ಆದಿವಾಸಿಗಳ ಸುಸ್ಥಿರ ಅಭಿವೃದ್ಧಿ ಸಾಧ್ಯವೇ ?

ಶ್ರೀಧರ ನಾಡ

ಮಾನವನ ನಾಗರಿಕತೆಯ ಮೂಲ ಅಡಿಪಾಯವಾಗಿರುವ ಆದಿವಾಸಿಗಳನ್ನು ಮತ್ತು ಆದಿವಾಸಿ ತನವನ್ನು ಗುರುತಿಸಿ ಗೌರವಿಸಿದ ಕಾರಣಕ್ಕೆ ಇವೆಲ್ಲಾ ಸ್ವಾಗತಾರ್ಹವಾಗಿವೆ. ಇಂದಿನ ಸಮಾಜ ಬಹುತೇಕವಾಗಿ ಬುಡಕಟ್ಟು ಮೂಲಗಳಿಂದಲೇ ಬೆಳೆದು ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ನಾಗರೀಕತೆ ಬೆಳೆಯುತ್ತಾ ಹೋದಂತೆ ಹಲವಾರು ಸಮುದಾಯಗಳು ಅಭಿವೃದ್ದಿ, ಬಹುಮುಖ ಬೆಳವಣಿಗೆಗಳಿಂದ ವಂಚಿತವಾಗಿ ಎಲ್ಲಾ ನಾಗರೀಕ ಸಾಧನೆ ಮತ್ತು ಸೌಲಭ್ಯಗಳ ಫಲವಿಲ್ಲದೇ ನರಳುತ್ತಾ ಬದುಕುತ್ತಿವೆ. ನಾಗರೀಕ ಸಮಾಜದ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಶ್ರಮಿಸುತ್ತಾ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುವ ಆದಿವಾಸಿಬುಡಕಟ್ಟು ಸಮುದಾಯಗಳನ್ನು ಮೂಲೆಗೊತ್ತಿರುವ ಸ್ಥಿತಿಗಳ ವಿರುದ್ಧ ದನಿಯೆತ್ತಿ ನಡೆಸಿದ ಹೋರಾಟದ ಪರಿಣಾಮವಾಗಿ ವಿಶ್ವ ಸಂಸ್ಥೆಯು ದಿನವನ್ನು ಆಚರಿಸಲು ನಿರ್ಧರಿಸಿತು.

ಆಗಷ್ಟ್ 9 ರಂದು ಪ್ರಪಂಚದ ಎಲ್ಲಾ ದೇಶಗಳಲ್ಲಿ ‘ವಿಶ್ವ ಮೂಲ ನಿವಾಸಿಗಳ ದಿನ’ವನ್ನಾಗಿ ಆಚರಿಸಲಾಗುತ್ತದೆ. ಅಂದು ಜಗತ್ತಿನಲ್ಲಿ ಮುಖ್ಯವಾಗಿ ಆಯಾ ದೇಶಗಳಲ್ಲಿ ನಾಗರೀಕತೆ ಬೆಳವಣಿಗೆಗೆ, ಪರಂಪರೆ, ಪರಿಸರ ರಕ್ಷಣೆಗೆ ಆದಿವಾಸಿ-ಬುಡಕಟ್ಟು ಜನ ಸಮುದಾಯಗಳು ನೀಡಿರುವ ಕೊಡುಗೆಗಳನ್ನು ಸ್ಮರಿಸಿಕೊಳ್ಳಲಾಗುತ್ತದೆ. ಮಾತ್ರವಲ್ಲ, ಪ್ರಮುಖವಾಗಿ ಈ ಸಮುದಾಯದ ಹಕ್ಕುಗಳನ್ನು ರಕ್ಷಿಸುವುದು, ಅವುಗಳನ್ನು ಜಾರಿಗೆ ತರುವುದಕ್ಕೆ ಸಂಬಂಧಿಸಿ ಅವಲೋಕನೆ ಮತ್ತು ಪ್ರತಿಪಾದನೆಗಳು ನಡೆಯುತ್ತವೆ.

