ಹೋಟೆಲ್​ಗೆ ನುಗ್ಗಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪೊಲೀಸ್‌ ಕಾನ್ಸ್‌ಟೇಬಲ್

  • ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿ ನಡೆದ ಘಟನೆ
  • ಸಂತ್ರಸ್ತ‌ ಮಹಿಳೆಯೊಂದಿಗೆ ಅಸಭ್ಯವರ್ತನೆ ತೋರಿದ ಪೊಲೀಸ್ ಕಾನ್‌ಸ್ಟೇಬಲ್‌
  • ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು 

ತುಮಕೂರು: ಹೋಟೆಲ್​ ನಡೆಸುತ್ತಿದ್ದ ಮಹಿಳೆಯ ಮೇಲೆ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಆತಂಕಕಾರಿ ಘಟನೆ ಬುಧವಾರ (ಜೂನ್​29) ಬೆಳಗ್ಗೆ 10 ಗಂಟೆಗೆ ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಎಚ್​.ಎನ್​. ಮಂಜುನಾಥ್ (ಮಿಲ್ಟ್ರಿ) ಅತ್ಯಾಚಾರಕ್ಕೆ ಯತ್ನಿಸಿದ ಪೇದೆ. ಈತ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್​ಟೇಬಲ್​ ಆಗಿ ಸೇವೆ ಸಲ್ಲಿಸುತ್ತಿದ್ದ. ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದ್ದು, ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಿಬ್ಬನಹಳ್ಳಿ ಪೊಲೀಸರು ಕಳುಹಿಸಿದ್ದಾರೆ. ಮಂಜುನಾಥ್​ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾನೆ. ಆರ್ಮಿ ಕೆಲಸ ಬಿಟ್ಟು, ಕಾನ್ಸ್​ಟೇಬಲ್​ ಆಗಿದ್ದ.

ಇದನ್ನೂ ಓದಿ : ಪ್ರಾಧ್ಯಾಪಕನಿಂದ ವಿದ್ಯಾರ್ಥಿನಿಗೆ ಅಶ್ಲೀಲ ಸಂದೇಶ

ಸಂತ್ರಸ್ತ‌ ಮಹಿಳೆ ಕಿಬ್ಬನಹಳ್ಳಿಯಲ್ಲಿ ಹೋಟೆಲ್​ ನಡೆಸಿಕೊಂಡಿದ್ದಾರೆ. ಬುಧವಾರ (ಜೂನ್​29) ಬೆಳಗ್ಗೆ ಮಹಿಳೆಯ ಗಂಡ ಹೋಟೆಲ್​ಗೆ ಪದಾರ್ಥಗಳನ್ನು ತರಲೆಂದು ತಿಪಟೂರಿಗೆ ಹೋದರು. ಈ ವೇಳೆ ತಿಂಡಿ‌ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಆರೋಪಿ ಮಂಜುನಾಥ್, ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸಹಕರಿಸದೇ ಹೋದರೆ, ಹೋಟೆಲ್ ಬಂದ್ ಮಾಡಿಸುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ. ಮಹಿಳೆ ಯಾವುದಕ್ಕೂ ಜಗ್ಗದಿದ್ದಾಗ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ. ಇದಾದ ಕೂಡಲೇ ಮಹಿಳೆ ತನ್ನ ಪತಿಗೆ ಕರೆ ಮಾಡಿ ಎಲ್ಲವನ್ನು ತಿಳಿಸಿದ್ದಾಳೆ. ತಕ್ಷಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಸಂತ್ರಸ್ತೆಯ ಪತಿ ದೂರು ದಾಖಲಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 354(ಎ), 354(ಬಿ), 448, 506, 509, ಹಾಗೂ SC, ST ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಯಿತು. ತಕ್ಷಣವೇ ಕಾನ್ಸ್​ಟೇಬಲ್ ಮಂಜುನಾಥ್​ನನ್ನು ಬಂಧಿಸಿದ ಕಿಬ್ಬನಹಳ್ಳಿ ಪೊಲೀಸರು, ಆತನನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *