ಧರ್ಮಸ್ಥಳದಲ್ಲಿ ಸರಣಿ ಹತ್ಯೆ ಆರೋಪ

ನಿಷ್ಪಕ್ಷಪಾತ ತನಿಖೆ ನಡೆಸಿ, ದೂರುದಾರ ಹಾಗು ನ್ಯಾಯವಾದಿಗಳಿಗೆ ರಕ್ಷಣೆ ಒದಗಿಸಿ: ಸಿಪಿಐ(ಎಂ) ಆಗ್ರಹ
“ದಶಕಗಳ ಅವಧಿಯಲ್ಲಿ ಧರ್ಮಸ್ಥಳದಲ್ಲಿ  ಹತ್ಯೆಗಳು, ಅತ್ಯಾಚಾರಗಳು ಸರಣಿಯಾಗಿ ನಡೆದಿವೆ, ನನ್ನನ್ನು ಬೆದರಿಸಿ, ನನ್ನಿಂದ್ದಲೆ ಇಂತಹ ಅನಾಥ ಶವಗಳನ್ನು ಹೂತು ಹಾಕಿಸುವ, ವಿಲೇವಾರಿ ಮಾಡಿಸುವ ಕಾರ್ಯ ನಡೆದಿತ್ತು. ನಾನು ಆ ಸಂದರ್ಭದಲ್ಲಿ ಧರ್ಮಸ್ಥಳ ದೇವಸ್ಥಾನದ ಆಡಳಿತದಡಿ ನೈರ್ಮಲ್ಯ ಕಾರ್ಮಿಕನಾಗಿದ್ದೆ. ನನಗೆ ಹಾಗು ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಿದರೆ, ಎಲ್ಲವನ್ನೂ ಸಾಕ್ಷ್ಯ ಸಮೇತ ಬಯಲುಗೊಳಿಸುವೆ” ಎಂದು ಗುರುತು ಮರೆಮಾಚಲ್ಪಟ್ಟ ವ್ಯಕ್ತಿಯೋರ್ವ ವಕೀಲರ ಮೂಲಕ ದೂರು ದಾಖಲಿಸಿದ್ದಾನೆ. ಈ ದೂರಿನ ಕುರಿತು ರಾಜ್ಯ ಸರಕಾರ ನಿಷ್ಪಕ್ಷಪಾತ ತನಿಖೆಗೆ ಕ್ರಮ ಕೈಗೊಳ್ಳಬೇಕು, ದೂರುದಾರ ಹಾಗು ಆತನ ಜೊತೆಗಿರುವ ನ್ಯಾಯವಾದಿಗಳಿಗೆ ಭದ್ರತೆ ಒದಗಿಸಬೇಕು ಎಂದು ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ಮುಖ್ಯಮಂತ್ರಿಗಳನ್ನು ಆಗ್ರಹಿಸಿದೆ.

-ಸಿ. ಸಿದ್ದಯ್ಯ

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದಲ್ಲಿ ನಡೆದಿರುವ ಹಲವಾರು ಅತ್ಯಾಚಾರ, ಹತ್ಯೆಗಳಂತಹ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿ ಇರುವುದಾಗಿ ವ್ಯಕ್ತಿಯೋರ್ವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಧರ್ಮಸ್ಥಳ ಪೊಲೀಸ್ ಠಾಣೆಗೆ ಇತ್ತೀಚೆಗೆ ದೂರು ಸಲ್ಲಿಸಿದ್ದಾನೆ. ಈ ವ್ಯಕ್ತಿ ತನ್ನ ಪರ ವಕೀಲರ ಮೂಲಕ ಈ ದೂರನ್ನು ಸಲ್ಲಿಸಿದ್ದಾನೆ.

“ನನಗೆ ನಿರಂತರ ಪ್ರಾಣ ಬೆದರಿಕೆಯೊಡ್ಡಿ ಧರ್ಮಸ್ಥಳ ಗ್ರಾಮ ವ್ಯಾಪ್ತಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೊಲೆಯಾದ ಹಾಗೂ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಅನೇಕ ಮೃತದೇಹಗಳು ಮತ್ತು ಸಾಕ್ಷ್ಯಗಳನ್ನು ನನ್ನಿಂದ ಬಲವಂತವಾಗಿ ಹೂತು ಹಾಕಿಸಿದ್ದಾರೆ. ನನ್ನಿಂದ ಹೂತು ಹಾಕಿಸಿರುವ ಮೃತ ಮೃತದೇಹಗಳನ್ನು ಪೊಲೀಸರ ಸಮ್ಮುಖದಲ್ಲಿ ಹೊರ ತೆಗೆಸುವಂತೆ ಮನವಿ ಮಾಡುತ್ತೇನೆ” ಎಂದು ದೂರುದಾರ ಹೇಳಿದ್ದಾನೆ. ನೂರಾರು ಮೃತದೇಹಗಳನ್ನು ವಿಲೇವಾರಿ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿರುವುದಲ್ಲದೆ, ಎದೆ ಝಲ್ಲೆನಿಸುವಂತಹ ಹಲವು ವಿಷಯಗಳನ್ನು ಈ ದೂರಿನಲ್ಲಿ ಹಂಚಿಕೊಂಡಿದ್ದಾನೆ.

