– ಎಚ್.ಆರ್. ನವೀನ್ ಕುಮಾರ್, ಹಾಸನ
ಬೆಂಗಳೂರಿನಲ್ಲಿ ಮನೆ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ತನ್ನ ಮುಖಭಾವವನ್ನೇ ಬದಲಾಯಿಸಿ ಸಂಕಟದಿಂದ ಗದ್ಗದಿತವಾಗಿ ಇಲ್ಲಿ ನಮಗೆಲ್ಲಿ ಸ್ವಾಮಿ ಮನೆ. ನಾವು ಕಾಲೇಜು ಮೈದಾನ ಒಂದರಲ್ಲಿ ಪ್ಲಾಸ್ಟಿಕ್ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾನು ಬೆಳಗಿಂದ ಸಂಜೆಯವರೆಗೂ ವಿಧಾನ ಸೌಧ, ಎಂ.ಎಸ್.ಬಿಲ್ಡಿಂಗ್ ಸುತ್ತಮುತ್ತ ಕಡ್ಲೆಕಾಯಿ ಮಾರುತ್ತೇನೆ ಎಂದರು. ಬದುಕಿನ ಬಂಡಿ
ಒಂದೆಡೆ ನೀಲಾಕಾಶದೆತ್ತರದ ಕಟ್ಟಡಗಳು, ಇನ್ನೊಂದೆಡೆಗೆ ರಾಜ್ಯವನ್ನ ಮುನ್ನಡೆಸುತ್ತಿರುವ ರಾಜ್ಯದ ಮಂತ್ರಿಗಳು, ಜನಪ್ರತಿನಿಧಿಗಳು, ಅಧಿಕಾರಿಗಳು. ಮತ್ತೊಂದೆಡೆ ಇವರೆಲ್ಲರ ಶಕ್ತಿ ಸೌಧ, ವಿಧಾನಸೌಧ ಮತ್ತು ಬಹುಮಹಡಿ ಕಟ್ಟಡದ ಮಧ್ಯದಲ್ಲಿರುವ ಪಾರ್ಕಿಂಗ್ ಜಾಗದಲ್ಲಿ ಸುತ್ತಮುತ್ತಲೂ ಇರುವ ಐಷಾರಾಮಿ ಕಾರುಗಳ ನಡುವೆ ಒಂದು ಕೀರಲು ಧ್ವನಿ ಅಷ್ಟೇ ಸಶಕ್ತ ನೋಟದಲ್ಲಿ… ಕಡ್ಲೆಕಾಯ್… ಕಡ್ಲೆಕಾಯ್… ಕೂಗುತ್ತಲೇ ಇತ್ತು! ಬದುಕಿನ ಬಂಡಿ
ತಿರುಗಿ ನೋಡಿದರೆ ಸೊಂಟದ ಮೇಲೆ ಒಂದು ಪ್ಲಾಸ್ಟಿಕ್ ದಬರಿ. ಅದರಲ್ಲಿ ಹುರಿದ ನಾಲ್ಕು ಕಡ್ಲೆಕಾಯ್ ಪೊಟ್ಟಣ… ಕಾಲಲ್ಲಿ ಹವಾಯಿ ಚಪ್ಪಲಿ, ಸಾಧಾರಣ 70 ವರ್ಷದ ಆಸುಪಾಸಿನ ಮುದುಕಿ… ಆಕೆಯ ಮಾತು, ಆಕೆ ತೊಟ್ಟಿದ್ದ ಸೀರೆ ಇವು ಆಕೆ ಬೆಂಗಳೂರಿನ ಸುತ್ತಮತ್ತಲಿನವರಲ್ಲಾ ಎಂಬುದನ್ನು ಸಾರಿ ಸಾರಿ ಹೇಳುತ್ತಿದ್ದವು. “ಸರಾ… ಕಡ್ಲೆಕಾಯ್ (ಶೇಂಗಾ ಅಥವಾ ನೆಲಗಡಲೆ) ತೊಗೋಳ್ರಿ… ನಾಕ್ ಪ್ಯಾಕ್ ಅವ, ಮಳಿ ಬ್ಯಾರೆ ಬರ್ತೈತಿ, ತೊಗೊಂಡು ಪುಣ್ಯಾ ಕಟ್ಕೊಳ್ರೀಯಪಾ” ಈ ಮಾತುಗಳಂತೂ ಈ ಮುದುಕಿ ಉತ್ತರ ಕರ್ನಾಟಕದವರು ಎಂಬುದನ್ನ ಸಾಬೀತು ಪಡಿಸಿತು.
