ಸ್ವಾತಂತ್ರ್ಯ-75 ಮತ್ತು ಸ್ವಾವಲಂಬನೆ

ಮೂಲ: ರಘು

ಸ್ವಾತಂತ್ರ್ಯಾ ನಂತರದ ಕಳೆದ 74 ವರ್ಷಗಳಲ್ಲಿ ನಮ್ಮ ಗಣತಂತ್ರದ ಸಂಸ್ಥಾಪಕರ ಮತ್ತು ಸ್ವಾತಂತ್ರ್ಯ ಚಳುವಳಿಯ ಕನಸುಗಳಿಗೆ ಸಂಬಂಧಪಟ್ಟಂತೆ ಸಾಮೂಹಿಕ ಸಾಧನೆಗಳನ್ನು, ದೌರ್ಬಲ್ಯಗಳನ್ನು ಹಾಗೂ ವೈಫಲ್ಯಗಳನ್ನು ದೇಶ ಚರ್ಚೆ ಮಾಡುತ್ತಿದೆ. ಈ ಲೇಖನವು ದೇಶದ ಎರಡು ಸ್ಥಾಪನಾ ಆಶಯಗಳನ್ನು ಚರ್ಚೆ ಮಾಡಲು ಬಯಸುತ್ತದೆ; ಅದಕ್ಕೆ ಸಲ್ಲಬೇಕಾದ ಗಮನ ಯಾವಾಗಲೂ ಸಿಗುತ್ತಿಲ್ಲ ಅಥವಾ ಬಹಳ ಮಟ್ಟಿಗೆ ಕಾಟಾಚಾರದಂತೆ ಅದರ ಬಗ್ಗೆ ಹೇಳಲಾಗುತ್ತದೆ. ಆದರೆ, ವಿಶೇಷವಾಗಿ ಈಗ ನಾವಿರುವ ಈ ಜ್ಞಾನದ ಯುಗವೆಂದು ಕರೆಯಲಾಗುತ್ತಿರುವ 22ನೇ ಶತಮಾನದಲ್ಲಿ ಎರಡೂ ಆಶಯಗಳು ನಿರ್ಣಾಯಕವಾದವು ಮತ್ತು ಭಾರತದ ಭವಿಷ್ಯವನ್ನು ನಿರ್ಧರಿಸಬಹುದು ಕೂಡ. ಆದರೆ ಅದನ್ನು ನಾವು ಒಪ್ಪಿಕೊಳ್ಳುತ್ತಿಲ್ಲ.

ಭಾರತದ ಅಭಿವೃದ್ಧಿಗೆ ಅತ್ಯವಶ್ಯವಾದುದೆಂದು, ನಾವು ಕಲ್ಪನೆ ಮಾಡಿದ ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ಮತ್ತು ಹಲವಾರು ರೀತಿಯಲ್ಲಿ ಜನರಿಗೆ ಸವಲತ್ತುಗಳನ್ನು ಒದಗಿಸುವ ಸಲುವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ, ಅದರಲ್ಲೂ ವಿಶೇಷವಾಗಿ ಉದ್ದಿಮೆಗಳಿಗೆ ಸಂಬಂಧಿಸಿದ, ಸ್ವಾವಲಂಬನೆಯ ಮಹತ್ವವನ್ನು ಸ್ವಾತಂತ್ರ್ಯ ಪೂರ್ವದಲ್ಲಿಯೇ ತಿಳಿಯಲಾಗಿತ್ತು. ನಂತರದ ದಶಕಗಳಲ್ಲಿ, ಬೇರೆ ಬೇರೆ ವ್ಯಾಖ್ಯಾನಕಾರರು ತಮ್ಮ ಒಲವಿಗೆ ತಕ್ಕಂತೆ ಮತ್ತು ಆ ವಿಚಾರವನ್ನು ವಿರೋಧಿಸುತ್ತಾರೋ ಅಥವಾ ಪ್ರೋತ್ಸಾಹಿಸುತ್ತಾರೋ ಎನ್ನುವುದರ ಮೇಲೆ ಆ ಪದಕ್ಕೆ ಹಲವಾರು ಅರ್ಥಗಳನ್ನು ನೀಡಿದರು. ಪದಕ್ಕೆ ಅರ್ಥ ನೀಡುವ ಆ ಚರ್ಚೆಗಳಿಗೆ ಹೋಗದೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿನ ಸ್ವಾವಲಂಬನೆಯು ದೇಶದ ಆರ್ಥಿಕತೆಯ “ಜೀವಾಳ” ಕ್ಷೇತ್ರಗಳು ಹಾಗೂ ಆಯಕಟ್ಟಿನ ವಲಯಗಳಾದ ಅಂತರಿಕ್ಷ, ಅಣುಶಕ್ತಿ ಮತ್ತು ರಕ್ಷಣೆಯ ಬೆಳವಣಿಗೆ ಮತ್ತು ಸಾರ್ವಜನಿಕ ಉದ್ದಿಮೆಗಳ ಬೆಳವಣಿಗೆಗಳಲ್ಲಿ ದೇಶೀಯ ಸಾಮರ್ಥ್ಯ ಬೆಳೆಸುವುದನ್ನು ಒಳಗೊಂಡಿರಬೇಕೆಂದು ಆಲೋಚಿಸಲಾಗಿತ್ತು. ನೂತನ ಸ್ವತಂತ್ರ ದೇಶದ ವ್ಯೂಹಾತ್ಮಕ ಸ್ವಾಯತ್ತತೆಯನ್ನು ಉಳಿಸಿಕೊಳ್ಳಲು, ಜಾಗತಿಕ ಶಕ್ತಿಗಳ ಒತ್ತಡ ಹಾಗೂ ಆಮಿಷಗಳಿಂದ ಮುಕ್ತವಾಗಿರಲು ಈ ಗುರಿಗಳು ಅತ್ಯಂತ ನಿರ್ಣಾಯಕವಾದವು ಎಂದು ಗ್ರಹಿಸಲಾಗಿತ್ತು. ಈ ನೀತಿಗಳ ಅನುಸರಣೆಯ ಭಾಗವಾಗಿ ಮುಂಚೂಣಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಪ್ರಧಾನ ಸಂಶೋಧನಾ ಸಂಸ್ಥೆಗಳನ್ನು, ಐಐಟಿ, ಐ.ಐ.ಎಸ್.ಸಿ ಮತ್ತು ಎ.ಐ.ಐ.ಎಂ.ಎಸ್ ಅಂತಹ ಉನ್ನತ ಶೈಕ್ಷಣಿಕ ಸಂಸ್ಥೆಗಳನ್ನು, ಮತ್ತು ಸಿ.ಎಸ್.ಐ.ಆರ್ ಅಡಿಯಲ್ಲಿ ಕೈಗಾರಿಕಾ ಸಂಶೋಧನಾ ಪ್ರಯೋಗಾಲಯಗಳನ್ನು ಸ್ಥಾಪಿಸಲಾಯಿತು.