1994 ಡಿಶೆಂಬರ್ 10ರಂದು ವಿಶ್ವ ಸಂಸ್ಥೆಯ (ಯು.ಎನ್.ಓ) ಸಾಮಾನ್ಯ ಸಭೆಯು ಆಗಸ್ಟ್ 9 ರಂದು ಜಗತ್ತಿನಾದ್ಯಂತ ‘ಆದಿವಾಸಿ-ಬುಡಕಟ್ಟು ಜನರ ದಿನ’ವನ್ನಾಗಿ ಆಚರಿಸಲು ಘೋಷಿಸಿತು. (ನಿರ್ಣಯ ಸಂಖ್ಯೆ:48/163) . ಹಿಂದೆ 1982 ರಲ್ಲಿ ಈ ದಿನದಂದು ಬುಡಕಟ್ಟು ಜನ ಸಮುದಾಯಗಳ ಕುರಿತ ವಿಶ್ವ ಸಂಸ್ಥೆಯ ‘ಕಾರ್ಯನಿರತ ತಂಡ’ ಮೊದಲ ಬಾರಿ ಸಭೆ ನಡೆಸಿದ ದಿನವನ್ನೇ ಇದಕ್ಕಾಗಿ ಆಯ್ಕೆ ಮಾಡಲಾಗಿತ್ತು. 1994 ರಲ್ಲಿನ ಈ ನಿರ್ಣಯದ ಬಳಿಕ ಡಿಸೆಂಬರ್ 23 ರಂದು ನಡೆದ ಸಭೆಯು ಆ ದಿನದ ಹಿನ್ನೆಲೆಯಲ್ಲಿ 1995 ರಿಂದ 2004 ರವರೆಗೆ ‘ಅಂತರಾಷ್ಟ್ರೀಯ ದಶಕ’ವನ್ನಾಗಿ ಆಚರಿಸಬೇಕೆಂಬ ನಿರ್ಧಾರವನ್ನು ಕೈಗೊಂಡಿತು. (ಯು.ಎನ್.ಓ. ನಿರ್ಣಯ ಸಂಖ್ಯೆ: 49/214) ಮತ್ತೇ 2004 ರಲ್ಲಿ ಎರಡನೆಯ ದಶಕವಾಗಿ ಅಂದರೆ 2005 ರಿಂದ 2015 ವರೆಗೆ ಎರಡನೆಯ ದಶಕವನ್ನು ‘ಕ್ರಿಯಾಶೀಲತೆ ಮತ್ತು ಘನತೆಗಾಗಿ’ ಆಚರಿಸಲು ಕರೆ ನೀಡಲಾಯಿತು.

ಹಾಗೆಯೇ ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯು ಸುಸ್ಥಿರ ಅಭಿವೃದ್ಧಿಗಾಗಿ 2030 ಕಾರ್ಯಸೂಚಿ ” ಎಂಬ ಶೀರ್ಷಿಕೆಯನ್ನು 25 ಸೆಪ್ಟೆಂಬರ್ 2015 ರಂದು ಅಂಗೀಕರಿಸಿತು. (A/RES/70/1) ಆ ಮೂಲಕ “ನಮ್ಮ ಪ್ರಪಂಚವನ್ನು ಪರಿವರ್ತಿಸುವುದು. ಈ ಕಾರ್ಯಸೂಚಿಯು 1 ಜನವರಿ 2016 ರಂದು ಜಾರಿಗೆ ಬಂದಿತು ಮತ್ತು ಮುಂದಿನ 15 ವರ್ಷಗಳವರೆಗೆ ಇರುತ್ತದೆ. ಇದು ವಿಶಾಲವಾದ ಮತ್ತು ಸಾರ್ವತ್ರಿಕ ನೀತಿಯ ಕಾರ್ಯಸೂಚಿಯಾಗಿದ್ದು, 17 ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು 169 ಸಂಬಂಧಿತ ಗುರಿಗಳನ್ನು ಸಮಗ್ರ ಮತ್ತು ಅವಿಭಾಜ್ಯ ಎಂದು ವಿವರಿಸಲಾಗಿದೆ. ಸುಸ್ಥಿರ ಅಭಿವೃದ್ಧಿಯ ಕಾರ್ಯಾಸೂಚಿಯು ಯಾರನ್ನೂ ಹಿಂದೆ ಬಿಡುವುದಿಲ್ಲ ಮತ್ತು ಮೊದಲು ಅತ್ಯಂತ ಹಿಂದುಳಿದವರನ್ನು ತಲುಪುತ್ತದೆ ಎಂದು ಭರವಸೆ ನೀಡುತ್ತದೆ. 2030 ರ ಒಳಗಾಗಿ ವಿಶ್ವದ ಆದಿವಾಸಿ ಬುಡಕಟ್ಟು ಜನರ ಸುಸ್ಥಿರ ಅಭಿವೃದ್ಧಿ ಶ್ರಮೀಸುವುದು ಮತ್ತು ಯುವಜನತೆ ಸಮುದಾಯದ ಅಭಿವೃದ್ಧಿಗಾಗಿ ಕೈ ಜೊಡಿಸಲು ಪ್ರತಿಜ್ಞೆ ಮಾಡುವ ಮೂಲಕ ಪ್ರಕ್ರಿಯೆಯಲ್ಲಿ ತೊಡಗಲು ವಿಶ್ವ ಸಂಸ್ಥೆ ಕರೆ ನೀಡಿದೆ.