ಆ ಮುದುಕಿಯ ಸ್ಥಿತಿಯನ್ನು ನೋಡಿ ನಾಲ್ಕೂ ಪ್ಯಾಕೆಟ್ ಕಡ್ಲೆಕಾಯನ್ನ 40 ರೂ. ಕೊಟ್ಟು ತೆಗೆದುಕೊಂಡೆವು. ಕುತೂಹಲ ತಡೆಯಲಾರದೆ ನಿಮ್ಮದು ಯಾವೂರು ಎಂದು ಕೇಳಿದೆವು… ಇದುವರೆಗೂ ಕಡ್ಲೆಕಾಯ್ ಕೊಳ್ಳಲು ಚೌಕಾಸಿ ಮಾಡುತ್ತಿದ್ದ ಜನರ ನಡುವೆ ಊರ್ ಯಾವುದು ಎಂದು ಕೇಳಿದ ಕೂಡಲೇ ಒಂದು ಆತ್ಮೀಯ ಭಾವಸೇತುವೆ ನಿರ್ಮಾಣವಾಗಿ ತನ್ನ ಸಮಸ್ಯೆಯ ಸಾಗರದಿಂದ ಒಂದು ಬೊಗಸೆ ಮೊಗೆದು ನಮ್ಮೆದುರು ಸುರಿದರು…
ಇದನ್ನೂ ಓದಿ: ಬದುಕಿನ ಭಾರ ಇಳಿಸಲೆಂದು ಬೆಂದಕಾಳೂರಿನ ಕಡೆ ಹೆಜ್ಜೆ ಹಾಕಿದವರಿವರು
ಯಾದಗಿರಿ ಜಿಲ್ಲೆಯಿಂದ ನಾಲ್ಕು ವರ್ಷಗಳ ಹಿಂದೆ ಬದುಕಿನ ಬಂಡಿ ಸಾಗಿಸಲು ಬೆಂದಕಾಳೂರಿಗೆ ಬಂದ ಈಕೆ ತನ್ನ ಮೊಮ್ಮಕ್ಕಳನ್ನು ಕಂಕುಳಲ್ಲಿ ಕಟ್ಟಿಕೊಂಡೆ ಹೆಜ್ಜೆ ಹಾಕಿದ್ದರು. ಹೆತ್ತ ಮಗನಿಗೆ ಉದ್ಯೋಗವಿಲ್ಲದೆ, ಬೇರೆ ಯಾವ ಆದಾಯವಿಲ್ಲದೆ ಸಂಸಾರದ ಹೊಣೆಯನ್ನು ನಿಭಾಯಿಸದಾದಾಗ ಸೊಸೆ ಮತ್ತು ಮೊಮ್ಮಕ್ಕಳನ್ನ ಕಟ್ಟಿಕೊಂಡು ಬೆಂಗಳೂರಿಗೆ ಬಂದಿಳಿದ ಇವರಿಗೆ ಬೆಂಗಳೂರಿನಲ್ಲಿ ಕೇಬಲ್ಗಳನ್ನು ನೆಲದಲ್ಲಿ ಹೂಳಲು ಗುಂಡಿ ತೆಗೆಯುವ ಕೆಲಸ ಸಿಕ್ಕಿತು. ಸೊಸೆಯನ್ನ ಈ ಕೆಲಸಕ್ಕೆ ಕಳುಹಿಸಿ ತನಗೆ ಈ ಕೆಲಸ ಮಾಡಲು ಸಾಧ್ಯವಾಗದಿದ್ದಾಗ ಮಕ್ಕಳನ್ನು ಹೊಂದಿದ್ದ ಸೊಸೆಗೆ ಹೊರೆಯಾಗಬಾರದೆಂದು ತನ್ನ ಬದುಕಿನ ಖರ್ಚನ್ನು ತಾನೇ ನಿಭಾಯಿಸಿಕೊಳ್ಳಬೇಕೆನ್ನುವ ಉತ್ಕಟ ಸ್ವಾಭಿಮಾನದಿಂದಾಗಿ ಈ ಮುದುಕಿ ಕಡ್ಲೆಕಾಯ್ ವ್ಯಾಪಾರ ಆರಂಭಿಸಿದಳು.
