ಬೆಳಗಾವಿ ಅಧಿವೇಶನ| ಇಂದಿನಿಂದ 10 ದಿನಗಳ ಚಳಿಗಾಲ ಅಧಿವೇಶನ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇಂದಿನಿಂದ (ಡಿ. 4) 10 ದಿನಗಳ ಚಳಿಗಾಲ ಅಧಿವೇಶನ ಆರಂಭವಾಗಿದೆ. ಬೆಳಗಾವಿಯಲ್ಲಿ ನಡೆಯುತ್ತಿರುವ 12ನೇ ಅಧಿವೇಶನಕ್ಕೆ ಸಂಪೂರ್ಣವಾಗಿ ಎಲ್ಲಾ ರೀತಿಯ ಸಿದ್ದತೆಗಳನ್ನ ಈಗಾಗಲೇ ಬೆಳಗಾವಿ ಜಿಲ್ಲಾಡಳಿತ ಮಾಡಿಕೊಂಡಿದೆ. ಮಂತ್ರಿಗಳು, ಶಾಸಕರು, ಅಧಿಕಾರಿ ವರ್ಗ, ಪೊಲೀಸ್ ಸಿಬ್ಬಂದಿ ಹೀಗೆ ಪ್ರತಿಯೊಬ್ಬರಿಗೂ ವಾಸ್ತವ್ಯದ ವ್ಯವಸ್ಥೆ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗಿದೆ. ಇತ್ತ ಈ ಬಾರಿಯೂ ಪ್ರತಿಭಟನೆಗಳ ಕಾವು ಸರ್ಕಾರ ತಟ್ಟಲ್ಲಿದ್ದು ಜೊತೆಗೆ ಎಂಇಎಸ್ (MES) ಮತ್ತೆ ಕ್ಯಾತೆ ತೆಗೆದಿದ್ದು ಪೊಲೀಸರು ಖಡಕ್ ವಾರ್ನ್ ಕೊಟ್ಟಿದ್ದಾರೆ. ಸುವರ್ಣ ವಿಧಾನಸೌಧದ ಒಂದು ಕಿಮೀ ವ್ಯಾಪ್ತಿಯಲ್ಲಿ ಸುತ್ತಮುತ್ತ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಅಧಿವೇಶನ ಆರಂಭ ಆಗಲಿದೆ. ಇದಕ್ಕೆ ಬೇಕಾದ ಸಿದ್ದತೆಯನ್ನ ಬೆಳಗಾವಿ ಜಿಲ್ಲಾಡಳಿತ ಕಳೆದ ಒಂದು ತಿಂಗಳಿಂದ ಮಾಡಿಕೊಂಡು ಬಂದಿದ್ದು ಇದೀಗ ಎಲ್ಲದ್ದಕ್ಕೂ ಸಜ್ಜಾಗಿದೆ. ಸುವರ್ಣ ವಿಧಾನಸೌಧದಲ್ಲಿ ಸ್ವಚ್ಛತೆಯಿಂದ ಹಿಡಿದು ಲೈಟಿಂಗ್ ವ್ಯವಸ್ಥೆ, ಸಚಿವರಿಗೆ ಕೊಠಡಿ ಹಂಚಿಕೆ ಎಲ್ಲವೂ ಕೂಡ ಆಗಿದ್ದು ಇಂದು 11 ಗಂಟೆಗೆ ಅಧಿವೇಶನ ಆರಂಭಗೊಳ್ಳಲಿದೆ. ಇನ್ನೂ ಸುವರ್ಣ ವಿಧಾನಸೌಧದಲ್ಲಿ ನಾಲ್ಕು ಕಡೆಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಸೌಧದ ಸುತ್ತಮುತ್ತ ಪಾರ್ಕಿಂಕ್ ವ್ಯವಸ್ಥೆ ಆಗಿದೆ. ಇತ್ತ ಸೌಧದ ಹೊರಗೆ, ಪ್ರತಿಭಟನಾ ಸ್ಥಳ ಸೇರಿದಂತೆ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಒಂದು ಕಂಟ್ರೋಲ್ ರೂಮ್ ಇದ್ದು ಅದರಲ್ಲಿ ಎಲ್ಲವನ್ನೂ ಕಂಟ್ರೋಲ್ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ ಹಿನ್ನೆಲೆ| ಬೆಳಗಾವಿ ಅಧಿವೇಶನದಲ್ಲಿ ಎ.ಜೆ. ಸದಾಶಿವ ಆಯೋಗದ ವರದಿ ಮಂಡನೆ ಸಾಧ್ಯತೆ

