ಚಿತ್ರದುರ್ಗ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನ ಕೋರ್ಟ್ ಮುಂದೂಡಿದೆ.
ಮುರುಘಾ ಸ್ವಾಮೀಜಿ ವಿರುದ್ಧ ಇಬ್ಬರು ವಿದ್ಯಾರ್ಥಿನೀಯರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಫೋಕ್ಸೋ ಕಾಯ್ದೆಯಡಿ ಮುರುಘಾ ಶ್ರೀಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮುರುಘಾ ಶ್ರೀಗಳು ಚಿತ್ರದುರ್ಗ 1ನೇ ಹೆಚ್ಚುವರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು(ಸೆಪ್ಟೆಂಬರ್ 01) ಸ್ವಾಮೀಜಿ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಚಿತ್ರದುರ್ಗ ಸೆಷನ್ ಕೋರ್ಟ್, ಶ್ರೀಗಳ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಅಂದ್ರೆ ಸೆಪ್ಟೆಂಬರ್ 2ಕ್ಕೆ ಮುಂದೂಡಿದೆ. ಅಲ್ಲದೇ ಆಕ್ಷೇಪಣೆ ಸಲ್ಲಿಸಲು ಪಿಪಿಗೆ ಅವಕಾಶ ನೀಡಿ ವಿಚಾರಣೆ ಮುಂದೂಡಿದೆ.
ಶುಕ್ರವಾರ ತಕರಾರು ಅರ್ಜಿ ಸಲ್ಲಿಕೆ : ಇನ್ನು ಈ ತಕರಾರು ಅರ್ಜಿ ಸಲ್ಲಿಸುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಾಲಕಿಯರ ಪರ ವಕೀಲ ಶ್ರೀನಿವಾಸ್, ಮುರುಘಾ ಶ್ರೀಗಳು ಯಾವ ಗ್ರೌಂಡ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೋ ಪರಿಶೀಲಿಸಿ ನಾಳೆ(ಶುಕ್ರವಾರ) ತಕರಾರು ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ. ನೊಂದ ಬಾಲಕಿಯರ ಪರವಾಗಿ ಕಾನೂನು ಪ್ರಾಧಿಕಾರದ ವಕೀಲರು ವಕಾಲತ್ತು ಹಾಕಿದ್ದರು. ನಾವು ಕೂಡ ವಕಾಲತ್ತು ಹಾಕಿದ್ದೇವೆ, ಬಾಲಕಿಯರು ನಮ್ಮನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದರು.
ನ್ಯಾಯಾಧೀಶರ ಮುಂದೆಯೇ ಬಾಲಕಿಯರು ನಮ್ಮನ್ನು ಅವರ ಪರ ವಕೀಲರಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಶರಣರ ಜಾಮೀನು ಅರ್ಜಿ ಬಗ್ಗೆ ಸಂತ್ರಸ್ತರಿಗೆ ಮತ್ತು ಪಿಪಿಗೆ ಇಂದು ನೋಟಿಸ್ ಬಂದಿತ್ತು. ಹಾಗಾಗಿ ಇಂದು ತಕರಾರು ಸಲ್ಲಿಸಲು ಅವಕಾಶ ಇರಲಿಲ್ಲ ಎಂದು ಮಾಹಿತಿ ನೀಡಿದರು.