ಅಂಕಿ-ಅಂಶಗಳ ಸಂದೇಶವನ್ನು ಗಮನಿಸುವ ಬದಲು, ಅಂಕಿ-ಅಂಶಗಳನ್ನೇ ಬುಡಮೇಲು ಮಾಡುವ ರಾಜಕೀಯ

ಕುಟುಂಬ ಆರೋಗ್ಯ ಸಮೀಕ್ಷೆ 2019-21ರ ವರದಿ 2015-16ರ ಸಮೀಕ್ಷೆಗೆ ಹೋಲಿಸಿದರೆ ಮಕ್ಕಳು ಮತ್ತು ಮಹಿಳೆಯರ ಕೆಲವು ಆರೋಗ್ಯ ಸೂಚಕಗಳು ಗಣನೀಯವಾಗಿ ಕುಸಿದಿರುವುದನ್ನು ತೋರಿಸಿತು. ಇದರಲ್ಲಿನ ಸಂದೇಶಕ್ಕೆ ಗಮನ ನೀಡುವ ಬದಲು ಸರ್ಕಾರ ಈ ಸಂದೇಶ ನೀಡಿದವರನ್ನೇ ಶಿಕ್ಷಿಸ ಹೊರಟಿತು. ಇದಕ್ಕೆ ಮೊದಲು ಹೊಸ ಸೂಚ್ಯಂಕ ಬಿಡುಗಡೆ ಮಾಡಿ, ದೇಶದಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿತ್ತು. ಇದೀಗ ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ಪರಿಗಣಿಸಬೇಕಾದ ಅಂಶಗಳನ್ನು ತಗ್ಗಿಸುವ ವಿಧಿ-ವಿಧಾನಗಳನ್ನೂ ರೂಪೀಕರಿಸಲಾಗುತ್ತಿದೆಯಂತೆ. ಇದನ್ನು ಅನ್ವಯಿಸಿ ನಮ್ಮ ದೇಶದಲ್ಲೀಗ ‘ಶೂನ್ಯ ಬಡತನ’ ಎನ್ನುವ ದಾವೆಗಳು ಸದ್ಯದಲ್ಲೇ ಕೇಳಬಂದರೆ ಆಶ್ಚರ್ಯಪಡಬೇಕಾಗಿಲ್ಲ! ರಾಜಕೀಯ ಶಕ್ತಿಯ ತಪ್ಪು ಬಳಕೆಯಿಂದ ಅಂಕಿ-ಅಂಶಗಳ ಋಜುತ್ವವನ್ನು ಎಷ್ಟರ ಮಟ್ಟಿಗೆ ಬುಡಮೇಲು ಮಾಡಲಾಗುತ್ತಿದೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ ಎಂದಷ್ಟೇ ಈ ಬಗ್ಗೆ ಹೇಳಲು ಸಾಧ್ಯ ಎನ್ನುತ್ತಾರೆ ಪ್ರಖ್ಯಾತ ಕೃಷಿ ಆರ್ಥಿಕ ತಜ್ಞೆ ಪ್ರೊ. ಉತ್ಸಾ ಪಟ್ನಾಯಕ್