ಮಾನವನ ನಾಗರಿಕತೆಯ ಮೂಲ ಅಡಿಪಾಯವಾಗಿರುವ ಆದಿವಾಸಿಗಳನ್ನು ಮತ್ತು ಆದಿವಾಸಿ ತನವನ್ನು ಗುರುತಿಸಿ ಗೌರವಿಸಿದ ಕಾರಣಕ್ಕೆ ಇವೆಲ್ಲಾ ಸ್ವಾಗತಾರ್ಹವಾಗಿವೆ. ಇಂದಿನ ಸಮಾಜ ಬಹುತೇಕವಾಗಿ ಬುಡಕಟ್ಟು ಮೂಲಗಳಿಂದಲೇ ಬೆಳೆದು ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ನಾಗರೀಕತೆ ಬೆಳೆಯುತ್ತಾ ಹೋದಂತೆ ಹಲವಾರು ಸಮುದಾಯಗಳು ಅಭಿವೃದ್ದಿ, ಬಹುಮುಖ ಬೆಳವಣಿಗೆಗಳಿಂದ ವಂಚಿತವಾಗಿ ಎಲ್ಲಾ ನಾಗರೀಕ ಸಾಧನೆ ಮತ್ತು ಸೌಲಭ್ಯಗಳ ಫಲವಿಲ್ಲದೇ ನರಳುತ್ತಾ ಬದುಕುತ್ತಿವೆ. ನಾಗರೀಕ ಸಮಾಜದ ಬೆಳವಣಿಗೆಗೆ ವಿವಿಧ ರೀತಿಯಲ್ಲಿ ಶ್ರಮಿಸುತ್ತಾ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುವ ಆದಿವಾಸಿ-ಬುಡಕಟ್ಟು ಸಮುದಾಯಗಳನ್ನು ಮೂಲೆಗೊತ್ತಿರುವ ಸ್ಥಿತಿಗಳ ವಿರುದ್ಧ ದನಿಯೆತ್ತಿ ನಡೆಸಿದ ಹೋರಾಟದ ಪರಿಣಾಮವಾಗಿ ವಿಶ್ವ ಸಂಸ್ಥೆಯು ಈ ದಿನವನ್ನು ಆಚರಿಸಲು ನಿರ್ಧರಿಸಿತು. ಈ ಮೂಲಕ ಎಲ್ಲಾ ರೀತಿಯಿಂದಲೂ ತುಳಿತಕ್ಕೊಳಗಾಗಿರುವ ಆದಿವಾಸಿ-ಬುಡಕಟ್ಟು ಸಮುದಾಯಗಳಲ್ಲಿ ಜಾಗೃತಿಯನ್ನುಂಟು ಮಾಡಲು, ಪಾರಂಪರಿಕ ಹಕ್ಕುಗಳ ರಕ್ಷಣೆ, ವಿಶಿಷ್ಠ ಜೀವನ ಕ್ರಮ, ಜ್ಞಾನ ಪರಂಪರೆ, ಸಮಾಜಕ್ಕೆ ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸಲು ಪ್ರಯತ್ನಿಸಲಾಗುತ್ತಿದೆ.