ಈ ನೀತಿಗಳು ನೀಡಿದ ಆಶ್ವಾಸನೆಯನ್ನೆಲ್ಲಾ ಈಡೇರಿಸಲಾಯಿತು, ಅಥವಾ ಭಾರತೀಯ ಜನಸಮುದಾಯದ ಏಳ್ಗೆಗೆ ಇತರ ಆದ್ಯತೆಗಳಾದ ಉಚಿತ ಮತ್ತು ಸಾರ್ವತ್ರಿಕ ಶಾಲಾ ಶಿಕ್ಷಣ ಮತ್ತು ಪರಿಣಾಮಕಾರಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಗುರಿಯನ್ನು ಮುಟ್ಟುವುದರಲ್ಲಿ ವಿಫಲವಾಗಲಿಲ್ಲ ಎಂದು ಯಾರೂ ವಾದಿಸುತ್ತಿಲ್ಲ. ಎಡಪಂಥೀಯರಂತೂ ಖಂಡಿತಾ ಹೀಗೆ ವಾದಿಸುವುದಿಲ್ಲ. ಇವಾವುದನ್ನೂ ಇವತ್ತಿನವರೆಗೂ, 74 ವರ್ಷಗಳ ಸ್ವಾತಂತ್ರ್ಯಾ ನಂತರವೂ ಸಾಧಿಸಲಾಗಿಲ್ಲ. ಅದೇ ಸಮಯದಲ್ಲಿ, ನಿರಾಕರಿಸಲಾಗದ್ದೇನೆಂದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವಾವಲಂಬನೆ ಮತ್ತು 1947ರ ನಂತರದ ಮೊದಲ ದಶಕಗಳಲ್ಲಿನ ಔದ್ಯಮಿಕ ತಳಪಾಯವು ದೇಶವನ್ನು ಮುಂದಕ್ಕೊಯ್ದು ಹೊಸತಾಗಿ ಸ್ವತಂತ್ರಗೊಂಡ ದೇಶಗಳಲ್ಲಿ ಮುಂಚೂಣಿ ಸ್ಥಾನವನ್ನು ನೀಡಿತು ಮತ್ತು ಈ ಸಮಕಾಲೀನ ಕಾಲದಲ್ಲೂ ಕೂಡ ಬಹುಮಟ್ಟಿಗೆ ಅದೇ ಸ್ಥಾನವನ್ನು ಉಳಿಸಿಕೊಂಡಿದೆ ಎನ್ನುವುದು. ಪ್ರಶ್ನೆ ಇರುವುದು, ಇವತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವಾವಲಂಬನೆ ಎಷ್ಟು ಪ್ರಸ್ತುತವಾಗಿದೆ ಮತ್ತು ಆ ಸಂಬಂಧದಲ್ಲಿ ಭಾರತದ ಸ್ಥಾನ ಏನಾಗಿದೆ ಮತ್ತು ಇದು ಹೇಗೆ ಭಾರತದ ಬೆಳವಣಿಗೆಯ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದಾಗಿದೆ.