ಕಳೆದ ಮೂರು ದಶಕಗಳ ನವ ಉದಾರವಾದಿ ಧೋರಣೆಗಳಲ್ಲಿ ದೇಶದ ಜನತೆಗೆ ಪೌಷ್ಟಿಕ ಆಹಾರದ ಲಭ್ಯತೆ ನಿಧಾನವಾಗಿ ಮತ್ತು ಖಂಡಿತವಾಗಿಯೂ ಕ್ಷೀಣಿಸುತ್ತಿದೆ. ದೇಶದ ಜನರ ಪೌಷ್ಟಿಕ ಆಹಾರದ ಸೇವನೆಯ ಬಗ್ಗೆ ಪ್ರತಿ ಐದು ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸಲಾಗುತ್ತದೆ. ಕ್ಯಾಲೋರಿಗಳು ಮತ್ತು ಪ್ರೋಟೀನ್‌ಗಳ ತಲಾವಾರು ಸೇವನೆ ಕಡಿಮೆಯಾಗುತ್ತಿದೆ ಎಂದು (ಆದಾಗ್ಯೂ, ಹೆಚ್ಚಿನ ಆದಾಯ ಹೊಂದಿರುವವರಲ್ಲಿ ಕೊಬ್ಬಿನ ಆಹಾರಗಳ ಸೇವನೆಯು ಹೆಚ್ಚುತ್ತಿದೆ ಎಂದೂ) ಈ ಸಮೀಕ್ಷೆಗಳು ಸೂಚಿಸುತ್ತವೆ. ಅಪೌಷ್ಟಿಕತೆಯಲ್ಲಿ ಇಳಿಕೆೆ ಮೊದಲು ಗ್ರಾಮೀಣ ಪ್ರದೇಶದಲ್ಲಿ ಕಾಣಿಸಿಕೊಂಡು ನಂತರ ನಗರ ಪ್ರದೇಶಗಳಲ್ಲಿಯೂ ಕಾಣಿಸಿಕೊಂಡಿತು. ಧಾನ್ಯಗಳು ಮತ್ತು ಬೇಳೆಕಾಳುಗಳು ನಮ್ಮ ಜನರಿಗೆ ಶಕ್ತಿ ಮತ್ತು ಪ್ರೊಟೀನ್ ಒದಗಿಸುವ ಅತ್ಯಂತ ಪ್ರಮುಖ ಮೂಲಗಳು. ಇದರಲ್ಲಿ ಧಾನ್ಯಗಳ ಪಾಲೇ 90ಶೇ., ಇದು ಸರಾಸರಿಯಾಗಿ ಗ್ರಾಮೀಣ ನಾಗರಿಕರು ಪಡೆಯುವ ಶಕ್ತಿಯ ಮತ್ತು ಪ್ರೊಟೀನಿನ ಮೂರನೇ ಎರಡರಷ್ಟನ್ನು ಒದಗಿಸುತ್ತದೆ. ಆದರೆ ನವ ಉದಾರವಾದಿ ಸುಧಾರಣೆಗಳಲ್ಲಿ ಇತ್ತೀಚೆಗೆ ಹಲವು ವರ್ಷಗಳಿಂದ ಇದರ ಬಳಕೆಯ ಮಟ್ಟ (ಆಹಾರವಾಗಿ ನೇರ ಸೇವನೆ ಮತ್ತು ಹಾಲು, ಮೊಟ್ಟೆ, ಕೋಳಿ ಮಾಂಸ ಮುಂತಾದ ಪ್ರಾಣಿಜನ್ಯ ಉತ್ಪನ್ನಗಳಿಗೆ ಮೇವಾಗಿ) ಎಷ್ಟೊಂದು ತೀವ್ರವಾಗಿ ಕುಸಿದಿದೆಯೆಂದರೆ, ಇದು ಆಫ್ರಿಕನ್ ದೇಶಗಳಲ್ಲಿನ ಮಟ್ಟಕ್ಕಿಂತ ಬಹಳ ಕೆಳಗಿದೆ, ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿರುವ ಹಲವು ದೇಶಗಳಿಗಿಂತಲೂ ಕೆಳಗಿದೆ.

ಮೇಲಾಗಿ, ಕಳೆದ ಕೆಲವು ದಶಕಗಳಿಂದ ಆಹಾರದ ಮೇಲಿನ ತಲಾವಾರು ನಿಜವೆಚ್ಚವು (ಬೆಲೆ ಸೂಚ್ಯಂಕಗಳನ್ನು ಆಧರಿಸಿದ್ದು) ವಾಸ್ತವಿಕವಾಗಿ ಇಳಿಮುಖವಾಗುತ್ತಿದೆ. ಒಂದೆಡೆ, ಉನ್ನತ ಜಿಡಿಪಿ ಬೆಳವಣಿಗೆಯನ್ನು ದಾಖಲಿಸುವ ದೇಶದಲ್ಲಿ, ಇನ್ನೊಂದೆಡೆಯಲ್ಲಿ, ಮೊದಲೇ ಅಸಮರ್ಪಕವಾಗಿದ್ದ ಆಹಾರದ ಮೇಲಿನ ತಲಾ ವೆಚ್ಚದಲ್ಲಿ ಮತ್ತಷ್ಟು ಕುಸಿತವನ್ನು ಕಾಣುತ್ತಿರುವುದು ಬಹಳ ವಿಚಿತ್ರವೇ ಸರಿ. ಮತ್ತು ಈ ಅಭೂತಪೂರ್ವ ಪ್ರವೃತ್ತಿಯು ಆದಾಯದ ಅಸಮಾನತೆಯ ತೀವ್ರ ಹೆಚ್ಚಳಕ್ಕೆ ಅನುಗುಣವಾಗಿಯೇ ಇದೆಯಷ್ಟೇ ಅಲ್ಲ, ನಮ್ಮ ಜನಗಳಲ್ಲಿ ಪೌಷ್ಠಿಕ ಬಡತನಕ್ಕೂ ಅನುಗುಣವಾಗಿದೆ ಎನ್ನಬಹುದು.

