ಓಲಾ, ಊಬರ್, ರ‍್ಯಾಪಿಡೋ ಸೇವೆ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ

ಬೆಂಗಳೂರು: ಓಲಾ, ಉಬರ್, ರ‍್ಯಾಪಿಡೋ ಸಂಸ್ಥೆಗಳು ಆಟೋ ಚಾಲಕರ ಜೀವನಕ್ಕೆ ಕುತ್ತು ತಂದಿದ್ದು, ಏಳು ದಿನಗಳು ಒಳಗಾಗಿ  ಸಂಚಾರಿ ವ್ಯವಸ್ಥೆಯ ಅನಧಿಕೃತ ಅಂತರ್ಜಾಲ ಆಧಾರಿತ ಸೇವೆಗಳನ್ನು ರದ್ದುಗೊಳಿಸಿ ಸರ್ಕಾರವೇ ನೂತನ ತಂತ್ರಜ್ಞಾನವನ್ನು ಜಾರಿಗೆ ತಂದು ಆಟೋ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಬೆಂಗಳೂರು ಆಟೋ ಚಾಲಕರ ಸಂಘಸಂಸ್ಥೆಗಳ ಒಕ್ಕೂಟ ಆಗ್ರಹಿಸಿದೆ.

ಬೆಂಗಳೂರು ಪ್ರೆಸ್‌ ಕ್ಲಬ್‌ ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅಧ್ಯಕ್ಷ ಎಮ್. ಮಂಜುನಾಥ್ ಮಾತನಾಡಿ, ಸರ್ಕಾರ ಈ ಬಗ್ಗೆ ಗಮನಹರಿಸಿ ಜನಸ್ನೇಹಿ , ಚಾಲಕ ಸ್ನೇಹಿ ಆ್ಯಪ್‌ ಅಭಿವೃದ್ಧಿಪಡಿಸಿ ಸಹಕಾರಿ ತತ್ವದಡಿ ನಡೆಸಬೇಕು, ಇಲ್ಲದಿದ್ದಲ್ಲಿ ಒಕ್ಕೂಟದ ವತಿಯಿಂದ ಸಾರಿಗೆ ಮಂತ್ರಿಗಳ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಅನಧಿಕೃತ ಸೇವೆಗಳನ್ನು ನೀಡುವ ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ, ಸಾರಿಗೆ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುವಂತ ಆ್ಯಪ್‌ ಆಪ್ ಅನ್ನು ಅಭಿವೃದ್ಧಿಪಡಿಸಬೇಕೆಂದು ಆಗ್ರಹಿಸಿದ ಅವರು, ಸಾರ್ವಜನಿಕರು ಇನ್ನು ಮುಂದೆ ಶೋಷಣೆ ಮಾಡುವ ಆ್ಯಪ್‌ ಗಳನ್ನು ಉಪಯೋಗಿಸದಂತೆ ಸರ್ಕಾರ ಪ್ರಕಟಣೆ ಹೊರಡಿಸಬೇಕು ಎಂದು ಕೋರಿದರು.

ಬೆಂಗಳೂರು ನಗರದಲ್ಲಿ ಕಳೆದ 6 ದಶಕಗಳಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಡಿ ಆಟೋರಿಕ್ಷಾಗಳು ಹಾಗೂ ಇತ್ತೀಚಿನ 7-8 ವರ್ಷಗಳಿಂದ ಟ್ಯಾಕ್ಸಿ ಸೇವೆಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಾ ಬಂದಿವೆ. ಪ್ರಸ್ತುತ ಜಾಗತೀಕರಣ , ಡಿಜಿಟಲೀಕರಣ , ವಿದೇಶಿ ನೇರ ಬಂಡವಾಳದ ಆಕರ್ಷಣೆ ಮತ್ತು ಹೊಸ ಬದಲಾವಣೆಯಿಂದಾಗಿ ಸಾರಿಗೆ ಕ್ಷೇತ್ರದಲ್ಲಿ ಹಲವಾರು ಮಹತ್ತರವಾದ ಬದಲಾವಣೆಗಳು ಬಂದಿವೆ. ಅದರಲ್ಲಿ ಮುಖ್ಯವಾಗಿ ಆ್ಯಪ್‌ ಆಧಾರಿತ ಸಾರಿಗೆ ವ್ಯವಸ್ಥೆ ನೀಡುವ ಕಂಪನಿಗಳು ಒಳಗೊಂಡಿದೆ.

ಪ್ರಮುಖವಾಗಿ ಓಲಾ , ಊಬರ್ , ರ‍್ಯಾಪಿಡೋ, ಇತ್ಯಾದಿಗಳು ಇವುಗಳು ಹೊಸದಾಗಿ ಸಾರಿಗೆ ಕ್ಷೇತ್ರಕ್ಕೆ ಬಂದಾಗ ಯದ್ವಾ ತದ್ವಾ ಹಾಗೂ ಪ್ರಯಾಣಗಳನ್ನು ಪ್ರಯಾಣಿಕರಿಗೆ ಹಾಗೂ  ಚಾಲಕರಿಗೆ ಅನೇಕ ಆಕರ್ಷಣೆಗಳಿಗೆ ಒಳಪಡಿಸಿ ಆಮಿಷಗಳನ್ನೊಡ್ಡಿ ಒಟ್ಟಾರೆ ಸಾರಿಗೆ ವ್ಯವಸ್ಥೆಯಲ್ಲಿ ಸಾರಿಗೆ ಇಲಾಖೆ ಮತ್ತು ಸರ್ಕಾರದ ಹಿಡಿತ ಇಲ್ಲದಿರುವ ಹಾಗೆ ವ್ಯವಸ್ಥೆಯನ್ನು ಸಂಪೂರ್ಣ ಹಾಳುಗೆಡುವಿದವು ಎಂದು ದೂರಿದರು.

