ಉಡುಪಿ: ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ, ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಬೆಂಗಳೂರಿನ ಶಿಲ್ಪಿ ಕೃಷ್ಣ ನಾಯ್ಕ (45)ನನ್ನು ಕಾರ್ಕಳ ನಗರ ಪೊಲೀಸರು ಪುದುಚೇರಿಯ ಮಾಹೆಯಲ್ಲಿ ಭಾನುವಾರ ಬಂಧಿಸಿದ್ದಾರೆ. ಉಡುಪಿ
ಶಿಲ್ಪಿ ಕೃಷ್ಣ ನಾಯಕ್ ರಿಗೆ ಕಾರ್ಕಳ ಪರುಶುರಾಮ್ ಥೀಮ್ ಪಾರ್ಕ್ ನಲ್ಲಿ ಕಂಚಿನ ಪರುಶುರಾಮ್ ಮೂರ್ತಿ ನಿರ್ಮಾಣಕ್ಕೆ ನೀಡಲಾಗಿತ್ತು. ಆದರೆ ಅವರು ಉಡುಪಿ ನಿರ್ಮಿತಿ ಕೇಂದ್ರದಿಂದ 1.25 ಕೋಟಿ ರೂ. ಹಣ ಪಡೆದುಕೊಂಡು ಕಾಮಗಾರಿ ನಡೆ ಸಿದ್ದು, ನಂತರ ಆರೋಪಿ ಕಂಚಿನ ಮೂರ್ತಿಯನ್ನು ಮಾಡದೇ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿದ್ದರು.
ಈ ವಿಚಾರಕ್ಕೆ ಸಂಬಧಿಸಿದಂತೆ ಭಾರಿ ವಿವಾದವಾಗಿದ್ದು, ಸದ್ಯ ಸರಕಾರ ತನಿಖೆ ನಡೆಸುತ್ತಿದೆ. ಈ ನಡುವೆ ಸರಕಾರಕ್ಕೆ ವಂಚಿಸಿದ್ದಾರೆ ಎಂದು ನಲ್ಲೂರಿನ ಕೃಷ್ಣ ಶೆಟ್ಟಿ ಜೂನ್ ತಿಂಗಳಲ್ಲಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದರಂತೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ: ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರಗಳ ಹೊಣೆ – ವಿಜೆಕೆ ನಾಯರ್
ಬಳಿಕ ಆರೋಪಿ ಕೃಷ್ಣ ನಾಯಕ್, ಈ ಪ್ರಕರಣವನ್ನು ರದ್ಧುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಹಾಕಿದ್ದು, ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿತು.
ಬಳಿಕ ಆರೋಪಿಯು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಉಡುಪಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಜಾ ಗೊಳಿಸಿತು. ಈ ಹಿನ್ನೆಲೆಯಲ್ಲಿ ಕಾರ್ಕಳ ನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ನೋಡಿ: ಸುಳ್ಳಿನ ಮೂಲಕ ಕೋಮುದ್ವೇಷ ಹರಡಿದ ತೇಜಸ್ವಿ ಸೂರ್ಯ – ಸಚಿವ ಪ್ರಿಯಾಂಕ್ ಖರ್ಗೆ ಆರೋಪ