ರಂಗಾರೆಡ್ಡಿ : ನಿವೃತ್ತ ಸೈನಿಕನೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ದೇಹದ ಭಾಗಗಳನ್ನು ಕುಕ್ಕರ್ನಲ್ಲಿ ಹಾಕಿ ಬೇಯಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ರಂಗಾರೆಡ್ಡಿ ಜಿಲ್ಲೆಯ ಮೀರ್ ಪೇಟೆಯ ನ್ಯೂ ವೆಂಕಟರಮಣ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಜನವರಿ 16ರಂದು ಪತಿ ಗುರುಮೂರ್ತಿ, ತಾಯಿ ಸುಬ್ಬಮ್ಮ ಅವರೊಂದಿಗೆ ಪತ್ನಿ ವೆಂಕಟಮಾಧವಿ ಕಾಣೆಯಾಗಿದ್ದಾರೆ ಎಂದು ಮೀರ್‌ಪೇಟ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಕಳೆದ ಕೆಲವು ದಿನಗಳಿಂದ ಗಂಡ ಮತ್ತು ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ತನಿಖೆಯ ಸಮಯದಲ್ಲಿ ಪೊಲೀಸರಿಗೆ ತಿಳಿದುಬಂದಿದೆ.
ತನಿಖಾಧಿಕಾರಿಗಳು ಗುರು ಮೂರ್ತಿಯನ್ನು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದು, ಆಘಾತಕಾರಿ ವಿವರಗಳನ್ನು ಬಹಿರಂಗಪಡಿಸಿದ್ದಾನೆ.
ಗುರುಮೂರ್ತಿ ಅವರು ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಪ್ರಸ್ತುತ ಕಾಂಚನ್‌ಬಾಗ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಗುರುಮೂರ್ತಿ ಅವರು ವೆಂಕಟಮಾಧವಿ ಅವರನ್ನು 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರಿದಿದ್ದು, ಶೀಘ್ರವೇ ಸಂಪೂರ್ಣ ಮಾಹಿತಿ ಹೊರಬೀಳಲಿದೆ ಎಂದು ಮೀರ್‌ಪೇಟ್ ಪೊಲೀಸರು ತಿಳಿಸಿದ್ದಾರೆ.