ಕೆಲವು ಅರ್ಥಶಾಸ್ತ್ರಜ್ಞರು ದೀರ್ಘಕಾಲದಿಂದ ಹೀಗೆ ಪೌಷ್ಟಿಕಾಂಶ ಸೇವನೆ ಕ್ಷೀಣಿಸುತ್ತಿರುವ ಬಗ್ಗೆ ಬಗೆ-ಬಗೆಯ ತಪ್ಪು ತರ್ಕಗಳನ್ನು ನೀಡುತ್ತಿದ್ದಾರೆ-ಯಾಂತ್ರೀಕರಣದಿಂದಾಗಿ ನಮಗೆ ಶಕ್ತಿಯ ಅಗತ್ಯ ಕಡಿಮೆಯಾಗಿದೆ, ವಯೋ ರಚನೆಯಲ್ಲಿ ಬದಲಾವಣೆಗಳು, ಜನರ ಅಭಿರುಚಿಗಳಲ್ಲಿ ಬದಲಾವಣೆಗಳು ಇತ್ಯಾದಿ. ಇವೆಲ್ಲ ಶುದ್ಧ ನೆವಗಳಲ್ಲದೆ ಬೇರೇನೂ ಅಲ್ಲ ಎಂಬುದು ಜಗತ್ತಿನ ಹೆಚ್ಚು ಜನಸಂಖ್ಯೆಯ ಪ್ರದೇಶಗಳನ್ನು, ನಮ್ಮಂತದೇ ವಯೋ ರಚನೆಯನ್ನು ಮತ್ತು ನಮಗಿಂತಲೂ ಹೆಚ್ಚಿನ ಮಟ್ಟದ ಯಾಂತ್ರೀಕರಣ ಕಂಡಿರುವ ದೇಶಗಳೊಂದಿಗೆ ಹೋಲಿಸಿದಾಗ ಮನವರಿಕೆಯಾಗುತ್ತದೆ. ಅಲ್ಲಿಯ ಜನಗಳು ನಮ್ಮ ಜನಗಳಿಗಿಂತ ಹೆಚ್ಚು ಅಹಾರ ಸೇವಿಸುತ್ತಾರೆ ಮತ್ತು ಅವರ ಪೋಷಕಾಂಶಗಳ ಮಟ್ಟ ಬಹಳ ಹೆಚ್ಚಿದೆ.

