಳುಹಿಸಲು ಸೂಚಿಸಲಾಗಿದೆ.

ರಾಜ್ಯದಲ್ಲಿ ನಡೆಯುತ್ತಿರುವ ಅನಧಿಕೃತ ಶಾಲೆಗಳನ್ನು ಪತ್ತೆ ಮಾಡಿ ಅವುಗಳ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿಕ್ಷಣ ಇಲಾಖೆ ಕ್ರಮವನ್ನು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌, ‘ಇಲಾಖಾ ಕ್ರಮ ಆರೋಗ್ಯಕರ ಬೆಳವಣಿಗೆಯಾಗಿದೆ. ಇದರ ಜೊತೆಗೆ ಕೇಂದ್ರ ಪಠ್ಯಕ್ರಮದ ಶಾಲೆಗಳ ನಿಯಂತ್ರಣ ರಾಜ್ಯ ಶಿಕ್ಷಣ ಇಲಾಖೆಯಡಿ ಬರುತ್ತದಾ? ಬರುವುದಾದರೆ ಯಾವ ಕಾಯ್ದೆ, ನಿಯಮದಡಿ ನಿಯಂತ್ರಣ ಮಾಡಲು ಸಾಧ್ಯವಿದೆ ಎಂಬ ಬಗ್ಗೆ ಸ್ಪಷ್ಟಮಾಹಿತಿ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಸಾಕ್ಷ್ಯ ನೀಡಲು ಕ್ಯಾಮ್ಸ್‌ಗೆ ಸೂಚನೆ

ಶಿಕ್ಷಣ ಇಲಾಖೆ ವಿರುದ್ಧ ಖಾಸಗಿ ಶಾಲಾ ಸಂಘಟನೆಗಳು ಮಾಡಿದ್ದ ಭ್ರಷ್ಟಾಚಾರದ ಆರೋಪಗಳ ಸಂಬಂಧ ಸಾಕ್ಷ್ಯಾಧಾರ ಸಲ್ಲಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಕ್ಯಾಮ್ಸ್‌ ಸಂಘಟನೆಗೆ ಕೋರಿದ್ದು, ಆರೋಪಗಳಿಗೆ ಸಂಬಂಧಿಸಿದ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಸೆಪ್ಟಂಬರ್‌ 9ರಂದು ತಮ್ಮ ಕಚೇರಿಗೆ ಹಾಜರಾಗಿ ವಿವರಣೆ ನೀಡುವಂತೆ ಆಯುಕ್ತ ಡಾ.ವಿಶಾಲ್‌ ಪತ್ರ ಬರೆದಿದ್ದಾರೆ.

ಇಲಾಖೆ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದ ಮತ್ತೊಂದು ಖಾಸಗಿ ಶಾಲಾ ಸಂಘಟನೆ ರುಪ್ಸಾ ಕರ್ನಾಟಕ ಅಧ್ಯಕ್ಷರಿಗೂ ಇದೇ ರೀತಿ ಸೂಚನೆ ನೀಡಿ ಈಗಾಗಲೇ ಆಯುಕ್ತರು ದಾಖಲೆಗಳನ್ನು ಪಡೆದಿದ್ದರು.

ರಾಜಧಾನಿಯಲ್ಲಿ 51 ಅನಧಿಕೃತ ಶಾಲೆಗಳು

ಅನಧಿಕೃತ ಖಾಸಗಿ ಶಾಲೆಗಳ ಪತ್ತೆ ಕಾರ್ಯವನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ನಡೆಸುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಅಧಿಕಾರಿಗಳು ನಡೆಸಿದ ಪರಿಶೀಲನೆಯಲ್ಲಿ ಇಂತಹ 51 ಶಾಲೆಗಳನ್ನು ಪತ್ತೆ ಮಾಡಿವೆ. ಈ ಬಗ್ಗೆ ಶಾಲೆಗಳಿಗೆ ನೋಟಿಸ್‌ ನೀಡಲಾಗಿದ್ದು, ಶಾಲೆಗಳು ನೀಡುವ ಉತ್ತರವನ್ನು ಆಧರಿಸಿ ಆ ಶಾಲೆಗಳ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಶಿಕ್ಷಣ ಇಲಾಖೆ ನಿರ್ಧರಿಸಲಿದೆ.

