ಸಂಪೂರ್ಣ ಸ್ತಬ್ಧವಾಗಲಿರುವ ಕರ್ನಾಟಕ
ಬೆಂಗಳೂರು:ಕೇಂದ್ರ ಸರಕಾರದ ಮೂರು ಕೃಷಿ ಮಸುದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದಲ್ಲಿ ಇಂದು ಭಾರೀ ಪ್ರತಿಭಟನೆಗಳು ನಡೆದಿವೆ. ಕರ್ನಾಟಕದಲ್ಲಿ ಕೃಷಿ ಮಸೂದೆ ವಿರೋಧಿಸಿ 30 ಕ್ಕೂ ಹೆಚ್ಚು ಸಂಘಟನೆಗಳು ಸೆಪ್ಟಂಬರ್ 28 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ರೈತರು, ಕಾರ್ಮಿಕರು, ದಲಿತರು, ವಿದ್ಯಾರ್ಥಿಗಳು, ಮಹಿಳೆಯರು, ಯುವಜನರು ಐಕ್ಯ ಹೋರಾಟದ ಮೂಲಕ ಕರ್ನಾಟಕ ಬಂದ್ ಗೆ ಮುಂದಾಗಿದ್ದಾರೆ.
ಸಂಸತ್‌ನಲ್ಲಿ ಅನುಮೋದನೆ ಪಡೆದಿರುವ ಮೂರು ಕೃಷಿ ಬಿಲ್ ವಿರುದ್ಧ ಒಂದು ವಾರದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಆಕ್ರೋಶ ತೀವ್ರಗೊಳ್ಳುತ್ತಿದೆ. ನಮ್ಮ ಪಾಲಿಗೆ ಎರಡು ಸರಕಾರಗಳು ಸತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಶುಕ್ರವಾರದಂದು ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಮನವೊಲಿಸಲು ಪ್ರಯತ್ನವನ್ನು ನಡೆಸಿದರು. ಅಲ್ಲಿ ರೈತರಿಗೂ ಸರಕಾರಕ್ಕೂ ಸಾಕಷ್ಟು ಜಟಾಪಟಿ ನಡೆಯಿತು. ಯಡಿಯೂರಪ್ಪನವರಿಂದ ಸ್ಪಷ್ಟ ಉತ್ತರ ಸಿಗದೆ ಸಭೆ ವಿಫಲವಾಗಿದೆ.
ಕೇಂದ್ರ ಸರಕಾರದಂತೆ ರಾಜ್ಯ ಸರಕಾರವು ರೈತ ವಿರೋಧಿ ನಿಲುವುಗಳನ್ನು ಜಾರಿ ಮಾಡುತ್ತಿದೆ. ಇವುಗಳ ವಿರುದ್ಧ 28 ರಂದು ಬಂದ್ ಗೆ ಕರೆ ನೀಡಿದ್ದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಕರ್ ತಿಳಿಸಿದ್ದಾರೆ. ಸಾಕಷ್ಟು ಸಂಘಟನೆಗಳು, ರೈತರು, ಕಾರ್ಮಿಕರು ಬೆಂಬಲ ಸೂಚಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಮುಖಂಡರಾದ ಪಿ.ಆರ್. ಸೂರ್ಯ ನಾರಾಯಣರವರು ಪ್ರತಿಕ್ರಿಯೆ ನೀಡಿದ್ದು, ಕೇಂದ್ರ, ರಾಜ್ಯ ಸರಕಾರಗಳ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದು ತಿಳಿಸಿದ್ದಾರೆ. ರೈತರ ನಡುವೆ ಜಾಗೃತಿಗಾಗಿ ಅಟೊ ಮತ್ತು ಜೀಪ್ ಪ್ರಚಾರ ನಡೆಸುತ್ತಿದ್ದೇವೆ. ಮಸುದೆ ಹಿಂಪಡೆಯುವವರೆಗೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸಂಸತ್ತು ಹಾಗೂ ರಾಜ್ಯ ಶಾಸನ ಸಭೆಯಲ್ಲಿ ಕೃಷಿ ಸಂಬಂಧಿತ ಮತ್ತು ಕಾರ್ಮಿಕರಿಗೆ ಸಂಬಂಧಿಸಿದಂತೆ ಮಸೂದೆಗಳನ್ನು ಜಾರಿ ಮಾಡುವ ಮೂಲಕ ರೈತ- ಕಾರ್ಮಿಕರ ಮೇಲೆ ಗದಾ ಪ್ರಹಾರ ನಡೆಸುತ್ತಿದೆ ಎಂದು ಸಿಐಟಿಯುನ ಪ್ರತಾಪಸಿಂಹ ಆರೋಪಿಸಿದ್ದಾರೆ. 