ಇದನ್ನೂಓದಿ:ಖಾಸಗಿಯವರಿಗೆ ಸರಕಾರಿ ಶಾಲೆಗಳ ದತ್ತು : ಅಪಾಯಕಾರಿ ನಡೆ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ) 2019ರಲ್ಲಿ ಬಿಡುಗಡೆ ಮಾಡಿರುವ ಅಂಕಿ-ಅAಶಗಳ ಪ್ರಕಾರ (ಇವು ಇಲ್ಲಿಯವರೆಗೆ ಲಭ್ಯವಿರುವ ಇತ್ತೀಚಿನ ಅಂಕಿಅAಶಗಳು), ಭಾರತದಲ್ಲಿ ತಲಾವಾರು ಆಹಾರ ಧಾನ್ಯಗಳ ಬಳಕೆ(ಆಹಾರವಾಗಿ ಮತ್ತು ಪಶು ಮೇವುಗಳಾಗಿ ಒಟ್ಟಾಗಿ) ಅತ್ಯಂತ ಕೆಳಗೆ 171 ಕೆ.ಜಿ., ಆಫ್ರಿಕಾ ದಲ್ಲಿ 190 ಕೆ.ಜಿ., ಕಡಿಮೆ ಅಭಿವೃದ್ಧಿಯ ರಾಷ್ಟ್ರಗಳಲ್ಲಿ 205 ಕೆ.ಜಿ., ವಿಶ್ವದ ಸರಾಸರಿ 304 ಕೆ.ಜಿ., ಚೀನಾ ಮತ್ತು ಬ್ರೆಜಿಲ್‌ನಲ್ಲಿ 360 ಕೆಜಿ ಮತ್ತು ರಷ್ಯಾದಲ್ಲಿ 407 ಕೆ.ಜಿ. ಅಭಿವೃದ್ಧಿ ಹೊಂದಿದ ಕೈಗಾರಿಕೀಕರಣಗೊಂಡ ದೇಶಗಳಲ್ಲಿ ಇದು 494 ಕೆ.ಜಿ. ಯುರೋಪಿಯನ್ ಒಕ್ಕೂಟದ ದೇಶಗಳಲ್ಲಿ, ಮತ್ತು ಅಮೆರಿಕದಲ್ಲಿ 590 ಕೆಜಿ. ಇಲ್ಲಿ ಒಂದು ವಿಷಯ ನೆನಪಿಡಬೇಕು. ಎಫ್‌ಎಒ ತಾನಾಗಿಯೇ ಈ ದತ್ತಾಂಶಗಳನ್ನು ಸಂಗ್ರಹಿಸುವುದಿಲ್ಲ, ಆಯಾಯ ದೇಶಗಳ ಸರಕಾರಗಳು ಒದಗಿಸಿದ ಮಾಹಿತಿÀಗಳನ್ನೇ ಬಳಸಿ ಲೆಕ್ಕ ಹಾಕುತ್ತದೆ. ಆದ್ದರಿಂದ, ವಿಶ್ವ ಹಸಿವಿನ ಸೂಚ್ಯಂಕದಲ್ಲಿ ಭಾರತವು ಸುಮಾರಾಗಿ ತಳದಲ್ಲೇ, 121 ದೇಶಗಳಲ್ಲಿ 107 ನೇ ಸ್ಥಾನದಲ್ಲಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಕಳೆದ ವರ್ಷ ಸ್ವಲ್ಪ ಸಮಯದ ವರೆಗೆ ‘ಕುಟುಂಬಗಳ ಬಳಕೆ ವೆಚ್ಚದ ಪ್ರಮುಖ ಸೂಚ್ಯಂಕಗಳು, 2017-18’ ಎಂಬ ರಾಷ್ಟ್ರೀಯ ಮಾದರಿ ಸಮೀಕ್ಷೆ(ಎನ್‌ಎಸ್‌ಎಸ್) ವರದಿ ಸಾರ್ವಜನಿಕವಾಗಿ ಆನ್ ಲೈನಿನಲ್ಲಿ ಲಭ್ಯವಾಗಿತ್ತು. ಅದು 2011 ಕ್ಕೆ ಹೋಲಿಸಿದರೆ 2017-18 ರಲ್ಲಿ ಎಲ್ಲ ಸರಕು ಮತ್ತು ಸೇವೆಗಳ ಮೇಲಿನ ಜನರ ತಲಾ ನಿಜವೆಚ್ಚವು ಮೊತ್ತಮೊದಲ ಬಾರಿಗೆ ಇಳಿದುದನ್ನು ತೋರಿಸಿತು. ಹಿಂದಿನ ದಶಕಗಳಲ್ಲಿ ಆಹಾರದ ಮೇಲಿನ ನಿಜ ವೆಚ್ಚದಲ್ಲಿನ ಇಳಿಕೆಯಾಗುತ್ತ ಬರುತ್ತಿರುವುದು ಗಮನಕ್ಕೆ ಬಂದಿತ್ತು. ಈಗ ಇದರ ಜೊತೆಗೆ, ಎಲ್ಲಾ ರೀತಿಯ ವೆಚ್ಚಗಳಲ್ಲಿ ಇಳಿಕೆಯೂ ಸೇರಿಕೊಂಡAತಾಗಿದೆ. ಈ ವರದಿಯನ್ನು ಸರಕಾರ ಬೇಗನೇ ಪೋರ್ಟಲ್‌ನಿಂದ ತೆಗೆದುಹಾಕಿತು. ಇದು ಒಂದು ಅತ್ಯಂತ ಪ್ರಮುಖ ಮಾಹಿತಿಯನ್ನು ಸಾರ್ವಜನಿಕರಿಗೆ ನಿರಾಕರಿಸುವ ಒಂದು ಅಭೂತಪೂರ್ವ ಕ್ರಮವಾಗಿತ್ತು.