17.5ಕೋಟಿ ವೆಚ್ಚದಲ್ಲಿ ಅಧಿವೇಶನ:

ಸಚಿವರು, ಶಾಸಕರು ಮತ್ತು ಅಧಿಕಾರಿಗಳಿಗೆ ಈಗಾಗಲೇ ಎರಡು ಸಾವಿರ ರೂಮ್ ಗಳು ಹಂಚಿಕೆಯಾಗಿದ್ದು ಅಲ್ಲೇ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಚೀನಾ ವೈರಸ್ ಆತಂಕ ಹಿನ್ನೆಲೆ ಈ ಬಾರಿ ಸಚಿವರು ಶಾಸಕರು ತಂಗುವ ಹೋಟೆಲ್​ಗಳಲ್ಲೇ ಒಂದೊಂದು ವೈದ್ಯರ ತಂಡ ನೇಮಕ ಜೊತೆಗೆ ಒಂದೊಂದು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಇತ್ತ ಸುವರ್ಣ ವಿಧಾನಸೌಧದಲ್ಲಿ ಒಂದು ಮಿನಿ ಆಸ್ಪತ್ರೆ ಕೂಡ ಮಾಡಲಾಗಿದೆ. ಹೀಗೆ ಅಧಿವೇಶನಕ್ಕೆ 16ಜನರ ವೈದ್ಯರ ಪ್ರತ್ಯೆಕ ತಂಡ ಮಾಡಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗಿದೆ. ಒಟ್ಟು 17.5ಕೋಟಿ ವೆಚ್ಚದಲ್ಲಿ ಅಧಿವೇಶನ ನಡೆಸುತ್ತಿದ್ದು ಈ ಬಜೆಟ್ ನಲ್ಲೇ ಕಡಿಮೆ ಮಾಡಲು ಜಿಲ್ಲಾಡಳಿತ ಪ್ಲ್ಯಾನ್ ಮಾಡಿಕೊಂಡಿದ್ದು ಇರೋದ್ರಲ್ಲೇ ಒಳ್ಳೆಯ ಸೌಲಭ್ಯ ಕೊಟ್ಟು ಖರ್ಚು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಬಾರಿ ಅಧಿವೇಶನ ನೋಡಲು ಬರುವ ಮಕ್ಕಳಿಗೆ ಐದು ಮಿನಿ ಬಸ್ ವ್ಯವಸ್ಥೆ, ಯುವಜನ ಸೇವೆ ವತಿಯಿಂದ ಸೌಧದಲ್ಲಿ ಆರ್ಟಿಫಿಶಿಯಲ್ ವಾಲ್ ಕ್ಲೈಮಿಂಗ್ ಮಕ್ಕಳಿಗೆ ಕೊಡಲಾಗುತ್ತಿದೆ ಜೊತೆಗೆ ಸುವರ್ಣ ಸೌಧದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಮಾಡಲಾಗುತ್ತಿದೆ ಎಂದು ಡಿಸಿ ನಿತೇಶ್ ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ.

1 ಗಂಟೆ ಸದನ ತಡ; ಉತ್ತರ ಕರ್ನಾಟಕಕ್ಕೆ ಮಾಡಿದ ಅಪಮಾನವೆಂದ ರಾಯರೆಡ್ಡಿ, ಯತ್ನಾಳ್!

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮೊದಲ ದಿನದ ವಿಧಾನ ಮಂಡಲ ಅಧಿವೇಶನ ಒಂದು ಗಂಟೆ ವಿಳಂಬವಾಗಿ ಆರಂಭವಾಗಿರುವುದಕ್ಕೆ ಹಿರಿಯ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಬಾರಿ ಅಧಿವೇಶನ ಇರುವುದೇ 10 ದಿನವಾಗಿದೆ. ಅದರಲ್ಲೂ ಹೀಗೆ ಗಂಟೆಗಟ್ಟಲೆ ವಿಳಂಬವಾದರೆ ಹೇಗೆ ಎಂದು ಕೇಳಿದ್ದಾರೆ. ಇದು ಉತ್ತರ ಕರ್ನಾಟಕಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ವಿಧಾನ ಮಂಡಲ ಅಧಿವೇಶನವನ್ನು ಒಂದು ಗಂಟೆ ವಿಳಂಬವಾಗಿ ಪ್ರಾರಂಭ ಮಾಡಲಾಗಿದೆ. ಸಿಎಂ ಆದಿಯಾಗಿ ಕೆಲವರು ಬರುವುದು ವಿಳಂಬವಾಗಿದೆ. ಅಲ್ಲದೆ, ಇನ್ನೂ ಹಲವಾರು ಮಂದಿ ಗೈರಾಗಿದ್ದಾರೆ. 11 ಗಂಟೆಗೆ ಆರಂಭವಾಗಬೇಕಿದ್ದ ಸದನ 1 ಗಂಟೆ ವಿಳಂಬವಾಗಿರುವುದರ ಬಗ್ಗೆ ಮೊದಲು ಶಾಸಕ ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸದನ ಹೀಗೆ ಒಂದು ಗಂಟೆ ವಿಳಂಬವಾದರೆ ಹೇಗೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಶಾಸಕ ಸುರೇಶ್‌ ಕುಮಾರ್ ಮಾತಿಗೆ ಧ್ವನಿಗೂಡಿಸಿದ ಶಾಸಕ ಬಸವರಾಜ್ ರಾಯರೆಡ್ಡಿ, ಹೌದು. ಯಾವ ಕಾರಣಕ್ಕೆ ವಿಳಂಬ ಮಾಡಲಾಗಿದೆಯೋ ಗೊತ್ತಿಲ್ಲ. ಆದರೆ, ಇದರಿಂದ ಉತ್ತರ ಕರ್ನಾಟಕಕ್ಕೆ ಅಪಮಾನ ಆಗಲಿದೆ. ಯಾರು ಬರಲಿ ಬಿಡಲಿ ಸರಿಯಾದ ಸಮಯಕ್ಕೆ ಅಧಿವೇಶನ ಆರಂಭಿಸಿ ಎಂದು ಆಗ್ರಹಿಸಿದರು.

ಬಸವರಾಜ ರಾಯರೆಡ್ಡಿ ಮಾತು ಮುಗಿಸುತ್ತಿದ್ದಂತೆ ಎದ್ದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ಆ ಮಾತಿಗೆ ಸಹಮತ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಬಾರದು. ಈ ಭಾಗಕ್ಕೆ ಅತಿ ಹೆಚ್ಚು ಚರ್ಚೆಗೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನ : ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ನಡೆಯಲಿಲ್ಲ, ಮತಾಂತರ ಬಿಲ್ ಪಾಸ್ ಮಾಡುವುದಷ್ಟೆ ಅಧಿವೇಶನದ ಗುರಿಯಾಗಿತ್ತು.