28 ರ ಬಂದ್ ಗೆ ಸಿಐಟಿಯು ಬೆಂಬಲ ಘೋಷಿಸಿದೆ.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಕರ್ನಾಟಕ ಬಂದ್ ಗೆ ಬೆಂಬಲ ನೀಡಿದ್ದು, ಮಹಿಳೆರಿಗೆ ಭದ್ರತೆ ಹಾಗೂ ರಕ್ಷಣೆ ನೀಡುವಲ್ಲಿ ಸರಕಾರಗಳು ವಿಫಲವಾಗಿವೆ ಎಂದು ಜನವಾದಿ ಮಹಿಳಾ ಸಂಘನೆಯ ರಾಜ್ಯಾಧ್ಯಕ್ಷರಾದ ದೇವಿಯವರು ತಿಳಿಸಿದ್ದಾರೆ.
ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದ್ಯಾರ್ಥಿಗಳು ಬೆಂಬಲವನ್ನು ಘೊಷಣೆ ಮಾಡಿದ್ದು ಎಸ್.ಎಫ್.ಐ ಸೇರಿದಂತೆ ಹತ್ತಕ್ಕೂ ಹೆಚ್ಚು ಪ್ರಗತಿಪರ ವಿದ್ಯಾರ್ಥಿ ಸಂಘಟನೆಗಳು ಕರ್ನಾಟಕ ಬಂದ್ ನಲ್ಲಿ ಪಾಲಗೊಳ್ಳುವುದಾಗಿ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ ಮ್ಯಾಗಳಮನಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಸಂಘಟನೆ ಹೋರಾಟಕ್ಕೆ ಬೆಂಬಲವನ್ನು ಘೊಷಿಸಿದೆ. ಈ ಕುರಿತಾಗಿ ಸಾರಿಗೆ ನಿಗಮಗಳ ನೌಕರರ ಫೆಡರೇಷನ್(ಸಿಐಟಿಯು) ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಪ್ರತಿಕ್ರಿಯೆ ನೀಡುತ್ತಾ ‘ಬಹುತೇಕ ಸಾರಿಗೆ ಬಂದ್’ ಮಾಡುವ ಸುಳಿವನ್ನು ನೀಡಿದ್ದಾರೆ.
ಕರ್ನಾಟಕ ಬಂದ್ ಗೆ ಡಿವೈಎಫ್ಐ, ಎಪಿಎಂಸಿ ವರ್ತಕರ ಸಂಘ, ದಲಿತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಚಿತ್ರನಟರು ಬೆಂಬಲವನ್ನು ಘೊಷಿಸಿದ್ದಾರೆ. ಕೆಲ ಜಿಲ್ಲೆಗಳಲ್ಲಿ ಹೊಟೇಲ್ ಮಾಲೀಕರ ಸಂಘ ಬೆಂಬಲವನ್ನು ಘೊಷಿಸಿದೆ. ಸರಕಾರದ ವಿರುದ್ಧ ರೈತರ ಕಾರ್ಮಿಕರ ಸಿಟ್ಟು ಹೆಚ್ಚಾಗಿದ್ದು ಈ ಮಸೂದೆಗಳನ್ನು ಹಿಂಪಡೆಯುವವರೆಗೆ ಚಳುವಳಿ ನಡೆಯುವ ಮುನ್ಸೂಚನೆಯನ್ನು ತೋರಿಸುತ್ತಿದೆ. ಸರಕಾರಗಳು ಎಚ್ಚೆತ್ತುಕೊಳ್ಳದೆ ಇದ್ದಲ್ಲಿ ಭಾರೀ ಬೆಲೆ ತೆರಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.