ಚೇಳುಗಳ ಜೊತೆ ಜನರ ಸಂಭ್ರಮ
ಯಾದಗಿರಿ: ಗುರುಮಠಕಲ್ ತಾಲೂಕಿನ ಕಂದಕೂರ ಗ್ರಾಮದಲ್ಲಿರುವ ತಾಲೂಕಿನ ಕಂದಕೂರು ಗ್ರಾಮದಲ್ಲಿರುವ ಕೊಂಡಮೇಶ್ವರಿ ದೇವಸ್ಥಾನದ ಸುತ್ತಮುತ್ತಲಿನ ಬೆಟ್ಟದ ಪ್ರದೇಶದಲ್ಲಿ ಶ್ರಾವಣ ಮಾಸದ ಪಂಚಮಿ ದಿನ ಮಕ್ಕಳು ಹಾಗೂ ಭಕ್ತರು ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ. ನಾಗಪ್ಪನ ಹಬ್ಬದಂದು ಚೇಳಿಗೆ ಪೂಜೆ ಮಾಡುವ ವಿಶಿಷ್ಟ ಸಾಂಪ್ರದಾಯದಿಂದ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕಂದಕೂರ ಗ್ರಾಮ ಪ್ರಸಿದ್ಧಿ ಪಡೆದಿದೆ.
ಪ್ರತಿವರ್ಷ ಗ್ರಾಮದಲ್ಲಿ ಕೊಂಡಮೇಶ್ವರಿ ದೇವಿ ಹಾಗೂ ಚೇಳಿನ ಜಾತ್ರೆ ಅದ್ಧೂರಿಯಾಗಿ ನಡೆಯುತ್ತಿದೆ. 2019ರ ನಂತರ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಆದರೆ, ಬೆಟ್ಟದ ಕಲ್ಲಿನ ಅಡಿಯಲ್ಲಿ ಸಿಗುತ್ತಿದ್ದ ಚೇಳುಗಳ ಸಂಖ್ಯೆಯಲ್ಲೂ ಭಾರಿ ಇಳಿಮುಖವಾಗಿದೆ.
ಇದನ್ನೂ ಓದಿ:ಆದಿವಾಸಿಗಳ ಸುಸ್ಥಿರ ಅಭಿವೃದ್ಧಿ ಸಾಧ್ಯವೇ ?
ಚೇಳುಗಳ ಹುಡುಕಾಟ: ಜಾತ್ರೆಗೆ ಬಂದಿದ್ದ ಭಕ್ತರು ಬೆಟ್ಟದಲ್ಲಿ ಚೇಳುಗಳ ಹುಡುಕಾಟದಲ್ಲಿ ತೊಡಗುವುದು ವಿಶೇಷವಾಗಿದೆ. ಮಹಿಳೆಯರು, ಮಕ್ಕಳು ಕಲ್ಲುಗಳ ಸಂದಿನಲ್ಲಿ ಅಡಗಿಕೊಂಡಿದ್ದ ಚೇಳುಗಳನ್ನು ಹಿಡಿದು ಸಂಭ್ರಮಿಸುವುದು ಇಲ್ಲಿ ಸಾಮಾನ್ಯ ಸಂಗತಿ.
ಮೊದಲೆಲ್ಲಾ ಪಂಚಮಿಯ ದಿನದಂದು ಬೆಟ್ಟದ ಯಾವ ಕಲ್ಲನ್ನು ತೆಗೆದರೂ ಕೆಳಗೆ ಗುಂಪು ಗುಂಪಾಗಿ ಚೇಳಿನ ಮರಿಗಳು, ಚೇಳುಗಳು ಕೈಗೆ ಸಿಗುತ್ತಿದ್ದವು. ಬೆಟ್ಟದ ಪ್ರತಿ ಚಿಕ್ಕ ಪುಟ್ಟ ಕಲ್ಲುಗಳೂ ಚೇಳುಗಳ ಆವಾಸಕ್ಕೆ ಸಾಕ್ಷಿಯಾಗಿದ್ದವು. ಇಲ್ಲಿನ ವಿಶೇಷದ ಕುರಿತು ವ್ಯಾಪಕ ಪ್ರಚಾರವಾದ ನಂತರ ಜಾತ್ರೆಗೆ ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶಗಳಿಂದಲೂ ಜನ ಜಾತ್ರೆಗೆ ಬರುತ್ತಿದ್ದಾರೆ ಎಂದು ಸ್ಥಳೀಯರು ಹೇಳಿದರು.
