ಮಂಗಳೂರು: ಕೂಳೂರು ನೂತನ ಸೇತುವೆ ನಿರ್ಮಾಣ ಕಾಮಗಾರಿ ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಆಗ್ರಹಿಸಿ ಹಾಗೂ ರಸ್ತೆ ಗುಂಡಿಗೆ ಬಲಿಯಾದ ಟೈಟಸ್ ಫೆರಾವೋ ಕುಟುಂಬಕ್ಕೆ ಪರಿಹಾರ ಧನ ಒದಗಿಸಲು ಬೇಜವಾಬ್ದಾರಿ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬೈಕಂಪಾಡಿ ವೃತ್ತದಲ್ಲಿ ಪ್ರತಿಭಟನರ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ನ ಜಿಲ್ಲಾಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಅವರು ಬಿ.ಸಿ ರೋಡ್ ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಅಪಾಯಕಾರಿ ಹೊಂಡಗುಂಡಿಗಳಿಂದ ವಾಹನ ಸವಾರರಿಗಾಗುವ ಪ್ರಾಣ ಹಾನಿಗಳಿಗೆ ಹೆದ್ದಾರಿ ಪ್ರಾಧಿಕಾರವೇ ನೇರಹೊಣೆ . ಹೆದ್ದಾರಿಯನ್ನು ಆದಷ್ಟು ಬೇಗ ಸರಿಪಡಿಸದಿದ್ದಲ್ಲಿ ಡಿವೈಎಫ್ಐ ಸಂಘಟನೆಯು ಅಲ್ಲಲ್ಲಿ ಹೆದ್ದಾರಿಗಳನ್ನು ತಡೆದು ಸರಣಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಪ್ರಾಧಿಕಾರಿಗಳ ವಿರುದ್ದ ಕಿಡಿಕಾರಿದರು.
ಪ್ರತಿವರುಷ ಹೆದ್ದಾರಿ ದುರಸ್ಥಿಗೆಂದು ಮೀಸಲಿರಿಸುವ ಸುಮಾರು 8 ಕೋಟಿ ಹಣವನ್ನು ಹೆದ್ದಾರಿ ಪ್ರಾಧಿಕಾರ ಸರಿಯಾಗಿ ವಿನಿಯೋಗಿಸದೆ ಭ್ರಷ್ಟಾಚಾರಕ್ಕೆ ಬಳಸಲಾಗುತ್ತಿದೆಯೇ ಎಂದು ಆರೋಪಿಸಿದರು. ಹೆದ್ದಾರಿ ಪ್ರಾಧಿಕಾರದ ಬೇಜವಾಬ್ದಾರಿಗೆ ಅಮಾಯಕ ವಾಹನ ಸವಾರರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದು ಅಂತಹ ಸಂತ್ರಸ್ತ ಕುಟುಂಬಗಳಿಗೆ ಪರಿಹಾರವನ್ನು ಒದಗಿಸೋದಾಗಲಿ, ಬೇಜವಾಬ್ದಾರಿಯ ಕಾಮಗಾರಿ ನಡೆಸಿದ ಪ್ರಾಧಿಕಾರದ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು. ಸುರತ್ಕಲ್ ಟೋಲ್ ತೆರವುಗೊಂಡು ಎಂಟು ತಿಂಗಳು ಕಳೆದರೂ ಇನ್ನೇನು ಬೀಳುವ ಅಪಾಯಕಾರಿ ಪರಿಸ್ಥಿತಿಯಲ್ಲಿರುವ ಅದರ ಶೆಡ್‌ಗಳನ್ನು ತೆರವುಗೊಳಿಸಲು ಯಾವ ಅಮಾಯಕರ ಪ್ರಾಣ ಬಲಿ ಬೇಕಾಗಿದೆ ಎಂದು ಕಳವಳನ್ನು ವ್ಯಕ್ತಪಡಿಸಿದರು.
ಕೂಳೂರು ಹಳೆ ಸೇತುವೆಯ ಅವಧಿ ಪೂರ್ಣಗೊಂಡಿದ್ದು ಹೊಸ ಸೇತುವ ನಿರ್ಮಾಣ ಕಾಮಗಾರಿ ಪ್ರಾರಂಭಿಸಿ 8 ವರುಷ ಸಂದರೂ ಪೂರ್ಣಗೊಳಿಸಲು ಸಾಧ್ಯವಾಗದೆ ಆಮೆ ವೇಗದಲ್ಲಿ ಸಾಗುತ್ತಿದೆ ಜಿಲ್ಲೆಯ ಸಂಸದ ನಳಿನ್ ಕಟೀಲ್ ಮತ್ತು ಶಾಸಕ ಭರತ್ ಶೆಟ್ಟಿ ಹೆದ್ದಾರಿ ರಸ್ತೆ ಸರಿಪಡಿಸುವಲ್ಲಿಯೂ ಗಮನಕೊಡಲಾಗದೆ ಇರುವ ಇವರ ನಡೆ ಸಂಸದ, ಶಾಸಕ ಸ್ಥಾನಕ್ಕೆನೆ ಅಯೋಗ್ಯರೆನಿಸಿಕೊಂಡಿದ್ದಾರೆ ಎಂದು ದೂರಿದರು.
ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಮಾತನಾಡಿ ಬಿ.ಸಿರೋಡ್ ನಿಂದ ಸುರತ್ಕಲ್ ವರೆಗೆ ನಿರ್ಮಾಣಗೊಂಡಿರುವ ಹೆದ್ದಾರಿ ಪ್ರಾರಂಭದ ಹಂತದಲ್ಲೆ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯಿಂದ ಕೂಡಿದೆ. ಕುಲಶೇಖರ, ಕುಂಟಿಕಾನ, ಕೊಟ್ಟಾರದ ಮೇಲ್ಸೇತುವೆಗಳನ್ನು ಗಮನಿಸಿದರೆ ಸಾಮಾನ್ಯ ಜನರ ಕಣ್ಣಿಗೆ ರಾಚುತ್ತದೆ. ಅತೀ ಹೆಚ್ಚು ಮಳೆ ಬೀಳುವ ಕರಾವಳಿ ಭಾಗ ಮತ್ತು ಮಲೆನಾಡಿನ ಹೆದ್ದಾರಿಗಳಿಗೆ ಬಾಕಿ ಪ್ರದೇಶಕ್ಕಿಂತಲೂ ಹೆಚ್ವು ಅನುದಾನ ಬಿಡುಗಡೆಗೊಳಿಸೋದು ವಾಡಿಕೆ ಆದರೆ ಅದನ್ನು ಸರಿಯಾಗಿ ಬಳಸದೆ ಭ್ರಷ್ಟರ ಪಾಲಾಗುತ್ತಿದೆ ಎಂದು ಆಂತಕವನ್ನು ವ್ಯಕ್ತಪಡಿಸಿದರು.
ಹೆದ್ದಾರಿ ಪಕ್ಕ ಚರಂಡಿಗಳನ್ನು ನಿರ್ಮಿಸದೇ ರಸ್ತೆಯಲ್ಲೆ ನೀರು ಹರಿದು ಕೃತಕ ನೆರೆ ಸೃಷ್ಟಿಯಾಗುವುದನ್ನು ಈ ಜಿಲ್ಲೆಯಲ್ಲಿ ಸುರಿದ ಒಂದೆರಡು ಮಳೆಯಲ್ಲೇ ಕಂಡಿದ್ದೇವೆ. ಜನ ಊರಿನ ಅಭಿವೃದ್ಧಿ ಪ್ರಶ್ನೆಗಳಾದ ರಸ್ತೆ ಚರಂಡಿ ಬಗ್ಗೆ ಮಾತಾಡಬಾರದು ಲವ್ ಜಿಹಾದ್ ಬಗ್ಗೆ ಮಾತಾಡಿ ಎಂದು ಮತೀಯ ರಾಜಕಾರಣ ನಡೆಸುವ ಸಂಸದ ನಳಿನ್ ಕುಮಾರ್ ಕಟೀಲ್ ನಂತಹ ಬಿಜೆಪಿ ಜನಪ್ರತಿನಿಧಿಗಳಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಡಿವೈಎಫ್ಐ ನಗರ ಕಾರ್ಯದರ್ಶಿ ನವೀನ್ ಕೊಂಚಾಡಿ, ಅಧ್ಯಕ್ಷರಾದ ಜಗದೀಅಸ್ ಬಜಾಲ್, ಜಿಲ್ಲಾ ಮುಖಂಡರಾದ ರಫೀಕ್ ಹರೇಕಳ, ತಯ್ಯೂಬ್ ಬೆಂಗರೆ, ಶ್ರೀನಾಥ್ ಕುಲಾಲ್, ಪ್ರಮಿಳಾ ಶಕ್ತಿನಗರ, ಆಶಾ ಬೈಕಂಪಾಡಿ, ಜೋಕಟ್ಟೆ ಗ್ರಾಮಪಂಚಾಯತ್ ಸದಸ್ಯರಾದ ಅಬೂಬಕ್ಕರ್ ಬಾವಾ, ಇಕ್ಬಾಲ್ ಜೋಕಟ್ಟೆ, ಸೆಲ್ವಿಯಾ ಜೋಕಟ್ಟೆ, ಡಿವೈಎಫ್ಐ ಸುರತ್ಕಲ್ ಮುಖಂಡ ಮಕ್ಸೂದ್, ರಿಹಾಬ್ , ಬಿ.ಎಮ್ ಅಬುಸಾಲಿ, ರಿಯಾಜ್ ಎಲ್ಯಾರ್ ಪದವು, ಆಸೀಫ್ ಉರುಮನೆ, ಮುಸ್ತಫಾ ಬೈಕಂಪಾಡಿಮುಂತಾದವರು ಉಪಸ್ಥಿತರಿದ್ದರು ಎಂದು ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ಕಾರ್ಯದರ್ಶಿ ಸಂತೋಷ್ ಬಜಾಲ್ ವರಿಗಾರರಿಗೆ ತಿಳಿಸಿದರು.