ಎರಡನೇ ಸ್ಥಾಪನಾ ಆಶಯವು ಆಧುನಿಕ ಭಾರತದಲ್ಲಿ ಪ್ರಜೆಗಳು ತಮ್ಮ ಶಕ್ತಿಸಾಮರ್ಥ್ಯವನ್ನು ಸಾಕಾರಗೊಳಿಸಿಕೊಳ್ಳುವ ಸಲುವಾಗಿ, ಜವಾಹರ್ ಲಾಲ್ ನೆಹರೂರವರು ತಮ್ಮ ‘ಡಿಸ್ಕವರಿ ಆಫ್ ಇಂಡಿಯಾ’ದಲ್ಲಿ ಹೇಳಿದಂತೆ “ಆಲೋಚನೆಯ ವೈಯಕ್ತಿಕ ಮತ್ತು ಸಾಮಾಜಿಕ ಪ್ರಕ್ರಿಯೆಯಲ್ಲಿ ಹಾಗೂ ಕಾರ್ಯ ನಿರ್ವಹಿಸುವಲ್ಲಿ ಸಾಕ್ಷ್ಯಾಧಾರದ ತಾರ್ಕಿಕ ವಿಧಾನಗಳನ್ನು ಮತ್ತು ವಿಮರ್ಶನಶೀಲ ಚಿಂತನೆಗಳ ವೈಜ್ಞಾನಿಕ ವಿಧಾನಗಳನ್ನು” ಬಳಸುವಂತಹ “ವೈಜ್ಞಾನಿಕ ಮನೋಭಾವ”ವನ್ನು ತುಂಬಿಕೊಳ್ಳುವ ಅವಶ್ಯಕತೆ ಇದೆ. ಸಂವಿಧಾನದ ನಿರ್ದೇಶಕ ತತ್ವಗಳ 51ಎ(ಹೆಚ್) ಅನುಚ್ಛೇದವು ಅದನ್ನು ಹೀಗೆ ವಿವರಿಸುತ್ತದೆ: ”ಅನ್ವೇಷಣೆಯ ಮತ್ತು ಸುಧಾರಣೆಯ ಮನೋಭಾವ.” ಸ್ಥಳಾಭಾವದ ಮಿತಿಯಿಂದಾಗಿ ವೈಜ್ಞಾನಿಕ ಮನೋಭಾವ ಕುರಿತು ಈಗ ವಿವರಿಸಲಾಗುತ್ತಿಲ್ಲ, ಇಲ್ಲಿ ಸ್ವಾವಲಂಬನೆಯ ಬಗ್ಗೆ ಮಾತ್ರ ಮಾತನಾಡೋಣ.

ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವಾವಲಂಬನೆ:
ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತ

ಪುನರುಚ್ಚರಿಸಬೇಕೆಂದರೆ ಕೊನೇ ಪಕ್ಷ ಸ್ವಾತಂತ್ರ್ಯಾನಂತರದ ಮೊದಲ ಮೂರು ದಶಕಗಳಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವಾವಲಂಬನೆಯ ಅನುಸರಣೆಯು ಸಾರ್ವಜನಿಕ ವಲಯದ ನಾಯಕತ್ವದಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಪ್ರಭಾವಶಾಲಿ ಔದ್ಯಮಿಕ ಅಡಿಪಾಯಕ್ಕೆ ಮತ್ತು ಮೂಲ, ಅನ್ವಯಿಕ ಹಾಗೂ ಔದ್ಯಮಿಕ ಸಂಶೋಧನೆ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದ ಉನ್ನತ ಶಿಕ್ಷಣದಲ್ಲಿ ಉತ್ತಮ ನೆಲೆಗೆ ಕಾರಣವಾಯಿತು. “ಸಮಾಜವಾದಿ” ಪಥವನ್ನು ಪ್ರೋತ್ಸಾಹಿಸಲು ಮತ್ತು ಖಾಸಗಿ ವಲಯವನ್ನು ದಮನ ಮಾಡಲು ಸಾರ್ವಜನಿಕ ವಲಯದ ಪ್ರಾಬಲ್ಯವನ್ನು ಸೈದ್ಧಾಂತಿಕವಾಗಿ ಮುನ್ನೆಲೆಗೆ ತರಲಾಗಿದೆ ಎಂಬ ಗ್ರಹಿಕೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಹರಡಿದ್ದರು. ಆದರೆ ಸತ್ಯ ಸಂಗತಿ ಏನೆಂದರೆ, ಭಾರತದ ಖಾಸಗಿ ವಲಯದ ನೇತಾರರು ತಮ್ಮ ಪ್ರಖ್ಯಾತ 1948ರ ಬೊಂಬಾಯಿ ಯೋಜನೆ(ಬಾಂಬೆ ಪ್ಲಾನ್)ಯ ಅಡಿಯಲ್ಲಿ, ಸರ್ಕಾರವು ಮುಖ್ಯವಾದ ಉದ್ಯಮಗಳನ್ನು ಸ್ಥಾಪಿಸಿ ನಡೆಸಬೇಕು, ಏಕೆಂದರೆ ಖಾಸಗಿ ವಲಯದ ಬಳಿ ಬಂಡವಾಳವಾಗಲೀ ಮತ್ತು ಅವುಗಳನ್ನು ನಡೆಸುವ ಸಾಮರ್ಥ್ಯವಾಗಲಿ ಇಲ್ಲ ಮತ್ತು ತಾವು (ಖಾಸಗಿ ವಲಯದವರು) ಗ್ರಾಹಕ ವಸ್ತುಗಳು ಹಾಗೂ ಲಘು ಎಂಜನೀಯರಿಂಗ್ ಉದ್ಯಮವನ್ನು ಕೇಂದ್ರೀಕರಿಸಿ ಕೆಲಸ ಮಾಡುತ್ತೇವೆ ಎಂದಿದ್ದರು.