ಬೆಟ್ಟಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದಂತೆ ಬೆಟ್ಟದ ಮೇಲಿನ ಕೊಂಡ್ಯೆಮ್ಮಾಯಿ ದೇವಸ್ಥಾನದ ಅಭಿವೃದ್ಧಿಯೂ ವೇಗ ಪಡೆದಿದೆ. ಇದರ ಜೊತೆಗೆ ಬೆಟ್ಟವನ್ನು ಹತ್ತಲು ಭಕ್ತರ ಅನುಕೂಲಕ್ಕೆಂದು ಮೆಟ್ಟಿಲುಗಳ ನಿರ್ಮಾಣ, ಬೆಟ್ಟದ ಮೇಲೆ ವಾಹನಗಳೂ ಹೋಗಲೆಂದು ಬೆಟ್ಟವನ್ನು ಅಗೆದು ಕಚ್ಚಾ ರಸ್ತೆ ನಿರ್ಮಾಣ, ಮೇಲೊಂದು ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ.
‘ಮೊದಲೆಲ್ಲ ಯಾವ ಆತಂಕ, ತೊಂದರೆಗಳಿಲ್ಲದೆ ಬೆಟ್ಟದಲ್ಲಿ ವಾಸ ಮಾಡುತ್ತಿದ್ದ ಚೇಳುಗಳು, ಜನರ ಓಡಾಟದಲ್ಲಿ ಗಣನೀಯ ಹೆಚ್ಚಳ, ಅಭಿವೃದ್ಧಿ ಕೆಲಸಗಳಿಗಾಗಿ ಬೆಟ್ಟದ ಮೆಲಿನ ಪ್ರದೇಶದಲ್ಲಿ ಉಂಟಾದ ಕಂಪನಗಳ ಕಾರಣ ಬೇರೆಡೆ ವಲಸೆ ಹೋಗುವ ಸಾಧ್ಯತೆ ಕುರಿತೂ ಚಿಂತಿಸಬೇಕಿದೆ’ ಎನ್ನುತ್ತಾರೆ ಪರಿಸರ ಪ್ರೇಮಿಯೊಬ್ಬರು.
‘ಗ್ರಾಮದಲ್ಲಿ ಬೇರೆ ಬೆಟ್ಟಗಳಿದ್ದರೂ ಕೊಂಡಮೇಶ್ವರಿ ದೇವಿ ಬೆಟ್ಟದಲ್ಲಿ ಮಾತ್ರ ಚೇಳುಗಳು ಕಾಣಸಿಗುತ್ತವೆ. ಅದೂ ಚೇಳಿನ ಜಾತ್ರೆ ದಿನ ಮಾತ್ರ ಕಾಣಸಿಗುತ್ತದೆ. ಉಳಿದ ದಿನ ಬಂದರೆ ಸಿಗುವುದಿಲ್ಲ. ಜಾತ್ರೆಗೂ ಚೇಳಿಗೆ ಏನು ಸಂಬಂಧ ಎನ್ನುವ ಕುರಿತು ಸಂಶೋಧನೆ ನಡೆಯಬೇಕು‘ ಎಂದು ಉಪನ್ಯಾಸಕ ಸಿ.ಆರ್.ಕಂಬಾರ ಶೆಟ್ಟಿಕೇರಾ ಹೇಳಿದರು.
ಕಂದಕೂರ ಬೆಟ್ಟದಲ್ಲಿರುವ ಚೇಳುಗಳ ಬಗ್ಗೆ ಅಧ್ಯಯನ ಮಾಡುವ ಅವಶ್ಯವಿದೆ ಎಂದು ವಿಜ್ಞಾನ, ಜೀವಿಶಾಸ್ತ್ರ ತಜ್ಞರ ಅಭಿಪ್ರಾಯವಾಗಿದೆ. ಮಳೆಗಾಲ ಚೇಳುಗಳ ಸಂತಾನೋತ್ಪತಿ ಕಾಲ. ಅವು ಗರ್ಭ ಧರಿಸಿರುವುದರಿಂದ ಉಗ್ರ ರೂಪ ತಾಳುವುದಿಲ್ಲ. ಮರಿಗಳು ಕುಟುಕಿದರೂ ಯಾವುದೇ ರೀತಿಯ ವಿಷಕಾರಿ ಅಂಶ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಅಲ್ಲಿನ ಶಿಕ್ಷಕರು.
