ಬೆಂಗಳೂರು: ನಗರದ ಹಲವು ಶಾಲೆಗಳಲ್ಲಿ ನಿಗದಿತ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸದೆ ಇರುವುದು ರಾಜ್ಯ ಶಿಕ್ಷಣ ಇಲಾಖೆಯ ಗಮನಕ್ಕೆ ಬಂದಿದ್ಧು, ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿ ನೋಂದಾಯಿಸದ ಹಾಗೂ ನೋಂದಾಯಿತ ಎಂಬ ಎರಡು ವಿಧದ ಶಾಲೆಗಳಿವೆ. ನೋಂದಣಿ ಆಗದ ಶಾಲೆಗಳಲ್ಲಿ ಸರ್ಕಾರವು ನಿಗದಿಪಡಿಸದಿರುವ ಪಠ್ಯಕ್ರಮವನ್ನು ಮಕ್ಕಳಿಗೆ ಬೋಧಿಸಲಾಗುತ್ತಿದೆ. ಹೀಗಾಗಿ ಅಂತಹ ಶಾಲೆಗಳನ್ನು ಮುಚ್ಚಬೇಕು. ಜೊತೆಗೆ ಇಲಾಖೆಯಡಿ ನೋಂದಾಯಿತ ಶಾಲೆಗಳಲ್ಲಿ ಅನುಮೋದನೆ ಆಗದ ಪಠ್ಯಕ್ರಮ ಬೋಧನೆ ಸಮಸ್ಯೆ ಪರಿಹರಿಸಿ ಪಾಠ ಮಾಡುವಂತೆ ಇಲಾಖೆ ಸೂಚನೆ ನೀಡಿದೆ.
ಈ ಕುರಿತು ಸಾರ್ವಜನಿಕರಿಗೆ ಶಾಲೆ ಪಠ್ಯಕ್ರಮ ಯಾವುದಿದೆ ಎಂಬ ಬಗ್ಗೆ ಎಸ್ಎಸ್ಎಲ್‌ಸಿ ಮಂಡಳಿಯಡಿಯಲ್ಲಿ ಬರುವ ಶಾಲೆಗಳ ವಿವರಗಳನ್ನು ಇಲಾಖೆಯ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದ್ದು, ಪೋಷಕರಿಗೆ ಮಕ್ಕಳು ಕಲಿಯುವ ಪಾಠದ ಮಾಹಿತಿ, ಪಾರದರ್ಶಕತೆ ಸಲುವಾಗಿ ಶಾಲೆಗಳ ಅಂತರ್ಜಾಲ ತಾಣಗಳಲ್ಲಿಯೂ ಪಠ್ಯಕ್ರಮದ ಮಾಹಿತಿ ಅಳವಡಿಕೆ ಮಾಡಲು ಸೂಚಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ಇದನ್ನು ಓದಿ: ಸಿಬಿಎಸ್‌ಇ ಶಾಲೆಯೆಂದು ಮೋಸ: ಆರ್ಕಿಡ್ ಇಂಟರ್ನ್ಯಾಷನಲ್ ಸ್ಕೂಲ್ ವಿರುದ್ಧ ಶಿಕ್ಷಣ ಇಲಾಖೆ ದೂರು
ಮಕ್ಕಳು ಏನು ಕಲಿಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಲು ಇಲಾಖೆಯ ಅಂತರ್ಜಾಲ ತಾಣದಲ್ಲಿ ಶಾಲಾ ವಿವರ ಹಾಕಲು ಸರ್ಕಾರವನ್ನು ಅನುಮತಿ ಕೇಳಲಾಗುವುದು. ಈಗಾಗಲೇ 500 ಶಾಲೆಗಳಿಗೆ ಅನುಮೋದಿತವಲ್ಲದ ಪಠ್ಯಕ್ರಮ ಬೋಧನೆಗಾಗಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಲಾಗಿದೆ ಎಂದು ವರದಿಯಾಗಿದೆ.
ನೋಟಿಸ್ ಜಾರಿ ಮಾಡಿದ್ದ ಪ್ರಕರಣದ ಮುಂದುವರಿದು ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರದ ಜತೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ರಾಜ್ಯ ಮಂಡಳಿಯನ್ನು ಹೊರತುಪಡಿಸಿ ಇತರ ಮಂಡಳಿಗಳ ಜತೆ ಸಂಯೋಜಿತವಾಗಿರದ ಶಾಲೆಗಳನ್ನು ಗುರುತಿಸಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಆರ್. ವಿಶಾಲ್ ತಿಳಿಸಿದರು.
ಕೇವಲ ನೋಟಿಸ್ ಜಾರಿ ಮಾಡಿ ಪ್ರಯೋಜನ ಆಗಲ್ಲ. ಈ ಕಾರಣಕ್ಕೆ ಶಿಕ್ಷಣ ಇಲಾಖೆ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪ್ರತಿ ತಿಂಗಳು ಶಾಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಲು ಅಥವಾ ಮುಚ್ಚಲು ಇಲಾಖೆಯು ನೋಟಿಸ್ ಕಳುಹಿಸುತ್ತಿದ್ದೆವೆ ಎಂದರು.
ಪಠ್ಯಕ್ರಮಕ್ಕೆ ಅನುಮತಿ ಪಡೆದು ಸಿಬಿಎಸ್ಇ/ಐಪಿಎಸ್ಇ ಪಠ್ಯಕ್ರಮ ಬೋಧನೆ ಸೇರಿದಂತೆ ನಿಯಮಗಳನ್ನು ಉಲ್ಲಂಘಿಸಿರುವ ಧೋನಿ ಗ್ಲೋಬರ್ ಶಾಲೆ ಸೇರಿದಂತೆ ನಗರದ ನೂರಾರು ಶಾಲೆಗಳಿಗೆ ನೋಟಿಸ್ ನೀಡಿದ್ದೇವೆ. ಹಂತ ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಗಳು ತಿಳಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