1970 ರ ಹೊತ್ತಿಗೆ, ಸಾರ್ವಜನಿಕ ವಲಯದ ಘನ ಕೈಗಾರಿಕೆಗಳು ಆರ್ಥಿಕತೆಗೆ ಮತ್ತು ಬೊಕ್ಕಸಕ್ಕೆ ಗಣನೀಯ ಕೊಡುಗೆ ನೀಡಿದವಾದರೂ, ಅದೇ ಸಮಯದಲ್ಲಿ ಅವು ಹಲವಾರು ಕ್ಷೇತ್ರಗಳ ತಾಂತ್ರಿಕ ಜ್ಞಾನದಲ್ಲಿ ಸ್ಥಗಿತತೆಯನ್ನು ಎದುರಿಸುತ್ತಿದ್ದವು, ಹಾಗೂ ಇವು ಸ್ಪರ್ಧಾತ್ಮಕತೆಗೆ ಮತ್ತು ಭವಿಷ್ಯದಲ್ಲಿ ಕೊಡುಗೆಯ ಸಾಮರ್ಥ್ಯಕ್ಕೆ ಅಡ್ಡಿಯುಂಟುಮಾಡಿದ್ದವು. ಇದಕ್ಕಾಗಿ ಕೆಲವರು ಸಾರ್ವಜನಿಕ ವಲಯದ ಉದ್ಯಮಗಳನ್ನು ದೂಷಿಸಬಹುದು. ಆದರೆ ಸಾರ್ವಜನಿಕ ವಲಯದ ಉದ್ಯಮಗಳಿಗೆ ಆಧುನೀಕರಣಕ್ಕಾಗಿಯಾಗಲಿ, ಮೇಲ್ದರ್ಜೆಗೆ ಏರಿಸುವ ಬಗ್ಗೆಯಾಗಲಿ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಹಣ ಹೂಡುವುದಕ್ಕಾಗಲೀ ತಮ್ಮದೇ ದಾರಿಯನ್ನು ಕಂಡುಕೊಳ್ಳಲು ಸ್ವಯಮಾಧಿಕಾರ ಇರಲಿಲ್ಲ ಮತ್ತು ಈಗಲೂ ಇಲ್ಲ – ಎಂಬುದು ನಮಗೆ ಗೊತ್ತಿರಬೇಕು. ಆಟೋಮೊಬೈಲ್ಸ್, ದ್ವಿಚಕ್ರವಾಹನಗಳು, ಬಾಳಿಕೆ ಬರುವ ಗ್ರಾಹಕ ವಸ್ತುಗಳು ಇತ್ಯಾದಿಗಳ ಖಾಸಗಿ ವಲಯದ ಉದ್ದಿಮೆಗಳು ಸಹ ತಮ್ಮ ಕ್ಷೇತ್ರಗಳಲ್ಲಿ ವಿದೇಶಿ ಪಾಲುದಾರರೊಂದಿಗಿನ ತಮ್ಮ ಮೂಲ ಸಹಯೋಗಗಳ ಆಚೆ ಹೋಗುವ ಪ್ರಯತ್ನ ಮಾಡಲಿಲ್ಲ, ದಶಕಗಳ ಕಾಲ ಅದೇ ಹಳೆಯ ತಾತನ ಕಾಲದ ಮಾದರಿಗಳೊಂದಿಗೆ ಪೂರ್ಣ ರಕ್ಷಿತ ಮಾರುವವರ ಮಾರುಕಟ್ಟೆಯ ತೃಪ್ತಿಕರ ವಾತಾವರಣದಲ್ಲಿ ಹಾಗೆಯೇ ಉಳಿದರು ಮತ್ತು ತಮ್ಮದೇ ಆದ ಸ್ವಾಯತ್ತತೆ  ಪಡೆಯುವ ಅಗತ್ಯವನ್ನು ಕಾಣಲಿಲ್ಲ. ಖಾಸಗಿ ವಲಯದ ಘಟಕಗಳು ತಮಗಾಗಲೀ ಅಥವಾ ದೇಶಕ್ಕಾಗಲೀ ಸ್ವಾವಲಂಬನೆಯ ಅಗತ್ಯವನ್ನು ಕಾಣಲೇ ಇಲ್ಲ ಮತ್ತು ಹಾಗಾಗಿ ಸಂಶೋಧನೆ ಹಾಗೂ ಅಭಿವೃದ್ಧಿ ದೂರದ ಮಾತಾಗಿಯೇ ಉಳಿಯಿತು.

