ಬೆಂಗಳೂರು:ರಾಜ್ಯ ಸರ್ಕಾರ ಆರರಿಂದ ಹತ್ತನೇ ತರಗತಿವರೆಗಿನ ಕನ್ನಡ ಮತ್ತು ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಕೆಲವು ಪಾಠಗಳನ್ನು ಸೇರ್ಪಡೆ ಮಾಡಲು ತಿದ್ದುಪಡಿ/ ಸೇರ್ಪಡೆಗೆ ಆದೇಶ ಮಾಡಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್‌ಎಫ್ಐ ರಾಜ್ಯ ಸಮಿತಿಯು ಸ್ವಾಗತಿಸಿದೆ.
ಕಳೆದ ವರ್ಷ ಅಂದಿನ ಬಿಜೆಪಿ ಸರ್ಕಾರ ಆರರಿಂದ ಹತ್ತನೇ ತರಗತಿವರೆಗೆ ಕೆಲವು ಪಾಠಗಳನ್ನು ತಿದ್ದುಪಡಿ/ ಸೇರ್ಪಡೆ ಮಾಡುವುದರ ಮೂಲಕ ಪಠ್ಯ ಪರಿಷ್ಕರಣೆ ಮಾಡಿ ವಿದ್ಯಾರ್ಥಿಗಳ ಮನಸ್ಸಿನೊಳಗೆ ಕೋಮು ಭಾವನೆಯ ವಿಷ ಬೀಜ ಬಿತ್ತಲು ಹಾಗೂ ಮಹಿಳೆಯರನ್ನು ಕೇವಲ ಭೋಗದ ವಸ್ತು ಹಾಗೂ ಮನೆ ಕೆಲಸಕ್ಕೆ ಸೀಮಿತ ಎಂಬ ಅರ್ಥದಲ್ಲಿ ಇರುವಂತ ಕೆಲವು ಪಾಠ, ಗದ್ಯವನ್ನು ಕೈ ಬಿಡುವುದರ ಮೂಲಕ ಸಮಾಜದಲ್ಲಿ ಪ್ರೀತಿ,ಶಾಂತಿ, ಹಾಗೂ ಸಹೋದರತ್ವವನ್ನು ಬೆಳೆಸುವಂತಹ ಕೆಲವು ಪಾಠಗಳನ್ನು ಸೇರ್ಪಡೆ ಮಾಡಿ ಸುತ್ತೋಲೆ ಹೋರಡಿಸಿರುವುದು ಸ್ವಾಗತಾರ್ಹ ಎಂದು ಎಸ್‌ಎಫ್‌ಐ ತಿಳಿಸಿದೆ.
ಇದನ್ನೂ ಓದಿ:ಪಠ್ಯ ಪುಸ್ತಕ ಪರಿಷ್ಕರಣೆ : ಸಮಾನ ಮನಸ್ಕರು ನೀಡಿದ ಮನವಿಯನ್ನು ಪುರಸ್ಕರಿಸಲು ಎಸ್ ಎಫ್ ಐ ಆಗ್ರಹ
ಈ ಕುರಿತು ಕಳೆದ ವರ್ಷ ಎಸ್‌ಎಫ್‌ಐ ಸಂಘಟನೆ ಸೇರಿದಂತೆ ಪ್ರಗತಿಪರ ಹೋರಾಟಗಾರರು ಹಾಗೂ ಸಂಘಟನೆಗಳು ನಿರಂತರ ಹೋರಾಟ ಮಾಡಿದ್ದರು ಕಳೆದ ವರ್ಷ ಬಿಜೆಪಿ ಸರ್ಕಾರ ಕೈ ಬಿಟ್ಟಿರುವ ಬಹುತೇಕ ಎಲ್ಲಾ ಪಾಠಗಳನ್ನು ಇಂದಿನ ಕಾಂಗ್ರೆಸ್ ಸರ್ಕಾರ ಮರುಸೇರ್ಪಡೆ ಮಾಡಿದೆ. ಆದರೆ 10ನೇ ತರಗತಿ ಪ್ರಥಮ ಭಾಷೆಯಾದ ಕನ್ನಡ ಗದ್ಯ ಭಾಗದಲ್ಲಿ ರಾಜ್ಯದ ಹಿರಿಯ ಸಾಹಿತಿ ದೇವನೂರು ಮಹಾದೇವರ “ಎದೆಗೆ ಬಿದ್ದ ಅಕ್ಷರ” ಎಂಬ ಪಾಠವು ರಾಜ್ಯ ಸರಕಾರ ಬಿಡುಗಡೆ ಮಾಡಿರುವ ತಿದ್ದುಪಡಿ/ಸೇರ್ಪಡೆ ಲಿಸ್ಟ್‌ನಲ್ಲಿ ಇಲ್ಲದಿರುವುದು ನೋವಿನ ವಿಷಯವಾಗಿದೆ. ಎದೆಗೆ ಬಿದ್ದ ಅಕ್ಷರ ಪಾಠವು ಅನೇಕ ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಿದೆ ಹಿಂದೆ ಬಿಜೆಪಿ ಸರ್ಕಾರದ ಕೋಮುವಾದದ ವಿರುದ್ಧ ದೇವನೂರು ಮಹಾದೇವರವರು ಬಹಿರಂಗವಾಗಿ ಪ್ರತಿಭಟನೆಯನ್ನು ಮಾಡಿದ್ದರು ಹಾಗೂ ತಮ್ಮ ಪುಸ್ತಕವಾದ “ಎದೆಗೆ ಬಿದ್ದ ಅಕ್ಷರ”ಭಾಗವನ್ನು ಗದ್ಯಭಾಗದಲ್ಲು ಪ್ರಕಟಿಸಲು ನೀಡಿದ್ದ ಅನುಮತಿ ವಾಪಸ್ಸು ಪಡೆದಿದ್ದರು. ದೇವನೂರ ಮಹಾದೇವರವರ ಪುಸ್ತಕದ ಗದ್ಯಭಾಗ ಇಂದಿನ ತಿದ್ದುಪಡಿ/ಸೇರ್ಪಡೆ ಸುತ್ತೋಲೆಯಲ್ಲಿ ಇಲ್ಲದಿರುವುದು ನೋವುಂಟು ಮಾಡಿದೆ, ಕೂಡಲೇ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ ಇಲಾಖೆಯ ಸಚಿವರು ಗಮನಹರಿಸಿ 10ನೇ ತರಗತಿ ಕನ್ನಡ ಪ್ರಥಮ ಭಾಷೆ ವಿಷಯದಲ್ಲಿ ಸೇರ್ಪಡೆ ಮಾಡಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ, ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ, ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮ್ಯಾನಿ, ದಿಲೀಪ್ ಶೆಟ್ಟಿ, ಸೇರಿದಂತೆ ಇತರರು ಪತ್ರಿಕೆ ಪ್ರಕಟಣೆಯು ಮೂಲಕ ಆಗ್ರಹಿದ್ದಾರೆ.