ಈ ದಿನಾಚರಣೆಯ ಮೂಲಕ ವಿಶ್ವ ಸಂಸ್ಥೆಯು ಆದಿವಾಸಿ-ಬುಡಕಟ್ಟು ಜನ ಸಮುದಾಯಗಳ ನಡುವೆ ಅಂತರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಲು, ಈ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು, ಮಾನವ ಹಕ್ಕುಗಳ ರಕ್ಷಣೆ, ಪರಿಸರ ರಕ್ಷಣೆ, ಅಭಿವೃದ್ಧಿ, ಎಲ್ಲರಿಗೂ ಶಿಕ್ಷಣ, ಆರೋಗ್ಯ ಒದಗಿಸಬೇಕೆಂದು ಎಲ್ಲಾ ದೇಶಗಳಿಗೂ ಕರೆ ನೀಡಿದೆ.ಇಂತಹ ದಿನಾಚರಣೆಗಳನ್ನು ಸರಕಾರಗಳು ಕಳೆದ 28 ವರುಷಗಳಿಂದಲೂ ಮಾಡಿಕೊಂಡೇ ಬಂದಿವೆ. ಕೆಲವು ಯೋಜನೆಗಳನ್ನು ಪ್ರಕಟಿಸಲಾಗುತ್ತಿದೆ. ಆದರೆ ನಿಜಕ್ಕೂ ಆದಿವಾಸಿ-ಬುಡಕಟ್ಟು ಸಮುದಾಯಗಳ ಜೀವನ ಸ್ಥಿತಿ ಸುಧಾರಿಸಿತೇ? ಎಂದರೆ ಖಂಡಿತ ಇಲ್ಲ. ಈಗಲೂ ಕಾಡು ಮೇಡುಗಳಲ್ಲಿ ದುರ್ಗಮ ಜೀವನ ನಡೆಸುತ್ತಾ, ಸ್ವಂತ ಭೂಮಿ ಇಲ್ಲ, ಮನೆಯಿಲ್ಲ, ಶಿಕ್ಷಣ, ಆರೋಗ್ಯವಿಲ್ಲ. ಹೊಟ್ಟೆ ತುಂಬಾ ಆಹಾರವಿಲ್ಲ. ರೇಷನ್ ಕಾರ್ಡ್, ವೋಟರ್ ಕಾರ್ಡ್‌ಗಳೂ ಬಹಳಷ್ಟು ಜನರಿಗಿಲ್ಲ. ಬದುಕಲು ಇತರರ ಜಮೀನು- ಪ್ಲಾಂಟೇಷನ್‌ಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡಲಾಗುತ್ತಿದೆ. ಕಾರ್ಖಾನೆಗಳಲ್ಲಿ, ಕಟ್ಟಡ ಮುಂತಾದ ಕಾಮಗಾರಿಗಳಲ್ಲಿ ಮೈಮುರಿದು ದುಡಿಯಲಾಗುತ್ತಿದೆ. ಅನೇಕ ಕಡೆಗಳಲ್ಲಿ ಉದ್ಯೋಗದ ಅವಕಾಶಗಳೇ ಇಲ್ಲ. ಹಲವಾರು ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅವರು ವಾಸಿಸುವ ಪ್ರದೇಶಗಳಿಂದ ಎತ್ತಂಗಡಿ ಮಾಡಲಾಗುತ್ತಿದೆ. ಪರಿಹಾರವೂ ಸಿಗುವುದಿಲ್ಲ. ಹೀಗಾಗಿ ನಿರ್ವಸತಿದಾರರಾಗಿ ವಿಪರೀತ ವಲಸೆ, ಅನ್ನ, ನೆರಳಿಗಾಗಿನ ಪರದಾಟದಲ್ಲಿ ಅತಂತ್ರರಾಗಿ ಅಲೆಯಬೇಕಾಗಿದೆ.

