ಹಾವೇರಿ: ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದನ್ನು ವಿರೋಧಿಸಿ ಹಾಗೂ ಶೀಘ್ರವಾಗಿ ಶುಚಿ ಸಂಭ್ರಮ ಕಿಟ್ ವಿತರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದ ದೇವರಾಜ ಅರಸು ಭವನದ ಎದುರು ಪ್ರತಿಭಟನೆ ಮಾಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮ್ಯಾನೇಜರ್ ಶಾಂತಪ್ಪ ದೊಡ್ಡಮನಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳ ನೀಡಬೇಕಾದ ಶುಚಿ ಸಂಭ್ರಮ ಕಿಟ್ 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಐದಾರು ತಿಂಗಳಿಂದ ನೀಡದೆ ವಿದ್ಯಾರ್ಥಿಗಳನ್ನು ಸೌಲಭ್ಯಗಳಿಂದ ವಂಚಿಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ( ) ಹಾವೇರಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಪ್ರತಿ ತಿಂಗಳು ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, 2 ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಬ್ರಷ್, ಪೆಸ್ಟ್, ಮೈಸೂರು ಸ್ಯಾಂಡಲ್, 2 ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಪೌಡರ್ ಇರುವ ಶುಚಿ ಸಂಭ್ರಮ ಕಿಟ್ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಒಂದು ಕಿಟ್ ವಿತರಣೆ ಮಾಡಲಾಗುತ್ತಿತ್ತು ಆದರೆ 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿ ಐದಾರು ತಿಂಗಳು ಕಳೆದರು ಈವರೆಗೂ ವಿದ್ಯಾರ್ಥಿ ಕಿಟ್ ವಿತರಣೆ ಮಾಡಿಲ್ಲ. ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಾ ಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಯಾವುದೇ ವಿಳಂಬವಿಲ್ಲದೆ ನಾಲ್ಕು ತಿಂಗಳ ಮುಂಚಿತವಾಗಿ ವಿತರಣೆ ಮಾಡಲಾಗುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಬಡಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಉತ್ತಮ ಅಭ್ಯಾಸಕ್ಕಾಗಿ ವಸತಿ ನಿಲದ ಆಸರೆಯೊಡ್ಡಿ ವಿದ್ಯಾರ್ಥಿಗಳು ಬಂದಿರುತ್ತಾರೆ. ವಿದ್ಯಾರ್ಥಿಗಳಿಗೆ ನೀಡಬೇಕಾದ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ನೀಡಬೇಕು ಬೇರೆ ಬೇರೆ ಇಲಾಖೆಗಳ ರೀತಿಯಲ್ಲಿ ವಿಳಂಬ ಮಾಡದೆ ಮುಂಚಿತವಾಗಿ ವಿತರಣೆ ಮಾಡಬೇಕು ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ನೀಡಬೇಕು ಹಾಗೂ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದು ಎಸ್ಎಫ್ಐ ಒತ್ತಾಯಿಸುತ್ತದೆ.
ಬಡ ವಿದ್ಯಾರ್ಥಿಗಳ ಸಣ್ಣಪುಟ್ಟ ಅನುದಾನದ ಶುಚಿ ಕಿಟ್ ನೀಡಲು ಸರ್ಕಾರ ಬಜೆಟ್ ಕೊರತೆ ಎಂದು ಹೇಳುತ್ತಿರುವಾಗ ಸಚಿವರು ತಮ್ಮ ಕಚೇರಿ ಮತ್ತು ಮನೆ ನವೀಕರಣ ಮಾಡಿಕೊಳ್ಳಲು ಒಬ್ಬಬ್ಬರು 50 ಲಕ್ಷ ರೂಪಾಯಿಗಳು ದುಂದು ವೆಚ್ಚಕ್ಕೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜ್ಯೋತಿ ಯಳವತ್ತಿಮಠ, ವಿದ್ಯಾ ಹಾದಿಮನಿ, ದೀಪಾ ನೂರಂದಪ್ಪನವರ, ವಿಜಯಲಕ್ಷ್ಮಿ ನಾಡರ, ಅನ್ನಪೂರ್ಣ ಹಿರೇಮಠ, ವರ್ಷಿತ ಮಡಿವಾಳರ, ಪಿರಾಂಬಿ ನದಾಫ್, ರಕ್ಷಿತಾ ಯತ್ನಳಿ, ಅರ್ಚನಾ ಕರಿಪುಟ್ಟಣ್ಣನವರ, ಕಾವ್ಯ ಕುರಬರ, ಅಕ್ಕಮ್ಮ ಬೂದಗಟ್ಟಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.