ಬೆಂಗಳೂರು: ಶಿರವಸ್ತ್ರ(ಹಿಜಾಬ್) ಕೇಸರಿ ಶಾಲು ವಿವಾದವು ಶೈಕ್ಷಣಿಕ ವಲಯದಲ್ಲಿ ಬಹುವಾಗಿ ವಿದ್ಯಾರ್ಥಿಗಳಲ್ಲಿ ಶಾಂತಿ ಕದಡುವ ಮೂಲಕ ಮಕ್ಕಳ ಶಿಕ್ಷಣಕ್ಕೆ ಕುತ್ತಾಗಿ ಪರಿಣಮಿಸಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಸೌಹಾರ್ದತೆಗಾಗಿ ಕರ್ನಾಟಕವು ಹೇಳಿಕೆಯನ್ನು ಬಿಡುಗಡೆಗೊಳಿಸಿದೆ.
ಅದರ ಪೂರ್ಣ ಹೇಳಿಕೆ ಹೀಗಿವೆ; ವಿದ್ಯಾರ್ಥಿನಿಯರು ಶಿರವಸ್ತ್ರ- ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗುವ ವಿಷಯವು ಅತ್ಯಂತ ತೀವ್ರ ವಿವಾದವಾಗಿ ಬೆಳೆದು ಶಾಂತಿ, ಸೌಹಾರ್ದತೆ, ಒಗ್ಗಟ್ಟು ಮತ್ತು ಶೈಕ್ಷಣಿಕ ಶಾಂತಿಯನ್ನು ಕದಡುವ ಮಟ್ಟಕ್ಕೆ ಹೋಗಿರುವ ಪ್ರಕರಣದ ಬಗ್ಗೆ ನಾವೆಲ್ಲರೂ ಅತ್ಯಂತ ಆತಂಕಿತರಾಗಿದ್ದೇವೆ.
ಈ ವಿವಾದ ಹೇಗೆ ಆರಂಭಗೊಂಡಿದ್ದರೂ ಅದೀಗ ಹೆಣ್ಣುಮಕ್ಕಳ ಅದರಲ್ಲೂ ಮುಖ್ಯವಾಗಿ, ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕುತ್ತಾಗಿ ಪರಿಣಮಿಸುತ್ತಿದೆ. ಶಿರವಸ್ತ್ರದ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತಿದೆ. ಮುಸ್ಲಿಮೇತರ ಮಕ್ಕಳು ಕೂಡ ಈ ವಿವಾದದಿಂದಾಗಿ ಶಿಕ್ಷಣದಿಂದ ದೂರವಾಗುವ ಸ್ಥಿತಿ ನಿರ್ಮಾಣವಾಗಿದೆ.
ಈ ವಿವಾದವು ಎರಡೂ ಕಡೆಯ ಮತೀಯ ಶಕ್ತಿಗಳ ರಾಜಕೀಯ ದುರುಪಯೋಗದ ಅಸ್ತ್ರವಾಗುತ್ತಿದೆ. ಮಕ್ಕಳು ಮತೀಯತೆಯ ರಾಜಕಾರಣಕ್ಕೆ ದಾಳಗಳಾಗುತ್ತಿರುವುದು ವಿಷಾದನೀಯ, ಖಂಡನೀಯ. ಇಂತಹ ಶಕ್ತಿಗಳ ಆಟಕ್ಕೆ ಪೋಷಕರು, ಮಕ್ಕಳು, ಪ್ರಜ್ಞಾವಂತ ನಾಗರೀಕರು ಅವಕಾಶ ನೀಡಬಾರದು ಎಂದು ವಿನಂತಿಸುತ್ತೇವೆ.
ವಸ್ತ್ರ ಸಂಹಿತೆಯ ಹೆಸರಿನಲ್ಲಿ ಶಿಕ್ಷಣದ ಹಕ್ಕಿಗೆ ಎಂದೂ ವಂಚನೆ ಮಾಡಬಾರದು. ಸಮವಸ್ತ್ರವನ್ನು ಉಳಿಸಿಕೊಂಡು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿ ಕೊಂಡು ಹೆಣ್ಣು ಮಕ್ಕಳು ಶಿಕ್ಷಣ ಪಡೆಯುವಂತಾಗಬೇಕು. ಇದು ಸಂವಿಧಾನಾತ್ಮಕ ಹಕ್ಕಾಗಿದೆ, ಅದನ್ನು ಉಳಿಸಬೇಕು.
