7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಚಿವ ಸಂಪುಟ ಸಭೆ ನಿರ್ಧಾರ

ಬೆಂಗಳೂರು: ಕರ್ನಾಟಕದ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಗುಡ್‌ನ್ಯೂಸ್‌ ನೀಡಿದೆ. ಆಗಸ್ಟ್‌ 1 ರಿಂದ 7 ನೇ ವೇತನ ಆಯೋಗದ ಶಿಫಾರಸುಗಳನ್ನು ಜಾರಿ ಮಾಡುವುದಾಗಿ ನಿರ್ಧರಿಸಲಾಗಿದೆ. ಈ ಮೂಲಕ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆ ಈಡೇರಲಿದೆ.

ಸೋಮವಾರ ಸಂಜೆ ವಿಧಾನಸೌಧದಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ. ಸದ್ಯ ಈ ಬಗ್ಗೆ ಸಿಎಂ ಕಚೇರಿಯಿಂದ ಮಾಹಿತಿ ಬಂದಿದ್ದು, “2024 ಆಗಸ್ಟ್ 1 ರಿಂದ 7 ನೇ ವೇತನ ಆಯೋಗ ಜಾರಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ ” ಎಂದು ತಿಳಿಸಿದ್ದಾರೆ.

ಪರಿಷ್ಕೃತ ವೇತನ ಶ್ರೇಣಿ ಜಾರಿ ಮಾಡದೇ ಇದ್ದರೆ ಇದೇ ತಿಂಗಳ 29ರ ಬಳಿಕ ಕೆಲಸ ಸ್ಥಗಿತದ ಮುಷ್ಕರ ನಡೆಸುವುದಾಗಿ ರಾಜ್ಯ ಸರ್ಕಾರಿ ನೌಕರರ ಸಂಘ ಎಚ್ಚರಿಸಿತ್ತು. ಅಲ್ಲದೇ, ಎರಡು ಹಂತಗಳಲ್ಲಿ ಪ್ರತಿಭಟನೆಯನ್ನೂ ನಡೆಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ, ಸೋಮವಾರ ನಡೆದ ಸಚಿವ ಸಂಪುಟ ಸಭೆ ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಕೈಗೊಂಡಿದೆ.

ಶೇ 10.5 ವೇತನ ಪರಿಷ್ಕರಣೆ : ವೇತನ ಆಯೋಗವು ಶೇ.27.5 ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಹಿಂದಿನ ಸರಕಾರದ ಅವಧಿಯಲ್ಲಿ ಶೇ.17ರ ಮಧ್ಯಂತರ ಪರಿಹಾರ ನೀಡಲಾಗಿದ್ದು, ಅಂತಿಮವಾಗಿ ಶೇ 10.5 ವೇತನ ಪರಿಷ್ಕರಣೆಯಾಗಲಿದೆ.  ಈಗಾಗಲೇ ಶೇ 17ರಷ್ಟು ವೇತನ ಕೊಡಲಾಗುತ್ತಿದೆ. ಅದಕ್ಕಾಗಿ, ವಾರ್ಷಿಕ ₹10 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತಿದೆ. ಆಯೋಗದ ಶಿಫಾರಸಿನಂತೆ ಶೇ 27.50ಕ್ಕೆ ಹೆಚ್ಚಿಸಿದರೆ ವಾರ್ಷಿಕ ಸುಮಾರು ₹8 ಸಾವಿರ ಕೋಟಿ ಹೆಚ್ಚುವರಿಯಾಗಿ ಬೇಕಾಗುತ್ತದೆ ಎನ್ನಲಾಗಿದೆ.