ಬೆಟ್ಟದ ವೈಶಿಷ್ಟ್ಯದ ಕುರಿತು ವೈಜ್ಞಾನಿಕ ಸಂಶೋಧನೆಗಳ ಅವಶ್ಯಕತೆಯಿದೆ:
ನಾಗರ ಪಂಚಮಿಯಂದು ಮಾತ್ರ ಕುಟುಕದ ಚೇಳುಗಳು ಪ್ರಾಕೃತಿಕ, ಜೈವಿಕ ವೈಶಿಷ್ಟ್ಯತೆಯ ರಕ್ಷಣೆಗೆ ಮನವಿ ಜೀವ ವೈವಿಧ್ಯತೆಗೆ ಮಾರಕವಾದ ಅಭಿವೃದ್ಧಿ ಬೇಡ: ಶ್ರೀಗಳು ಕಂದಕೂರು ಗ್ರಾಮದ ಕೊಂಡ್ಯೆಮ್ಮಾಯಿ ದೇವಸ್ಥಾನವಿರುವ ಬೆಟ್ಟದ ಪ್ರಾಕೃತಿಕವಾದ ಮಣ್ಣಿನ ಗುಣ ಹಾಗೂ ವಾತಾವರಣದ ಕಾರಣ ಚೇಳುಗಳು ಕುಟುಕದಿರಬಹುದು ಅಥವಾ ವಿಷದ ಪ್ರಭಾವ ಇಲ್ಲದಿರಬಹುದು. ಅಭಿವೃದ್ಧಿಯೆಂದರೆ ಜೀವ ಸಂಕುಲಗಳಿಗೆ ಸಮಸ್ಯೆಗಾದಂತಿರಲಿ. ಬೆಟ್ಟದ ವೈಶಿಷ್ಟ್ಯದ ಕುರಿತು ವೈಜ್ಞಾನಿಕ ಸಂಶೋಧನೆಗಳ ಅವಶ್ಯಕತೆಯಿದೆ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಖಾಸಾಮಠದ ಪೀಠಾಧಿಪತಿ ಗುರುಮಠಕಲ್ ತಿಳಿಸಿದರು. ಗುಲಬರ್ಗಾ ವಿವಿಯಲ್ಲಿದ್ದಾಗ ಕುತೂಹಲದಿಂದ ಚೇಳಿನ ಜಾತ್ರೆಗೆ ಬಂದಿದ್ದೆ. ಆದರೆ ನನಗೆ ಚೇಳು ಕುಟುಕಿತು. ಆದರೂ ಯಾವುದೇ ಪರಿಣಾಮವಾಗಲಿಲ್ಲ. ಇಲ್ಲಿನ ಚೇಳುಗಳ ಕುರಿತು ಸಮಗ್ರ ಸಂಶೋಧನೆ ಅಗತ್ಯವಿದೆ ಎಂದು ಗುಲ್ಬರ್ಗಾ ವಿಶ್ರಾಂತ ಕುಲಪತಿ ಈ.ಟಿ.ಪುಟ್ಟಯ್ಯ ಹೇಳಿದರು.
ಕುಂದಕೂರ ಗ್ರಾಮಸ್ಥರ ಮಾತು: ಕೊಂಡ್ಯೆಮ್ಮಾಯಿ ಬೆಟ್ಟದಲ್ಲಿ ಸಸ್ಯ ಸಂಪತ್ತು ಹೆಚ್ಚುವಂತೆ ಕ್ರಮವಹಿಸಬೇಕು. ಕಾಂಕ್ರಿಟ್ ಕಾಡಾಗಿಸುವ ಬದಲು ‘ಪವಿತ್ರ ದೈವೀವನ’ವಾಗಿ ಅಭಿವೃದ್ಧಿಗೊಳಿಸಲಿ. ಜೀವ ವೈವಿಧ್ಯತೆ ಮತ್ತು ಸಸ್ಯ ಸಂಕುಲದ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಬೆಟ್ಟದ ಪಾವಿತ್ರ್ಯತೆ ಮತ್ತು ವೈಶಿಷ್ಟ್ಯತೆಯ ರಕ್ಷಣೆಯಾಗಲಿ ಎಂದರು.
