ಕೊಪ್ಪಳ: ಒಂದೊಂದು ಹಾಸ್ಟೆಲ್ ಗೆ ಕೇವಲ 10 ರಿಂದ 30 ವಿದ್ಯಾರ್ಥಿಗಳು ಮಾತ್ರ ಆಯ್ಕೆ ಆಗಿದ್ದು ಸುಮಾರು ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸ್ಟೆಲ್‌ಗಳಿಲ್ಲದೆ ಹಲವಾರು ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಆಗುತ್ತಿದ್ದು ಆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಅಗತ್ಯವಾಗಿ ನೀಡಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.
ಹಾಸ್ಟೆಲ್ ಸಮಸ್ಯೆಯ ಹಿನ್ನಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಅರ್ಜಿ ಹಾಕಿದ ಎಲ್ಲಾ ಒಬಿಸಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡಲು ಆಗ್ರಹಿಸಿ ಎಸ್‌ಎಫ್‌ಐ ಸಚಿವರಿಗೆ ಮನವಿ ಸಲ್ಲಿಸಿದೆ. ಆಗಸ್ಟ್ 7ರ ಸೋಮವಾರದಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಿಯವರನ್ನು ಕಾರಟಗಿಯ ನಿವಾಸದಲ್ಲಿ ಭೇಟಿ ಮಾಡಿದ್ದ ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಮನವಿ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ: ತುಮಕೂರು ವಿ.ವಿ:ಕಾಡುಗೊಲ್ಲ ಸಮುದಾಯದ ಮಹಿಳೆ ಎಂಎಸ್ಸಿ ಗಣಿತ ವಿಭಾಗದಲ್ಲಿ ಮೊದಲ ಶ್ರೇಣಿ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅಮರೇಶ ಅವರು, “ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಿಯುಸಿ ವಿಭಾಗದಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಬೇಕು ಎಂದು ಸಂಬಂಧಪಟ್ಟ ಇಲಾಖೆಗೆ ಅರ್ಜಿಯನ್ನು ಹಾಕಿರುತ್ತಾರೆ. ಆದರೆ ವಾಸ್ತವದಲ್ಲಿ ಒಂದು ಹಾಸ್ಟೆಲ್ ಗೆ ಕೆವಲ 10 ರಿಂದ 30 ವಿದ್ಯಾರ್ಥಿಗಳು ಮಾತ್ರ ಆಯ್ಕೆ ಆಗಿದ್ದು ಸುಮಾರು ಸಾವಿರಾರು ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯದಿಂದ ವಂಚಿತರಾಗಿದ್ದಾರೆ” ಎಂದು ತಿಳಿಸಿದ್ದಾರೆ.
“ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಕೊಪ್ಪಳ ಮತ್ತು ಗಂಗಾವತಿ ನಗರದಲ್ಲಿ ಅತಿ ಹೆಚ್ಚು ಕಾಲೇಜ್ ಗಳು ಇರುವುದರಿಂದ ದೂರದ ಗ್ರಾಮಗಳಿಂದ ಹಾಗೂ ವಿವಿಧ ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ನಗರಗಳಿಗೆ ಬಂದಿದ್ದಾರೆ. ಇನ್ನು ಜಿಲ್ಲೆಯ ದೂರದ ಹಳ್ಳಿಗಳಿಂದ ನಗರ ಪ್ರದೇಶಕ್ಕೆ ಶಿಕ್ಷಣ ಕಲಿಯಲು ದಾಖಲಾತಿ ಮಾಡಿಸಿದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಸಮರ್ಪಕವಾಗಿ ಬಸ್ ಸೌಲಭ್ಯ ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ದಿನನಿತ್ಯ ಬೆಳಿಗ್ಗೆ ತರಗತಿಯ ಒಂದು ಕ್ಲಾಸ್ ತಪ್ಪಿ ಹೋಗುತ್ತಿದೆ. ಈ ರೀತಿಯಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆ ಆಗುತ್ತಿದ್ದು ಆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಅಗತ್ಯವಾಗಿ ಬೇಕಾಗಿದೆ” ಎಂದು ಹೇಳಿದ್ದಾರೆ.
“ಸಮಾಜ ಕಲ್ಯಾಣ ಇಲಾಖೆಯು ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯ ಕಲ್ಪಿಸಿಕೊಡುತ್ತದೆ. ಅದೇ ಮಾದರಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕೂಡಾ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕಿದೆ. ಇಲ್ಲದೆ ಇದ್ದಲ್ಲಿ ಹಾಸ್ಟೆಲ್ ವಂಚಿತ ವಿದ್ಯಾರ್ಥಿಗಳಿಗೆ ಕೊಡುವ ವಿದ್ಯಾ ಶ್ರೀ ಯೋಜನೆಯ ಹಣದಲ್ಲಿ ಹಾಸ್ಟೆಲ್ ಸೌಲಭ್ಯ ಕಲ್ಪಸಿಲು ಸಂಬಂಧಿಸಿದ ಇಲಾಖೆಗೆ ಸೂಚಿಸಿ” ಎಂದು ಎಸ್‌ಎಫ್‌ಐ ಸಂಘಟನೆಯ ರಾಜ್ಯಾಧ್ಯಕ್ಷ ಅಮರೇಶ ಕಡಗದ ಹೇಳಿದ್ದಾರೆ.
ಸಚಿವರ ಭೇಟಿಯ ವೇಳೆ ಎಸ್‌ಎಫ್‌ಐ ತಾಲ್ಲೂಕು ಅಧ್ಯಕ್ಷ ಗ್ಯಾನೇಶ ಕಡಗದ, ಮುಂಖಡರಾದ ಸೋಮನಾಥ, ರಾಜಭಕ್ಷಿ, ಹನುಮಂತ ಇತರರು ಇದ್ದರು.
ವಿಡಿಯೊ ನೋಡಿ: ಬಾಕಿ ಬಿಲ್ ಪಾವತಿಗೆ ವಿಳಂಬ : “ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್”– ಸರ್ಕಾರಕ್ಕೆ ಖಡಕ್ ಎಚ್ಚರಿಕೆ