ಇದನ್ನೂ ಓದಿಇಡಿಗಂಟಿಗಾಗಿ ಬಿಸಿಯೂಟ ನೌಕರರ ಅನಿರ್ಧಿಷ್ಟ ಧರಣಿ

ಶಿಫಾರಸ್ಸಿನ ಪ್ರಮುಖ ಅಂಶಗಳು

  • ಮೂಲ ವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಕನಿಷ್ಠ ಮೂಲವೇತನವನ್ನು 17 ಸಾವಿರ ರೂ. ಗಳಿಂದ 27 ಸಾವಿರ ರೂಗಳಿಗೆ ಹೆಚ್ಚಿಸುವಂತೆ ಶಿಫಾರಸು
  • ದಿ. 01-07-2022ಕ್ಕೆ ಇದ್ದಂತಹ ಶೇ. 31 ತುಟ್ಟಿಭತ್ಯೆ ವಿಲೀನ ಹಾಗೂ ಮೇಲಿನ 27.50 ರಷ್ಟು ಸೇರಿ ಒಟ್ಟು ಶೇ. 58.50ರಷ್ಟು ಮೂಲ ವೇತನದಲ್ಲಿ ಹೆಚ್ಚಳ ಮಾಡಲು, ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನವನ್ನು ರೂ. 17,000 ರಿಂದ 27,000 ಕ್ಕೆ ಹಾಗೂ ಗರಿಷ್ಠ ಮೂಲ ವೇತನವನ್ನು ರೂ. 1,04.600-00 80 ರೂ. 2,41,200-00ಕ್ಕೆ ಹೆಚ್ಚಳ ಮಾಡಲು ಶಿಫಾರಸು
  • ಸರ್ಕಾರಿ ನೌಕರರಿಗೆ ಹೊಸ ವೇತನ ಶ್ರೇಣಿ ಹಾಗೂ ಫಿಟ್‌ಮೆಂಟ್ ಸೌಲಭ್ಯವನ್ನು ದಿ: 01-07-2022 ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಲು ಶಿಫಾರಸು
  • ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ ರೂ. 400 ರಿಂದ ರೂ. 650ಕ್ಕೆ ಹಾಗೂ ಗರಿಷ್ಠ ರೂ. 3,100 ರಿಂದ ರೂ. 5,000ಕ್ಕೆ ಹೆಚ್ಚಳಕ್ಕೆ ನೀಡಲು ಶಿಫಾರಸು
  • ಗ್ರೂಪ್ ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ಹಾಲಿ ಇರುವ ಜಿ.ಐ.ಎಸ್. ಮಾಸಿಕ ವಂತಿಗೆಯನ್ನು ಶೇ. 100 ಕ್ಕೆ ಹೆಚ್ಚಳ ಮತ್ತು ಗ್ರೂಪ್ ‘ಎ’ ಮತ್ತು ‘ಬಿ’ ವೃಂದಕ್ಕ ಶೇ. 50ಕ್ಕೆ ಹೆಚ್ಚಿಸಲು, ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ಮನೆ ಬಾಡಿಗೆ ಭತ್ಯೆಗಳನ್ನು ಕ್ರಮವಾಗಿ ‘ಎ’ ವರ್ಗದ ನಗರಗಳಿಗೆ ಶೇ.20, ‘ಬಿ’ ವರ್ಗದ ನಗರಗಳಿಗೆ ಶೇ.15, ‘ಸಿ’ ವರ್ಗದ ಪ್ರದೇಶಗಳಿಗೆ ಶೇ.7.5 ಶಿಫಾರಸು.