51 ಶಾಲೆಗಳ ಪೈಕಿ ಬೆಂಗಳೂರು ದಕ್ಷಿಣ ವಲಯದಲ್ಲೇ ಅತಿ ಹೆಚ್ಚು 38 ಶಾಲೆಗಳನ್ನು ಪತ್ತೆ ಹಚ್ಚಲಾಗಿದೆ. ಉಳಿದಂತೆ ಬೆಂಗಳೂರು ಉತ್ತರ ವಲಯದಲ್ಲಿ 11 ಶಾಲೆಗಳು ಮತ್ತು ಆನೇಕಲ್‌ ತಾಲೂಕಿನಲ್ಲಿ ಎರಡು ಶಾಲೆಗಳು ಶಿಕ್ಷಣ ಇಲಾಖೆ ಕಾಯ್ದೆಯ ನಿಯಮ ಉಲ್ಲಂಘಿಸಿ ನಡೆಯುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಪಟ್ಟಿಮಾಡಿರುವ ಶಾಲೆಗಳಲ್ಲಿ ಕೆಲ ಶಾಲೆಗಳು ಹೊಸದಾಗಿ ಆರಂಭವಾಗಿದ್ದು, ಅವುಗಳು ಇಲಾಖೆಯಿಂದ ಅನುಮತಿಯನ್ನೇ ಪಡೆದಿಲ್ಲ. ಇನ್ನು ಕೆಲ ಶಾಲೆಗಳು ಪ್ರತೀ ವರ್ಷ ಮಾನ್ಯತೆ ನವೀಕರಿಸಿಕೊಳ್ಳಬೇಕಾದ ನಿಯಮ ಪಾಲಿಸಿಲ್ಲ. ಮತ್ತೆ ಕೆಲ ಶಾಲೆಗಳು ಇಲಾಖೆ ಗಮನಕ್ಕೆ ತಾರದೆ ಶಾಲೆಗಳನ್ನು ಸ್ಥಳಾಂತರ ಮಾಡಿವೆ.

ಗುರುತಿಸಿರುವ ಅನಧಿಕೃತ 51 ಶಾಲೆಗ ಪಟ್ಟಿ

ಬೆಂಗಳೂರು ದಕ್ಷಿಣ ವಲಯ: ಗೂಡ್‌ ಶೆಡ್‌ ರಸ್ತೆಯ ಟ್ರಿನಿಟಿ ಶಾಲೆ, ಶ್ರೀಗಂಧ ಕಾವಲಿನ ಆರ್ಕಿಡ್ಸ್‌ ಇಂಟರ್‌ ನ್ಯಾಷನಲ್‌ ಶಾಲೆ, ಎಂಇಎಸ್‌ ಪಬ್ಲಿಕ್‌ ಸ್ಕೂಲ್‌, ಗವಿಪುರ ಬಡಾವಣೆ, ಸೋಮನಹಳ್ಳಿ ಮತ್ತು ಚನ್ನಮ್ಮನಕೆರೆ ಅಚ್ಚುಕಟ್ಟು ಈ ಮೂರು ಪ್ರದೇಶದ ಸರಸ್ವತಿ ವಿದ್ಯಾಮಂದಿರ ಶಾಲೆಗಳು, ಮಲ್ಲತ್ತಹಳ್ಳಿಯ ಹೋಲಿ ಫೈತ್‌ ಪಬ್ಲಿಕ್‌ ಶಾಲೆ, ಕನಕಪುರ ರಸ್ತೆ ಬೋಳಾರೆಯ ಸನ್‌ ಶೈನ್‌ ಪಬ್ಲಿಕ್‌ ಶಾಲೆ, ಕೆ.ಗೊಲ್ಲಹಳ್ಳಿ ವಿವೇಕಾನಂದ ಪಬ್ಲಿಕ್‌ ಶಾಲೆ, ಗೋಣಿಪುರದ ಕಲ್ಪತರು ವಿದ್ಯಾನಿಕೇತನ ಶಾಲೆ, ಮಂಜುನಾಥನಗರದ ಅಪೋಲೋ ಕಾನ್ವೆಂಟ್‌, ಗುಡ್‌ ಲಕ್‌ ಸ್ಕೂಲ್‌, ಮೈಸೂರು ರಸ್ತೆ ಬಾಪೂಜಿನಗರ ವ್ಯಾಪ್ತಿಯ ಸೆಂಟ್‌ ಕೈಕಲ್ಸ್‌ ಶಾಲೆ, ಸೌಂತೆಂಡ್‌ ಪಬ್ಲಿಕ್‌ ಶಾಲೆ, ದಿ ಏಷಿಯನ್‌ ಸ್ಕೂಲ್‌, ಬ್ಲೂಲೈನ್‌ ಪಬ್ಲಿಕ್‌ ಶಾಲೆ, ಎಂ.ಕೆ.ಮಿರಾಕಲ್‌ ಸ್ಕೂಲ್‌, ಪಾದರಾಯನಪುರದ ಮೌಂಟ್‌ ಅಬು ಆಂಗ್ಲ ಶಾಲೆ, ಸನ್‌ ಶೈನ್‌ ಆಂಗ್ಲ ಶಾಲೆ, ಎವರ್‌ ಗ್ರೀನ್‌ ಪಬ್ಲಿಕ್‌ ಶಾಲೆ.

