ಮೈಸೂರು: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಸೇರಿದಂತೆ ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ವಿರುದ್ಧ ಇಲ್ಲಿನ ನಜರಾಬಾದ್ ಠಾಣೆಯಲ್ಲಿ ‘ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ’ (ಪೋಕ್ಸೋ) ಅಡಿ ಶುಕ್ರವಾರ ದೂರು ದಾಖಲಾಗಿದೆ.
ಪ್ರಕರಣದಲ್ಲಿ ಶರಣರು ಮೊದಲ ಆರೋಪಿಯಾಗಿದ್ದು, ಚಿತ್ರದುರ್ಗದಲ್ಲಿ ಮಠ ನಡೆಸುತ್ತಿರುವ ಅಕ್ಕಮಹಾದೇವಿ ವಸತಿ ನಿಲಯದ ವಾರ್ಡನ್ ರಶ್ಮಿ ಎರಡನೇ ಆರೋಪಿಯಾಗಿದ್ದಾರೆ. ಮಠದ ಬಸವಾದಿತ್ಯ (ಮರಿಸ್ವಾಮಿ) ಮೂರನೇ ಆರೋಪಿ. ಮಠದ ಭಕ್ತರೆನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
’ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿರುವುದಾಗಿ, ಅದಕ್ಕೆ ಉಳಿದ ಆರೋಪಿಗಳು ಸಹಕರಿಸಿರುವುದಾಗಿ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ‘ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾತ್ರಿ 10ರ ವೇಳೆಗೆ ಸಮಿತಿಯು ದೂರು ನೀಡುವಂತೆ ಅಧಿಕಾರಿಗೆ ಸೂಚಿಸಿತ್ತು. ಅದರಂತೆ ರಾತ್ರಿ 10.30ರ ವೇಳೆಗೆ ದೂರು ದಾಖಲಾಗಿದೆ. ಸದ್ಯ ಇಬ್ಬರು ಬಾಲಕಿಯರು ಒಡನಾಡಿ ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ : ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ರಾಜ್ಯದ ಪ್ರತಿಷ್ಠಿತ ಮಠದ ಸ್ವಾಮೀಜಿಯಿಂದ ಲೈಂಗಿಕ ಕಿರುಕುಳ : ದೂರು ದಾಖಲು
ಮಠದ ಪ್ರತಿಕ್ರಿಯೆ ಏನು?: ಚಿತ್ರದುರ್ಗ ಮುರುಘಾಮಠ ಪರ ವಕೀಲ ವಿಶ್ವನಾಥಯ್ಯ ಪ್ರತಿಕ್ರಿಯೆ ನೀಡಿದ್ದು, ಮಠದ ವಿರೋಧಿ ಶಕ್ತಿಗಳಿಂದ ಮುರುಘಾಶ್ರೀ ವಿರುದ್ಧ ದೂರು ನೀಡಿದ್ದಾರೆ ಎಂದಿದ್ದಾರೆ. “ಮಾಧ್ಯಮದ ಮೂಲಕ ದೂರು ದಾಖಲಾಗಿದ್ದು ತಿಳಿದಿದೆ. ಸದ್ಯ ಮುರುಘಾಶ್ರೀಗಳು ಮಾಧ್ಯಮಕ್ಕೆ ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಇಲ್ಲ. ಮುರುಘಾ ಶ್ರೀ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದೆ. ಬಾಲಕಿಯರ ತಲೆಕೆಡಿಸಿ ಮುರುಘಾಶ್ರೀ ವಿರುದ್ಧ ದೂರು ನೀಡಲಾಗಿದೆ. ಈ ಬಗ್ಗೆ ಮುರುಘಾಶ್ರೀಗಳು ನಮ್ಮ ಬಳಿ ಹೇಳಿದ್ದಾರೆ. ಪ್ರಕರಣದ ಬಗ್ಗೆ ಕಾನೂನು ಹೋರಾಟ ಮಾಡಲಾಗುವುದು. ಸುಳ್ಳು ದೂರು ನೀಡಿದವರು ಕೇಸ್ ವಾಪಸ್ ಪಡೆಯಲಿ. ಮಠದ ಹಾಸ್ಟೆಲ್ ವಾರ್ಡನ್ ರಿಂದ ಮಾಜಿ ಶಾಸಕ ಎಸ್ ಕೆ ಬಸವರಾಜನ್ ವಿರುದ್ಧ ಕೇಸ್ ವಿಚಾರ ತಿಳಿದಿದೆ. ಈ ಬಗ್ಗೆ ಮಹಾತಿ ಇದೆ, ಪೂರ್ಣ ವಿವರ ತಿಳಿದಿಲ್ಲ,” ಎಂದು ಪ್ರತಿಕ್ರಿಯಿಸಿದ್ದಾರೆ.