ಬೆಂಗಳೂರು: ಇದೇ ತಿಂಗಳ ಮಾರ್ಚ್ 9 ರಿಂದ 29ರವರೆಗೆ ನಡೆಯಲಿರುವ ದ್ವಿತೀಯ ಪಿಯು ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಎಂಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಿಎಂಟಿಸಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುವ ದಿನಾಂಕಗಳಂದು ಅಂದರೆ ದಿನಾಂಕ 09-03-2023 ರಿಂದ 29-03-2023 ರವರೆಗೆ ಪರೀಕ್ಷೆಗೆ ಹಾಜರಾಗುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಕ್ಷಾ ಕೇಂದ್ರದವರೆಗೆ ಮತ್ತು ಹಿಂದುರುಗುವಾಗ ‘ದ್ವಿತೀಯ ಪಿಯುಸಿ ಪರೀಕ್ಷಾ ಪ್ರವೇಶ ಪತ್ರ’ವನ್ನು ತೋರಿಸಿ, ನಿಗಮದ ನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ನಿಗಮದ ಎಲ್ಲಾ ಚಾಲಕ/ ನಿರ್ವಾಹಕರುಗಳಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಅವಧಿಯಲ್ಲಿ ನಿಯೋಜಿತ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಹಾಗೂ ವಾಸಸ್ಥಳಕ್ಕೆ ಮರಳಲು ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪ್ರಯಾಣಿಸಲು ಅನುವು ಮಾಡಿಕೊಡಬೇಕು ಎಂದು ಸೂಚನೆ ನೀಡಿದೆ.
ಇನ್ನೂ ಪರೀಕ್ಷಾ ಕೇಂದ್ರಗಳ ಬಳಿ ವಿದ್ಯಾರ್ಥಿಗಳು ಹಾಗೂ ಪೋಷಕರು ಕೋರಿಕೆ ನಿಲುಗಡೆ ಕೋರಿದಲ್ಲಿ, ಕೋರಿಕೆ ನಿಲುಗಡೆ ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಪ್ರತಿದಿನ ಒಂದು ವಿಷಯಕ್ಕೆ ಮಾತ್ರ ನಡೆಯಲಿದ್ದು, ಬೆಳಿಗ್ಗೆ 10-15 ರಿಂದ ಮಧ್ಯಾಹ್ನ 01-30 ರವರೆಗೆ ಪರೀಕ್ಷೆ ನಡೆಯಲಿದೆ.
ದ್ವಿತೀಯ ಪಿಯು ಪರೀಕ್ಷೆಯ ವೇಳಾಪಟ್ಟಿ :
09 – 03- 2023 – ಕನ್ನಡ, ಅರೇಬಿಕ್
11-03-2023 -ಗಣಿತ ಶಾಸ್ತ್ರ, ಶಿಕ್ಷಣ ಶಾಸ್ತ್ರ
13-03-2023- ಅರ್ಥಶಾಸ್ತ್ರ
14-03-2023- ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಮನಃಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ
15-03-2023- ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ , ಫ್ರೆಂಚ್
16-03-2023 – ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ
17-03-2023 – ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಅಂಡ್ ವೆಲ್‌ನೆಸ್
18-03-2023- ಭೂಗೋಳಶಾಸ್ತ್ರ, ಜೀವಶಾಸ್ತ್ರ
20-03-2023- ಇತಿಹಾಸ, ಭೌತಶಾಸ್ತ್ರ
21-03-2023 – ಹಿಂದಿ
23-03-2023- ಇಂಗ್ಲಿಷ್
25-03-2023 -ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ
27-03-2023 – ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ
29-03-2023 -ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