ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಂತರ ಉಂಟಾದ ರಾಜಕೀಯ ಬೆಳವಣಿಗೆಯಿಂದಾಗಿ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಎರಡೂ ಪ್ರಮುಖ ಪಕ್ಷಗಳ ನಡುವೆ ಹೊಂದಾಣಿಕೆಯ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಜೆಡಿಎಸ್ ರಾಷ್ಟ್ರೀಯ ನಾಯಕ ಹೆಚ್.ಡಿ.ದೇವೇಗೌಡರ ಜತೆ ಮಾತುಕತೆ ನಡೆಸಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಸದಾಶಿವನಗರದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ‘ಕಲ್ಬುರ್ಗಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ. ಜೆಡಿಎಸ್ ಕೂಡ ಗೆದ್ದಿದೆ. ಬಿಜೆಪಿ ಪಕ್ಷದ ಇಡೀ ಸರ್ಕಾರವೇ ಅಲ್ಲಿ ನಿಂತಿತು. ಹುಬ್ಬಳ್ಳಿ-ಧಾರವಾಡದಲ್ಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಕೇಂದ್ರ ಸಚಿವರುಗಳು ಇದ್ದರೂ ಕೂಡ ಅವರು 39, ನಾವು 33 ಸ್ಥಾನಗಳನ್ನು ಗೆದ್ದಿದ್ದೇವೆ. ಜತೆಗೆ ನಮ್ಮ ಬಂಡಾಯ ಸದಸ್ಯರೂ ಗೆದ್ದಿದ್ದಾರೆʼʼ ಎಂದರು.
ನಾಳೆ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಹೋಗುತ್ತಿದ್ದು, ಅಲ್ಲಿ ನಮ್ಮ ಪಕ್ಷದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳನ್ನು ಮಾತನಾಡಿಸಿಕೊಂಡು ಬರುವೆ. ಕಲಬುರಗಿಗೆ ಸಂಬಂಧಿಸಿದಂತೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮಾತುಕತೆಯಲ್ಲಿ ತೊಡಗಿದ್ದಾರೆ ಎಂದರು.
ಕಲಬುರಗಿ ವಿಚಾರವಾಗಿ ಜೆಡಿಎಸ್ ನಾಯಕರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರ ಜತೆ ನೇರವಾಗಿ ಮಾತನಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಪಕ್ಷಕ್ಕೆ ಏನೆಲ್ಲಾ ಬೇಕೋ, ಎಲ್ಲರಿಗೂ ಒಳ್ಳೆಯದಾಗುವ ದೃಷ್ಟಿಯಿಂದ ಅವಶ್ಯಕತೆ ಇದ್ದಾಗ ಏನು ಮಾಡಬೇಕೋ, ಅದನ್ನೆಲ್ಲಾ ನಾನು ಮಾಡುತ್ತೇನೆ. ಮೇಯರ್ ಪಟ್ಟ ನಮಗೇ ಬೇಕು ಎಂದು ಯಾರೂ ನನ್ನ ಮುಂದೆ ಬೇಡಿಕೆ ಇಟ್ಟಿಲ್ಲ. ಎರಡೂ ಪಕ್ಷಗಳು ಒಟ್ಟಿಗೆ ಆಡಳಿತ ನಡೆಸಬೇಕು ಎಂಬ ಪ್ರಸ್ತಾವನೆಯಷ್ಟೇ ನನ್ನ ಮುಂದೆ ಇದೆ’ ಎಂದರು.
ಚುನಾವಣೆ ನಡೆಯಬೇಕಿರುವ ಬಳ್ಳಾರಿ, ರಾಮನಗರ, ಚನ್ನಪಟ್ಟಣದ ಚುನಾವಣೆ ದಿನಾಂಕ ಘೋಷಿಸಲು ಹಿಂದೆ-ಮುಂದೆ ಮಾಡಲಾಗುತ್ತಿದೆ. ಏಕೆಂದರೆ ಬಿಜೆಪಿ ಪಕ್ಷ ಸೋಲುವುದು ಎಂದು ಸ್ಪಷ್ಟವಾಗಿದೆ. ಹಾಗಾಗಿಯೇ ಬಿಜೆಪಿ ತನ್ನ ಅಧಿಕಾರವನ್ನು ಎಷ್ಟು ಸಾಧ್ಯವೋ ಅಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಕಲಬುರಗಿ ಮಹಾನಗರ ಪಾಲಿಕೆಗೆ ಆಯ್ಕೆಯಾಗಿರುವ ಕಾಂಗ್ರೆಸ್ ಸದಸ್ಯರು ಮತ್ತು ವಾಡಿ ಪಟ್ಟಣ ಪಂಚಾಯಿತಿ ಸದಸ್ಯರು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.