ಬೆಂಗಳೂರು: 2015-16ರಲ್ಲಿ ಶಿಕ್ಷಕರಾಗಿ ನೇಮಕವಾಗಿದ್ದ ಪ್ರಕರಣವನ್ನು ಸಿಐಡಿ ತನಿಖೆಗೆ ಒಳಪಡಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ ಅವರು ವಿಧಾನಸಭೆ ಅಧಿವೇಶನದಲ್ಲಿ ಹೇಳಿದರು.
ಆ ಅವಧಿಯಲ್ಲಿ ಅರ್ಜಿ ಸಲ್ಲಿಸದೆ, ಪರೀಕ್ಷೆ ಬರೆಯದೆ, ಅರ್ಹತೆ ಇಲ್ಲದೆ, ಶಿಕ್ಷಕರಾಗಿ ನೇಮಕಗೊಂಡಿದ್ದ ಪ್ರಕರಣ ಇದಾಗಿದೆ.
ವಿಧಾನ ಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಶೂನ್ಯವೇಳೆಯಲ್ಲಿ ಶಾಸಕರಾದ ಪಿ.ರಾಜೀವ್ ಹಾಗೂ ಎ.ಎಸ್.ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಸ್‌ಎಸ್‌ಎಲ್‌ಸಿ ಮಂಡಳಿಯ ನಿರ್ದೇಶಕರು ಕೈಗೊಂಡ ತನಿಖೆಯಿಂದ ಮೇಲ್ನೋಟಕ್ಕೆ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಬೆಂಗಳೂರು ವಿಭಾಗದಲ್ಲಿ ಗೊತ್ತಾದ ನಂತರ ಸಿಐಡಿಗೆ ವಹಿಸಲಾಗಿದೆ ಎಂದರು.
ಅಕ್ರಮದಲ್ಲಿ ಭಾಗಿಯಾಗಿದ್ದ 16 ಮಂದಿ ಶಿಕ್ಷಕರು ಸಿಇಟಿ ಬರೆಯದೆ, ಅರ್ಹತೆ ಇಲ್ಲದೆ, ಅರ್ಜಿ ಸಲ್ಲಿಸದೆ ನೇಮಕವಾಗಿರುವುದು ಪತ್ತೆಯಾಗಿದೆ. ಅವರನ್ನು ಈಗಾಗಲೇ ಬಂಧಿಸಲಾಗಿದ್ದು, ಈ ರೀತಿ 35ರಿಂದ 40 ಮಂದಿ ಶಿಕ್ಷಕರಾಗಿ ನೇಮಕವಾಗಿರುವ ಮಾಹಿತಿಯೂ ಇದೆ. ಬೆಂಗಳೂರು ಅಷ್ಟೇ ಅಲ್ಲ ಬೇರೆ ಬೇರೆ ವಿಭಾಗದಲ್ಲೂ ಈ ಬಗ್ಗೆ ಪರಿಶೀಲಿಸಲಾಗುತ್ತದೆ. ಸಿಐಡಿ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸದನಕ್ಕೆ ಭರವಸೆ ನೀಡಿದರು.
ಈ ವೇಳೆ ಪಿ.ರಾಜೀವ್ ಮಾತನಾಡಿ, ಸಿಇಟಿ ಪರೀಕ್ಷೆ ಬರೆಯದೆ ಶಿಕ್ಷಕರಾಗಿ ಹೇಗೆ ನೇಮಕವಾದರು ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದರು. ಇದಕ್ಕೆ ದನಿಗೂಡಿಸಿದ ಎ.ಎಸ್.ನಡಹಳ್ಳಿ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಿದರೆ ಇದು ದೊಡ್ಡ ಹಗರಣ. ತಪ್ಪಿತಸ್ಥರು ಯಾರು ಎಂಬುದು ಬಯಲಾಗಬೇಕು ಎಂದು ಆಗ್ರಹಿಸಿದರು.
ಸಚಿವರ ಉತ್ತರದ ನಂತರವೂ ಆಗ್ರಹ ಮುಂದುವರೆದಾಗ ಕಾನೂನು ಸಚಿವ ಮಾಧುಸ್ವಾಮಿ ಮಧ್ಯಪ್ರವೇಶಿಸಿ, ದಾಖಲೆ ಇದ್ದರೆ ಕೊಡಲಿ ಅದನ್ನು ಸೇರಿಸಿ ತನಿಖೆ ಮಾಡುವುದಾಗಿ ಹೇಳಿದರು.