ಉತ್ತರ ಭಾರತದಲ್ಲಿ ತೀವ್ರ ಚಳಿ: ಕಾನ್ಪುರದಲ್ಲಿ 98 ಜನ ಸಾವು !

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ನಗರದಲ್ಲಿ ಹೃದಯಾಘಾತದಿಂದ ಮೃತಪಡುವವರ ಸಂಖ್ಯೆ ಏಕಾಏಕಿ ಹೆಚ್ಚಾಗಿದೆ. ಅದರಲ್ಲೂ, ಕಳೆದ ಒಂದು ವಾರದಲ್ಲಿ ಹೃದಯಾಘಾತದಿಂದ 98 ಜನ ಮೃತಪಟ್ಟಿದ್ದಾರೆ. ಜನವರಿ 7ರಂದು 14 ಜನ ಮೃತಪಟ್ಟಿದ್ದು, ನಗರದಾದ್ಯಂತ ಆತಂಕ ಹೆಚ್ಚಾಗಿದೆ.

ಶೀತ ಗಾಳಿ, ಭಾರಿ ಚಳಿಯಿಂದಾಗಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಎಲ್‌ಪಿಎಸ್‌ ಹಾರ್ಟ್‌ ಡಿಸೀಸ್‌ ಇನ್‌ಸ್ಟಿಟ್ಯೂಟ್‌ನಲ್ಲಿಯೇ ಕಳೆದ ಶನಿವಾರ 14 ಜನ ಮೃತಪಟ್ಟಿದ್ದಾರೆ. ಅತಿಯಾದ ಚಳಿಯಿಂದಾಗಿ ಇವರಿಗೆ ಹೃದಯಾಘಾತ ಸಂಭವಿಸಿದ್ದು, ಆರು ಜನ ಚಿಕಿತ್ಸೆ ನೀಡುವಾಗಲೇ ಮೃತಪಟ್ಟರೆ, ಉಳಿದವರು ಆಸ್ಪತ್ರೆಗೆ ಕರೆತರುವುದರ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಕಾನ್ಪುರದಲ್ಲಿ ವರದಿಯಾದ 98 ಸಾವುಗಳಲ್ಲಿ 44 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ರೋಗಿಗಳು ಚಿಕಿತ್ಸೆಗೆ ಮುಂಚೆಯೇ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿಯನ್ನು L.P.S ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದೆ. ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಕಳೆದೊಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕ ಮತ್ತು ಹೊರರೋಗ ವಿಭಾಗದಲ್ಲಿ ದಾಖಲಾಗಿದ್ದಾರೆ.

ಆಘಾತಕಾರಿ ಸಂಗತಿ ಏನೆಂದರೆ, ತೀವ್ರ ಶೀತದಿಂದ ಬಳಲುತ್ತಿರುವ ಹದಿನಾಲ್ಕು ರೋಗಿಗಳು ಹೃದಯಾಘಾತದಿಂದ ಶನಿವಾರ ಮೃತಪಟ್ಟರೆ, ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಗೆ, ಮೊದಲೇ ಈ ಹೃದಯಾಘಾತದಿಂದ ಸಾವನ್ನಪ್ಪಿದ 8 ಜನ ರೋಗಿಗಳನ್ನು ಕರೆತರಲಾಗಿತ್ತು. ಕಳೆದ 24 ಗಂಟೆಯಲ್ಲಿ ನಗರದ ಎಸ್‌ಪಿಎಸ್‌ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 14 ರೋಗಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಖ್ಯವಾಗಿ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ.

ವಿಪರೀತ ಚಳಿಯಿಂದಾಗಿ ಮಾನವನ ದೇಹದಲ್ಲಿನ ರಕ್ತ ಪರಿಚಲನೆಯಲ್ಲಿ ಏರುಪೇರಾಗುತ್ತದೆ. ರಕ್ತದಲ್ಲಿ ಒತ್ತಡವು ಹೆಚ್ಚು-ಕಡಿಮೆ ಆಗುವುದರಿಂದ ನಮ್ಮ ಹೃದಯ ಮತ್ತು ಮಿದುಳಿನ ಕೆಲಸ ನಿಧಾನಗತಿಗೆ ಬರುತ್ತದೆ. ಕೊನೆಗೆ, ರಕ್ತ ಹೆಪ್ಪುಗಟ್ಟಿ ಕಾರ್ಯ ನಿಲ್ಲಿಸುತ್ತದೆ. ಇದರಿಂದ ಹೃದಯಾಘಾತವಲ್ಲದೇ ಮೆದುಳು ಕೂಡಾ ನಿಷ್ಕ್ರಿಯವಾಗುತ್ತದೆ. ಹೀಗಾಗಿ ಜನರು ಸಾವನ್ನಪ್ಪುತ್ತಾರೆ. ಈ ಹೃದಯಾಘಾತ ವಯಸ್ಸಿನ ಮಿತಿಯಿಲ್ಲದೆ ನವಜಾತ ಶಿಶುವಿನಿಂದ ಹಿಡಿದು ಮಧ್ಯವಯಸ್ಕರಲ್ಲದೇ ವೃದ್ಧರವರೆಗೂ ಸಂಭವಿಸುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಾರೆ.

 

Donate Janashakthi Media

Leave a Reply

Your email address will not be published. Required fields are marked *