ನವದೆಹಲಿ: ಭಾರತದ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅಪಚಾರ ಮಾಡುವ ‘ಅಗ್ನಿಪಥ್’ ಯೋಜನೆಗೆ ಬಲವಾದ ಅಸಮ್ಮತಿ ವ್ಯಕ್ತಪಡಿಸಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ)ನ ಪೊಲಿಟ್ ಬ್ಯೂರೋ ನಾಲ್ಕು ವರ್ಷಗಳ ಅವಧಿಗೆ ‘ಒಪ್ಪಂದದ ಮೇರೆಯ ಸೈನಿಕ’ರನ್ನು ನೇಮಕ ಮಾಡುವ ಮೂಲಕ ವೃತ್ತಿಪರ ಸಶಸ್ತ್ರ ಪಡೆಗಳನ್ನು ಕಟ್ಟಲಾಗುವುದಿಲ್ಲ. ಈ ಯೋಜನೆಯು ಪಿಂಚಣಿ ಹಣವನ್ನು ಉಳಿಸಲು, ನಮ್ಮ ವೃತ್ತಿಪರ ಸಶಸ್ತ್ರ ಪಡೆಗಳ ಗುಣಮಟ್ಟ ಮತ್ತು ದಕ್ಷತೆಯನ್ನು ತೀವ್ರವಾಗಿ ಇಳಿಸುತ್ತದೆ ಎಂದು ಹೇಳಿದೆ.
ಕಳೆದ ಎರಡು ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯಾವುದೇ ನೇಮಕಾತಿ ನಡೆದಿಲ್ಲ. ಈ ಯೋಜನೆಯು ಸಶಸ್ತ್ರ ಪಡೆಗಳಿಗೆ ನಿಯಮಿತ ಸೈನಿಕರನ್ನು ನೇಮಿಸುವ ಬದಲು ಅಂತಹ ಗುತ್ತಿಗೆ ಸೈನಿಕರಿಗೆ ನಾಲ್ಕು ವರ್ಷಗಳ ನಂತರ ಉದ್ಯೋಗದ ಇತರ ಯಾವುದೇ ನಿರೀಕ್ಷೆಗಳು ಇಲ್ಲದಂತೆ ಅವರನ್ನು ಬಿಟ್ಟುಬಿಡುತ್ತದೆ. ಇದು ಅವರು ಖಾಸಗಿ ಸಶಸ್ತ್ರ ಪಡೆಗಳಿಗೆ ಸೇವೆ ಸಲ್ಲಿಸುವ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈಗಾಗಲೇ ತೀವ್ರ ಒತ್ತಡದಲ್ಲಿರುವ ನಮ್ಮ ಸಾಮಾಜಿಕ ಹಂದರಕ್ಕೆ ಅನಾಹುತಕಾರಿ ಪರಿಣಾಮ ಉಂಟು ಮಾಡುತ್ತದೆ.
ಉದ್ಯೋಗ ಭದ್ರತೆಯ ಕನಿಷ್ಠ ರಕ್ಷಣೆಯಿಲ್ಲದೆ ನಮ್ಮ ಯುವಕರು ಪರಮ ತ್ಯಾಗಕ್ಕೆ ಸಿದ್ಧರಾಗಬೇಕೆಂದು ಕರೆ ನೀಡುವುದು ಅಪರಾಧವಾಗುತ್ತದೆ. ದೇಶದ ವಿವಿಧ ಭಾಗಗಳಲ್ಲಿ ಸ್ವಯಂಪ್ರೇರಿತ ಪ್ರತಿಭಟನೆಗಳು ಈ ಯೋಜನೆಯ ವಿರುದ್ಧ ಆಕ್ರೋಶವನ್ನು ಪ್ರತಿಬಿಂಬಿಸುತ್ತವೆ.
ಈ ‘ಅಗ್ನಿಪಥ್’ ಯೋಜನೆಯನ್ನು ತಕ್ಷಣವೇ ರದ್ದುಪಡಿಸಬೇಕು ಮತ್ತು ಸಶಸ್ತ್ರ ಪಡೆಗಳಿಗೆ ನಿಯಮಿತ ನೇಮಕಾತಿಯನ್ನು ತುರ್ತಾಗಿ ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಆಗ್ರಹಿಸಿದೆ.