ನವದೆಹಲಿ : ಹಿರಿಯ ಸಮಾಜವಾದಿ ನಾಯಕ, ಮಾಜಿ ಕೇಂದ್ರ ಸಚಿವ ಶರದ್ ಯಾದವ್ (75) ನಿಧನರಾಗಿದ್ದಾರೆ. ಶರದ್ ಯಾದವ್ ಅವರ ಆರೋಗ್ಯದಲ್ಲಿ ಇತ್ತೀಚೆಗೆ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಅವರನ್ನು ಗುರುಗ್ರಾಮ್‌ನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಲೋಹಿಯಾರಿಂದ ಪ್ರಭಾವಿತರಾಗಿ ರಾಜಕಾರಣಕ್ಕೆ ಬಂದಿದ್ದ ಶರದ್ ಯಾದವ್ ಅವ್ರು ಲಾಲೂ, ಮುಲಾಯಂ, ಜಾರ್ಜ್ ಫರ್ನಾಂಡಿಸ್, ದೇವೇಗೌಡರು ಸೇರಿದಂತೆ ಹಲವು ಜನತಾ ಪರಿವಾರದ ನಾಯಕರ ಸಮಕಾಲೀನರಾಗಿದ್ದರು.
ಶರದ್ ಯಾದವ್ ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯ ಬಬೈ ಗ್ರಾಮದಲ್ಲಿ 1947ರ ಜುಲೈ 1ರಂದು ಜನಿಸಿದ್ದ ಅವರು, ಲೋಕಸಭೆಗೆ ಏಳು, ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು. ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕ ಅಧ್ಯಕ್ಷರೂ ಹೌದು. 1989ರ ವಿ.ಪಿ.ಸಿಂಗ್ ಸರ್ಕಾರ , 1999ರಲ್ಲಿ ಎ.ಬಿ.ವಾಜಪೇಯಿ ಸಂಪುಟದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.
2013ರಲ್ಲಿ ನಿತೀಶ್‌ಕುಮಾರ್ ಅವರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಾಗ ಮೈತ್ರಿಯಿಂದ ಹೊರಬಿದ್ದರು. 2015ರಲ್ಲಿ ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಲು ನಿತೀಶ್ ಕುಮಾರ್ ಮತ್ತು ಲಾಲೂ ಯಾದವ್ ಪರಸ್ಪರ ಕೈಜೋಡಿಸಲು ಪ್ರಮುಖ ಕಾರಣರಾಗಿದ್ದವರು ಶರದ್ ಯಾದವ್.
ಆದರೆ, ಇದೇ ನಿತೀಶ್ ಕುಮಾರ್ ಅವರು ಮತ್ತೆ 2017ರಲ್ಲಿ ಬಿಜೆಪಿ ಜೊತೆಗೆ ಕೈಜೋಡಿಸಲು ಮುಂದಾದಾಗ ಅದನ್ನು ವಿರೋಧಿಸಿ ವಿರೋಧ ಪಕ್ಷದಲ್ಲಿಯೇ ಉಳಿದರು. ಆಗ ಲೋಕತಾಂತ್ರಿಕ ಜನತಾದಳ ಪಕ್ಷವನ್ನು ಸ್ಥಾಪಿಸಿದರು. ಆದರೆ, ಅದು ನಿರೀಕ್ಷಿತ ಮಟ್ಟದ ಯಶಸ್ಸು ಕಾಣಲಿಲ್ಲ. 2022ರಲ್ಲಿ ತಮ್ಮ ಪಕ್ಷವನ್ನು ಆರ್‌ಜೆಡಿ ಜೊತೆ ವಿಲೀನಗೊಳಿಸಿದರು.
ಸುಮಾರು ನಾಲ್ಕು ದಶಕಗಳು ರಾಜಕೀಯವಾಗಿ ಸಕ್ರಿಯರಾಗಿದ್ದ ಅವರು ಈಗ ಇತಿಹಾಸದ ಭಾಗವಾಗಿದ್ದಾರೆ.