ಇದೀಗ ತೀರಾ ಇತ್ತೀಚೆಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ಮುಂಬೈನ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಾಪ್ಯುಲೇಶನ್ ಸೈನ್ಸಸ್(ಅಂತರ‍್ರಾಷ್ಟ್ರೀಯ ಜನಸಂಖ್ಯಾ ವಿಜ್ಞಾನಗಳ ಸಂಸ್ಥೆ)ಯ ನಿರ್ದೇಶಕರನ್ನು ಕೇಂದ್ರ ಸರ್ಕಾರ ಅಮಾನತುಗೊಳಿಸಿರುವ ಒಂದು ವಿಲಕ್ಷಣ ಬೆಳವಣಿಗೆಯ ಹಿನ್ನೆಲೆ. ನಿರ್ದಿಷ್ಟ ಅವಧಿಗಳಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಯನ್ನು ನಡೆಸುವ ಜವಾಬ್ದಾರಿಯನ್ನು ಇದಕ್ಕೆ ವಹಿಸಲಾಗಿದೆ. 2019-21 ಕ್ಕೆ ಸಂಬಂಧಿಸಿದ 5ನೇ ಸಮೀಕ್ಷಾ ವರದಿ 2015-16ರ 4 ನೇ ಸಮೀಕ್ಷೆಗೆ ಹೋಲಿಸಿದರೆ ಮಕ್ಕಳು ಮತ್ತು ಮಹಿಳೆಯರ ಕೆಲವು ಆರೋಗ್ಯ ಸೂಚಕಗಳು ಗಣನೀಯವಾಗಿ ಕುಸಿದಿರುವುದನ್ನು ತೋರಿಸಿತು. ಇದರಲ್ಲಿನ ಸಂದೇಶಕ್ಕೆ ಗಮನ ನೀಡುವ ಬದಲು ಸರ್ಕಾರ ಈ ಸಂದೇಶ ನೀಡಿದವರನ್ನೇ ಶಿಕ್ಷಿಸುವ ತರ್ಕಬಾಹಿರ ನಿರ್ಧಾರವನ್ನು ಕೈಗೊಂಡಿತು. ಈ ಸಂಸ್ಥೆಯ ನಿರ್ದೇಶಕರು ಒಬ್ಬ ಪ್ರಾಮಾಣಿಕ ಅಧ್ಯಯನಕಾರ.

ಎಲ್ಲಾ ಆರೋಗ್ಯ ಸೂಚಕಗಳು ಕೇವಲ ಪೋಷಕಾಂಶಗಳ ಮೇಲೆ ಅವಲಂಬಿತವಾಗಿರುವುದಿಲ್ಲ. ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಮೂಲಕ, ರೋಗಕಾರಕ ಸೊಳ್ಳೆಗಳ ಹರಡುವಿಕೆಯನ್ನು ನಿಯಂತ್ರಿಸುವ ಮೂಲಕ, ಕರುಳಿನ ಹುಳುಗಳನ್ನು ತೊಡೆದುಹಾಕಲು ಮತ್ತು ನೈರ್ಮಲ್ಯವನ್ನು ಸುಧಾರಿಸುವ ಮೂಲಕ ಆರೋಗ್ಯ ಪರಿಸ್ಥಿತಿಗಳನ್ನು ಸುಧಾರಿಸಬಹುದು. ಹೆಚ್ಚಿನ ದೇಶಗಳಂತೆ, ನಮ್ಮ ದೇಶದಲ್ಲಿ ಈ ವಿಷಯಗಳಲ್ಲಿ ನಿಧಾನವಾಗಿಯಾದರೂ ಪ್ರಗತಿಯಾಗಿದೆ. ಆದರೆ, ಇತರ ಆರೋಗ್ಯ ಸೂಚಕಗಳು ಹೆಚ್ಚಾಗಿ ಪೌಷ್ಟಿಕಾಂಶದ ಸೇವನೆಯ ಮೇಲೆ ಅವಲಂಬಿತವಾಗಿದೆ. ಅಂತಹ ಆಹಾರವು ಲಭ್ಯವಿಲ್ಲದಿದ್ದಾಗ, ಆ ಸೂಚಕಗಳು ಹದಗೆಡುತ್ತವೆ.

ಇದನ್ನೂ ಓದಿ“ಸಾರ್ವತ್ರಿಕ ಮೂಲ ಆದಾಯ”ದ ಪ್ರಶ್ನೆ, ಮೊಟ್ಟೆಗಳನ್ನು ಒಡೆಯದೆ ಆಮ್ಲೆಟ್.. ?

