- ಖಾಸಗಿ ವಾಹಿನಿಯ ಸ್ಟಿಂಗ್ ಆಪರೇಶನ್ ನಿಂದ ಹೊರಬಿದ್ದ ಮೊಟ್ಟೆ ಅಕ್ರಮ
- ಸಚಿವೆಗೆ 1 ಕೋಟಿ, ತನಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಶಾಸಕ ಪರಣ್ಣ
ಬೆಂಗಳೂರು : ಅಂಗನವಾಡಿ ಮೂಲಕ ವಿತರಿಸಲಾಗಿರುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ದೊಡ್ಡ ಡೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಈ ಡೀಲ್ ಗೆ ಒಪ್ಪಿಕೊಂಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಅವರಿಗೆ ಗಂಗಾವತಿ ಶಾಸಕ ಪರಣ್ಣ ಮನವಳ್ಳಿ ಸಾಥ್ ನೀಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ನಾಯಕತ್ವ ಬದಲಾವಣೆಯ ಬೆನ್ನಲ್ಲೆ ಬಿಜೆಪಿಯ ಸಚಿವೆ ಮತ್ತು ಶಾಸಕರ ಮೇಲೆ ಈ ರೀತಿಯ ಗಂಭೀರ ಆರೋಪ ಕೇಳಿ ಬಂದಿರುವುದು ಬಿಜೆಪಿಗೆ ದೊಡ್ಡ ಹೊಡೆತ ನೀಡಿದೆ. ಇವರಿಬ್ಬರ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯಿಸಿದ್ದರೆ, ಇವರಿಬ್ಬರ ವಿರುದ್ಧ ಪ್ರತಿಭಟನೆ ನಡೆಸಲು ಸಿಪಿಐಎಂ ಮುಂದಾಗಿದೆ.
ಗರ್ಭಿಣಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಮಾತೃಪೂರ್ಣ ಮೊಟ್ಟೆ ಟೆಂಡರ್ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿತ್ತು. ಆದರೆ ಈ ಟೆಂಡರ್ ನ್ನು ತಮಗೆ ಬೇಕಾದವರಿಗೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮುಂದಾಗಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಮೊದಲು ಅಂಗನವಾಡಿಯಿಂದಲೇ ನೇರವಾಗಿ ಮೊಟ್ಟೆ ಖರೀದಿ ಮಾಡಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ನೀಡಲಾಗಿತ್ತು, ಆದರೆ ಹಣ ಮಾಡುವ ಉದ್ದೇಶದಿಂದ ಸಚಿವೆ ಶಶಿಕಲಾ ಜೊಲ್ಲೆ ಟೆಂಡರ್ ಮೂಲಕ ಮೊಟ್ಟೆ ಖರೀದಿ ಮಾಡುವ ಪ್ರಕ್ರಿಯೆಗೆ ಮುಂದಾಗಿದ್ದರು. ಆ ಮೂಲಕ ಅಂಗನವಾಡಿ ಮಕ್ಕಳ ಯೋಜನೆಯಲ್ಲಿ ಅಕ್ರಮ ನಡೆಸಿ ಕಮಿಷನ್ ಪಡೆಯಲು ಮುಂದಾಗಿದ್ದರು ಎಂಬ ಅಂಶ ಕನ್ನಡದ ಖಾಸಗಿ ಚಾನೆಲ್ ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಬಯಲಿಗೆ ಬಂದಿದೆ.
ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳಿಗೆ ಅಂಗನವಾಡಿ ಮೂಲಕ ಗರ್ಭಿಣಿಯರು, ಅಪೌಷ್ಟಿಕ ಮಕ್ಕಳು ಮತ್ತು ಬಾಣಂತಿಯರಿಗೆ ಮೊಟ್ಟೆ ವಿತರಿಸಲು ಸರಕಾರ ನಿರ್ಧರಿಸಿತ್ತು. ಟೆಂಡರ್ ಮೂಲಕ ಮೊಟ್ಟೆ ವಿತರಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿತ್ತು.
ಟೆಂಡರ್ ಬೇಕು ಎಂದು ಹೋದ ತಂಡಕ್ಕೆ ತಿಂಗಳಿಗೆ ಇಂತಿಷ್ಟು ಹಣ ಎಂದು ಡಿಮ್ಯಾಂಡ್ ಮಾಡಿದ್ದಾರೆ. ಅಂದರೇ ತಿಂಗಳಿಗೆ ಮಿನಿಸ್ಟರ್ ಗೆ 1 ಕೋಟಿ ಕೊಡಿ, ನನಗೆ 50 ಲಕ್ಷ ಕೊಡಿ ಎಂದು ಶಾಸಕ ಪರಣ್ಣ ಮನವಳ್ಳಿ ಡಿಮ್ಯಾಂಡ್ ಇಟ್ಟಿದ್ದಾರೆ. ಅಂಗನವಾಡಿಗಳಿಗೆ ಮೊಟ್ಟೆ ವಿತರಣೆಯಲ್ಲಿ ಅಕ್ರಮಕ್ಕೆ ತಿಂಗಳ ಸಂದಾಯದ ರೂಪದಲ್ಲಿ ಅಕ್ರಮ ಹಣ ಲೂಟಿಗೆ ಸಚಿವೆ ಶಶಿಕಲಾ ಜೊಲ್ಲೆ ಯತ್ನಿಸಿದ್ದಾರೆ ಎನ್ನಲಾಗಿದೆ. ಅಂಗನವಾಡಿ ಮೂಲಕ ವಿತರಿಸಲಾಗಿರುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ದೊಡ್ಡ ಡೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಈ ಡೀಲ್ ಗೆ ಒಪ್ಪಿಕೊಂಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಅಲ್ಲದೇ ಸಚಿವೆಯ ಅಕ್ರಮಕ್ಕೆ ಶಾಸಕ ಪರಣ್ಣ ಮುನವಳ್ಳಿ ಕೂಡ ಸಾಥ್ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಒಟ್ಟಿನಲ್ಲಿ ಬಡ ಮಕ್ಕಳ ಹಿತ ಕಾಪಾಡಬೇಕಾದ ಸಚಿವರು ಅಕ್ರಮದಲ್ಲಿ ಭಾಗಿಯಾಗಿದ್ದು, ನಾಚಿಗೇಡಿತನ ಎಂದು ಜನ ಆಡಿಕೊಳ್ಳುತ್ತಿದ್ದಾರೆ.
ಸಚಿವರು ಮತ್ತು ಶಾಸಕರ ವಿರುದ್ಧ ಕೂಡಲೆ ಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ ಪಕ್ಷ ಸೇರಿದಂತೆ ಅನೇಕ ಸಂಘಟನೆಗಳು ಸರಕಾರವನ್ನು ಆಗ್ರಹಿಸಿವೆ.