ವಿಪಕ್ಷಗಳಿಂದ ನಿಲುವಳಿ ನೋಟಿಸ್ ಜಾರಿ:

ಅಧಿವೇಶನದ ಮೊದಲ ದಿನವೇ ವಿಪಕ್ಷಗಳಿಂದ ನಿಲುವಳಿ ನೋಟಿಸ್ ಜಾರಿಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಜಂಟಿ ನೋಟಿಸ್ ನೀಡಿದ್ದು, ಸದನದಲ್ಲಿ ಬರ ಪರಿಸ್ಥಿತಿ ನಿರ್ವಹಣೆ ಕುರಿತಂತೆ ರಾಜ್ಯ ಸರ್ಕಾರದ ವೈಫಲ್ಯ ಚರ್ಚಿಸಲು ಆಗ್ರಹಿಸಿವೆ.

ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಸರ್ಕಾರದ ವೈಫಲ್ಯದ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ಹಾಗೂ ಜೆಡಿಎಸ್‌ ತನ್ನ ನಿಲುವಳಿ ಸೂಚನೆಯಲ್ಲಿ ಕೋರಿವೆ.

ನಿಲುವಳಿ ಸೂಚನೆ ಪತ್ರದಲ್ಲೇನಿದೆ?

ರಾಜ್ಯಾದ್ಯಂತ ಬರಗಾಲ ಆವರಿಸಿದೆ. ಉಳುಮೆ ಮತ್ತು ಬಿತ್ತನೆ ಕಾಲದಲ್ಲಿ ಬೀಳಬೇಕಾಗಿದ್ದ ಮಳೆ ಕೈಕೊಟ್ಟ ಕಾರಣ 215 ತಾಲೂಕುಗಳು ತೀವ್ರ ಬರ ಪೀಡಿತವಾಗಿವೆ. ರೈತರು ಬಿತ್ತನೆ ಮಾಡಿದ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ ಒಟ್ಟು 48 ಲಕ್ಷ ಹೆಕ್ಟೇರ್ ಬೆಳೆ ನಾಶ ಆಗಿದ್ದು, ಆತಂಕಗೊಂಡಿರುವ ರೈತರು ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ. ರಾಜ್ಯದಲ್ಲಿ ಬರಗಾಲ ಕಾಮಗಾರಿಗಳು ನಡೆಯುತ್ತಿಲ್ಲ. ಕೃಷಿ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ದಿನಾಂಕ 13-09-2023 ರಂದೇ ಬರ ಪೀಡಿತ ತಾಲೂಕುಗಳನ್ನು ಪೋಷಣೆ ಮಾಡಲಾಗಿದೆ. ಹೀಗಿದ್ದರೂ ಸರ್ಕಾರ ಕಳೆದೆರಡು ದಿನಗಳ ಹಿಂದಷ್ಟೇ ಕೇವಲ 2000 ರೂ. ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ.

ಜಾನುವಾರುಗಳಿಗೆ ಮೇವಿಗೆ ತೊಂದರೆಯಾಗದಂತೆ ಮೇವು ಬ್ಯಾಂಕ್ ಸ್ಥಾಪಿಸಿ, ಗೋಶಾಲೆಗಳನ್ನು ತೆರೆಯಲು ಅಗತ್ಯ ಕ್ರಮ ಕೈಗೊಂಡಿಲ್ಲ. ಜತೆಗೆ ಜನಸಾಮಾನ್ಯರಿಗೆ ಕುಡಿಯುವ ನೀರಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡಿಲ್ಲ. ರಾಜ್ಯವು ಬರಗಾಲಕ್ಕೆ ತುತ್ತಾಗುವ ಸ್ಪಷ್ಟ ಸೂಚನೆ ಇದ್ದರೂ ಬರ ಪರಿಸ್ಥಿತಿಯನ್ನು ಎದುರಿಸಲು ಕೈಗೊಳ್ಳಬೇಕಾಗಿದ್ದ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದ ಸರ್ಕಾರ ವಿಫಲವಾಗಿದೆ. ಈ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶ ನೀಡಬೇಕೆಂದು ಕೋರುತ್ತೇವೆ” ಎಂದು ಬಿಜೆಪಿ ಹಾಗೂ ಜೆಡಿಎಸ್‌ ತನ್ನ ನಿಲುವಳಿ ಸೂಚನೆ ಪತ್ರದಲ್ಲಿ ಉಲ್ಲೇಖಿಸಿವೆ.