ಬದಲಾದ ಗುರಿಗಳು, ಹುಸಿ ಕಥಾನಕಗಳು

1980 ಮತ್ತು 90ರ ಹೊತ್ತಿಗೆ, ಸಾರ್ವಜನಿಕ ವಲಯದ ನೇತೃತ್ವದಲ್ಲಿನ ಸ್ವಾವಲಂಬೀ ಅಭಿವೃದ್ಧಿಯ ಆರಂಭದ ಗುರಿ ಮತ್ತು ವೇಗ ಶಕ್ತ್ಯುತ್ಸಾಹವನ್ನು ಕಳೆದುಕೊಂಡಿತ್ತು. ಏಕೆಂದರೆ, ಐಎಂಎಫ್, ವಿಶ್ವಬ್ಯಾಂಕ್ ಮತ್ತಿತರ ಅಂತರ‍್ರಾಷ್ಟ್ರೀಯ ಶಕ್ತಿಯುತ ಸಂಸ್ಥೆಗಳು ರೂಪಿಸಿದ ನವ-ಉದಾರವಾದಿ ಆರ್ಥಿಕ ಚೌಕಟ್ಟಿನ ಪ್ರಭಾವಕ್ಕೆ ಒಳಗಾದ ಸರ್ಕಾರದ ಪ್ರಭಾವಿ ಶಕ್ತಿಗಳು ವಿದೇಶಿ ಹೂಡಿಕೆಗಳನ್ನು ಬರಮಾಡಿಕೊಳ್ಳಲು, ಸಾರ್ವಜನಿಕ ಉದ್ದಿಮೆಗಳಲ್ಲಿನ ತಮ್ಮ ಪಾಲನ್ನು ಹಿಂತೆಗೆದುಕೊಳ್ಳಲು ಮತ್ತು ಕ್ರಮೇಣವಾಗಿ ಸಾರ್ವಜನಿಕ ಸೇವೆಗಳಿಂದ, ಸಾಮಾಜಿಕ ವಲಯದಿಂದ ಮತ್ತು ಹಲವಾರು ಔದ್ಯಮಿಕ ವಲಯದಿಂದ ಸರ್ಕಾರ ಹಿಂದೆ ಸರಿಯಲು ಪ್ರಾರಂಭಿಸಿದವು. 1990 ರಲ್ಲಿ ನವ-ಉದಾರವಾದಿ ನೀತಿಗಳನ್ನು ಸರ್ಕಾರವೇ ಪೂರ್ತಿಯಾಗಿ ಅಪ್ಪಿಕೊಂಡಾಗ ಈ ಪ್ರವೃತ್ತಿಗಳು ಪರಾಕಾಷ್ಠೆಯನ್ನು ತಲುಪಿದವು; ದೇಶೀಯ ಖಾಸಗಿ ವಲಯ ಮತ್ತು ವಿದೇಶಿ ಕಾರ್ಪೊರೇಷನ್ನುಗಳ “ಮೃಗೀಯ ಸಹಜ ಪ್ರವೃತ್ತಿಗಳನ್ನು” ಸ್ವೇಚ್ಛೆಯಾಗಿ ಬಿಟ್ಟುಬಿಡುವ ಗುರಿಯನ್ನು ಸರ್ಕಾರವೇ ಘೋಷಿಸಿತು; ನಿಯಂತ್ರಣಗಳನ್ನು ತೆಗೆದುಹಾಕಿ ಆರ್ಥಿಕತೆಯ ಬಹುಪಾಲು ಎಲ್ಲಾ ವಲಯಗಳನ್ನು ಅವರಿಗೆ ತೆರೆದಿಟ್ಟು ಅಸಂಖ್ಯಾತ ಉತ್ತೇಜಕ ಸವಲತ್ತುಗಳನ್ನು ನೀಡಲಾಯಿತು.