‘ಚೇಳುಗಳ ವಿಷಕಾರಿ ಅಧ್ಯಯನ ಅಗತ್ಯ’ ಈ ಹಿಂದೆ ಗುಲಬರ್ಗಾ ವಿವಿ ಕುಲಪತಿಯಾಗಿದ್ದ ಈ.ಟಿ.ಪುಟ್ಟಯ್ಯ ಅವರು ತಮ್ಮ ಸಿಬ್ಬಂದಿ ಜೊತೆಗೆ ಕಂದಕೂರ ಬೆಟ್ಟಕ್ಕೆ ಆಗಮಿಸಿದ್ದರು. ಜೀವಶಾಸ್ತ್ರ ಉಪನ್ಯಾಸಕರು ಜೊತೆಗಿದ್ದರು. ಪುಟ್ಟಯ್ಯ ಅವರಿಗೆ ಚೇಳು ಕುಟುಕಿದ್ದರಿಂದ ಚಿಕಿತ್ಸೆ ಪಡೆದು ವಿವಿಗೆ ತೆರಳಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಕಂದಕೂರ ಚೇಳಿನ ಬೆಟ್ಟ ಅಧ್ಯಯನ ಯೋಗ್ಯ ವಿಷಯವಾಗಿದೆ. ನಾನು ವಿ.ವಿಯಲ್ಲಿದ್ದಾಗ ಈ ಬಗ್ಗೆ ಅಧ್ಯಯನ ಮಾಡಲು ಹೇಳಿದ್ದೆ. ಅಲ್ಲಿನ ಚೇಳುಗಳು ಕುಟುಕಿದರೂ ಯಾಕೆ ವಿಷ ಏರುವುದಿಲ್ಲ ಎನ್ನುವ ಬಗ್ಗೆ ಬೇರೆ ಚೇಳುಗಳು ಬೆಟ್ಟದ ಚೇಳುಗಳ ವಿಷಕಾರಿ ಅಂಶ ಸಂಶೋಧನೆ ಮಾಡಿದರೆ ಈ ಮಾಹಿತಿ ಹೊರಬರಲಿದೆ. ಸಂಬಂಧಿಸಿದವರು ಸ್ವಯಂ ಪ್ರೇರಿತವಾಗಿ ಸಂಶೋಧನೆ ಮಾಡಿ ಈ ಬಗ್ಗೆ ಜನರಿಗೆ ಮಾಹಿತಿ ನೀಡಿದರೆ ಉತ್ತಮ ವಿಷಯವನ್ನು ಜನರಿಗೆ ತಿಳಿಸಿದಂತೆ ಆಗುತ್ತದೆ’ ಎನ್ನುತ್ತಾರೆ.
ಜಾತ್ರೆಯಲ್ಲಿ ಕಲ್ಲುಗಳ ಕೆಳಗೆಲ್ಲಾ ಚೇಳುಗಳ ಓಡಾಟ ಜೋರು:
ಚೇಳನ್ನು ಪೂಜಿಸುವ ವಿಶಿಷ್ಟ ಸಾಂಪ್ರದಾಯ ಎಂ.ಪಿ.ಚಪೆಟ್ಲಾ ಗುರುಮಠಕಲ್: ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯಂದು ಕಲ್ಲು ನಾಗರಕ್ಕೆ ಹಾಲೆರದು ಪೂಜಿಸುವುದು ಅಲ್ಲಲ್ಲಿ ಜೀವಂತ ನಾಗರ ಹಾವುಗಳಿಗೆ ವಿಶೇಷ ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ನಾಗಪ್ಪನಿಗೆ ಮೀಸಲಾದ ದಿನದಂದು ತಾಲ್ಲೂಕಿನ ಕಂದಕೂರಿನಲ್ಲಿ ಚೇಳಿನ ಜಾತ್ರೆ ಮಾಡುವ ವಿಶೇಷ ಸಾಂಪ್ರದಾಯ ಭಕ್ತರನ್ನು ಸೆಳೆಯುತ್ತಿದೆ. ಪ್ರತಿ ವರ್ಷ ಶ್ರಾವಣ ಮಾಸದ ಮೊದಲ ಪಂಚಮಿಗೆ ಈ ಗ್ರಾಮದ ಬೆಟ್ಟದ ಮೇಲಿನ ಚೇಳಿನ ವಿಗ್ರಹವಿರುವ ದೇವಸ್ಥಾನದ ವಾರ್ಷಿಕ ಜಾತ್ರೆ ನಡೆಯುತ್ತದೆ. ಈ ಗ್ರಾಮಕ್ಕೆ ಕೊಂಡ್ಯೆಮ್ಮಾಯಿಯೇ ಗ್ರಾಮದೇವತೆ (ಚೇಳಿಗೆ ಬಾಲ ಕೊಂಡಿಯಂತೆ ಕಾಣುವುವದರಿಂದ ಕೊಂಡೆಮ್ಮಾಯಿ ಹೆಸರು ಬಂದಿರಬಹುದು). ಜಾತ್ರೆಯಲ್ಲಿ ಬೆಟ್ಟದ ಕಲ್ಲುಗಳ ಕೆಳಗೆಲ್ಲಾ ಚೇಳುಗಳ ಓಡಾಟ ಜೋರು. ಅಷ್ಟೇ ಅಲ್ಲದೆ ದರ್ಶನಕ್ಕೆಂದು ಬಂದ ಭಕ್ತರೆಲ್ಲರೂ ಚೇಳುಗಳನ್ನು ಹಿಡಿದು ಆಟವಾಡುತ್ತಾರೆ. ಮಕ್ಕಳು ಹಿರಿಯರು ಎಲ್ಲರೂ ಹಿಡಿದ ಚೇಳುಗಳನ್ನು ಒಬ್ಬರಿಂದ ಮತ್ತೊಬ್ಬರು ಪಡೆಯುತ್ತ ಕೈ ಮೇಲೆ ಮೈ ಮೇಲೆಲ್ಲಾ ಬಿಟ್ಟುಕೊಂಡು ಸಂಭ್ರಮಿಸುತ್ತಾರೆ. ಪಂಚಮಿಯಂದು ಇಲ್ಲಿ ಚೇಳುಗಳೂ ಸಹ ಕಚ್ಚದಿರುವುದು ವಿಶೇಷ.