4ನೇ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಗೆ ಹೋಲಿಸಿದರೆ 5ನೇ ಸಮೀಕ್ಷೆಯಲ್ಲೂ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಇಳಿಕೆಯಾಗಿದೆ (ಕಳೆದ ಬಾರಿಗಿಂತ ಸ್ವಲ್ಪ ಕಡಿಮೆಯಾಗಿದೆ). ಅದೇ ಸಮಯದಲ್ಲಿ, ಮಕ್ಕಳು ಮತ್ತು ವಯಸ್ಕರಲ್ಲಿಯೂ ರಕ್ತಹೀನತೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ವರದಿ ಬಹಿರಂಗಪಡಿಸಿದೆ. ಈ ರಕ್ತಹೀನತೆ ಈಗಾಗಲೇ ತುಂಬಾ ಹೆಚ್ಚಾಗಿದೆ. ಈಗ ಅದು ಇನ್ನೂ ಹೆಚ್ಚಿದೆ. 6 ತಿಂಗಳಿAದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆಯ ಪ್ರಮಾಣವು 2015-16 ರಲ್ಲಿ ಶೇ. 59 ರಿಂದ 2019-21 ರಲ್ಲಿ ಶೇ. 67 ಕ್ಕೆ ಏರಿದೆ. ಅವರಲ್ಲಿ ತೀವ್ರ ರಕ್ತಹೀನತೆ ಇರುವವರ ಸಂಖ್ಯೆ ಶೇ.30.6ರಿಂದ ಶೇ.38.1ಕ್ಕೆ ಏರಿಕೆಯಾಗಿದ್ದು, ಅತ್ಯಂತ ಆತಂಕಕಾರಿಯಾಗಿದೆ.

ವಯಸ್ಕರಲ್ಲಿ, ವಿಶೇಷವಾಗಿ ಮಹಿಳೆಯರಲ್ಲಿ, ಅದೇ ಅವಧಿಯಲ್ಲಿ ರಕ್ತಹೀನತೆಯು ಶೇ.53 ರಿಂದ ಶೇ. 57 ಕ್ಕೆ ಏರಿತು. ತೀವ್ರ ರಕ್ತಹೀನತೆ ಹೊಂದಿರುವವರು ಶೇ. 28.4 ರಿಂದ 31.4 ಶೇ.ಕ್ಕೆ ಏರಿದರು. ಅದೇ ಪುರುಷರಲ್ಲಿ (49 ವರ್ಷದೊಳಗಿನವರು), ತೀವ್ರ ರಕ್ತಹೀನತೆ ಹೊಂದಿರುವವರು ಶೇ. 23 ರಿಂದ ಶೇ. 25 ಕ್ಕೆ ಏರಿದರು. ಗ್ರಾಮೀಣ ಭಾಗದಲ್ಲಿ ರಕ್ತಹೀನತೆ ಹೆಚ್ಚು. ಇವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವ ಬದಲು ಸರ್ಕಾರ ಈ ಸತ್ಯಗಳನ್ನೇ ಗುರುತಿಸಲು ನಿರಾಕರಿಸುತ್ತಿದೆ.