ಆದರೆ, ನೈಜ ಆರ್ಥಿಕತೆಯಲ್ಲಿ ಬೇರೆಯದೇ ಕಥೆ ಪ್ರಕಟವಾಯಿತು. ಸಾರ್ವಜನಿಕ ಹಾಗೂ ಖಾಸಗಿ ವಲಯಗಳ ನೌಕರರಿಗೆ ಹೆಚ್ಚಿಸಿದ ಸಂಬಳ ಮತ್ತು ಬ್ಯಾಂಕುಗಳ ಉದಾರ ಸಾಲಗಳಿಂದ ಉತ್ತೇಜನ ಪಡೆದು ಬಾಳಿಕೆ ಬರುವ ಗ್ರಾಹಕ ವಸ್ತುಗಳಲ್ಲಿ ಉತ್ಕರ್ಷ ಉಂಟಾಯಿತು. ವಿದೇಶಿ ಕಂಪನಿಗಳು ದೊಡ್ಡ ರೀತಿಯಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಟ್ಟವು, ಹಾಗೆಯೇ ಭಾರತೀಯ ಕಂಪನಿಗಳು ತಮ್ಮ ಉತ್ಪನ್ನಗಳ ಶ್ರೇಣಿ ಮತ್ತು ಗುಣಮಟ್ಟಗಳನ್ನು ವೃದ್ಧಿಸುವ ಸಲುವಾಗಿ ವಿದೇಶಿ ಕಂಪನಿಗಳೊಂದಿಗೆ ಸಹಯೋಗಕ್ಕಾಗಿ ಧಾವಿಸಿದವು. ಆದರೂ, ಸ್ವಾವಲಂಬನೆಯಲ್ಲಿ ಕೆಲವು ಲಾಭ ಸಿಕ್ಕಿತು ಮತ್ತು ಭಾರತೀಯ ಉದ್ಯಮಗಳ, ಮುಖ್ಯವಾಗಿ ಖಾಸಗಿ ವಲಯದಲ್ಲಿ ಸ್ವಯಮಾಧಿಕಾರದ ಸಾಮರ್ಥ್ಯದಲ್ಲಿ ಹೆಚ್ಚಳವಾಯಿತು. ವಿದೇಶಿ ಛಾಪುಗಳು(ಬ್ರ್ಯಾಂಡ್ಸ್) ಭಾರತದಲ್ಲಿ ಹೆಸರು ಮಾಡಿದವು, ಹಲವಾರು ಭಾರತೀಯ ಕಂಪನಿಗಳು ಹಣ ಮಾಡಿದವು, ಆದರೆ ಕೆಲವಾದರೂ ಸ್ಥಳೀಯ ತಾಂತ್ರಿಕ ಪರಿಣತಿಯಿಂದ ಸಿದ್ಧವಾದ ಭಾರತೀಯ ಛಾಪುಗಳು ಅಥವಾ ಉತ್ಪನ್ನಗಳು ಅಂತರ‍್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಸರು ಮಾಡಿವೆಯೆ ಎನ್ನುವುದನ್ನು ಯೋಚಿಸಬೇಕು.

2014ರಲ್ಲಿ ಈಗಿನ ಸರ್ಕಾರ ಬಂದ ನಂತರ ಈ ಪ್ರವೃತ್ತಿ ಇನ್ನೂ ಹದಗೆಟ್ಟಿತು. ಭಾರತವನ್ನು 21ನೇ ಶತಮಾನಕ್ಕೆ ಕೊಂಡೊಯ್ಯುವ, ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಅಥವಾ ಮುಂದಿನ ಕೆಲವೇ ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಘನೋದ್ದೇಶಗಳ ಭರವಸೆಗಳನ್ನು ನೀಡಲಾಗಿದೆ. “ಆತ್ಮನಿರ್ಭರ್ ಭಾರತ” ಅಥವಾ ಸ್ವಾವಲಂಬನೆಯ ಭಾರತವನ್ನಾಗಿ ಮಾಡಲಾಗುವುದೆಂದೂ ಅಬ್ಬರದ ಪ್ರಚಾರ ಮಾಡಿದೆ ಈ ಸರ್ಕಾರ. ಆದಾಗ್ಯೂ ಈ ಸರ್ಕಾರವು ತನ್ನ ಬಹುಪಾಲು ಸಮಯವನ್ನು ಪ್ರಮುಖ ವಿದೇಶಿ ರಕ್ಷಣಾ ಕಂಪನಿಗಳನ್ನು ದೇಶದೊಳಕ್ಕೆ ಆಹ್ವಾನಿಸುವುದರಲ್ಲಿ ಕಳೆದಿದೆ. ಅಂತಿಮವಾಗಿ ಚಿತ್ರವಿಚಿತ್ರವಾದ ಗ್ರಹಿಕೆಗಳು ಮತ್ತು ಹಾರೈಕೆಯ ಆಲೋಚನೆಗಳು ಕಟು ವಾಸ್ತವವನ್ನು ಎದುರಿಸಬೇಕಾಗಿದೆ. ಯಾವ ದೇಶವೂ ಪ್ರೀತಿಗಾಗಿ ಅಥವಾ ದುಡ್ಡಿಗಾಗಿ ಉನ್ನತ ತಂತ್ರಜ್ಞಾನವನ್ನು ಬಿಟ್ಟುಕೊಡುವುದಿಲ್ಲ. ಗಣನೀಯವಾಗಿ ಅಂತರ‍್ರಾಷ್ಟ್ರೀಯ ಮಟ್ಟದಲ್ಲಿ ಆರ್ಥಿಕವಾಗಿ ಸದೃಢರಾಗಿರುವ ದೇಶಗಳ ಅನುಭವವೂ ಇದೇ ಆಗಿದೆ. ಏಕೆಂದರೆ ಅವರು ತಮ್ಮದೇ ಆದ ದೇಶೀಯ ಪ್ರಯತ್ನಗಳ ಮೂಲಕ ಸ್ವಾಯತ್ತ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ಸಾಮರ್ಥ್ಯವನ್ನು ಬೆಳೆಸಿಕೊಂಡಿದ್ದಾರೆ.