ವಿಜಯನಗರದ ಸಿದ್ಧಗಂಗಾ ಪಬ್ಲಿಕ್‌ ಸ್ಕೂಲ್‌, ವಾಲ್ಮೀಕಿ ನಗರದ ರೋಷನ್‌ ಆಂಗ್ಲ ಶಾಲೆ, ಗಂಗೊಂಡನಹಳ್ಳಿಯ ಅಲ್‌ ಹರಮ್‌ ಶಾಲೆ, ವಿ.ಎಸ್‌. ಗಾರ್ಡನ್‌ನ ಸೆಂಟ್‌ ಅಂತೋಣಿ ಶಾಲೆ, ಮೈಸೂರು ರೋಡ್‌ ಪೈಪ್‌ಲೈನ್‌ನ ಅಲ್‌ ಖಲಮ್‌ ಪಬ್ಲಿಕ್‌ ಶಾಲೆ, ಜೆ.ಪಿ.ನಗರದ ಟ್ವಿಂಕಲ​ರ‍್ಸ್‌ ಶಾಲೆ, ಬಿಸ್ಮಿಲ್ಲಾ ನಗರದ ಎಫ್‌ ಜವಾಹರ್‌ ಶಾಲೆ, ವೆಂಕಟಾಪುರದ ಆದಿತ್ಯ ಸ್ಕೂಲ್‌, ರಾಜೇಂದ್ರ ನಗರದ ಗ್ರೀನ್‌ ಲ್ಯಾಂಡ್‌ ಪಬ್ಲಿಕ್‌ ಶಾಲೆ, ಚೇಳಕೆರೆಯ ಸೆಂಟ್‌ ಪಾಲ್‌ ಪ್ರಾಥಮಿಕ ಶಾಲೆ, ಕಾವೇರಿ ನಗರದ ಕಾವೇರಿ ಪ್ರಾಥಮಿಕ ಶಾಲೆ, ಜಗದೀಶ್‌ ನಗರದ ಜೆ.ಎಂ.ಜೆ. ಇಂಗ್ಲಿಷ್‌ ಪ್ರೈಮರಿ ಶಾಲೆ, ನಾಗವಾರಪಾಳ್ಯದ ಮಹಾತ್ಮ ಮೆಮೋರಿಯಲ್‌ ಸ್ಕೂಲ್‌, ಸುದ್ದಗುಂಟೆಪಾಳ್ಯದ ಮದರ್‌ ಥೆರೆಸಾ ಶಾಲೆ, ವಿದ್ಯಾ ನಗರದ ಸ್ವಾಮಿ ವಿವೇಕಾನಂದ ಶಾಲೆ, ಮಾರ್ನಿಂಗ್‌ ಸ್ಟಾರ್‌ ಎಜುಕೇಷನ್‌ ಟ್ರಸ್ಟ್‌, ಕೊಡಿಗೇಹಳ್ಳಿಯ ಸೆಂಟ್‌ ಥಾಮಸ್‌ ಶಾಲೆ, ಟಿ.ಸಿ.ಪಾಳ್ಯದ ಸ್ಟಾನ್‌ ಫೋರ್ಡ್‌ ಪಬ್ಲಿಕ್‌ ಸ್ಕೂಲ್‌, ಆನೇಕಲ್‌ ತಾಲೂಕಿನ ಕಾಚರಕನಹಳ್ಳಿಯ ಸರಸ್ವತಿ ವಿದ್ಯಾನಿಕೇತನ, ಶಿಕಾರಿಪಾಳ್ಯದ ಮದರ್‌ ಥೆರೇಸಾ ಸ್ಕೂಲ್‌ ಈ ಶಾಲೆಗಳಿಗೆ ಸೂಚನಾ ಪತ್ರ ನೀಡಲಾಗಿದೆ.

ಬೆಂಗಳೂರು ಉತ್ತರ ವಲಯ: ಟಾಸ್ಕರ್‌ ಟೌನ್‌ನ ಅಲ್‌ ಅಮೀನ್‌ ಕಂಬಲ್‌ ಪೋಷ್‌ ಶಾಲೆ, ಶಿವಾಜಿ ನಗರದ ಗ್ಲೋಬಲ್‌ ಪಬ್ಲಿಕ್‌ ಶಾಲೆ, ಬೆಸ್ಟ್‌ ಪಬ್ಲಿಕ್‌ ಶಾಲೆ, ಭಾರತಿ ನಗರದ ನವ ಭಾರತ್‌ ಷಾ ಶಾಲೆ, ಚಾಂದಿನ್‌ ಚೌಕ್‌ನ ಭಾರ್ಗವಿ ಪಬ್ಲಿಕ್‌ ಶಾಲೆ, ಕೃಷ್ಣಯ್ಯನಪಾಳ್ಯದ ಹೋಲಿ ಫೈಯಿತ್‌ ಆಂಗ್ಲ ಮಾಧ್ಯಮ ಶಾಲೆ, ಕುಶಾಲನಗರ ವಾರ್ಡ್‌ ಅನ್ವರ್‌ ಲೇಔಟ್‌ನ ಲೋರೆಟ್ಟಾ ಆಂಗ್ಲ ಶಾಲೆ, ಚಾಮುಂಡಿನಗರದ ಗಾರ್ಡಿಯನ್‌ ಪಬ್ಲಿಕ್‌ ಶಾಲೆ, ಕತಾಳಿಪಾಳ್ಯದ ಚರ್ಚ್‌ ಜುಬಿಲಿ ಪ್ರಾಥಮಿಕ ಶಾಲೆಗಳಿಗೆ ನೋಟಿಸ್‌ ನೀಡಲಾಗಿದೆ.

Donate Janashakthi Media

Leave a Reply

Your email address will not be published. Required fields are marked *