ಬೆಂಗಳೂರು: ಅಪರಾಧ ನಡೆದ ಸ್ಥಳಗಳಿಗೆ ಭೇಟಿ ನೀಡಿ, ತನಿಖೆಗೆ ಮಾರ್ಗದರ್ಶನಗಳನ್ನು ನೀಡಿ ಎಂದು ಎಸ್’ಪಿ, ಡಿಸಿಪಿಗಳಿಗೆ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್ ಅವರು ಗುರುವಾರ ಸೂಚನೆ ನೀಡಿದ್ದಾರೆ.
ಪೊಲೀಸ್ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದ ಡಿಜಿಪಿ ಅಲೋಕ್ ಕುಮಾರ್ ಅವರು, ಸಭೆಯಲ್ಲಿ ಪರಿಣಾಮಕಾರಿ ತನಿಖೆಯ ಅಗತ್ಯವನ್ನು ಒತ್ತಿ ಹೇಳಿದರು. ಅಪರಾಧಗಳನ್ನು ತಡೆಗಟ್ಟಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು. ಹಿರಿಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪ್ರಕರಣಗಳ ಮೇಲೆ ನಿಗಾ ಇಡಬೇಕು. ಸೂಕ್ಷ್ಮ ಪ್ರಕರಣಗಳ ತನಿಖೆಯನ್ನು ಮೇಲ್ವಿಚಾರಣೆ ಮಾಡಬೇಕು. ಗಂಭೀರ ಅಪರಾಧಗಳ ಕೃತ್ಯಗಳಲ್ಲಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಲು ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ:ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಿರಿಯ ಅಧಿಕಾರಿಗಳ ಫೋನ್ ನಂಬರ್ ಫಲಕ ಅಳವಡಿಸುವುದು ಕಡ್ಡಾಯ
ಗಸ್ತು ತಿರುಗುವುದನ್ನು ಪರಿಣಾಮಕಾರಿಯಾಗಿ ಮಾಡಬೇಕು. ಅಪರಾಧ ಕೃತ್ಯಗಳ ತಡೆಯಲು ಮತ್ತಷ್ಟು ಸಿಬ್ಬಂದಿಗಳು ಗಸ್ತು ತಿರುಗಬೇಕು ಎಂದು ಹೇಳಿದರು.ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸುಳ್ಳು ಸುದ್ದಿಗಳ ಮೇಲೆ ವಿಶೇಷ ನಿಗಾವಹಿಸಬೇಕು. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.