ಇದನ್ನೂ ಓದಿ: ಕೊಲೆಯಾದ ಶವಗಳನ್ನು ಧರ್ಮಸ್ಥಳದಲ್ಲಿ ಹೂಳಿರುವ ಪ್ರಕರಣದ ತನಿಖೆ ಸದ್ಯದ ತುರ್ತು: ಎ ವೇಲನ್‌

ಜುಲೈ 3 ರಂದು ಬಿಎನ್ಎಸ್ ಸೆಕ್ಷನ್ 211(ಎ) ಅಡಿಯಲ್ಲಿ ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಎಸ್ ಪಿ ಅರುಣ್ ಕೆ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. “ಆ ವ್ಯಕ್ತಿ ತನ್ನ ಗುರುತನ್ನು ಬಹಿರಂಗಪಡಿಸದಂತೆ ವಿನಂತಿಸಿದ್ದಾನೆ ಮತ್ತು ನ್ಯಾಯಾಲಯದಿಂದ ಅಗತ್ಯ ಅನುಮತಿ ಪಡೆದ ನಂತರ, ನಾವು ಪ್ರಕರಣ ದಾಖಲಿಸಿದ್ದೇವೆ” ಎಂದು ಎಸ್ ಪಿ ತಿಳಿಸಿದ್ದಾರೆ.

ಈ ಹಿಂದೆ ಧರ್ಮಸ್ಥಳದ ನೇತ್ರಾವತಿ ನದಿ ಹಾಗು ಆಸುಪಾಸು ಪತ್ತೆಯಾಗಿದ್ದ ಅನುಮಾನಾಸ್ಪದ, ಸಾಲು ಸಾಲು ಅನಾಥ ಶವಗಳು, ಆ ಕುರಿತು ಸಾರ್ವಜನಿಕವಾಗಿ ವ್ಯಕ್ತವಾಗಿದ್ದ ಅನುಮಾನಗಳಿಗೆ ಈಗಿನ ಆರೋಪಗಳು ಪುಷ್ಟಿ ನೀಡುತ್ತವೆ. ಮರೆಮಾಚಲ್ಪಟ್ಟ ವ್ಯಕ್ತಿಯೋರ್ವ ವಕೀಲರುಗಳ ಉಪಸ್ಥಿತಿಯಲ್ಲಿ ದೂರು ದಾಖಲಿಸಿದ ಸುದ್ದಿ ಸಾರ್ವಜನಿಕ ವಲಯದಲ್ಲಿ ಕಂಪನಗಳನ್ನು ಎಬ್ಬಿಸಿದೆ.

416 ಹೆಚ್ಚು ಅಸಹಜ ಸಾವು

ಧರ್ಮಸ್ಥಳದಲ್ಲಿ 80 ರ ದಶಕದಲ್ಲಿ ನಡೆದ ವಿದ್ಯಾರ್ಥಿನಿ ಪದ್ಮಲತಾ ಅಪಹರಣ, ಕೊಲೆ ಪ್ರಕರಣದ ಸಂದರ್ಭದಲ್ಲೆ ದೊಡ್ಡ ಹೋರಾಟ ನಡೆದಿತ್ತು. ಆದರೆ, ಆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿತ್ತು. ಆ ತರುವಾಯ ಇಂತಹ ಹಲವು ಕೊಲೆ, ಅನುಮಾನಾಸ್ಪದ, ಅಸಹಜ ಸಾವುಗಳು ಧರ್ಮಸ್ಥಳದ ಸುತ್ತಮುತ್ತ ವರದಿಯಾಗುತ್ತಲೆ ಬಂದಿವೆ. ಹನ್ನೆರಡು ವರ್ಷಗಳ ಹಿಂದೆ ನಡೆದ ಸೌಜನ್ಯ ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣ, ಅದಕ್ಕಿಂತ ಸ್ವಲ್ಪ ಮೊದಲು ನಡೆದ ಆನೆ ಮಾವುತ ಹಾಗು ಆತನ ಸೋದರಿಯ ಹತ್ಯೆ ಪ್ರಕರಣದಲ್ಲೂ ಕೊಲೆಗಾರರ ಪತ್ತೆಯಾಗಿಲ್ಲ ಎಂಬುದು ಗಮನಾರ್ಹ.