1970 ಮತ್ತು 80ರಲ್ಲಿ ಜಪಾನ್ ಮತ್ತು ಅದರ ಹಿಂದೆಯೇ ದಕ್ಷಿಣ ಕೊರಿಯಾ, ನಂತರ ಇತರ ಆಗ್ನೇಯ ಏಶಿಯಾದ ದೇಶಗಳು ಮತ್ತು ಆ ನಂತರ ಚೈನಾ, ಎಲ್ಲವೂ ಸ್ಪಷ್ಟವಾಗಿ ಅರಿತುಕೊಂಡಿವೆ ಮತ್ತು ಪ್ರತ್ಯಕ್ಷ ಮಾಡಿ ತೋರಿಸಿವೆ ಕೂಡ. ಸ್ವಾವಲಂಬನೆಯ ಮೌಲ್ಯ ಮತ್ತು ಸ್ವಾಯತ್ತ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಾಮರ್ಥ್ಯದ ಬೆಳವಣಿಗೆಗಳು ಕೇವಲ ಆರ್ಥಿಕತೆಯನ್ನು ಬೆಳೆಸಲು ಮಾತ್ರವಲ್ಲ, ಜಾಗತಿಕ ಆರ್ಥಿಕತೆಯಲ್ಲಿ ದೊಡ್ಡ ಮಟ್ಟದ ಪಾತ್ರವನ್ನು ವಹಿಸಲು ಕೂಡ ಅದು ಅಗತ್ಯವಾದ ಮೆಟ್ಟಿಲಾಗುತ್ತದೆ ಎಂಬ ಸತ್ಯವನ್ನು ಅವು ಕಂಡುಕಂಡಿವೆ. ಇವತ್ತು ಈ ದೇಶಗಳು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹಾಗೂ ಮಾನವ ಸಂಪನ್ಮೂಲಗಳಲ್ಲಿನ ಹಣಹೂಡಿಕೆಯಿಂದ ಮತ್ತು ಬಹುಪಾಲು ದೇಶೀಯ ಪ್ರಯತ್ನಗಳಿಂದ – ತಂತ್ರಜ್ಞಾನದಲ್ಲಿ, ಆವಿಷ್ಕಾರಗಳಲ್ಲಿ, ತಯಾರಿಕೆಯಲ್ಲಿ ಮತ್ತು ಬಾಳಿಕೆ ಬರುವ ಗ್ರಾಹಕ ವಸ್ತುಗಳ ಮೌಲ್ಯದ ಸರಣಿಯಲ್ಲಿ (ವ್ಯಾಲ್ಯೂ ಚೈನ್), ಎಲೆಕ್ಟ್ರಾನಿಕ್ಸ್, ಮೈಕ್ರೋ ಪ್ರೊಸೆಸರ್ ಚಿಪ್ಸ್, ಕಂಪ್ಯೂಟಿಂಗ್ ಸಿಸ್ಟಮ್ಸ್, ಸೆಲ್ಯುಲರ್ ಫೋನ್ಸ್ ಮತ್ತು ಸಂಪರ್ಕ ಉಪಕರಣಗಳೂ (ಕಮ್ಯುನಿಕೇಷನ್ಸ್ ಬ್ಯಾಕ್‌ಬೋನ್ಸ್), ರೊಬಾಟಿಕ್‌ಗಳು, ಉತ್ಪಾದನಾ ಯಂತ್ರಗಳಲ್ಲಿ ಮತ್ತು ಹಲವಾರು ಇತರ ವಲಯಗಳ ವಿಚಾರದಲ್ಲಿ – ಪ್ರಮುಖ ಸ್ಥಾನವನ್ನು ಹೊಂದಿವೆ. ವಿಶೇಷವಾಗಿ ಚೈನಾವು 5ಜಿ, ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್), ಉಪಕರಣಗಳ ಜಾಲ (ಇಂಟರ್ನೆಟ್ ಆಫ್ ಥಿಂಗ್ಸ್), ಸ್ವಯಂ-ಚಾಲನೆ (ಆಟೊಮೇಷನ್), ಸ್ವಯಂಚಾಲಿತ ವಾಹನಗಳು (ಅಟಾನಮಸ್ ವೆಹಿಕಲ್ಸ್), ಬ್ಯಾಟರಿ ಸ್ಟೋರೇಜ್ ಸಿಸ್ಟೆಮ್ಸ್ ಮುಂತಾದ ತಂತ್ರಜ್ಞಾನಗಳಲ್ಲಿ ಪ್ರಮುಖ ನೆಲೆ ಸಾಧಿಸುವ ಹೊಸ್ತಿಲಲ್ಲಿ ನಿಂತಿದೆ.

