ಕೋಲಾರ: ಜಾತಿ ತಾರತಮ್ಯ ಹಾಗೂ ಶೋಷಿತ ದಲಿತ ಸಮುದಾಯವನ್ನು ಅವಮಾನಿಸಿರುವ ನಟ ಉಪೇಂದ್ರ ಹಾಗೂ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಿಪಿಐಎಂ ಪಕ್ಷದ ತಾಲೂಕು ಸಮಿತಿ ನೇತೃತ್ವದಲ್ಲಿ ಶನಿವಾರ ನಗರದ ತಹಶಿಲ್ದಾರ್ ಕಛೇರಿ ಮುಂದೆ ಪ್ರತಿಭಟನೆ ನಡೆಸಿದೆ.
ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಕಾರ್ಯದರ್ಶಿ ಟಿ.ಎಂ ವೆಂಕಟೇಶ್ ಮಾತನಾಡಿ ದಲಿತ ಸಮುದಾಯವನ್ನು ಅಪಮಾನಿಸಿ ಜಾತಿ ದೌರ್ಜನ್ಯದ ಗಾದೆಯನ್ನು ಸಾರ್ವಜನಿಕವಾಗಿ ಬಳಸಿ ನಿಂದಿಸಿದ ನಟ ಉಪೇಂದ್ರ ಹಾಗೂ ಮಂತ್ರಿ ಎಸ್.ಎಸ್ ಮಲ್ಲಿಕಾರ್ಜುನ ಮೇಲ್ಜಾತಿಯ ಅದರ ಬಲಾಢ್ಯ ವರ್ಗಗಳು ಬಳಸುವ ಈ ದೌರ್ಜನ್ಯದ ಗಾದೆ ಕೇವಲ ಕೆಲ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ನಿಂದಿಸುತ್ತಿಲ್ಲ, ಬದಲಿಗೆ ಇಡೀ ಸಮುದಾಯವನ್ನೇ ನಿಂದಿಸಿ ಅವಮಾನಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. ದಲಿತ ಸಮುದಾಯವನ್ನೇ ಗುರಿಯಾಗಿಸಿಕೊಂಡು ಮಾಡುವ ಈ ದೌರ್ಜನ್ಯದ ಗಾದೆಯ ಪ್ರಯೋಗವನ್ನು, ಕೇವಲ ಗಾದೆಯ ಬಳಕೆಯೆಂದು ಲಘುವಾಗಿ ಪರಿಗಣಿಸಿರುವುದು ಬಿಟ್ಟು ಕೂಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಪರಿಶಿಷ್ಟ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ : ನಟ ಉಪೇಂದ್ರ ವಿರುದ್ಧ ಪ್ರಕರಣ ದಾಖಲು
ಈ ಘಟನೆ ಕುರಿತಂತೆ ನ್ಯಾಯಾಲಯದ ಅಭಿಪ್ರಾಯವು ಕೂಡ ನಟ ಉಪೇಂದ್ರ ಹಾಗೂ ಮಂತ್ರಿ ಬಳಸಿದ ಗಾದೆಯನ್ನು ಎತ್ತಿ ಹಿಡಿದು ಜಾತಿ ತಾರತಮ್ಯ ಹಾಗೂ ದೌರ್ಜನ್ಯದ ಬೆಂಬಲಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಅವುಗಳನ್ನು ತಡೆಯಲು ಅಗತ್ಯವಾದ ಕ್ರಮವಹಿಸಬೇಕು ಘನ ನ್ಯಾಯಾಲಯವು ಹೇಳಿಕೆಯನ್ನು ಪುನರ್ ಪರಿಶೀಲಿಸಬೇಕು ಜೊತೆಗೆ ಬೆಂಬಲಿಗರಿಂದ ರಾಜ್ಯದ ಜನತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂಬುದನ್ನು ಗಮನಿಸಬೇಕಾಗಿದೆ ಎಂದರು.