ಮಗುವಿನ ಪೌಷ್ಟಿಕತೆಯ ಸೂಚಕಗಳು ನಿರೀಕ್ಷೆಗಿಂತ ಕೆಟ್ಟದಾಗಿದೆ. 2015-16ರಲ್ಲಿ 5 ವರ್ಷದೊಳಗಿನ ಶೇ.36ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದರು. ಶೇ.38 ರಷ್ಟು ಮಕ್ಕಳು ತಮ್ಮ ವಯಸ್ಸಿಗೆ ತಕ್ಕ ಎತ್ತರವನ್ನು ಹೊಂದಿರಲಿಲ್ಲ. 2019-20 ರ ಹೊತ್ತಿಗೆ, ಕಡಿಮೆ ತೂಕದ ಶೇಕಡಾವಾರು ಪ್ರಮಾಣವು 32 ಕ್ಕೆ ಸ್ವಲ್ಪ ಕಡಿಮೆಯಾಗಿದೆ ಮತ್ತು ಕಡಿಮೆ ಎತ್ತರದವರ ಶೇಕಡಾವಾರು 36 ಕ್ಕೆ ಇಳಿದಿದೆ. ಎತ್ತರಕ್ಕೆ ತಕ್ಕ ಕಡಿಮೆ ತೂಕ ಇಲ್ಲದವರ ಶೇಕಡಾವಾರು ಪ್ರಮಾಣವು 21 ರಿಂದ 19 ಕ್ಕೆ ಕಡಿಮೆಯಾಗಿದೆ. ಐದು ವರ್ಷಗಳ ಹಿಂದೆ ಈ ಸೂಚಕಗಳು ಐದು ರಾಜ್ಯಗಳಲ್ಲಿ ರಾಷ್ಟ್ರೀಯ ಸರಾಸರಿಗಿಂತ ಕೆಟ್ಟದಾಗಿದ್ದವು.ಈ ಅವಧಿಯಲ್ಲಿ ಆ ಐದು ರಾಜ್ಯಗಳಲ್ಲಿ ಸ್ವಲ್ಪ ಸುಧಾರಣೆಯಾಗಿದೆ ಮತ್ತು ರಾಷ್ಟ್ರಮಟ್ಟದಲ್ಲೂ ಸುಧಾರಣೆಯಾಗಿದೆ. ಹೆಚ್ಚಿನ ರಾಜ್ಯಗಳಲ್ಲಿ ಮತ್ತಷ್ಟು ಸರಿಪಡಿಸುವ ಕ್ರಮದ ಅಗತ್ಯವಿದೆ.

ಇತ್ತೀಚೆಗೆ ಕೇಂದ್ರ ಸರ್ಕಾರ ಹೊಸ ಸೂಚ್ಯಂಕ ಬಿಡುಗಡೆ ಮಾಡಿ, ಅದನ್ನು ಆಧರಿಸಿ, ದೇಶದಲ್ಲಿ ಬಡತನ ಗಣನೀಯವಾಗಿ ಕಡಿಮೆಯಾಗಿದೆ ಎಂದು ಹೇಳಿಕೊಂಡಿದೆ. ಆದರೆ ಕಳೆದ 70 ವರ್ಷಗಳಿಂದ ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬಡತನ ಅಂದರೆ ಏನು ಎಂದು ಅರ್ಥಮಾಡಕೊಳ್ಳಲಾಗುತ್ತಿದೆಯೇ ಅದಕ್ಕೂ ಮತ್ತು ಈ ಹೊಸ ಸೂಚ್ಯಂಕಕ್ಕೂ ಏನೇನೂ ಸಂಬಂಧವಿಲ್ಲ. ಈ ಹೊಸ ಸೂಚ್ಯಂಕ ನೀರು, ವಿದ್ಯುತ್ ಸಂಪರ್ಕ, ಶೀಟ್ ಮನೆ ಅಥವಾ ಸ್ಲ್ಯಾಬ್ ಮನೆ, ಬ್ಯಾಂಕ್ ಖಾತೆ (ಶೂನ್ಯ ಬ್ಯಾಲೆನ್ಸ್ ಇದ್ದರೂ) ಮುಂತಾದ ಆಧುನಿಕ ಸೌಕರ್ಯಗಳ ಲಭ್ಯತೆಯ ಒಂದು ಸರಾಸರಿ. ಇದರಲ್ಲಿ ‘ಪೌಷ್ಟಿಕತೆ’ಗೆ ಕೇವಲ ಆರನೇ ಒಂದರಷ್ಟು ತೂಕ. ಸಾಕಷು ‘ಪೌಷ್ಟಿಕತೆ’ ಎಂಬುದನ್ನೂ ‘ದೇಹ ದ್ರವ್ಯರಾಶಿ ಸೂಚ್ಯಂಕ’ (ಬಾಡಿ ಮಾಸ್ ಇಂಡೆಕ್ಸ್-ಬಿಎಂಐ)ದ ಆಧಾರದಲ್ಲಿ ಪರಿಗಣಿಸಲಾಗಿದೆ ಅಂದರೆ ಒಬ್ಬ ವ್ಯಕ್ತಿಯ ದೇಹದ ತೂಕ ಮತ್ತು ಎತ್ತರದ ಮೂಲಕ ಮೂಲಕ ಅಳೆಯಲಾಗುತ್ತದೆ. ಇದು 18.8ರ ಕೆಳಗೆ ಇರಬಾರದು ಅಷ್ಟೇ. ಈ ಬಡತನ ಸೂಚ್ಯಂಕದ ಪ್ರಕಾರ ಕೈಗಾರೀಕರಣದಲ್ಲಿ ಮುಂದುವರೆದಿರುವ ಬಂಡವಾಳಶಾಹೀ ಸಮಾಜಗಳಲ್ಲಿ ಬಡತನವೇ ಇಲ್ಲ!