  • ಪರಿಷ್ಕರಣೆಯಿಂದ ಹೆಚ್ಚಳವಾಗುವ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆಗಳನ್ನು ಕ್ರಮವಾಗಿ ಮತ್ತು ‘ಬಿ’ ವೃಂದದ ನೌಕರರಿಗೆ ರೂ. 600 ರಿಂದ ರೂ. 900ಕ್ಕೆ ಮತ್ತು ‘ಸಿ’ ಮತ್ತು ‘ಡಿ’ ವೃಂದದ ನೌಕರರಿಗೆ ರೂ. 500ರಿಂದ ರೂ. 750ಕ್ಕೆ ಹೆಚ್ಚಳಕ್ಕೆ ಶಿಫಾರಸು.
  • ಸಮವಸ್ತ್ರ ಭತ್ಯೆ, ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯೆ, ದಿನಭತ್ಯೆ ಮತ್ತು ವರ್ಗಾವಣೆ ಅನುದಾನವನ್ನು ಹಾಲಿ ಇರುವ ದರಗಳಿಗೆ ಶೇ.25 ಹೆಚ್ಚಳಕ್ಕೆ ಮತ್ತು ವಿಕಲಚೇತನ ನೌಕರರಿಗೆ ಹಲವಾರು ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳಕ್ಕೆ ಶಿಫಾರಸ್ಸು. ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಭತ್ಯೆಯನ್ನು ಪ್ರತಿ ತಿಂಗಳು ರೂ. 1000ರಿಂದ ರೂ. 2000ಕ್ಕೆ ಹೆಚ್ಚಳಕ್ಕೆ ಶಿಫಾರಸು.
  • ನಾಲ್ಕು ಚಕ್ರ ವಾಹನ ಖರೀದಿ ಮುಂಗಡವನ್ನು ರೂ. 3 ಲಕ್ಷದಿಂದ ರೂ. 6 ಲಕ್ಷಕ್ಕೆ ಹಾಗೂ ದ್ವಿ-ಚಕ್ರ ವಾಹನಕ್ಕೆ ರೂ. 50 ಸಾವಿರದಿಂದ ರಿಂದ ರೂ. 80 ಸಾವಿರ ರೂ.ಗಳಿಗೆ ಹೆಚ್ಚಳಕ್ಕೆ ಶಿಫಾರಸು.
  • ಗೃಹನಿರ್ಮಾಣ ಮುಂಗಡವನ್ನು ‘ಎ’ ವೃಂದಕ್ಕೆ 65 ರೂ. ಲಕ್ಷ ಮತ್ತು ಇತರೆ ವೃಂದದ ನೌಕರರಿಗೆ ರೂ. 40 ಲಕ್ಷಗಳಿಗೆ ಹೆಚ್ಚಳಕ್ಕೆ ಶಿಫಾರಸು ಮಾಡಲಾಗಿತ್ತು.
  • ನೌಕರರ ಸೇವಾವಧಿಯಲ್ಲಿ ಮೂರು ಭಾರಿ ಎಲ್.ಟಿ.ಸಿ. ಸೌಲಭ್ಯಕ್ಕೆ ಅವಕಾಶ, ಗ್ರೂಪ್‌ ‘ಡಿ’ ಮತ್ತು ‘ಸಿ’ ವೃಂದದ ನೌಕರರಿಗೆ ಹಾಲಿ ಇದ್ದಂತಹ ವೈದ್ಯಕೀಯ ಭತ್ಯೆ ರೂ. 200 ರಿಂದ ರೂ. 500 ಕ್ಕೆ ಹೆಚ್ಚಳಕ್ಕೆ ಶಿಫಾರಸು.
  • ಸರ್ಕಾರಿ ನೌಕರರ ಅವಲಂಬಿತ ಕುಟುಂಬ ಸದಸ್ಯರು ಅನಾರೋಗ್ಯದ ಸಂದರ್ಭದಲ್ಲಿ ಆರೈಕೆ ಮಾಡಲು ಶೇ. 50 ವೇತನದೊಂದಿಗೆ 180 ದಿನಗಳ ‘ಆರೈಕೆ ರಜೆ’ ಎಂಬ ಹೊಸ ಯೋಜನೆಗೆ ಶಿಫಾರಸು.
  • ಸರ್ಕಾರಿ ಸೇವೆಗೆ ಸೇರುವ 2 ತಿಂಗಳ ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಆರೈಕೆಗಾಗಿ 18 ವಾರಗಳ ಹೆರಿಗೆ ರಜೆಗೆ ಶಿಫಾರಸ್ಸು.
  • ಕೆಲಸದ ವಿರಾಮ ಸಮತೋಲನವನ್ನು ಸುಧಾರಿಸಲು ಹಾಗೂ ಸರ್ಕಾರಿ ನೌಕರರ ಕೆಲಸದ ಗುಣಮಟ್ಟವನ್ನು ಹೆಚ್ಚಿಸಲು ವಾರದ ಐದು ದಿನಗಳ ಕೆಲಸದ ಅವಧಿಯನ್ನು ಪರಿಚಯಿಸಲು ಶಿಫಾರಸು ಮಾಡಲಾಗಿದೆ.
  • ರಾಜ್ಯ ಸರ್ಕಾರಿ ನೌಕರರ ಆಡಳಿತ ಇಲಾಖೆಯ ಹಾಗೂ ಕ್ಷೇತ್ರ ಇಲಾಖೆಗಳ ನೌಕರರಿಗೆ ಗುಣಮಟ್ಟದ ತರಬೇತಿಗಾಗಿ ಸಮಗ್ರ ತರಬೇತಿಗೆ ಶಿಫಾರಸು ಮಾಡಿದೆ. ಈ ಮೇಲ್ಕಂಡ ಎಲ್ಲಾ ಸೌಲಭ್ಯಗಳು ರಾಜ್ಯ ಸರ್ಕಾರಿ ನೌಕರರಿಗೆ ನೀಡಿದ ರೀತಿಯಲ್ಲಿಯೇ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳ ಬೋಧಕೇತರ ನೌಕರರಿಗೂ ಅನ್ವಯಗೊಳಿಸಲು ಶಿಫಾರಸು ಮಾಡಲಾಗಿದೆ.
  • ಮಾಸಿಕ ಪಿಂಚಣಿಯ ಪ್ರಮಾಣವು ಅಂತಿಮ ಮೂಲ ವೇತನದ ಶೇ. 50 ರಷ್ಟು ಹಾಗೂ ಕುಟುಂಬ ಪಿಂಚಣಿಯು ಶೇ.30, ಮುಂದುವರೆದು, ಕನಿಷ್ಠ ಪಿಂಚಣಿ ರೂ. 13,500 ಹಾಗೂ ಗರಿಷ್ಠ ಪಿಂಚಣಿ ರೂ. 1,20,600-00ಕ್ಕೆ ಪರಿಷ್ಕರಿಸಿದೆ.
  • 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಹೆಚ್ಚುವರಿ ಶೇ. 10 ರಷ್ಟು ಶಿಫಾರಸ್ಸು ಮಾಡಿದೆ. ಪಿಂಚಣಿದಾರರಿಗೆ ‘ಸಂಧ್ಯಾಕಿರಣ’ ಎಂಬ ಆರೋಗ್ಯ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಶಿಫಾರಸ್ಸು ಮಾಡಿದೆ. ಅಲ್ಲಿಯವರೆಗೆ ಮಾಸಿಕ ರೂ. 500 ಗಳ ವೈದ್ಯಕೀಯ ಭತ್ಯೆ ನೀಡಲು ಶಿಫಾರಸು.
  • ಪಿಂಚಣಿದಾರರು ಮರಣ ಹೊಂದಿದಲ್ಲಿ ರೂ. 10,000 ಶವಸಂಸ್ಕಾರ ಮೊತ್ತವನ್ನು ನೀಡಲು ಶಿಫಾರಸು ಮಾಡಿದೆ.
  • ಸರ್ಕಾರ ಯಾವ ಯಾವ ಶಿಫಾರಸುಗಳನ್ನು ಜಾರಿಗೊಳಿಸಲಿದೆ ಎಂದು ಇಂದಿನ ಅಧಿವೇಶನದಲ್ಲಿ ತಿಳಿದು ಬರಲಿದೆ.

 

Donate Janashakthi Media

Leave a Reply

Your email address will not be published. Required fields are marked *