 

ಇದನ್ನೂ ಓದಿ:‘ನಯಾ ಭಾರತ್’ನಲ್ಲಿ ದೊಡ್ಡ ಉದ್ದಿಮೆ ಸಮೂಹಗಳು ಕಳವಳಗೊಳಿಸುಷ್ಟು ಹಿಗ್ಗುತ್ತಿವೆ

ಆದಿವಾಸಿಗಳಿಗೆ ಕಾಡಿನ ಉತ್ಪನ್ನಗಳ ಮೇಲೆ ಪಾರಂಪರಿಕ ಹಕ್ಕುಗಳಿವೆ ಎಂದು ಹೇಳಲಾಗುತ್ತಿದೆ. ಕಾನೂನುಗಳು ಇವೆ ,ನಿಜ. ಆದರೆ ಜೀವನೋಪಾಯಕ್ಕಾಗಿ ಕಾಡಿನ ಉತ್ಪನ್ನಗಳ ಸಂಗ್ರಹಕ್ಕೆ ಅನೇಕ ಅಡೆ ತಡೆಗಳನ್ನು ಹಾಕಿ ನಿರಾಕರಿಸಲಾಗುತ್ತಿದೆ. ಭೂಮಿಯನ್ನೂ ನೀಡುತ್ತಿಲ್ಲ. ಅಲ್ಲದೇ ದೌರ್ಜನ್ಯಗಳು, ಅತ್ಯಾಚಾರಗಳೂ ಸಾಮಾನ್ಯವಾಗುತ್ತಿದೆ. ಬಲಿಷ್ಠರ ಎದುರಿನಲ್ಲಿ ಕಾನೂನಿನ ರಕ್ಷಣೆಯೂ ಸಿಗುವುದಿಲ್ಲ. ಇಂದು ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ಆದಿವಾಸಿಗಳ ಮೂಲ ನೆಲೆಗೆ ಮುಳ್ಳಾಗಿವೆ. ವಿವೇಚನೆಯಿಲ್ಲದೆ ನಡೆಸುವ ಅರಣ್ಯ ಸಂಪನ್ಮೂಲಗಳ ಲೂಟಿ ಇಡೀ ದೇಶವನ್ನೇ ಒಂದು ಹಂತದಲ್ಲಿ ಬರಡು ಮಾಡಬಲ್ಲದು. ಜಾಗತಿಕ ಒಡಂಬಡಿಕೆಗಳು ಮತ್ತು ಜಾಗತಿಕ ವಾಣಿಜ್ಯೋದ್ಯಮದ ಹಿನ್ನೆಲೆಯಲ್ಲಿ ಅನೇಕ ತಿದ್ದುಪಡಿಗಳನ್ನು ಸಂವಿಧಾನಾತ್ಮಕ ಹಕ್ಕುಗಳಿಗೆ ಮತ್ತು ಕಾನೂನುಗಳಿಗೆ ತರಲಾಗುತ್ತಿದೆ.