ಆಟೋಮೊಬೈಲ್ಸ್ ಅಥವಾ ಗೃಹಬಳಕೆಯ ಯಂತ್ರಗಳು (ವೈಟ್ ಗೂಡ್ಸ್) ನಂತಹ ವಸ್ತುಗಳು ಕೆಲವು ಬಾರಿ ಭಾರತದಲ್ಲೇ ತಯಾರಾಗಿದ್ದಾಗ್ಯೂ ಅಥವಾ ಅವು ಸಂಪೂರ್ಣವಾಗಿ ಆಮದಾಗಿದ್ದರೂ ಅಥವಾ ಸೆಲ್ ಫೋನ್ ತರಹ ಇಲ್ಲಿ ಜೋಡಿಸಲ್ಪಟ್ಟಿದ್ದರೂ ಸಹ ಭಾರತವು ನಿಸ್ಸಂದೇಹವಾಗಿ ವಿದೇಶಿ ವಸ್ತುಗಳಿಗೆ ಒಂದು ಒಳ್ಳೆಯ ಮಾರುಕಟ್ಟೆಯಾಗಿದೆ. ಅತ್ಯಂತ ದೊಡ್ಡ ಭಾರತೀಯ ಖಾಸಗಿ ಕಾರ್ಪೊರೇಷನ್‌ಗಳು, ಕೆಲವೇ ಕೆಲವು ಒಂದು ಅಂಕಿಯವುಗಳನ್ನು ಹೊರತುಪಡಿಸಿದರೆ, ಬಹುರಾಷ್ಟ್ರೀಯ ಕಂಪನಿಗಳ ಅಥವಾ ಇತರ ವಿದೇಶಿ ಕಂಪನಿಗಳ ಕಿರಿಯ ಪಾಲುದಾರರಾಗಿರುವವರು ಸ್ವಯಮಾಧಿಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯವನ್ನು ಬೆಳೆಸಿಲ್ಲ, ಜಾಗತಿಕ ಮಟ್ಟದ ಕೆಲವು ಉತ್ಪನ್ನಗಳನ್ನು ಅಥವಾ ಬ್ರ್ಯಾಂಡುಗಳನ್ನು ಮಾಡಿಲ್ಲ ಕೂಡ. ಖಾಸಗಿ ವಲಯವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಥವಾ ಗಣನೀಯ ದೇಶೀಯ ಸಾಮರ್ಥ್ಯವನ್ನು ಬೆಳೆಸುವಲ್ಲಿ ಸ್ವಲ್ಪವೂ ಆಸಕ್ತಿ ಹೊಂದದಿರುವಾಗಲೂ ಸಹ, ಸರ್ಕಾರವು ಸಾರ್ವಜನಿಕ ವಲಯದಿಂದ ತನ್ನ ಪಾಲನ್ನು ಹಿಂತೆಗೆದುಕೊಳ್ಳುವ ಮತ್ತು ಖಾಸಗೀಕರಿಸುವ ಪಟ್ಟು ಹಿಡಿದಿದೆ. ಈ ಸಾರ್ವಜನಿಕ ವಲಯಗಳು ಮಾತ್ರವೇ ಭಾರತವನ್ನು ಆತ್ಮವಿಶ್ವಾಸದಿಂದ ಭವಿಷ್ಯವನ್ನು ಎದುರಿಸಲು ಸಮರ್ಥವನ್ನಾಗಿಸಲು ಅಗತ್ಯವಾದ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಕೈಗೊಳ್ಳುವ ಔದ್ಯಮಿಕ ಶಕ್ತಿಯಾಗಿದೆ. ಮತ್ತೆ ವಿಜ್ಞಾನ ಮತ್ತು ತಂತ್ರಜ್ಞಾನದ ಸ್ವಾವಲಂಬನೆಯನ್ನು ಅಪ್ಪಿಕೊಳ್ಳದೇ, ಅಗತ್ಯವಿರುವಲ್ಲಿ ದೋಷಪರಿಹಾರ ಮಾಡಿ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಬಲಪಡಿಸದೇ, ಮತ್ತು ಬಹುವಾಗಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸದಿದ್ದರೆ ಭಾರತದ ಭವಿಷ್ಯ ಉಜ್ವಲವಾಗಿ ಕಾಣಲಾರದು.

ಅನುವಾದ: ಟಿ. ಸುರೇಂದ್ರ ರಾವ್

Donate Janashakthi Media

Leave a Reply

Your email address will not be published. Required fields are marked *