ಈ ಒಟ್ಟು ಸನ್ನಿವೇಶವನ್ನು ರಾಜಕೀಯ ಶಕ್ತಿಗಳು ದುರುಪಯೋಗಪಡಿಸಿಕೊಳ್ಳದಂತೆ ತಡೆಯಲು ಎಚ್ಚರವಹಿಸಬೇಕು. ಶೈಕ್ಷಣಿಕ ಶಾಂತಿ ನಮಗೆ ಬೇಕು. ಶಿಕ್ಷಣದ ಹಕ್ಕು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯತೆಯಾಗಬೇಕು.
ಈ ಪ್ರಶ್ನೆಯು ಹುಟ್ಟು ಹಾಕಿರುವ ಮತ್ತು ಅದರ ದೀರ್ಘಾವಧಿ ಪರಿಣಾಮಗಳನ್ನು ಗಂಭೀರವಾಗಿ ಅರಿತು ಸೌಹಾರ್ದಯುತವಾಗಿ ಬಗೆಹರಿಯಲು ಸಂಬಂಧಿಸಿದ ಎಲ್ಲಾ ಭಾಗೀದಾರ ಪಕ್ಷಗಳು ಮತ್ತು ಸಮಾಜದ ಜನತೆ ಮುಂದಾಗಬೇಕು ಎಂದು ಕಳಕಳಿಯಿಂದ ವಿನಂತಿಸುತ್ತೇವೆ.
ಈ ಮೇಲಿನ ವಿಚಾರವನ್ನು ಒಳಗೊಂಡ ಜಂಟಿ ಹೇಳಿಕೆಯನ್ನು ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಜಿ.ರಾಮಕೃಷ್ಣ, ಬೊಳುವಾರು ಮಹಮದ್ ಕುಂಞಿ, ಪ್ರೊ.ಅರವಿಂದ ಮಾಲಗತ್ತಿ, ಡಾ.ಎಸ್.ಜಿ.ಸಿದ್ಧರಾಮಯ್ಯ, ಪ್ರೊ.ಪುರುಷೋತ್ತಮ ಬಿಳಿಮಲೆ, ಪ್ರೊ.ನರೇಂದ್ರ ನಾಯಕ್, ಡಾ.ಬಂಜಗೆರೆ ಜಯಪ್ರಕಾಶ್, ಡಾ.ವಿಜಯಾ, ಡಾ.ಹೆಚ್.ಎಸ್.ಅನುಪಮಾ, ಡಾ.ವಿನಯಾ ಒಕ್ಕುಂದ , ಡಾ.ಎನ್.ಗಾಯತ್ರಿ, ಪ್ರೊ.ಸುಕನ್ಯಾ ಮಾರುತಿ, ಡಾ.ಕೆ.ಶರೀಫಾ, ಕೆ.ನೀಲಾ, ಡಾ.ವಸುಂದರಾ ಭೂಪತಿ, ಸೂಫಿ ವಲಿಬಾ, ಡಾ.ಪ್ರಭು ಖಾನಾಪುರೆ, ಅಮೀರ್ ಜಾನ್ ಖಾದ್ರಿ, ಮಾವಳ್ಳಿ ಶಂಕರ್, ಲಕ್ಷ್ಮೀನಾರಾಯಣ ನಾಗವಾರ, ಫಾ. ಡಾ.ಮನೋಹರಚಂದ್ರ ಪ್ರಸಾದ್, ಪೆರಿಕೋ ಪ್ರಭು, ಮುನೀರ್ ಕಾಟಿಪಳ್ಳ, ಡಾ.ಎಸ್.ವೈ.ಗುರುಶಾಂತ್, ಕೆ.ಎಸ್.ವಿಮಲಾ, ಗೋಪಾಲಕೃಷ್ಣ ಅರಳಹಳ್ಳಿ, ಬಿ.ರಾಜಶೇಖರಮೂರ್ತಿ ಸೇರಿದಂತೆ ಹಲವು ಮಂದಿ ಧ್ವನಿಯಾಗಿದ್ದಾರೆ.