ಇಂದು ನಮ್ಮ ದೇಶದಲ್ಲಿ ಖನಿಜ ಮತ್ತು ಗಣಿಗಾರಿಕೆ ಕಾಯ್ದೆಗೆ ತಿದ್ದುಪಡಿ ತಂದು ಸರಕಾರ ಆದಿವಾಸಿಗಳ ಪ್ರದೇಶಗಳಲ್ಲಿ ಮನ ಬಂದಂತೆ ಹಸ್ತಕ್ಷೇಪ ಮಾಡಲಾಗುತ್ತಿದೆ. ಆದಿವಾಸಿಗಳ ಸ್ಥಳೀಯ ಆಡಳಿತದ ಒಪ್ಪಿಗೆ ಇಲ್ಲದೆ ಯಾವುದೇ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಆದರೆ ದೇಶದ ಅಭಿವೃದ್ಧಿಯ ಹೆಸರಿನಲ್ಲಿ ಆದಿವಾಸಿಗಳನ್ನು ಅವರ ನೆಲೆಗಳಿಂದ ಎತ್ತಗಂಡಿ ಮಾಡಿ ಅವರ ಪ್ರದೇಶಗಳನ್ನು ಬೃಹತ್ ಕೈಗಾರಿಕಾ ಕಂಪೆನಿಗಳಿಗೆ ನೀಡಲಾಗುತ್ತಿದೆ. ಆದಿವಾಸಿ ಪ್ರದೇಶಗಳಲ್ಲಿ ಇರುವ ಎಲ್ಲಾ ನಿರ್ಬಂಧಗಳನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದೆ. ಹೀಗೆ ಆದಿವಾಸಿ ಶೆಡ್ಯೂಲ್ ಪ್ರದೇಶಗಳಲ್ಲಿ ಸಂಗ್ರಹವಾಗುವ ಉತ್ಪನ್ನ, ಸಂಪನ್ಮೂಲಗಳನ್ನು ಆದಿವಾಸಿಗಳ ಅಭಿವೃದ್ಧಿಗೆ ಮೀಸಲಿಡಬೇಕು ಎನ್ನುವ ನಿಯಮಗಳಿಗೆ ತಿದ್ದುಪಡಿ ತಂದು ಆದಿವಾಸಿಯೆತರ ಉದ್ದೇಶಕ್ಕೆ ಬಳಸಿಕೊಳ್ಳಲು ಅನುಮತಿ ನೀಡಲಾಗಿದೆ. “ಪೇಸಾ’ ಕಾಯ್ದೆ ಪ್ರಕಾರ ಆದಿವಾಸಿ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸುವ ಮೊದಲು ಪರಿಸರ ಮತ್ತು ಆದಿವಾಸಿಗಳ ಮೇಲೆ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು.

ಸ್ಥಳೀಯ ಆಡಳಿತ ಮತ್ತು ಆದಿವಾಸಿಗಳ ಒಪ್ಪಿಗೆ ಪಡೆಯಬೇಕು. ಆದರೆ ಈಗಿನ ನಮ್ಮ ಕೇಂದ್ರ ಸರ್ಕಾರ ಈ ಕಾನೂನುಗಳನ್ನು ಬುಡಮೇಲು ಮಾಡಿದೆ. ಸರಕಾರ ಕಾರ್ಪೋರೇಟ್ ಪರವಾಗಿ ಎಲ್ಲಾ ಅನುಕೂಲ ಮಾಡಿಕೊಡುವ ಭರದಲ್ಲಿ ಆದಿವಾಸಿಗಳಿಗೆ ಸಂವಿಧಾನದ ಪರಿಚ್ಛೇದ 5 ಮತ್ತು 6 ರಲ್ಲಿ ನೀಡಿರುವ ಹಕ್ಕುಗಳನ್ನು ಕಸಿದ್ದುಕೊಂಡಿದೆ. ಅದು ಈ ಭಾರಿ ಸಂಸತ್ತಿನಲ್ಲಿ ಅಂಗಿಕಾರವಾದ ಅರಣ್ಯ ಸಂರಕ್ಷಣೆ ಕಾಯ್ದೆ 2023 ತಿದ್ದುಪಡಿ ಕಾನೂನು ಇನಷ್ಟು ವೇಗವಾಗಿ ಪರಿಸರ ಮತ್ತು ಆದಿವಾಸಿಗಳ ವಿನಾಶಕ್ಕೆ ದಾರಿಮಾಡಿಕೊಡಲಿದೆ. ಆದಿವಾಸಿಗಳಿಗೆ ಆಗಿರುವ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಎಂದೇ ತಂದಿರುವ 2006 ರ ಅರಣ್ಯ ಹಕ್ಕುಗಳ ಕಾಯ್ದೆಯನ್ನು ರದ್ದುಗೊಳಿಸುವ ಪ್ರಯತ್ನಗಳು ಆರಂಭಗೊಂಡಿದೆ. ಇಂತಹ ಆದಿವಾಸಿ ವಿರೋದಿ ನೀತಿಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಲೇ ನಡೆದಿವೆ. ಹೀಗಿರುವಾಗ ಸರಕಾರಗಳು ಆದಿವಾಸಿ-ಬುಡಕಟ್ಟು ಜನರಿಗೆ ಏನೇನೋ ಮಾಡಿದ್ದೇವೆಂದು ಹೇಳಿಕೊಳ್ಳುವುದರಲ್ಲಿ ಏನು ಅರ್ಥವಿದೆ?.