ಸೌಜನ್ಯ ಪ್ರಕರಣದ ಸಂದರ್ಭದಲ್ಲಿ ಮಾಹಿತಿ ಹಕ್ಕಿನಡಿ ಪೊಲೀಸ್ ಇಲಾಖೆ ನೀಡಿದ ಮಾಹಿತಿ ಪ್ರಕಾರವೆ  ದಶಕದ ಅವಧಿಯಲ್ಲಿ ಧರ್ಮಸ್ಥಳ, ಉಜಿರೆ ಗ್ರಾಮ ವ್ಯಾಪ್ತಿಯಲ್ಲಿ 416 ಅಸಹಜ ಸಾವು, ಅನಾಥ ಶವಗಳು ಪತ್ತೆಯಾಗಿದ್ದವು ಎಂದು ವರದಿಯಾಗಿತ್ತು‌. ಇದು ರಾಜ್ಯಾದ್ಯಂತ ಆತಂಕ, ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು. ಪದ್ಮಲತಾ ಪ್ರಕರಣದಿಂದ ಹಿಡಿದು ಆನೆ ಮಾವುತ, ಆತನ ಸೋದರಿ, ಸೌಜನ್ಯ ಪ್ರಕರಣದವರೆಗೂ ದೊಡ್ಡ ಪ್ರಮಾಣದ ಹೋರಾಟಗಳ ಹೊರತಾಗಿಯು ಕೊಲೆಗಾರರ ಪತ್ತೆ ಅಸಾಧ್ಯವಾಗಿರುವುದು, ನೂರಾರು ಅನಾಥ ಶವಗಳು, ಅಸಹಜ ಸಾವುಗಳು ಆ ಸಣ್ಣ ಪ್ರದೇಶವೊಂದರಲ್ಲೆ ನಡೆದಿರುವುದು ನಿಗೂಢ ವಿದ್ಯಾಮಾನಗಳು ಜನರಲ್ಲಿ ಸಹಜವಾಗಿ ಅನುಮಾನ ಮೂಡಿಸಿತ್ತು. ಸರಕಾರ ಬಲಾಢ್ಯ, ಊಳಿಗಮಾನ್ಯ ಶಕ್ತಿಗಳ ನಿಯಂತ್ರಣಕ್ಕೆ ಒಳಗಾಗಿ ಪ್ರಕರಣಗಳನ್ನು ಮುಚ್ಚಿ ಹಾಕುತ್ತಿದೆ ಎಂದು ಪ್ರಬಲ ಆರೋಪಗಳೂ ಜನತೆಯಿಂದ ವ್ಯಕ್ತವಾಗಿದ್ದವು‌.

ಇದೀಗ, ಇಂತಹ ಆರೋಪಗಳಿಗೆ ಪುಷ್ಟಿ ನೀಡುವಂತೆ, ‘ಧರ್ಮಸ್ಥಳದಲ್ಲಿ ಕಾರ್ಮಿಕನಾಗಿದ್ದೆ’ ಎಂದು ಸ್ವಯಂ ಘೋಷಿಸಿಕೊಂಡಿರುವ ವ್ಯಕ್ತಿಯೋರ್ವ ಪೊಲೀಸರಿಗೆ ದೂರು ನೀಡಿದ್ದಾರೆ‌‌. ರಾಜ್ಯ ಸರಕಾರ ಈ ದೂರನ್ನು ಗಂಭೀರವಾಗಿ ಪರಿಗಣಿಸಬೇಕು, ಯಾವುದೇ ಬಲಾಢ್ಯ ಲಾಭಿಗೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು, ಈ ಪ್ರಕರಣದ ಎಲ್ಲಾ ಆಯಾಮಗಳನ್ನು ಗಂಭೀರವಾಗಿ ಪರಿಗಣಿಸಬೇಕು, ದೂರುದಾರನಿಗೆ ಹಾಗು ಆತನ ಪರ ನ್ಯಾಯವಾದಿಗಳಿಗೆ ಗರಿಷ್ಟ ಭದ್ರತೆ ಒದಗಿಸಬೇಕು ಎಂದು ಸಿಪಿಐ(ಎಂ)  ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಆ ವ್ಯಕ್ತಿ ನೀಡಿದ ದೂರಿನಲ್ಲೇನಿದೆ?

ನಾನು ಹುಟ್ಟಿದ್ದು ಅತ್ಯಂತ ಕೆಳಗಿನದೆಂದು ಕರೆಯಲಾಗುವ ಜಾತಿಯಲ್ಲಿ. ನಾನು 1995 ರಿಂದ ಡಿಸೆಂಬರ್ 2014ರ ವರೆಗೆ ಧರ್ಮಸ್ಥಳ ದೇವಸ್ಥಾನದಡಿ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೆ. ಪ್ರತಿನಿತ್ಯ, ನೇತ್ರಾವತಿ ನದಿಯ ಬಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದೆ. ನಿಯಮಿತ ಉದ್ಯೋಗವಾಗಿ ಪ್ರಾರಂಭವಾದದ್ದು ನಂತರದ ದಿನಗಳಲ್ಲಿ ಅತ್ಯಂತ ಭಯಾನಕ ಅಪರಾಧಗಳ ಸಾಕ್ಷ್ಯಗಳನ್ನು ಮರೆಮಾಚುವ ಕೆಲಸವಾಗಿ ಬದಲಾಯಿತು. ನನ್ನ ಉದ್ಯೋಗದ ಆರಂಭದಲ್ಲಿ ಮೃತ ದೇಹಗಳು ಕಾಣಿಸಿಕೊಳ್ಳುವುದನ್ನು ನಾನು ಗಮನಿಸಿದೆ. ಮೊದಲಿಗೆ, ಇವು ಆತ್ಮಹತ್ಯೆ ಅಥವಾ ನದಿಯಲ್ಲಿ ಆಕಸ್ಮಿಕವಾಗಿ ಮುಳುಗಿದ ಮೃತ ದೇಹಗಳು ಎಂದು ನಾನು ಭಾವಿಸಿದ್ದೆ. ಅದರಲ್ಲಿ, ಮಹಿಳೆಯರ ಶವಗಳೇ ಹೆಚ್ಚಾಗಿದ್ದವು.