ಚಿಕ್ಕ ಮಕ್ಕಳೂ ಚೇಳುಗಳನ್ನು ಹಿಡಿದು ಮೈಮೇಲೆಲ್ಲಾ ಹರಡಿ ಆಟವಾಡುವುದನ್ನು ನೋಡಿದರೆ ಹೊಸಬರು ಬೆಚ್ಚುತ್ತಾರೆ. ಜಾತ್ರೆಯ ದಿನ ಚೇಳು ಕಚ್ಚುವುದಿಲ್ಲ ಆಕಸ್ಮಿಕವಾಗಿ ನಾವಾಗಿ ಕೊಂಡಿಯ ಮುಳ್ಳು ಚುಚ್ಚಿಕೊಂಡರೂ ವಿಷ ಪ್ರಭಾವ ಬೀರದು ಎನ್ನುವುದು ಭಕ್ತರ ಹೇಳಿಕೆ. ಈ ವರ್ಷ ಸೋಮವಾರ (ಆಗಸ್ಟ್ 21) ಚೇಳಿನ ಜಾತ್ರೆ ಜರುಗಲಿದೆ. ದೇವಸ್ಥಾನದ ಹಿನ್ನಲೆ: ಗ್ರಾಮದ ಬೆಟ್ಟದ ಮೇಲೆ ಹಿಂದಿನಿಂದಲೂ ಇದ್ದ ಕಲ್ಲಿನ ದಿಬ್ಬದಲ್ಲೇ ಕೊಂಡ್ಯೆಮ್ಮಾಯಿ ಪೂಜೆ ಆರಾಧನೆ ಮಾಡಲಾಗುತ್ತಿತ್ತು. ಆದರೆ 90 ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದ ಬ್ರಿಟೀಷ್ ಸರ್ಕಾರದ ಅರಣ್ಯಾಧಿಕಾರಿ ಕೊಂಡ್ಯೆಮ್ಮಾಯಿಯ ಕಲ್ಲಿನ ದಿಬ್ಬವನ್ನು ತೆರವುಗೊಳಿಸಿದ್ದರು. ಅದಾದ ಕೆಲ ದಿನಗಳಲ್ಲೇ ಆತನ ಕಣ್ಣು ಕಾಣದಂತಾಯ್ತು ಮತ್ತು ಹಲವು ಸಮಸ್ಯೆಗಳು ಎದುರಿಸುವಂತಾಗಿತ್ತು. ಇಲ್ಲಿಗೆ ಬಂದು ತಪ್ಪೊಪ್ಪಿಗೆ ಮಾಡಿಕೊಂಡು ಕ್ಷಮೆ ಕೇಳಿದ ನಂತರ ದೃಷ್ಟಿ ಮತ್ತೆ ಸರಿಯಾಗಿತ್ತು. ಆತ ಕಲ್ಲಿನ ದಿಬ್ಬವಿದ್ದ ಜಾಗದಲ್ಲೇ ಚಿಕ್ಕ ದೇವಸ್ಥಾನ ನಿರ್ಮಿಸಿದ್ದ. ಈಗ ಅದೇ ಜಾಗದಲ್ಲಿ ಭಕ್ತರ ಸಹಕಾರದಲ್ಲಿ ದೊಡ್ಡ ಮಂದಿರ ಕಟ್ಟಲಾಗಿದೆ ಎಂದು ದೇವಸ್ಥಾನದ ಹಿನ್ನಲೆಯ ಕಥೆಯನ್ನು ದೇವಸ್ಥಾನದ ಪೂಜಾರಿಗಳ ಕುಟುಂಬದ ಬುಗ್ಗಪ್ಪ ಸಿದ್ದಾಪುರ ಹೇಳಿದರು.