ಇದನ್ನೂ ಓದಿ:ಬೆಳಗಾವಿ ಸುವರ್ಣಸೌಧದಲ್ಲಿ ನಾಳೆಯಿಂದ 10 ದಿನಗಳ ಚಳಿಗಾಲ ಅಧಿವೇಶನ

ಉತ್ತರ ಕೊಡಲಿವೆಯೇ ಸರ್ಕಾರ?

ಈ ಸಂಬಂಧ ಸದನದಲ್ಲಿ ಈ ಬಾರಿ ಬರ ನಿರ್ವಹಣೆ ಬಗ್ಗೆ ತೀವ್ರವಾಗಿ ಚರ್ಚೆ ನಡೆಸಲು, ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್‌ ಮುಂದಾಗಿದೆ. ಅಲ್ಲದೆ, ಈಗಾಗಲೇ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಬರ ಅಧ್ಯಯನ ನಡೆಸಿವೆ. ಅದರಲ್ಲೂ ಜೆಡಿಎಸ್‌ ಬರ ಅಧ್ಯಯನ ನಡೆಸಿ ಅದರ ವರದಿಯನ್ನು ಭಾನುವಾರ (ಡಿ. 3) ರಾಜ್ಯಪಾಲರಿಗೆ ಸಲ್ಲಿಸಿದೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಸಮರ್ಪಕ ಉತ್ತರ ನೀಡಲು ಸಿದ್ಧರಾಗಿ ಬನ್ನಿ ಎಂದು ಸಚಿವರಿಗೆ ಸೂಚನೆ ನೀಡಿದ್ದಾರೆ. ಇದರ ಜತೆಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುದಾನ ಬಂದಿಲ್ಲ ಎಂಬ ವಾದವನ್ನೂ ಮುಂದಿಡಲು ಮುಂದಾಗಲಾಗಿದೆ ಎನ್ನಲಾಗಿದೆ.

ಅಧಿವೇಶನದ ಮೊದಲ ದಿನವೇ ಸಾಲು ಸಾಲು ಪ್ರತಿಭಟನೆ

ಇನ್ನೂ ಅಧಿವೇಶನ ಬಂದ್ರೆ ಸಾಕು ಸಾಲು ಸಾಲು ಪ್ರತಿಭಟನೆಗಳು ಆರಂಭ ಆಗಿ ಬಿಡ್ತವೆ. ಈ ಬಾರಿ ಪ್ರತಿಭಟನೆ ಸಂಖ್ಯೆ ಕಡಿಮೆ ಮಾಡಲು ಪ್ರಯತ್ನ ಪಟ್ಟರೂ ಆಗಿಲ್ಲ. ಇದರಿಂದ ಇಂದು ಮೊದಲನೇ ದಿನವೇ ರೈತ ಸಂಘಟನೆಗಳ ಹೋರಾಟದ ಬಿಸಿ ಸರ್ಕಾರಕ್ಕೆ ತಟ್ಟಲಿದೆ. ಕೊಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು ವಿವಿಧ ಬೇಡಿಕೆ ಈಡೇರಿಕೆಗಾಗಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಲಿವೆ. ಹೋರಾಟಕ್ಕೆಂದೆ ಪ್ರತ್ಯೇಕ ಜಾಗ ಗುರುತಿಸಿ ಅಲ್ಲಿ ಪೆಂಡಾಲ್ ವ್ಯವಸ್ಥೆ ಕೂಡ ಜಿಲ್ಲಾಡಳಿತ ಮಾಡಿದೆ.

ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್‌ 04 | ಭಾಗ 01 Live #wintersession2023

Donate Janashakthi Media

Leave a Reply

Your email address will not be published. Required fields are marked *