ನನ್ನ ಮತ್ತು ನನ್ನ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ

ಅನೇಕ ಮಹಿಳಾ ಶವಗಳು ಬಟ್ಟೆ ಅಥವಾ ಒಳ ಉಡುಪುಗಳಿಲ್ಲದೆ ಕಂಡು ಬಂದವು. ಲೈಂಗಿಕ ಆಕ್ರಮಣ ಮತ್ತು ಹಿಂಸೆಯ ಸ್ಪಷ್ಟ ಲಕ್ಷಣಗಳನ್ನು ಕೆಲವು ಶವಗಳು ಹೊಂದಿದ್ದವು. ಆ ದೇಹಗಳ ಮೇಲೆ ಹಿಂಸೆಯನ್ನು ಸೂಚಿಸುವ ಗಾಯಗಳು ಅಥವಾ ಕತ್ತುಹಿಸುಕುವಿಕೆಯು ಕಂಡು ಬರುತ್ತಿದ್ದವು. 1998ರ ಸುಮಾರಿಗೆ ನನ್ನ ಮೇಲ್ವಿಚಾರಕರು ಈ ದೇಹಗಳನ್ನು ಪೊಲೀಸರಿಗೆ ವರದಿ ಮಾಡುವ ಬದಲು, ಈ ದೇಹಗಳನ್ನು ರಹಸ್ಯವಾಗಿ ವಿಲೇವಾರಿ ಮಾಡುವಂತೆ ನನಗೆ ಸೂಚಿಸಿದರು. ನಾನು ತಕ್ಷಣವೇ ನಿರಾಕರಿಸಿ, ಆ ಸಾವುಗಳನ್ನು ಪೊಲೀಸರಿಗೆ ತಿಳಿಸಬೇಕು ಎಂದು ಪ್ರತಿಕ್ರಿಯಿಸಿದಾಗ ತೀವ್ರವಾಗಿ ಥಳಿಸಲ್ಪಟ್ಟೆ. ನಾನೇನಾದರೂ ಅವರ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದರೆ ಅಥವಾ ಅದರ ಬಗ್ಗೆ ಯಾರಿಗಾದರೂ ತಿಳಿಸಿದರೆ, “ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇವೆ., ನಿನ್ನ ದೇಹವೂ ಉಳಿದ ಶವಗಳಂತೆ ಹೂಳಲ್ಪಡುತ್ತದೆ, ನಿನ್ನ ಕುಟುಂಬದವರೆಲ್ಲರನ್ನೂ ಬಲಿ ಮಾಡುತ್ತೇವೆ” ಎಂದು ಬೆದರಿಸಿದರು.

ಈ ಹಿಂದೆ, ಆ ಕೆಲಸವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು ಹಿಂಜರಿದೊಡನೆಯೇ “ಕಣ್ಮರೆಯಾದ” ಎಂದು ಅವರು ಹೇಳುತ್ತಿದ್ದರು. ಅವರ ಬೆದರಿಕೆಯಲ್ಲಿ ಸಂಶಯವೇ ಇರಲಿಲ್ಲ. “ಪಾಲಿಸು ಇಲ್ಲವೇ ಕುಟುಂಬ ಸಮೇತವಾಗಿ ತುಂಡು ತುಂಡಾಗಿ ಕತ್ತರಿಸಲ್ಪಡು” ಎಂದಾಗಿತ್ತು. ಮೃತದೇಹಗಳಿರುವ ನಿರ್ದಿಷ್ಟ ಸ್ಥಳಗಳಿಗೆ ಮೇಲ್ವಿಚಾರಕರು ನನ್ನನ್ನು ಕರೆಯುತ್ತಿದ್ದರು. ಅನೇಕ ಬಾರಿ, ಈ ದೇಹಗಳು ಅಪ್ರಾಪ್ತ ಹೆಣ್ಣು ಮಕ್ಕಳು/ ಮಹಿಳೆಯರದಾಗಿದ್ದವು. ಒಳ ಉಡುಪು ಇರದ, ಹರಿದ ಬಟ್ಟೆ ಮತ್ತು ಅವರ ಖಾಸಗಿ ಭಾಗಗಳಿಗೆ ಆಗಿದ್ದ ಗಾಯಗಳು ಅವರ ಮೇಲೆ ಕ್ರೂರ ಲೈಂಗಿಕ ಆಕ್ರಮಣವನ್ನು ಸೂಚಿಸುತ್ತಿದ್ದವು. ಕೆಲವು ದೇಹಗಳ ಮೇಲೆ ಆಸಿಡ್ ನಿಂದ ಸುಟ್ಟ ಗುರುತುಗಳೂ ಸಹ ಇರುತ್ತಿದ್ದವು.

ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದ ಹುಡುಗಿಯ ದೇಹ

ನನ್ನನ್ನು ಬಹಳವಾಗಿ ಕಾಡಿರುವ ಘಟನೆಯೊಂದಿದೆ; 2010ರಲ್ಲಿ ಕಲ್ಲೇರಿಯಲ್ಲಿರುವ ಪೆಟ್ರೋಲ್ ಬಂಕ್ ನಿಂದ ಸುಮಾರು 500 ಮೀಟರ್ ದೂರದಲ್ಲಿರುವ ಸ್ಥಳಕ್ಕೆ ನನ್ನನ್ನು ಮೇಲ್ವಿಚಾರಕರು ಕಳುಹಿಸಿದರು. ಅಲ್ಲಿ ನಾನು ಹದಿಹರೆಯದ ಹುಡುಗಿಯ ದೇಹವನ್ನು ಕಂಡೆ. ವಯಸ್ಸು ಅಂದಾಜು 12 ರಿಂದ 15 ವರ್ಷಗಳ ನಡುವೆ ಇರಬಹುದು. ಅವಳು ಶಾಲಾ ಸಮವಸ್ತ್ರದ ಶರ್ಟ್ ಧರಿಸಿದ್ದಳು. ಆದರೆ, ಅವಳ ಲಂಗ ಮತ್ತು ಒಳಉಡುಪುಗಳು ಇರಲಿಲ್ಲ. ಅವಳ ದೇಹವು ಲೈಂಗಿಕ ಆಕ್ರಮಣದ ಸ್ಪಷ್ಟ ಲಕ್ಷಣಗಳನ್ನು ಹೊಂದಿತ್ತು. ಅವಳ ಕುತ್ತಿಗೆಯ ಮೇಲೆ ಕತ್ತುಹಿಸುಕಿರುವ ಗುರುತುಗಳಿದ್ದವು. ಗುಂಡಿಯನ್ನು ಅಗೆದು ಅವಳ ಶಾಲಾ ಚೀಲದೊಂದಿಗೆ ಹೂಳಲು ನನಗೆ ಸೂಚಿಸಲಾಯಿತು. ಆ ಸನ್ನಿವೇಶವು ಇಂದಿಗೂ ಮಾಸಿಲ್ಲ.

ಮಹಿಳೆಯ ಮುಖವನ್ನು ಆಸಿಡ್ ನಿಂದ ಸುಡಲಾಗಿತ್ತು

ಮತ್ತೊಂದು ಮರೆಯಲಾಗದ ಘಟನೆಯು 20ರ ಹರೆಯದ ಮಹಿಳೆಯ ಮೃತ ದೇಹದ್ದಾಗಿತ್ತು. ಆಕೆಯ ಮುಖವನ್ನು ಆಸಿಡ್ ನಿಂದ ಸುಡಲಾಗಿತ್ತು. ಆ ದೇಹವನ್ನು ದಿನಪತ್ರಿಕೆಯಿಂದ ಮುಚ್ಚಲಾಗಿತ್ತು. ಅಕೆಯ ದೇಹವನ್ನು ಹೂಳದೆ, ಆಕೆಯ ಪಾದರಕ್ಷೆ ಮತ್ತು ಅವಳ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಅವಳೊಂದಿಗೆ ಸುಡಲು ನನಗೆ ಮೇಲ್ವಿಚಾರಕರು ಸೂಚಿಸಿದರು.

ಅತ್ಯಂತ ಕ್ರೂರವಾಗಿ ನಿರ್ಗತಿಕ ಪುರುಷರ ಕೊಲೆ

ಧರ್ಮಸ್ಥಳ ಪ್ರದೇಶದಲ್ಲಿ ಭಿಕ್ಷಾಟನೆಗೆ ಬಂದ ಬಡ ಮತ್ತು ನಿರ್ಗತಿಕ ಪುರುಷರು ವ್ಯವಸ್ಥಿತವಾಗಿ ಕೊಲೆಯಾದ ಅನೇಕ ಘಟನೆಗಳಿಗೆ ನಾನು ಸಾಕ್ಷಿಯಾದೆ. ಅವರನ್ನು ಕೊಲ್ಲುವ ವಿಧಾನವು ಅತ್ಯಂತ ಕ್ರೂರವಾಗಿತ್ತು. ಅವರನ್ನು ಕೊಠಡಿಯ ಕುರ್ಚಿಗಳಿಗೆ ಕಟ್ಟಲಾಗುತ್ತಿತ್ತು ಮತ್ತು ಟವಲ್ ಗಳನ್ನು ಬಳಸಿ ಹಿಂದಿನಿಂದ ಹಿಡಿದು ಉಸಿರುಗಟ್ಟಿಸಲಾಗುತ್ತಿತ್ತು. ಈ ಕೊಲೆಗಳು ನನ್ನ ಸಮ್ಮುಖದಲ್ಲೇ ನಡೆದವು. ದೂರದ ಅರಣ್ಯ ಪ್ರದೇಶಗಳಲ್ಲಿ ಈ ದೇಹಗಳನ್ನು ಹೂತು ಹಾಕಲು ನನಗೆ ನಿರ್ದೇಶನ ನೀಡುತ್ತಿದ್ದರು.