ಭಾರತದಲ್ಲಿ ಗ್ರಾಮೀಣ ಪ್ರದೇಶಗಳಲ್ಲಾಗಲೀ, ನಗರಪ್ರದೇಶಗಳಲ್ಲಾಗಲೀ ಪೌಷ್ಟಿಕತೆಯಿಂದ ವಂಚಿತರಾದವರ ಪ್ರಮಾಣ ಗಮನಾರ್ಹವಾಗಿದೆ. ನಮ್ಮ ದೇಶದಲ್ಲಿ ಆರೋಗ್ಯವಂತರಲ್ಲಿ ವಯಸ್ಸಿಗನುಗುಣವಾಗಿ ಇರಬೇಕಾದ ತೂಕ ಮತ್ತು ಎತ್ತರ ಇಲ್ಲದವರ ಪ್ರಮಾಣವೂ ಗಮನಾರ್ಹವಾಗಿದೆ. ಆದ್ದರಿಂದ ಒಂದು ಅನುಪಾತವಾಗಿರುವ ‘ಬಾಡಿ ಮಾಸ್ ಇಂಡೆಕ್ಸ್’ ಎಂಬುದನ್ನು ಸಂದೇಹದ ದೃಷ್ಟಿಯಿಂದಲೇ ನೋಡಬೇಕಾಗುತ್ತದೆ. ನಮ್ಮಲ್ಲಿ ಹೆಚ್ಚಿನ ಜನರ ಎತ್ತರವೂ ಕಡಿಮೆ, ಮತ್ತು ದೇಹದ ತೂಕವೂ ಕಡಿಮೆ. ಎರಡೂ ಕಡಿಮೆ ಇರುವುದರಿಂದ ಇವೆರಡರ ಅನುಪಾತವನ್ನು ಆಧರಿಸಿರುವ ಸೂಚಕವು ಕೋಟಿಗಟ್ಟಲೆ ಅಪೌಷ್ಟಿಕತೆಯಿಂದ ನರಳುವ ಜನರ ಅಪೌಷ್ಟ್ಟಿಕತೆಯ ಮಟ್ಟವನ್ನು ಗುರುತಿಸಲಾರದು.

ಇದೀಗ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು ಪೌಷ್ಟಿಕಾಂಶಕ್ಕೆ ಸಂಬಂಧಿಸಿದಂತೆ ಪರಿಗಣಿಸಬೇಕಾದ ಅಂಶಗಳನ್ನು ತಗ್ಗಿಸುವ ವಿಧಿ-ವಿಧಾನಗಳನ್ನೂ ರೂಪೀಕರಿಸುತ್ತಿದೆ ಎಂದು ವರದಿಯಾಗಿದೆ. ರಾಜಕೀಯ ಶಕ್ತಿಯ ತಪ್ಪು ಬಳಕೆಯಿಂದ ಅಂಕಿ-ಅಂಶಗಳ ಋಜುತ್ವವನ್ನು ಎಷ್ಟರ ಮಟ್ಟಿಗೆ ಬುಡಮೇಲು ಮಾಡಲಾಗುತ್ತಿದೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ ಎಂದಷ್ಟೇ ಈ ಬಗ್ಗೆ ಹೇಳಲು ಸಾದ್ಯ.

ಇಂತಹ ಕಸರತ್ತಿನ ಹೊಸ ಸೂಚ್ಯಂಕಗಳನ್ನು ಅನ್ವಯಿಸಿ ನಮ್ಮ ದೇಶದಲ್ಲೀಗ ‘ಶೂನ್ಯ ಬಡತನ’ ಎನ್ನುವ ದಾವೆಗಳು ಸದ್ಯದಲ್ಲೇ ಕೇಳಬಂದರೆ ಆಶ್ಚರ್ಯಪಡಬೇಕಾಗಿಲ್ಲ!

(ಅನು: ಸಿ.ಸಿದ್ಧಯ್ಯ)

Donate Janashakthi Media

Leave a Reply

Your email address will not be published. Required fields are marked *