ರಾಯಚೂರು : ರಾಯಚೂರು ವಿಶ್ವ ವಿದ್ಯಾಲಯಕ್ಕೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳನ್ನು ಬಲ ಪಡಿಸಬೇಕು ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ( ಎಸ್ಎಫ್ಐ ) ರಾಯಚೂರು ಜಿಲ್ಲಾ ಸಮಿತಿ ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ನಗರದ ಕೃಷಿ ವಿಶ್ವವಿದ್ಯಾಲಯದ ಆವರಣದ ಹೆಲಿಪ್ಯಾಡ್ ಹತ್ತಿರ ಮನವಿ ಸಲ್ಲಿಸಿದರು.
ರಾಜ್ಯದ ಶೈಕ್ಷಣಿಕ ಕ್ಷೇತ್ರವು ಅನೇಕ ಸಮಸ್ಯೆಗಳಿಂದ ಕೂಡಿದೆ. ಶಿಕ್ಷಕರ, ಉಪನ್ಯಾಸಕರ, ಕೊಠಡಿಗಳ ಕೊರತೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನಗಳು ಸಮರ್ಪಕವಾಗಿ ಬರದೆ ಇರುವುದು ಸೇರಿದಂತೆ ಮುಂತಾದವು ಇವೆ. ಈಗ ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಮಾದರಿ ಶಾಲೆಯ ಹೆಸರಿನ ವಿಲೀನದ ನೆಪದಲ್ಲಿ 13800 ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿದೆ ಇದು ಅತ್ಯಂತ ಖಂಡನೀಯ. ಸರ್ಕಾರ ಕೂಡಲೇ ಈ ಪ್ರಕ್ರಿಯೆಯನ್ನು ನಿಲ್ಲಿಸಿ ಸರ್ಕಾರಿ ಶಾಲಾ ಕಾಲೇಜು, ಹಾಸ್ಟೆಲ್, ವಿಶ್ವವಿದ್ಯಾಲಯಗಳಿಗೆ ಆಗತ್ಯ ಹಣಕಾಸಿನ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕು, ಕಳೆದ ಮೂರು ವರ್ಷಗಳಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೈಸಿಕಲ್ ಒದಗಿಸಿಲ್ಲ ಕೂಡಲೇ ಒದಗಿಸಬೇಕು, ರಾಯಚೂರು ಜಿಲ್ಲೆಯಲ್ಲೆ ಏಮ್ಸ್ ಸ್ಥಾಪಿಸಬೇಕು, ರಾಯಚೂರು ವಿವಿಗೆ ಕೂಡಲೆ 500 ಕೋಟಿ ಅನುದಾನ ನೀಡಿ ಇತರೆ ಆಗತ್ಯ ನೆರವು ಮತ್ತು ಸೌಲಭ್ಯಗಳನ್ನು ಒದಗಿಸಬೇಕು, ರಾಜ್ಯದಲ್ಲಿ ಖಾಲಿ ಇರುವ ಶಿಕ್ಷಕ, ಉಪನ್ಯಾಸಕ, ಪ್ರಾಧ್ಯಾಪಕರ ಹುದ್ದೆಗಳನ್ನು ಭರ್ತಿ ಮಾಡಬೇಕು, ಹಂಪಿ ವಿ.ವಿ ಸೇರಿ ರಾಜ್ಯ ವ್ಯಾಪಿ ವಿದ್ಯಾರ್ಥಿಗಳಿಗೆ ದೊರೆಯದಿರುವ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡಬೇಕು, ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಹಂತದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಜೊತೆಗೆ ಶಿಕ್ಷಣದ ಖಾಸಗೀಕರಣ, ಕೋಮುವಾದಿಕರಣವನ್ನು ಕೈ ಬಿಟ್ಟು ಸಮಗ್ರ ಶೈಕ್ಷಣಿಕ ಅಭಿವೃದ್ಧಿಗೆ ಮುಂದಾಗಬೇಕೆಂದು ಮನವಿಯ ಮೂಲಕ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷರಾದ ಶಿವಕುಮಾರ ಮ್ಯಾಗಳಮನಿ, ರಾಜ್ಯ ಜಂಟಿ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ ದೀನಸಮುದ್ರ ಸೇರಿದಂತೆ ಇತರರಿದ್ದರು.