ಯಾವುದೇ ಕುರುಹು ಸಿಗದಂತೆ ಸುಟ್ಟು ಹಾಕಬೇಕೆಂಬ ನಿರ್ದೇಶನ

ನನ್ನ ಉದ್ಯೋಗಾವಧಿಯಲ್ಲಿ, ಧರ್ಮಸ್ಥಳ ಪ್ರದೇಶದಾದ್ಯಂತ ಹಲವಾರು ಸ್ಥಳಗಳಲ್ಲಿ ಮೃತ ದೇಹಗಳನ್ನು ಹೂತು ಹಾಕಿರುತ್ತೇನೆ. ಕೆಲವೊಮ್ಮೆ, ನಿರ್ದೇಶಿಸಿದಂತೆ ಮೃತ ದೇಹಗಳನ್ನು ಡೀಸೆಲ್ ಬಳಸಿ ಸುಟ್ಟು ಹಾಕಿರುತ್ತೇನೆ. ಯಾವುದೇ ಕುರುಹು ಸಿಗದಂತೆ ಸುಟ್ಟು ಹಾಕಬೇಕೆಂದು ನನಗೆ ನಿರ್ದೇಶಿಸುತ್ತಿದ್ದರು. ಈ ರೀತಿ ವಿಲೇವಾರಿಯಾದ ಮೃತ ದೇಹಗಳು ನೂರಾರು. 2014ರ ಹೊತ್ತಿಗೆ ನಾನು ಅನುಭವಿಸುತ್ತಿದ್ದ ಮಾನಸಿಕ ಹಿಂಸೆಯು ಅಸಹನೀಯವಾಗಿತ್ತು.

ನನ್ನ ಕುಟುಂಬದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ

“2014 ರಲ್ಲಿ ನನ್ನ ಕುಟುಂಬದ ಅಪ್ರಾಪ್ತ ಬಾಲಕಿಯೊಬ್ಬಳು ನನ್ನ ಮೇಲ್ವಿಚಾರಕನಿಗೆ ತಿಳಿದಿರುವ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಳು. ನಾವು ತಪ್ಪಿಸಿಕೊಳ್ಳಲು ನಿರ್ಧರಿಸಿ, ಅಂದು ನಾನು ನನ್ನ ಕುಟುಂಬದೊಂದಿಗೆ ಧರ್ಮಸ್ಥಳದಿಂದ ಓಡಿಹೋದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬುದರ ಸುಳಿವು ಯಾರಿಗೂ ಸಿಗದಂತೆ ಖಚಿತಪಡಿಸಿಕೊಂಡೆ. ಅಂದಿನಿಂದ ಈವರೆಗೆ, ನೆರೆ ರಾಜ್ಯವೊಂದರಲ್ಲಿ ಜೀವ ಭಯದಿಂದ ತಲೆಮರೆಸಿಕೊಂಡು ವಾಸಿಸುತ್ತಿದ್ದೇವೆ. ವಾಸಸ್ಥಳಗಳನ್ನೂ ಬದಲಾಯಿಸುತ್ತಿದ್ದೇವೆ. ಆದರೆ, ಮಾನಸಿಕ ಪಾಪ ಪ್ರಜ್ಞೆಯ ಹೊರೆಯಲ್ಲಿಯೇ ಇನ್ನೂ ಬದುಕುತ್ತಿದ್ದೇನೆ. ನನ್ನ ಆತ್ಮ ಸಾಕ್ಷಿಯು ಇನ್ನೂ ಮೌನ ಮುಂದುವರೆಸಲು ಅನುಮತಿಸುತ್ತಿಲ್ಲ. ಮಣ್ಣಾಗಿ ಹೋದ ಅವರೆಲ್ಲರೂ ಯಾರೆಂದು ಮತ್ತು ಅವರ ಅತ್ಯಾಚಾರ ಹಾಗೂ ಕೊಲೆಗೆ ಕಾರಣಕರ್ತರು ಯಾರೆಂದು ಇನ್ನಾದರೂ ಎಲ್ಲರಿಗೂ ಗೊತ್ತಾಗಬೇಕೆಂದು ನಿರ್ಧರಿಸಿರುವೆ. ನನ್ನ ಬದುಕಿಗೆ ಅಂಟಿರುವ ಅಪಾಯದ ಹೊರತಾಗಿಯೂ ನಾನು ಮಾತನಾಡಲೇಬೇಕೆಂದು ತೀರ್ಮಾನಿಸಿರುವೆ.

