ಕೋಲಾರ: ನೂರು ವರ್ಷದ ಇತಿಹಾಸವೊಂದಿರುವ ಕೋಲಾರದ ಮಿಷನ್ ಆಸ್ಪತ್ರೆಯೆಂದೆ ಹೆಸರಾಗಿರುವ ಭಾರತೀಯ ಮೆಥೋಡಿಸ್ಟ್ ಚರ್ಚ್ನ ಒಡೆತನದ ಇಟಿಸಿಎಂ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವೊಂದು ಕೇಳಿಬಂದಿದೆ.
ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ವಿದ್ಯಾರ್ಥಿನೀಯರು ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಅಂತಿಮ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿನಿಯರಿಗೆ ಆಡಳಿತಾಧಿಕಾರಿಯೇ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಬೆಳಿಕಿಗೆ ಬಂದಿದೆ.
ವಿದ್ಯಾರ್ಥಿನಿಯರು ಶುಲ್ಕದ ವಿಚಾರವಾಗಿ ಮಾತನಾಡಲು ಆಡಳಿತಾಧಿಕಾರಿ ಕೊಠಡಿಗೆ ತೆರಳಿದ ಸಂದರ್ಭದಲ್ಲಿ ಆಡಳಿತಾಧಿಕಾರಿ ಡಾ.ಜಾನ್ಸನ್ ಕುಂದಾರ್ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ತಾನು ಹೇಳಿದ ಹಾಗೆ ಕೇಳಿದರೆ ಶುಲ್ಕ ಪಾವತಿಸುವ ಅಗತ್ಯವಿರುವುದಿಲ್ಲವೆಂದು ಹೇಳಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಜಾನ್ಸನ್ ಕುಂದರ್ ಅವರು ಇಟಿಸಿಎಂ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಿಂದ ಆಸ್ಪತ್ರೆ ಹಾಗೂ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೇ 26 ರಂದು ಇಬ್ಬರು ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತನೆ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಗಸ್ಟ್ 30 ರಂದು ದೂರು ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.
ಇನ್ನು ದೂರು ದಾಖಲಾಗುತ್ತಿದ್ದಂತೆ ಜಾನ್ಸನ್ ಕುಂದರ್ ಪರಾರಿಯಾಗಿದ್ದಾರೆ. ತಲೆಮಾರಿಸಿಕೊಂಡಿರುವ ಜಾನ್ಸನ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಜೊತೆಗೆ ಜಾನ್ಸನ್ ಅವರ ಮೇಲೆ ಈಗಾಗಲೇ ಹಲವಾರು ಆರೋಪಗಳು ಕೇಳಿ ಬಂದಿವೆ. ಇತ್ತೀಚೆಗಷ್ಟೆ ಆರ್ಥಿಕ ಅವ್ಯವಹಾರ ಆರೋಪದಡಿ ಜಾನ್ಸನ್ ಆಡಳಿತಾಧಿಕಾರಿ ಹುದ್ದೆ ಕಳೆದುಕೊಂಡಿದ್ದರು ಎನ್ನಲಾಗಿದೆ.
ಜಾನ್ಸನ್ ಪರವಾಗಿರುವ ಕೆಲವರು ಹೇಳುವಂತೆ, ಅವರು ಇಟಿಸಿಎಂ ಆಸ್ಪತ್ರೆಗೆ ಆಡಳಿತಾಧಿಕಾರಿಯಾದ ಮೇಲೆ ಅತ್ಯುತ್ತಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿದೆ. ಅದನ್ನು ಸಹಿಸದ ಕೆಲವು ಮಂದಿ ಭಾರತೀಯ ಮೆಥೋಡಿಸ್ಟ್ ಚರ್ಚ್ ಗೆ ಸಂಬಂಧಿಸಿದ ಆಸ್ತಿಪಾಸ್ತಿಯನ್ನು ನುಂಗಿ ಹಾಕಲು ಸಂಚು ಮಾಡಿದ್ದು, ಜಾನ್ಸನ್ ಅವರನ್ನು ಹೊರಹಾಕಲು ಈ ರೀತಿ ಮಾಡಿದ್ದಾರೆ ಎಂದಿದಾರೆ.