ಕಳೆದ 7-8 ವರ್ಷಗಳಿಂದ ನಿಯಮ ಬಾಹಿರವಾಗಿ ಆಟೋರಿಕ್ಷಾ ಚಾಲಕರೊಂದಿಗೆ ಕರಾರು ಒಪ್ಪಂದ ಮಾಡಿಕೊಂಡು ಇಲ್ಲಸಲ್ಲದ ಆಮಿಷಗಳನ್ನು ಒಡ್ಡಿರುವ ಸಂಸ್ಥೆಗಳು ಮೋಸಕ್ಕೆ ಮುಂದಾಗಿದೆ.

ಸಾರಿಗೆ ಇಲಾಖೆಯು ಹಲವಾರು ಸಂಘ ಸಂಸ್ಥೆಗಳ ಮತ್ತು ಪತ್ರಿಕೆಗಳ ಹಾಗೂ ಮಾಧ್ಯಮಗಳ ವರದಿಯನ್ನು ಗಮನಿಸಿ ಎಚ್ಚೆತ್ತುಕೊಂಡು ಸರ್ಕಾರದ ಘನತೆ ಕಾಪಾಡಿಕೊಳ್ಳಲು 2016ರಲ್ಲಿ ಜಾರಿಗೆ ತಂದಿರುವ ನಿಯಮಾವಳಿ  ನಿಬಂಧನೆಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌(ಎಆರ್‌ಡಿಯು) ಸಿ.ಎನ್.ಶ್ರೀನಿವಾಸ್ ಮಾತನಾಡಿ, ಚಾಲಕರಿಗೆ ದಂಡ ವಿಧಿಸುವ ಹಾಗೂ ಅಗ್ರಿಗೇಟರ್ ಮೂಲಕ ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳುವ ಸಾರಿಗೆ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು. ನಿಯಮ ಉಲ್ಲಂಘನೆಗಳ ಪರಿಶೀಲನೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಪಾದಿಸುತ್ತಾರೆ. ಆದರೆ ಓಲಾ ಮತ್ತು ಉಬರ್‌ನಂತಹ ಕಂಪನಿಗಳು ನೂರಾರು ಕೋಟಿಗಳಷ್ಟು ನಮ್ಮ ನ್ಯಾಯಯುತ ಗಳಿಕೆಯನ್ನು ಕಸಿದುಕೊಂಡಿವೆ. ನಾವು ಅವುಗಳ ಕ್ರಮಕೈಗೊಳ್ಳಲು ವರ್ಷಗಳಿಂದ ಒತ್ತಾಯಿಸುತ್ತಿದ್ದೇವೆ. ಆದರೆ ವಿಪರೀತ ದರದ ದೂರುಗಳನ್ನು ಪರಿಶೀಲಿಸಿದ ನಂತರ ಚಾಲಕರು ಸರ್ಕಾರವು ನಮಗೆ ಶಿಕ್ಷೆ ವಿಧಿಸುತ್ತಿದೆ ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಟೋ ರಿಕ್ಷಾ ಡ್ರೈವರ್ಸ್‌ ಯೂನಿಯನ್‌(ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ಸಿ.ಎನ್.ಶ್ರೀನಿವಾಸ್, ವಿವಿಧ ಆಟೋರಿಕ್ಷಾ ಚಾಲಕರ ಸಂಘಟನೆಯ ಮುಖಂಡರಾದ ಎನ್ ಮಾಯಾಲಗು, ರಘು ನಾರಾಯಣಗೌಡ, ಹರೀಶ್. ವಿ, ಚಂದ್ರಶೇಖರ್, ಜವರೇಗೌಡ ಮುಂತಾದವರು ಉಪಸ್ಥಿತರಿದ್ದರು.

ಸಾರಿಗೆ ಇಲಾಖೆಯಿಂದ ಆಟೋಗಳ ಜಪ್ತಿ

ಅಗ್ರೀಗೇಟರ್‌ಗಳಾದ ಓಲಾ, ಉಬರ್ ಕಂಪನಿಗಳು ಕ್ಯಾಬ್ ಸೇವೆಗೆ ಮಾತ್ರ ಅನುಮತಿ ಪಡೆದಿದ್ದರೂ ಆಟೋರಿಕ್ಷಾ ಸೇವೆಗಳನ್ನು ನೀಡುತ್ತಿವೆ. ಆದರೆ ಈ ಆಟೋಗಳು ಜನರಿಂದ ಸುಲಿಗೆ ಮಾಡುತ್ತಿವೆ ಎಂದು ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ  ಆಟೋಗಳನ್ನು ಜಪ್ತಿ ಮಾಡಲಾಗುತ್ತಿದೆ. ಸಾರಿಗೆ ಇಲಾಖೆಯ ಆರ್‌ಟಿಒ ಕ್ರಮದ ವಿರುದ್ಧ ಚಾಲಕರು ಕೆಂಡಮಂಡಲವಾಗಿದ್ದಾರೆ. ಹತ್ತು ವರ್ಷದಿಂದ ನಾವು ಬಾಡಿಗೆ ಆಟೋ ಓಡಿಸುತ್ತಿದ್ದೇವೆ. ಆ ವೇಳೆಯೇ ಓಲಾ, ಊಬರ್ ಕಂಪನಿಗಳು ಆಟೋ ಚಾಲಕರು ಹಾಗೂ ಪ್ರಯಾಣಿಕರು ಇಬ್ಬರಿಗೂ ಮೋಸ ಮಾಡುತ್ತಿವೆ ಎಂದು ಚಾಲಕರು ಆರೋಪ ಮಾಡಿದ್ದರು.

Donate Janashakthi Media

Leave a Reply

Your email address will not be published. Required fields are marked *