ಹೂತಿಟ್ಟ ನೂರಾರು ಶವಗಳನ್ನು ಹೊರ ತೆಗೆಯಲು ಅವಕಾಶ ಕೊಡಿ

ನಾನು ಹೂತು ಹಾಕಿರುವ ನೂರಾರು ಮೃತದೇಹಗಳು ವಿಧಿವತ್ತಾದ ಗೌರವ ಮತ್ತು ಅಂತ್ಯ ಸಂಸ್ಕಾರಗಳಿಂದ ವಂಚಿತವಾಗಿರುತ್ತವೆ. ಈಗ ಹೊರತೆಗೆಯುವ ಕಳೇಬರಗಳಿಗೆ ಗೌರವ ಪೂರಕ ಅಂತ್ಯಸಂಸ್ಕಾರವಾದಲ್ಲಿ ಆ ನೊಂದ ಆತ್ಮಗಳಿಗೆ ಶಾಂತಿ ಸಿಕ್ಕಿ, ನನ್ನ ಪಾಪ ಪ್ರಜ್ಞೆಯೂ ಕಡಿಮೆ ಆಗುತ್ತದೆ ಎಂಬ ನಂಬಿಕೆ ನನ್ನದು. ಈ ಕಾರಣದಿಂದಾಗಿ, ನಾನು ಹೂತಿಟ್ಟ ನೂರಾರು ಶವಗಳನ್ನು ಹೊರ ತೆಗೆಯಲು ಕಾನೂನಿನ ಅನ್ವಯ ಅವಕಾಶ ಮಾಡಿಕೊಡಬೇಕಾಗಿ ತಮ್ಮಲ್ಲಿ ವಿನಂತಿಸುತ್ತೇನೆಂದು ಆ ವ್ಯಕ್ತಿ ಹೇಳಿದ್ದಾನೆ. ತನ್ನ ದೂರಿನ ಜೊತೆಗೆ, ತಾನು ಹೂತುಹಾಕಿದ ಶವಗಳ ಅವಶೇಷಗಳ ಛಾಯಾಚಿತ್ರಗಳನ್ನು ಮತ್ತು ಇತ್ತೀಚೆಗೆ ನಾನು ಧರ್ಮಸ್ಥಳಕ್ಕೆ ಹೋಗಿ ರಹಸ್ಯವಾಗಿ ಒಂದು ಶವದ ಅವಶೇಷಗಳನ್ನು ಹೊರತೆಗೆದಿದ್ದೇನೆ. ಫೋಟೋ ತೆಗೆದುಕೊಂಡು ಅವುಗಳನ್ನು ಪೊಲೀಸರಿಗೆ ನೀಡಿದ್ದೇನೆ” ಎಂದು ಅವರು ವಿವರಿಸಿದ್ದಾರೆ.

ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ಒದಗಿಸಿ

ಹೂತುಹಾಕದಿದ್ದರೆ ಆ ಶವಗಳ ಜೊತೆಯಲ್ಲೇ ಮಣ್ಣು ಪಾಲಾಗಿಸುವ ನಿರಂತರ ಜೀವಬೆದರಿಕೆ ಮತ್ತು ಥಳಿತಗಳ ನೋವಿನ ನೆನಪಿನ ಹೊರೆಯನ್ನು ಇನ್ನೂ ಹೊರಲು ನನ್ನಿಂದ ಸಾಧ್ಯವಿಲ್ಲ. ಈ ಮೂಲಕ ನಾನು ಬಹಿರಂಗಪಡಿಸುತ್ತಿರುವ, ಕೊಲೆಯಾದ ಅನೇಕ ಪುರುಷರು ಮತ್ತು ಅತ್ಯಾಚಾರಕ್ಕೊಳಗಾಗಿ ಕೊಲೆಗೊಳಗಾದ ಅನೇಕ ಯುವತಿಯರು ಮತ್ತು ಮಹಿಳೆಯರ ಮಾಹಿತಿಯನ್ನು ತೀವ್ರಗತಿಯಲ್ಲಿ ತನಿಖೆಗೊಳಪಡಿಸಿ, ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆಯನ್ನು ಒದಗಿಸುವಂತೆ ಕೋರುತ್ತಿದ್ದೇನೆ.

ನನಗೆ ಜೀವ ಬೆದರಿಕೆ ನೀಡುತ್ತಿದ್ದವರು ಇವರೇ…

ಈ ದೂರಿನಲ್ಲಿ ಹೇಳಿರುವ ಆರೋಪಿತರು, ಧರ್ಮಸ್ಥಳ ದೇವಸ್ಥಾನದ ಆಡಳಿತಕ್ಕೆ ಸಂಬಂಧಪಟ್ಟವರು ಮತ್ತು ಇತರೆ ಸಿಬ್ಬಂದಿಗಳು. ಮೃತದೇಹಗಳನ್ನು ಹೂತು ಹಾಕುವಂತೆ ನಿರ್ದೇಶನ ನೀಡಿ ನನಗೆ ನಿರಂತರ ಜೀವ ಬೆದರಿಕೆ ಮತ್ತು ಹಿಂಸೆಯನ್ನು ನೀಡುತ್ತಿದ್ದವರು ಇವರೇ. ಆದರೆ, ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಈ ದೂರಿನಲ್ಲಿಯೇ ಬಹಿರಂಗಪಡಿಸಲು ನನಗೆ ಸಾಧ್ಯವಿರುವುದಿಲ್ಲ. ನಾನು ಹೆಸರಿಸುವ ಕೆಲವು ವ್ಯಕ್ತಿಗಳು ಅತ್ಯಂತ ಪ್ರಭಾವಶಾಲಿಗಳಾಗಿದ್ದು, ಅವರನ್ನು ವಿರೋಧಿಸುವವರನ್ನು ತೊಡೆದುಹಾಕುವ ಪ್ರವೃತ್ತಿ ಹೊಂದಿರುವವರಾಗಿದ್ದಾರೆ.

2018ರ ಸಾಕ್ಷಿ ರಕ್ಷಣೆಯಡಿ ನನಗೆ ಮತ್ತು ನನ್ನ ಕುಟುಂಬಕ್ಕೆ ರಕ್ಷಣೆ ದೊರೆತ ಕೂಡಲೇ, ಎಲ್ಲಾ ಆರೋಪಿತ ವ್ಯಕ್ತಿಗಳ ಹೆಸರುಗಳನ್ನು ಮತ್ತು ಅವರ ನಿರ್ದಿಷ್ಟ ಪಾತ್ರಗಳನ್ನು ಒಳಗೊಂಡಂತೆ ಸಂಪೂರ್ಣ ವಿವರವನ್ನು ಬಹಿರಂಗಗೊಳಿಸಲು ಸಿದ್ಧನಿರುವೆ. ಸುಳ್ಳು ಮಾಹಿತಿಯನ್ನು ಸಲ್ಲಿಸುವ ಪರಿಣಾಮಗಳ ಸಂಪೂರ್ಣ ಜ್ಞಾನದೊಂದಿಗೆ ನಾನು ಈ ದೂರನ್ನು ನೀಡುತ್ತಿದ್ದೇನೆ. ಮೇಲೆ ಹೇಳಿದ ವಿಚಾರವು ನನ್ನ ಜ್ಞಾನ ಮತ್ತು ನಂಬಿಕೆಗೆ ಅನುಗುಣವಾಗಿಯೇ ಹೇಳಿರುತ್ತೇನೆಂದು ದೃಢೀಕರಿಸುತ್ತೇನೆ. ನಾನು ಹೇಳಿರುವುದರ ಸತ್ಯತೆಯನ್ನು ಸ್ಥಾಪಿಸಲು ಪಾಲಿಗ್ರಾಫ್ ಅಥವಾ ಇನ್ಯಾವುದೇ ಪರೀಕ್ಷೆಗೆ ಒಳಪಡಲು ಸಿದ್ಧನಿದ್ದೇನೆ.

ಇದೇ ವೇಳೆ ಆರೋಪಿಗಳ ಹೆಸರು ಬಹಿರಂಗಪಡಿಸುವುದಕ್ಕೂ ಮುನ್ನ ತಮ್ಮನ್ನು ಹತ್ಯೆ ಮಾಡಿದ್ದೇ ಆದರೆ, ಸತ್ಯ ರಕ್ಷಣೆ ಮಾಡುವಂತೆ ದೂರಿನ ಪ್ರತಿಯನ್ನೂ ಕೋರ್ಟ್ ವಕೀಲ ಕೆ.ವಿ. ಧನಂಜಯ್ ಅವರಿಗೂ ಸಲ್ಲಿಸಿರುವುದಾಗಿ ದೂರುದಾರ ಹೇಳಿದ್ದಾರೆ.

ದೂರಿನ ಪ್ರತಿಯಲ್ಲಿ ವ್ಯಕ್ತಿ ತಮ್ಮ ಆಧಾರ್ ಕಾರ್ಡ್, ಧರ್ಮಸ್ಥಳ ಸಂಸ್ಥೆಯಿಂದ ಒದಗಿಸಲಾದ ಗುರುತಿನ ಚೀಟಿ, ಧರ್ಮಸ್ಥಳ-ಬೆಳ್ತಂಗಡಿಯಲ್ಲಿ ನೋಂದಾಯಿಸಲಾದ ತಮ್ಮ ಮತದಾರರ ಗುರುತಿನ ಚೀಟಿ ಮತ್ತು ಶವಗಳ ಫೋಟೋಗಳನ್ನೂ ಲಗತ್ತಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಇದನ್ನೂ ನೋಡಿ: ಸಾರ್ವತ್ರಿಕ ಮುಷ್ಕರ | ರೈತ ಕಾರ್ಮಿಕ ಸಂಘಟಿತ ಹೋರಾಟವೇ ಎಲ್ಲದಕ್ಕೂ ಪರಿಹಾರ | ಜುಲೈ 09Janashakthi Media

Donate Janashakthi Media

Leave a Reply

Your email address will not be published. Required fields are marked *