ಕುಶಾಲನಗರ, ಫೆ 12: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವ ಜಾಗವು ದೇವಾಲಯಕ್ಕೆ ಸೇರಿದ ಜಾಗವಾಗಿದ್ದು, ಶಾಲೆಯನ್ನು ತೆರವು ಮಾಡಿ ಜಾಗವನ್ನು ಬಿಟ್ಟುಕೊಡುವಂತೆ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಕಾಂಗ್ರೆಸ್‍ನ ಕೆ.ಪಿ. ಚಂದ್ರಕಲಾ ಎನ್ನುವವರು ಬಿಇಓಗೆ ಪತ್ರ ಬರೆದಿದ್ದಾರೆ. ಜಿ.ಪಂ ಸದಸ್ಯರ ೀ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು ಪೊಷಕರು, ಗ್ರಾಮಸ್ಥರು ಸೇರಿದಂತೆ ಅನೇಕರು ವಿರೊಧ ವ್ಯಕಪಡಿಸುತ್ತಿದ್ದಾರೆ.
ಕುಶಾಲನಗರ ಸಮೀಪದ ಗುಮ್ಮನಕೊಲ್ಲಿ ಗ್ರಾಮದಲ್ಲಿ ಬಸವಣ್ಣ ದೇವರ ದೇವಾಲಯವಿದ್ದು, ದೇವಾಲಯ ಸಮಿತಿ ಅಧ್ಯಕ್ಷರಾಗಿರುವ ಕೆ.ಪಿ. ಚಂದ್ರಕಲಾ ಅವರು ಬಿಇಓಗೆ ಈ ಪತ್ರ ಬರೆದಿದ್ದಾರೆ. ನಮ್ಮ ದೇವಾಲಯಕ್ಕೆ ಸೇರಿದ 1 ಎಕರೆ 6 ಸೆಂಟ್ ಜಾಗದಲ್ಲಿ ದೇವಾಲಯ ಸಮಿತಿಯ ಗಮನಕ್ಕೂ ತರದೆ 1988 ರಲ್ಲಿ ಶಾಲೆ ಸ್ಥಾಪನೆ ಮಾಡಲಾಗಿದೆ ಎಂದು ಕೆ.ಪಿ. ಚಂದ್ರಕಲಾ ಅವರು ಆರೋಪಿಸುತ್ತಿದ್ದಾರೆ. ಇದು ನಮ್ಮ ದೇವಾಲಯದ ಜಾಗವಾಗಿರುವುದರಿಂದ ಶಾಲೆಯನ್ನು ತೆರವು ಮಾಡಿ ಜಾಗ ಬಿಟ್ಟುಕೊಡುವಂತೆ ಸೋಮವಾರಪೇಟೆ ಬಿಇಓ ಅವರಿಗೆ ಪತ್ರ ಬರೆದಿದ್ದಾರೆ. ಇದು ಶಾಲೆಯಲ್ಲಿ ಓದುತ್ತಿರುವ 84 ವಿದ್ಯಾರ್ಥಿಗಳ ಭವಿಷ್ಯವನ್ನು ಅತಂತ್ರ ಮಾಡಿ, ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗವನ್ನು ಖಾಸಗಿಯವರ ಪಾಲಾಗಿಸುವ ಉದ್ದೇಶ ಇದೆ ಎನ್ನುವುದು ಗ್ರಾಮಸ್ಥರ ಅನುಮಾನವಾಗಿದೆ. ಇಷ್ಟು ವರ್ಷ ಸುಮ್ಮನಿದ್ದು ಈಗ ಯಾಕೆ ಈ ಚರ್ಚೆ ಆರಂಭಿಸಿದ್ದಾರೆ ಎಂದು ಗ್ರಾಮದ ಯುವಕ ಗಣೇಶ್ ಹೊಸಳ್ಳಿಯವರ ಪ್ರಶ್ನೆಯಾಗಿದೆ.
1988 ರಲ್ಲಿ ಶಾಲೆ ನಿರ್ಮಾಣಕ್ಕೆ ಗ್ರಾಮದ ಪುಟ್ಟಪ್ಪ ಎಂಬುವವರು ಶಾಲಾ ಜಾಗವನ್ನು ದಾನ ನೀಡಿದ್ದರಂತೆ. ಆದರೆ 34 ವರ್ಷಗಳ ಹಿಂದೆ ಶಾಲೆಗೆ ಯಾವುದೇ ದಾನಪತ್ರ ಮಾಡಿಕೊಟ್ಟಿಲ್ಲ. ಇದರ ನಡುವೆ ಪುಟ್ಟಪ್ಪ ಅವರ ಸಂಬಂಧಿ ರವೀಂದ್ರ ಎಂಬುವವರು 2005 ರಲ್ಲಿ ಇದು ತಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು ತನ್ನ ಪಾಲಿನ ಆಸ್ತಿಯು ನನಗೆ ಸೇರಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ವೇಳೆ ದೇವಾಲಯ ಸಮಿತಿ ಅಧ್ಯಕ್ಷರಾಗಿದ್ದ ಚಂದ್ರಕಲಾ ಅವರು ದೇವಾಲಯ ಜಾಗವನ್ನು ದೇವಾಲಯಕ್ಕೆ ಬಿಡುವಂತೆ ಹೋರಾಟ ಮಾಡಿದ್ದಾರೆ. ಕೊನೆಗೆ 2014 ರಲ್ಲಿ ಲೋಕಅದಾಲತ್ ನಲ್ಲಿ ದೇವಾಲಯಕ್ಕೆ ಒಂದು ಎಕರೆ ಆರು ಸೆಂಟ್ ಬಿಡುವಂತೆ ತೀರ್ಮಾನವನ್ನು ಮಾಡಲಾಗಿದೆ.
ಆದರೆ ಚಂದ್ರಕಲಾ ಅವರು ಗುಮ್ಮನ್ನಕೊಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇರುವ ಈ ಒಂದು ಎಕರೆ 6 ಸೆಂಟ್ ಜಾಗವೇ ದೇವಾಲಯದ ಜಾಗ. ಹೀಗಾಗಿ ಶಾಲೆಯನ್ನು ತೆರವು ಮಾಡಿಕೊಡುವಂತೆ ಬಿಇಓಗೆ ಪತ್ರ ಬರೆದಿದ್ದಾರೆ. ಶಿಕ್ಷಣ ಇಲಾಖೆ ಉಪನಿರ್ದೇಶಕರು ಮಾತ್ರ ಲೋಕ್ ಅದಾಲತ್ ನಲ್ಲಿ ದೇವಾಲಯಕ್ಕೆ ಬರಬೇಕಾಗಿರುವ ಜಾಗವನ್ನು ಬಿಟ್ಟಿದ್ದರೂ ದೇವಾಲಯ ಸಮಿತಿ ನಮ್ಮನ್ನು ಪಾರ್ಟಿಯನ್ನಾಗಿ ಮಾಡಿಲ್ಲ. ಒಂದು ವೇಳೆ ಶಾಲೆ ತೆರವಿಗೆ ಬಂದಲ್ಲಿ ಕೋರ್ಟ್ ಮೊರೆ ಹೋಗುವುದಾಗಿ ಕೊಡಗು ಡಿಡಿಪಿಐ ಪರಿಗ್ರಿನ್ ಮಚಾಡೋ ತಿಳಿಸಿದ್ದಾರೆ.