ಪ್ರತಿಭಟನೆಗೆ ಮಣಿದ ವಿಶ್ವವಿದ್ಯಾನಿಲಯದ ಕುಲಪತಿಗಳು ವಿದ್ಯಾರ್ಥಿ ನಾಯಕರ ಜೊತೆಗೆ ಚರ್ಚಿಸಿ ತಡೆಹಿಡಿದಿದ್ದ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಿ ಪ್ರತಿಭಟನೆಯನ್ನು ತಣ್ಣಗಾಗಿಸಿದರು.
ಕಲಬುರಗಿ: 4ನೇ ಸೆಮಿಸ್ಟಾರ್ ಪದವಿ ಪರೀಕ್ಷಾ ಫಲಿತಾಂಶ ಪುನರ್‌ಪರಿಶೀಲನೆ ಮಾಡಲು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷೇನ್(ಎಸ್‌ಎಫ್‌ಐ) ಜಿಲ್ಲಾ ಸಂಚಾಲಕ ಸಮಿತಿ ನೇತೃತ್ವದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಮೇಧಾವನಿ ಕಾರಿಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದರು.
ಪರೀಕ್ಷಾಂಗ ವಿಭಾಗದ ಕುಲಸಚಿವರ ಕುಲಪತಿಗಳ ಹತ್ತಿರ ಹೊರಟಿರುವ ಕಾರನ್ನು ತಡೆಯಲಾಯಿತು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ದೂರವಾಣಿ ಕರೆ ಮೂಲಕ ಕುಲಸಚಿವರ ಜೊತೆಗೆ ಪರೀಕ್ಷಾಂಗ ವಿಭಾಗದ ಕುಲಸಚಿವರು ಮಾತನಾಡಿ ಎಸ್ಎಫ್ಐ ನಾಯಕರ ನಿಯೋಗವನ್ನು ತಮ್ಮ ಬಳಿ ಕರೆಸಿಕೊಂಡರು. ಇನ್ನೆರೆಡು ದಿನಗಳಲ್ಲಿ ಸಭೆ ನಡೆಸಿ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದಾಗ ಪ್ರತಿಭಟನೆ ಕೈಬಿಡಲಾಯಿತು.
ಇತ್ತೀಚೆಗೆ ಪದವಿ ವಿದ್ಯಾರ್ಥಿಗಳ 4ನೇ ಸೆಮಿಸ್ಟರ್ ಫಲಿತಾಂಶ ಬಿಡುಗಡೆ ಮಾಡಲಾಗಿದ್ದು, ಈ ಫಲಿತಾಂಶವು ಅನೇಕ ಗೊಂದಲಗಳಿಂದ ಕೂಡಿದೆ. ಅಲ್ಲದೇ ವಿದ್ಯಾರ್ಥಿಗಳಿಗೆ ಆತಂಕವನ್ನುಂಟು ಮಾಡಿರುತ್ತದೆ. ಏಕೆಂದರೆ, ಫಲಿತಾಂಶವನ್ನು ನೋಡಿದ ಬಹುತೇಕ ವಿದ್ಯಾರ್ಥಿಗಳು ಅನುತ್ತೀರ್ಣವಾಗಿದ್ದಾರೆ. ಸರ್ಕಾರದ ಆದೇಶ ಮತ್ತು ಯುಜಿಸಿ ನಿಯಮದ ಪ್ರಕಾರ ಕೊರೊನಾ ಭೀತಿಯಿಂದ ಪದವಿ ಎಲ್ಲಾ ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲು ಆದೇಶಿಸಲಾಗಿತ್ತು. ವಿದ್ಯಾರ್ಥಿಗಳನ್ನು ಪ್ರಮೋಟ್ ಮಾಡಲು ಯುಜಿಸಿಯ ಮಾರ್ಗಸೂಚಿಗಳು ಏನಾಗಿದ್ದವು ಎಂಬುವುದನ್ನು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯವು ಬಹಿರಂಗಪಡಿಸಬೇಕು ಎಂದು ಎಸ್‌ಎಫ್‌ಐ ಆಗ್ರಹಿಸಿದೆ.
ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳು ಪದವಿ ವಿದ್ಯಾರ್ಥಿಗಳ ಫಲಿತಾಂಶ ಬಿಡುಗಡೆಯಾಗಿದ್ದು, ಯಾವುದೇ ರೀತಿಯ ಗೊಂದಲ, ಅನುಮಾನಗಳು ಇರುವುದಿಲ್ಲ. ಉದಾಹರಣೆಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ 3ನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿನಿಯೂ 1 ವಿಷಯದಲ್ಲಿ ಅನುತ್ತೀರ್ಣರಾದರೆ, 4ನೇ ಸೆಮಿಸ್ಟರ್‌ನಲ್ಲಿ ಯುಜಿಸಿ ನಿಯಮದ ಪ್ರಕಾರ ಪ್ರಮೋಟ್ ಮಾಡಿದ್ದರೂ ಉತ್ತೀರ್ಣರಾಗಿರುತ್ತಾರೆ. ಆದರೆ ಗುಲ್ಬರ್ಗಾ ವಿಶ್ವವಿದ್ಯಾನಿಲಯದಲ್ಲಿ 3ನೇ ಸೆಮಿಸ್ಟರ್‌ನಲ್ಲಿ 1 ವಿಷಯದಲ್ಲಿ ಅನುತ್ತೀರ್ಣರಾದರೆ, 4ನೇ ಸೆಮಿಸ್ಟಾರ್‌ನಲ್ಲಿ ಎಲ್ಲಾ ವಿಷಯದಲ್ಲಿ ಅನುತ್ತೀರ್ಣರಾಗಿದ್ದಾರೆ ಏಕೆ?… ಯುಜಿಸಿ ನಿಯಮವೂ ಗುಲ್ಬರ್ಗಾ ವಿವಿಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ಏನಾದರೂ ನೀಡಿದಿಯೇ? ಮತ್ತು ಪರೀಕ್ಷೆ ಬರೆದಿರುವ ಕೆಲ ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆ ಹಿಡಿದು ವಿದ್ಯಾರ್ಥಿಗಳು ಸಂಬಂಧಿಸಿದ ಅಧಿಕಾರಿಗಳನ್ನು ಕೇಳಿದರೆ ನೀವು ಪರೀಕ್ಷೆಯನ್ನು ಬರೆದಿರುವುದಿಲ್ಲ ಎಂದು ಉಡಾಫೆಯಾಗಿ ಉತ್ತರಿಸಿದ್ದಾರೆ. ಆದರೆ, ವಾಸ್ತವದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿರುತ್ತಾರೆ. ಅದಕ್ಕೆ ಪೂರಕ ಎಲ್ಲಾ ದಾಖಲೆಗಳು ನಮ್ಮ ಬಳಿ ಇವೆ ಮತ್ತು ತಡೆಹಿಡಿದ ಫಲಿತಾಂಶವನ್ನು ಬಿಡುಗಡೆಗೊಳಿಸಲು ನಿಮ್ಮ ಸಿಬ್ಬಂದಿ ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದಾರೆ. ಇದು ಈ ಕೂಡಲೇ ನಿಲ್ಲಿಸಬೇಕು ಮತ್ತು ವಿದ್ಯಾರ್ಥಿಗಳಿಂದ ಹಣ ಪಡೆದಿರುವ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಎಸ್‌ಎಫ್‌ಐ ಒತ್ತಾಯಿಸುತ್ತದೆ
ಈ ಫಲಿತಾಂಶವೂ ಹಲವಾರು ಅನುಮಾನಗಳಿಗೆ ಕಾರಣವಾಗಿದ್ದು, ಬಹುತೇಕ ಯುಜಿಸಿ ಮತ್ತು ಸರ್ಕಾರದ ನಿಯಮಗಳು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಮಾರಕವಾಗಿದೆ. ಹಾಗಾಗಿ ಕುಲಪತಿಗಳಾದ ತಾವುಗಳು ಈ ಫಲಿತಾಂಶವನ್ನು ತಡೆಹಿಡಿದು ಪುನರ್ ಪರಿಶೀಲನೆ ಮಾಡಿ ಯಾವುದೇ ವಿದ್ಯಾರ್ಥಿಗಳಿಗೆ ಅನ್ಯಾಯವಾಗದ ರೀತಿಯಲ್ಲಿ ಸರ್ಕಾರ ಮತ್ತು ಯುಜಿಸಿ ನಿಯಮಗಳನ್ನು ಪಾಲಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಉಜ್ವಲವಾಗುವ ರೀತಿಯಲ್ಲಿ ಫಲಿತಾಂಶವನ್ನು ಬಿಡುಗಡೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ವಿಶ್ವವಿದ್ಯಾನಿಲಯದ ಮುಂದೆ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಜಿಲ್ಲಾ ಸಂಚಾಲಕ ಸಮಿತಿ ಕಲ್ಬುರ್ಗಿ ಒತ್ತಾಯಿಸಿದೆ.
ಈ ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ್ ರಾಜ್ಯ ಪದಾಧಿಕಾರಿ ರಮೇಶ ವೀರಾಪೂರು, ಜಿಲ್ಲಾ ಸಂಚಾಲಕ ರವಿ, ಜಿಲ್ಲಾ ಮುಖಂಡರಾದ ಸುಜಾತ, ಶಶಿಕಲಾ, ಸಂಪೂರ್ಣ, ರಾಕೇಶ, ಆನಂದ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.