ಖಾಸಗಿ ಶಾಲೆಯ ಅ’ಶಿಸ್ತು’ಗೆ ವಿದ್ಯಾರ್ಥಿ ಬಲಿ

ಮಂಗಳೂರು : ತನ್ನ ತಾಯಿಯ ಜನ್ಮದಿನಕ್ಕೆ ಶುಭಾಶಯ ತಿಳಿಸಲು ಹಾಸ್ಟೆಲ್ ವಾರ್ಡನ್ ಮೊಬೈಲ್ ನೀಡದ್ದಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದೆ.

ಮೃತ ಬಾಲಕನನ್ನು ಬೆಂಗಳೂರು ಹೊಸಕೋಟೆ ಮೂಲದ ಪೂರ್ವಜ್ (14) ಎಂದು ಗುರುತಿಸಲಾಗಿದ್ದು, ಈತ ಮಂಗಳೂರಿನ ತಲಪಾಡಿಯ ಕೆ.ಸಿ.ರೋಡ್ ಬಳಿ ಇರುವ ಶಾರದಾ ವಿಧ್ಯಾನಿಕೇತನದಲ್ಲಿ 9ನೇ ತರಗತಿ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ. ಜೂನ್ 11 ರಂದು ಆತನ ತಾಯಿ ಹುಟ್ಟುಹಬ್ಬದ ಹಿನ್ನಲೆ ತಾಯಿಗೆ ಕರೆ ಮಾಡಿ ಶುಭಾಷಯ ತಿಳಿಸಲು ಹಾಸ್ಟೆಲ್ ವಾರ್ಡನ್ ಗೆ ಮೊಬೈಲ್ ಕೇಳಿದ್ದಾನೆ. ಆದರೆ ವಾರ್ಡನ್ ಮೊಬೈಲ್ ನೀಡಲು ನಿರಾಕರಿಸಿದ್ದಾನೆ. ಅಲ್ಲದೆ ಮನೆಯವರು ಕರೆ ಮಾಡಿದ ಸಂದರ್ಭದಲ್ಲೂ ಕೂಡ ಬಾಲಕನಿಗೆ ಕರೆ ನೀಡಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದ ಮನನೊಂದ ಬಾಲಕ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮನೆಯವರು ಆರೋಪಿಸಿದ್ದಾರೆ.

ಬಾಲಕ ಆತ್ಮಹತ್ಯೆಗೂ ಮುನ್ನ ಡೆತ್ ನೋಟ್ ಬರೆದಿದ್ದು, ಅದರಲ್ಲಿ ಅಮ್ಮನಿಗೆ ಹುಟ್ಟುಹಬ್ಬದ ಶುಭಾಷಯಗಳು. ಎಲ್ಲರೂ ಖುಷಿಯಾಗಿರಿ, ಶಾಲೆಗೆ ತನಗಾಗಿ ಕಟ್ಟಿರುವ ಶುಲ್ಕವನ್ನು ವಾಪಸ್ಸು ಪಡೆದುಕೊಳ್ಳಿ. ನಿಮ್ಮಿಂದ ನಾನು ದೂರವಾಗುತ್ತಿದ್ದೇನೆ. ಯಾರೂ ಕೊರಗಬೇಡಿ, ಎಂದು ಆಂಗ್ಲಭಾಷೆಯಲ್ಲಿ ಡೆತ್‌ ನೋಟಲ್ಲಿ ಬರೆದಿಡಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೋಷಕರು ಆಕ್ರೋಶ ಹೊರಹಾಕುತ್ತಿದ್ದಾರೆ. “ದಿನನಿತ್ಯ ಪೋಷಕರ ಜೊತೆ ಮಾತನಾಡುವ ಅವಕಾಶವನ್ನು ನೀಡಬೇಕು. ಮಕ್ಕಳು ಮನೆ ಬಿಟ್ಟು ಬಂದಿರುತ್ತಾರೆ. ಪೋಷಕರೆ ಜೊತೆ ಮಾತನಾಡಿದಾಗ ಅವರ ಮನಸ್ಸಿಗೆ ಧೈರ್ಯ ಬಂದಂತಾಗುತ್ತದೆ. ಅದರಲ್ಲೂ ಹುಟ್ಟು ಹಬ್ಬದಂತಹ ವಿಶೇಷ ಸಂದರ್ಭದಲ್ಲಿ ಫೋನ್ ಗೆ ಅವಕಾಶ ನೀಡದಿರುವುದು ಶಾಲೆಯ ಕ್ರೂರತೆಯನ್ನು ತೋರಿಸುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗೆ ಮಾನವೀಯತೆಗಿಂತ ಶಾಲೆಯ ಶಿಸ್ತು, ನಿಯಮ, ಅಂಕ ಗಳಿಕೆ ಮುಖ್ಯವಾಗುತ್ತಿದೆ. ಇದು ಆತ್ಮಹತ್ಯೆಯಲ್ಲ, ಶಾಲೆಯವರೆ ಮಗುವನ್ನು ಹತ್ಯೆ ಮಾಡಿದ್ದಾರೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಎಸ್ಎಫ್ಐ ಸಂಘಟನೆ ಈ ಘಟನೆಯನ್ನು ಖಂಡಿಸಿದ್ದು ಖಾಸಗಿ ಶಾಲೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಇದು ಶೈಕ್ಷಣಿಕ ಹತ್ಯೆ. ವಸತಿ ಶಾಲೆ ಜಾಗದಲ್ಲಿ ಒಂದು ಲ್ಯಾಂಡ್ ಫೋನ್, ನಿರಂತರ ಭೇಟಿಗೆ ಅವಕಾಶ, ಒಬ್ಬರು ನರ್ಸ್ ಇರಬೇಕು ಎಂಬ ನಿಯಮ ಇದೆ. ಆದರೆ ಈ ನಿಯಮ ಈ ಶಾಲೆಗೆ ಅನ್ವಯವಾದಂತೆ ಕಾಣುತ್ತಿಲ್ಲ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಕೂಡಲೇ ಈ ಶಾಲೆಯ ಮೇಲೆ ಕಾನೂನು ಕ್ರಮ ಜರುಗಿಅಬೇಕು ಎಂದು ಎಸ್ಎಪ್ಐ ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *