ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆವರೆಗೆ ಬ್ರಿಟಿಷರ ಕಾಲದ ಸುರಂಗ ಮಾರ್ಗ

ದೆಹಲಿ: ವಿಧಾನಸಭೆಯಲ್ಲಿ ಸುರಂಗ ಮಾದರಿಯ ರಚನೆಯೊಂದು ಪತ್ತೆಯಾಗಿದೆ. ವಿಧಾನಸಭೆಯಿಂದ ಸುರಂಗ ಮಾರ್ಗವು ಕೆಂಪುಕೋಟೆಗೆ ಸಂಪರ್ಕ ಕಲ್ಪಿಸಲಿದೆ ಎಂದು ತಿಳಿದು ಬಂದಿದೆ. ಬ್ರಿಟೀಷರು ಇದನ್ನು ಬಳಕೆ ಮಾಡುತ್ತಿದ್ದರು ಎನ್ನಲಾಗಿದ್ದು, ಸ್ವಾತಂತ್ರ್ಯ ಹೋರಾಟಗಾರರನ್ನು ಸಾಗಿಸುವಾಗ ಪ್ರತೀಕಾರದ ದಾಳಿಗಳನ್ನು ತಪ್ಪಿಸಲು ಬ್ರಿಟಿಷರು ಈ ಸುರಂಗ ಮಾರ್ಗವನ್ನು ಬಳಸಿಕೊಂಡಿದ್ದರು ಎಂದು ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ.

‘1993ರಲ್ಲಿ ನಾನು ಶಾಸಕನಾಗಿದ್ದಾಗಲೇ ಇಲ್ಲಿ ಸುರಂಗವೊಂದಿದ್ದು, ಅದು ಕೆಂಪುಕೋಟೆ ಜತೆ ಸಂಪರ್ಕ ಸಾಧಿಸುತ್ತದೆ ಎಂಬ ಮಾತುಗಳನ್ನು ಕೇಳಿದ್ದೆ. ಅದರ ಇತಿಹಾಸವನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದೆ. ಆದರೆ ಅದರ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ’ ಎಂದಿದ್ದಾರೆ.

ಇದನ್ನು ಓದಿ: ಬಿಜೆಪಿಗೆ ರಾಷ್ಟ್ರಧ್ವಜದ ಕುರಿತು ಗೌರವ ಸುಲಭವಲ್ಲ

1912ರಲ್ಲಿ ಕೇಂದ್ರ ಶಾಸನಸಭೆಯಾಗಿ ಬಳಸುತ್ತಿದ್ದ ಕಟ್ಟಡವನ್ನೇ ಈಗ ದೆಹಲಿ ವಿಧಾನಸಭೆಯನ್ನಾಗಿ ಬಳಸಲಾಗುತ್ತಿದೆ. ಬ್ರಿಟಿಷರು ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ವರ್ಗಾಯಿಸಿದ ಬಳಿಕ 1926ರಲ್ಲಿ ಇದನ್ನು ನ್ಯಾಯಾಲಯವನ್ನಾಗಿ ಪರಿವರ್ತಿಸಿತ್ತು. ಆಗ ಸ್ವಾತಂತ್ರ್ಯ ಹೋರಾಟಗಾರರನ್ನು ಕೆಂಪುಕೋಟೆಯಿಂದ ಸುರಂಗ ಮಾರ್ಗದ ಮೂಲಕ ನೇರವಾಗಿ ಕೋರ್ಟ್‌ಗೆ ತರಲಾಗುತ್ತಿತ್ತು ಎಂದು ಹೇಳಿದರು.

‘ಇಲ್ಲಿ ಮರಣದಂಡನೆ ಕೊಠಡಿ ಇರುವುದರ ಬಗ್ಗೆ ನಮಗೆಲ್ಲ ತಿಳಿದಿದೆ. ಆದರೆ ಎಂದಿಗೂ ಅದನ್ನು ತೆರೆದಿರಲಿಲ್ಲ. ಈಗ ದೇಶವು 75ನೇ ಸ್ವಾತಂತ್ರ್ಯೋತ್ಸವ ಆಚರಿಸಿಕೊಳ್ಳುತ್ತಿದೆ. ಹೀಗಾಗಿ ನಾನು ಆ ಕೊಠಡಿಯನ್ನು ಪರಿಶೀಲಿಸಲು ಬಯಸಿದ್ದೆ. ಆ ಕೊಠಡಿಯನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಅವರ ಸ್ಮಾರಕವನ್ನಾಗಿ ಬದಲಿಸಲು ಬಯಸಿದ್ದೇನೆ’ ಎಂದಿದ್ದಾರೆ.

ಇದನ್ನು ಓದಿ: ಸ್ವಾತಂತ್ರ್ಯ-75 ಮತ್ತು ಸ್ವಾವಲಂಬನೆ

‘ನಮಗೀಗ ಈಗ ಸುರಂಗದ ಪ್ರವೇಶ ದ್ವಾರ ದೊರಕಿದೆ. ಆದರೆ ಅದನ್ನು ಇನ್ನಷ್ಟು ಮುಂದೆ ಅಗೆಯುತ್ತಾ ಹೋಗುವಂತಿಲ್ಲ. ಏಕೆಂದರೆ ಸುರಂಗದ ಎಲ್ಲ ಮಾರ್ಗಗಳೂ ಮೆಟ್ರೋ ಯೋಜನೆಗಳು ಹಾಗೂ ಒಳಚರಂಡಿ ಯೋಜನೆಗಳಿಗಾಗಿ ನಾಶಗೊಂಡಿವೆ’ ಎಂದು ತಿಳಿಸಿದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ಶ್ರೀಮಂತ ಇತಿಹಾಸ ಹೊಂದಿದೆ. ನಮ್ಮ ಇತಿಹಾಸದ ಪ್ರತಿಫಲವನ್ನು ಪ್ರವಾಸಿಗರು ಹಾಗೂ ಸಂದರ್ಶಕರು ಪಡೆದುಕೊಳ್ಳುವಂತಹ ಸ್ವರೂಪದಲ್ಲಿ ಅದನ್ನು ನವೀಕರಿಸಲು ಅಗತ್ಯವಿದೆʼ ಎಂದು ತಿಳಿಸಿದರು.

ದೆಹಲಿ ವಿಧಾನಸಭೆಯು ಭಾರತದ ಸ್ವಾತಂತ್ರ್ಯದೊಂದಿಗೆ ಸಂಬಂಧ ಹೊಂದಿದ ಕಟ್ಟಡವಾಗಿದೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ನಂತರದ ದಿನಗಳಲ್ಲಿ ಗಲ್ಲು ಕೊಠಡಿಯನ್ನು ಪ್ರವಾಸಿಗರ ವೀಕ್ಷಣೆಗೆ ತೆರೆಯಲು ಉದ್ದೇಶಿಸಲಾಗಿದೆ.

Donate Janashakthi Media

Leave a Reply

Your email address will not be published. Required fields are marked *