ಇಂದು ದೇಶದಲ್ಲಿ ನಾಗರಿಕ ಸಮಾಜದಲ್ಲಿ ಒಂದು ಹಂತದಲ್ಲಿ ಮುಂದಕ್ಕೆ ಹೋಗಿರುವ ಸಮುದಾಯಗಳು ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲು ಮತ್ತು ಇನ್ನೂ ಕೆಲವು ಸಮುದಾಯಗಳು ಇನ್ನುಳಿದ ಮೂಲ ಆದಿವಾಸಿಗಳ ಗಣನೆಗೆ ತೆಗೆದುಕೊಳ್ಳದೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ರಾಜಕೀಯ ಸ್ವಾಯತ್ತತೆಯಾ ನೀಡಲು ಪಟ್ಟು ಹಿಡಿದು ಹೋರಾಟ ಚಳವಳಿ ಮಾಡುತ್ತಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ. ಕರ್ನಾಟಕದಲ್ಲಿ ಈಗಾಗಲೇ ಸರಕಾರ ಗುರುತಿಸಿದ 50 ಪರಿಶಿಷ್ಟ ಪಂಗಡದ ಸಮುದಾಯಗಳಲ್ಲಿ 26 ಸಮುದಾಯಗಳು ಗಣನೀಯವಾಗಿ ತಮ್ಮ ಸಂಖ್ಯೆ ಕಡಿಮೆಯಾಗಿ ಅಳಿವಿನಂಚಿಗೆ ಸಾಗಿವೆ.

2001 ಮತ್ತು 2011 ರ ಜನಗಣತಿ ಪ್ರಕಾರ ಕ್ರಮವಾಗಿ ಪ್ರತಿ ಸಮುದಾಯದ ಜನಸಂಖ್ಯೆ ಗಮನಿಸಿದರೆ ಚೊದ್ರಾ ಸಮುದಾಯ ಜನಸಂಖ್ಯೆ 359 ರಿಂದ 117 ಕ್ಕೆ ಇಳಿಕೆಯಾದರೆ,

ಸಮುದಾಯ – 2001- 2011
ದಬ್ಲಾ – 384 – 264,
ಗೌಡರು – 12,507 – 8617,
ಇರುಳರ್ – 819 – 703,
ಕಾಡುಕುರುಬು –  17,112 – 11,953,
ಕಾತೋಡಿ  – 477 – 274,
ಕೊರಗ – 16,071 – 14794,
ಕೊಟ್ಟಾ  – 211-121,
ಕೊಯಾ – 1640 – 365,
ಕುಡಿಯಾ – 2733 – 2169,
ಕುರುಮನ್ಸ್ –  798 – 347,
ಮಾಲಸರ್ –  103 – 82,
ಮಲೆಯರು – 1360 – 440,
ಪಲ್ಲಿಯನ್ – 536 – 226,
ಪಣಿಯನ್ –  724 – 495,
ಪಟೇಲಿಯಾ –  193 – 57,
ವಿಟೋಲಿಯಾ – 154 – 23,

 

ಇನ್ನೂ 2011 ರ ಜನಗಣತಿ ಪ್ರಕಾರ ಅತೀ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಆದಿವಾಸಿಗಳನ್ನು ಗುರುತಿಸುವುದ್ದಾದರೆ.

ಅಡಿಯಾನ್ – 758
ಬಾರದಾ – 266
ಬಾವಚಾ – 960
ಚಂಚು – 954
ಗಮೀಟ್ – 516
ಕಮ್ಮಾರಾ – 949.
ಕಣಿಯನ್ – 413.
ಕಟ್ಟುನಾಯಕನ್ – 168.
ಮಾಹಾ ಮಲಸರ್ – 36
ಮಲೆಯಿಕಂಡಿ -116.
ರಾತವ – 45
ಸೋಲಗಾ 147

