ಗಂಗಾವತಿ : ಗೋಲ್ಡನ್ ಚಾನ್ಸ್ ಹೆಸರಿನಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ನಡೆಸುವ ಪರೀಕ್ಷೆಗಳಿಗೆ ದುಬಾರಿ ಶುಲ್ಕವನ್ನು ಪಡೆಯುತ್ತಿದ್ದಾರೆ ಎಂದು ಆರೋಪಿಸಿ ಎಸ್.ಎಫ್ ಐ ಕಾರ್ಯಕರ್ತರು ಗಂಗಾವತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಉದ್ದೇಶಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡುತ್ತಾ, ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು 2013 ರಿಂದ 16 ರವರೆಗೆ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಗೋಲ್ಡನ್ ಚಾನ್ಸ್ ಹೆಸರಿನಲ್ಲಿ ಅನುತ್ತೀರ್ಣಗೊಂಡ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕೊಟ್ಟಿರುವುದನ್ನು ಸಂಘಟನೆಯು ಸ್ವಾಗತಿಸುತ್ತದೆ, ಆದರೆ ಪರೀಕ್ಷೆ ಶುಲ್ಕವನ್ನು 5000ರೂ ಮಾಡಿರುವುದನ್ನು ಎಸ್ಎಫ್ಐ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಕರೋನಾ ಎಫೆಕ್ಟ್ ದಿಂದಾಗಿ ಹಲವಾರು ಕುಟುಂಬಗಳು ಆರ್ಥಿಕವಾಗಿ ದುರ್ಬಲರಾಗಿ ದಿವಾಳಿ ಹಂತ ತಲುಪಿರುತ್ತವೆ ಈ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿಗಳು ಗೋಲ್ಡನ್ ಚಾನ್ಸ್ ಹೆಸರಿನಲ್ಲಿ ಪದವಿ ಶಿಕ್ಷಣವನ್ನು ಮಾರಾಟಕ್ಕಿಟ್ಟ, ಹಗಲು ದರೋಡೆ ಮಾಡುವುದರ ಮೂಲಕ ಹಣ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.
2017-18 ರ ಸಾಲಿನಲ್ಲಿ ಪದವಿ ದಾಖಲಾತಿ ಪಡೆದು ವಿವಿಧ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು 2ನೇ ಮತ್ತು 4ನೇ ಸೆಮಿಸ್ಟರಲ್ಲಿ ಕೆಲವೊಂದು ವಿಷಯಗಳಲ್ಲಿ ಅನ್ನುತ್ತೀರ್ಣರಾಗಿರುತ್ತಾರೆ, ಈ ವಿದ್ಯಾರ್ಥಿಗಳಿಗೆ ಈ ಸಾರಿ ಪರೀಕ್ಷೆ ಬರೆಯಲು ಅನುಮತಿ ನೀಡದೇ ಇರುವುದು ಸರಿಯಾದ ಕ್ರಮವಲ್ಲ ಎಂದು ಎಸ್.ಎಫ್ ಐ ಆರೋಪಿಸಿದೆ. ಈ ವಿದ್ಯಾರ್ಥಿಗಳಿಗೆ ಕೂಡ ಪರೀಕ್ಷೆ ಬರೆಯಲು ಅನುಮತಿ ನೀಡಬೇಕು ಏಕೆಂದರೆ ಈ ಸಾರಿ ಪರೀಕ್ಷೆಗೆ ಅನುಮತಿ ಕೊಡಲು ನಿರಾಕರಣೆ ಮಾಡಿದರೆ ಈ ವಿದ್ಯಾರ್ಥಿಗಳು ಒಂದು ವರ್ಷದವರೆಗೂ ಕಾಯಬೇಕಾಗುತ್ತದೆ, ಹಾಗಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೆ ಇದೇ ಶೈಕ್ಷಣಿಕ ವರ್ಷದಲ್ಲಿ ಈ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲಿಯಲು ಅನುಕೂಲವಾಗಲಿದೆ. ಹಳೆಯ ವಿದ್ಯಾರ್ಥಿಗಳಿಗೆ ಗೋಲ್ಡನ್ ಚಾನ್ಸ್ ಕೊಟ್ಟು ಪರೀಕ್ಷೆ ನಡೆಸಲು ಮುಂದಾಗಿದ್ದಾರೆ ಮತ್ತು ಪ್ರಸ್ತುತ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆರನೇ ಸೆಮಿಸ್ಟರ್ ಪರೀಕ್ಷೆ ನಡೆಸಲು ಪರೀಕ್ಷೆ ಶುಲ್ಕ ಕಟ್ಟಿಸಿ ಕೊಂಡಿದ್ದಾರೆ. ಆದರೆ 2017 -18 ರ ಸಾಲಿನ ವಿದ್ಯಾರ್ಥಿಗಳಿಗೆ ಮಾತ್ರ 2ನೇ ಮತ್ತು 4ನೇ ಸೆಮಿಸ್ಟರ್ ಪರೀಕ್ಷೆಗೆ ಶುಲ್ಕ ಕಟ್ಟಲು ಅವಕಾಶ ಕೊಟ್ಟಿರುವುದಿಲ್ಲ ಏಕೆ ಎಂದು ಸಂಘಟನೆ ಪ್ರಶ್ನಿಸಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುವ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಈಗಾಗಲೇ ಪರೀಕ್ಷೆ ಶುಲ್ಕ ಕಟ್ಟಲು ಅವಕಾಶ ಕಲ್ಪಿಸಿ ಕೊಟ್ಟಿರುತ್ತಾರೆ, ಆದರೆ ಬಳ್ಳಾರಿ ವಿವಿ ಮಾತ್ರ ಪರೀಕ್ಷೆ ಶುಲ್ಕ ಕಟ್ಟಲು ಅನುಮತಿ ನೀಡಲಾರದ ಕಾರಣಕ್ಕಾಗಿ ಈ ವಿಶ್ವವಿದ್ಯಾಲಯ ವ್ಯಾಪ್ತಿಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಲು ಒಂದು ಹೆಚ್ಚಿಗೆ ವರ್ಷ ಕಾಯಬೇಕಾಗುತ್ತದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮತ್ತು ಅವರು ಉನ್ನತ ಶಿಕ್ಷಣಕ್ಕೆ ಹೋಗಲು ಅವಶ್ಯಕತೆ ಇರುವುದರಿಂದ ಪರೀಕ್ಷೆಯನ್ನು ನಡೆಸಬೇಕಾಗಿದೆ ಆದ್ದರಿಂದ ಗೋಲ್ಡನ್ ಚಾನ್ಸ್ ವಿದ್ಯಾರ್ಥಿಗಳ ಜೊತೆಗೆ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸಬೇಕೆಂದು ಪ್ರತಿಭಟನೆಕಾರರು ಆಗ್ರಹಿಸಿದ್ದಾರೆ.
ಮನವಿ ಪತ್ರವನ್ನು ಕೊಲ್ಲಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಪ್ರಾಂಶುಪಾಲರು ಮೂಲಕ ವಿವಿ ಆಡಳಿತಕ್ಕೆ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಹ ಕಾರ್ಯದರ್ಶಿ ಸೋಮನಾಥ್ ಗೌಡ್ರು, ಪ್ರಮುಖರಾದ ನಾಗರಾಜ, ರಾಕೇಶ್, ವಿಕ್ಕಿ, ವಿಜಯ್ ಅಮಾರ್ ಇತರರು ಇದ್ದರು.