ನಟ ಉಪೇಂದ್ರ ಹಾಗೂ ಮಂತ್ರಿ ಮಲ್ಲಿಕಾರ್ಜುನ ಅವರಿಗೆ ಅರಿವಿಲ್ಲದೇ ಅಥವಾ ಯಾರನ್ನು ನಿಂದಿಸುವ ದುರುದ್ದೇಶವಿಲ್ಲದೇ ವಾಡಿಕೆಯಂತೆ ಬಳಸಿದ್ದು ನಿಜವಾದಲ್ಲಿ, ಅವರು ಸಾರ್ವಜನಿಕವಾಗಿ ದಮನಿತ ಸಮುದಾಯ ಹಾಗೂ ರಾಜ್ಯದ ಜನತೆಯ ಮುಂದೆ ಕ್ಷಮೆ ಯಾಚಿಸಬೇಕು. ಸಮಾಜದಲ್ಲಿನ ಮೇಲ್ಜಾತಿ ಹಾಗೂ ಮೇಲ್ವರ್ಗಗಳು, ಸಾವಿರಾರು ವರ್ಷಗಳಿಂದ, ಮಹಿಳೆಯರನ್ನು ಹಾಗೂ ದಲಿತ ಮತ್ತು ಹಿಂದುಳಿದ ಜಾತಿ ಸಮುದಾಯಗಳನ್ನು ಗುರಿಯಾಗಿಸಿ, ನಿಂದಿಸುವ ಹಾಗೂ ಅಪಮಾನಿಸಿ ದೌರ್ಜನ್ಯ ಎಸಗುವ ಬೈಗಳು ಮತ್ತು ಹಲವು ಗಾದೆಗಳನ್ನು ಜಾತಿ ಹಾಗು ಲಿಂಗ ತಾರತಮ್ಯ ಹಾಗೂ ದೌರ್ಜನ್ಯ ಮೆರೆಯುವ ಭಾಗವಾಗಿ ಚಾಲ್ತಿಯಲ್ಲಿಟ್ಟು ಮುಂದುವರೆಸುತ್ತಿರುವುದು ಮತ್ತು ವಾಡಿಕೆಯಾಗಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.
ಸಿಪಿಐಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ ಈಗಲೂ ಈ ಖಂಡನೀಯ ದೌರ್ಜನ್ಯದ ಅಪಮಾನಗಳನ್ನು ದಿನನಿತ್ಯ, ಪ್ರತಿ ಕ್ಷಣ, ರಾಜ್ಯದ, ದೇಶದ ಎಲ್ಲ ಮಹಿಳಾ ಮತ್ತು ಶೂದ್ರ ಹಾಗೂ ದಲಿತ ಸಮುದಾಯಗಳು, ಮೇಲ್ಜಾತಿ ಹಾಗೂ ಮೇಲ್ಬರ್ಗಗಳಿಂದ ಅನುಭವಿಸುತ್ತಲೆ ಇವೆ.
ಈ ದೌರ್ಜನ್ಯದ ಕುರಿತಂತೆ ರಾಜ್ಯದ ಜನತೆ ಪ್ರತಿರೋಧಿಸುವುದು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಮಹಿಳೆಯರು ಹಾಗೂ ಶೂದ್ರ ಹಾಗೂ ದಲಿತ ಸಮುದಾಯಗಳನ್ನು ನಿಂದಿಸಿ ಅಪಮಾನಿಸುವ ಪದಗಳನ್ನ, ಗಾದೆಗಳನ್ನು, ಬೈಗುಳನ್ನು ಬಳಸದಂತೆ ನಾಗರೀಕ ಸಮಾಜ ಜಾಗೃತಿ ಮತ್ತು ಎಚ್ಚರವನ್ನು ವಹಿಸಬೇಕು ಮತ್ತು ಆ ಮೂಲಕ ಜಾತಿ ಹಾಗೂ ಲಿಂಗ ತಾರತಮ್ಯ ನಿವಾರಣೆಯ ಹೋರಾಟಕ್ಕೆ ಬಲವನ್ನು ತುಂಬಬೇಕೆಂದರು.
ಈ ಸಂದರ್ಭದಲ್ಲಿ ಸಿಪಿಐಎಂ ತಾಲೂಕು ಸಮಿತಿ ಸದಸ್ಯರಾದ ಎಂ.ವಿಜಯಕೃಷ್ಣ, ಎಂ.ಭೀಮರಾಜ್, ವಿ.ನಾರಾಯಣರೆಡ್ಡಿ, ಹೊಳ್ಳಂಬಳ್ಳಿ ವೆಂಕಟೇಶಪ್ಪ, ಮುಖಂಡರಾದ ಉರಗಲಿ ಕೃಷ್ಣೇಗೌಡ, ನಾರಾಯಣಪ್ಪ, ರಾಜೇಂದ್ರ ಪ್ರಸಾದ್, ನಾಗೇಶ್, ಲಕ್ಷ್ಮಣ್, ವೆಂಕಟರಾಮ್, ಮುನಿಯಪ್ಪ, ಇನ್ನೂ ಮುಂತಾದವರು ಭಾಗವಹಿಸಿದ್ದರು