ಹಾಗೆಯೇ ನಿಜವಾಗಿ ಆದಿವಾಸಿ ಬುಡಕಟ್ಟು ಸಮುದಾಯಗಳು ಆಗಿರುವ ಕಣುಬಿ, ಹಾಲಕ್ಕಿ, ಕರೆಒಕ್ಕಲಿಗ, ಉಡುಪಿ ಜಿಲ್ಲೆಯ ಹಸಲ ಸಮುದಾಯಗಳನ್ನು ಇದುವರೆಗೆ ಪರಿಶಿಷ್ಟ ಪಂಗಡಗಳ ಪಟ್ಟಿಗೆ ಇದುವರೆಗೆ ಸೇರಿಸದೆ ಮೀನಾಮೇಷ ಏಣಿಸಲಾಗುತ್ತಿದೆ.

ಇಂತಹ ಸಮುದಾಯಗಳ ಸುಸ್ಥಿರ ಅಭಿವೃದ್ಧಿ ಸಾಧಿಸವ ಗುರಿ, ಅದಕ್ಕೆ ಬೇಕಾದ ಕಾರ್ಯಾಯೋಜನೆಗಳನ್ನು ಸರಕಾರ ರೂಪಿಸಿಲ್ಲ. ಸಮುದಾಯದ ಹಿತಾಸಕ್ತಿಗಿಂತ ಜನ ವಿರೋಧಿ ನೀತಿಗಳ ಮೂಲಕ ದೇಶದ ಅಭಿವೃದ್ಧಿ ಹೆಸರಿನಲ್ಲಿ ಆದಿವಾಸಿಗಳ ಬದುಕುವ ಹಕ್ಕನ್ನು ಕಸಿಯಲಾಗುತ್ತಿದೆ. ಆದ್ದರಿಂದ ಆಗಸ್ಟ್ 9 ರ ವಿಶ್ವ ಆದಿವಾಸಿ ದಿನಾಚರಣೆಯನ್ನು ಆದಿವಾಸಿ ಹಕ್ಕುಗಳ ದಿನವನ್ನಾಗಿ, ಹಕ್ಕುಗಳ ರಕ್ಷಣೆ ಮತ್ತು ಹೆಚ್ಚಿನದ್ದನ್ನು ಪಡೆಯಲು ಹೋರಾಡುವ ಸಂಕಲ್ಪದ ದಿನವನ್ನಾಗಿ ಆಚರಿಸಬೇಕಿದೆ.

ಮುಖ್ಯವಾಗಿ ಎಲ್ಲಾ ಆದಿವಾಸಿ-ಬುಡಕಟ್ಟು ಜನಾಂಗಗಳು ನಾವೆಲ್ಲಾ ಒಂದೇ ಎಂಬ ಒಗ್ಗಟ್ಟು ತೋರಬೇಕಿದೆ. ಅಲ್ಲದೇ ಎಲ್ಲಾ ಇತರೆ ನಾಗರೀಕ ಸಮುದಾಯಗಳೊಂದಿಗೆ ಐಕ್ಯತೆಯನ್ನು ಬೆಸೆಯಬೇಕಿದೆ. ಈ ಆಚರಣೆಯನ್ನು ‘ಮನುಷ್ಯರ ನಡುವೆ, ಸಮಾಜದ ಇತರೆ ಸಮುದಾಯಗಳ ನಡುವಿನ ಅಂತರವನ್ನು ತೊಲಗಿಸಿ, ಸಮಾನತೆಯ ಬಾಂಧವ್ಯದ ಸೇತುವೆ ನಿರ್ಮಿಸಲು’ ಗಮನ ಕೇಂದ್ರೀಕರಿಸಬೇಕೆಂದು ವಿಶ್ವ ಸಂಸ್ಥೆಯ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈ ಹಿನ್ನೆಲೆಯಲ್ಲಿ ನಮ್ಮ ‘ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್’ (AARM) ಮತ್ತು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯು ಆಗಸ್ಟ್ 9ರಂದು ದೇಶ್ಯಾದ್ಯಂತ ಆದಿವಾಸಿ ಹಕ್ಕುಗಳ ದಿನವನ್ನಾಗಿ ಆಚರಿಸಲು ನಿರ್ಧರಿಸಿದೆ.

Donate Janashakthi Media

Leave a Reply

Your email address will not be published. Required fields are marked *