ಬೆಂಗಳೂರಿನಲ್ಲಿ ಮನೆ ಎಲ್ಲಿ ಎಂದು ಕೇಳಿದ ಪ್ರಶ್ನೆಗೆ ತನ್ನ ಮುಖಭಾವವನ್ನೇ ಬದಲಾಯಿಸಿ ಸಂಕಟದಿಂದ ಗದ್ಗದಿತವಾಗಿ ಇಲ್ಲಿ ನಮಗೆಲ್ಲಿ ಸ್ವಾಮಿ ಮನೆ. ನಾವು ಕಾಲೇಜು ಮೈದಾನ ಒಂದರಲ್ಲಿ ಪ್ಲಾಸ್ಟಿಕ್ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಾನು ಬೆಳಗಿಂದ ಸಂಜೆಯವರೆಗೂ ವಿಧಾನ ಸೌಧ, ಎಂ.ಎಸ್.ಬಿಲ್ಡಿಂಗ್ ಸುತ್ತಮುತ್ತ ಕಡ್ಲೆಕಾಯಿ ಮಾರುತ್ತೇನೆ ಎಂದರು.
ಇನ್ನೂ ಸ್ವಲ್ಪ ಮಾತು ಮುಂದುವರೆಸಿ ಆಕೆಯ ಜೀವನ ಪಯಣದ ಬಂಡಿ ಸಾಗಿಬಂದ ಅನುಭವ ಕಥನವನ್ನ ಕೇಳೋಣವೆಂಬ ಕುತೂಹಲಕ್ಕಿಳಿದರೆ ಆಕೆ ಮಾತು ಮುಂದುವರೆಸಲು ಒಪ್ಪಲಿಲ್ಲ… ಮಳೆ ಆರಂಭವಾಗುತ್ತಿದೆ ನಾನು ಹೊರಡಬೇಕು ಎಂದು ಹೊರಟೇ ಬಿಟ್ಟರು…
ರಾಜ್ಯದ ಜನತೆಯ ಆತ್ಮಗೌರವವನ್ನು ಹೆಚ್ಚಿಸುವ, ಬದುಕನ್ನು ನಿರ್ಮಾಣ ಮಾಡುವ ಶಕ್ತಿಸೌದಧ ಮಗ್ಗುಲಲ್ಲಿ, ಬದುಕಿನ ಬಂಡಿ ಸಾಗಿಸಲು ಹರಸಾಹಸ ಪಡುತ್ತಿರುವ ಈ ಮುದುಕಿಯ ದೃಶ್ಯವನ್ನ ನೋಡಿ, ಆಳುವ ಪ್ರಭುತ್ವ ಮತ್ತು ಅವರ ಆದ್ಯತೆಗಳು ಇವರನ್ನೆಲ್ಲಾ ಬೀದಿಗೆ ಬರುವಂತೆ ಮಾಡಿರುವುದು ಕಣ್ಣಿಗೆ ರಾಚಿತು!
ವಿಡಿಯೋ ನೋಡಿ: ಪಿಚ್ಚರ್ ಪಯಣ – 135 ಚಿತ್ರ : ಮಾಮನ್ನನ್ ನಿರ್ದೇಶನ : ಮಾರಿ ಸೆಲ್ವರಾಜ್ ವಿಶ್ಲೇಷಣೆ : ಸಂಧ್ಯಾರಾಣಿ